ಈ ರಾಶಿಯವರಿಗೆ ಎಲ್ಲದಕ್ಕೂ ಪರಿಹಾರ ಗುರುವೊಬ್ಬನೇ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷ ರಾಶಿಯವರು ಸಬ್ರಹ್ಮಣ್ಯನ ಅನುಗ್ರಹ ಪಡೆದು ಕೊಳ್ಳಬೇಕು. ಏಕಾದಶದಲ್ಲಿ ಶನಿಯು ಕೊಡುವವನಿದ್ದಾನೆ. ಮೌನವಾಗಿ ಸಾಗಿದರೆ ರಾಜವೈಭೋಗವೂ ಸಿಕ್ಕಿ, ಕಾರ್ಯಾನೂಕಲ ಆಗುವುದು. ಜನರ ಪ್ರೀತಿಯನ್ನು ಕಳೆದುಕೊಂಡರೆ ದೊಡ್ಡ ಐಶ್ವರ್ಯವನ್ನೇ ಕಳೆದುಕೊಂಡಂತೆ ಎಂಬುದು ನೆನಪಿರಲಿ. ದೈವಪ್ರಾರ್ಥನೆ ಮರೆಯಬೇಡಿ.

ವೃಷಭ

ಗುರು ನರಸಿಂಹನನ್ನು ಪ್ರಾರ್ಥಿಸಿ. ಗುರುವಿನ ಬಗ್ಗೆ ತಾತ್ಸಾರ, ನಿರ್ಲಕ್ಷ್ಯ ತೋರಿದರೆ ಏನು ಹೇಳಿದರೂ ನಿಷ್ಪಲವಾಗುತ್ತದೆ. ಹಣಕಾಸು ವಿಚಾರದಲ್ಲಿ ಎಚ್ಚರದಿಂದ ಸಾಗಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಶರೀರಕ್ಕೆ ಆಲಸ್ಯ ಮಾಡದೆ ಮುಂದೆ ಸಾಗಿ. ಅಷ್ಟಭುಜ ದುರ್ಗೆಯನ್ನು ಪ್ರಾರ್ಥಿಸಿದರೆ ಶ್ರೇಯಸ್ಸಿಗೆ ದಾರಿ. 11ರ ಗುರುವಿಗೆ ಗುರುಸ್ಮರಣೆ ಒಂದೇ ಸಾಕು.

ಮಿಥುನ

ದಶಮ ಗುರು ಸ್ವಕ್ಷೇತ್ರದಲ್ಲಿದ್ದಾನೆ. ಒಂಬತ್ತರ ಸ್ವಕ್ಷೇತ್ರದಲ್ಲಿ ಶನಿಯೂ ಇದ್ದಾನೆ. ಮೇಷಾಧಿಪತಿ ಅಂಗಾರಕನು ಗುರುವಿನ ಜತೆಯಲ್ಲಿ ಇದ್ದಾನೆ. ತಾಳ್ಮೆಯಿಂದ ತಗ್ಗಿ-ಬಗ್ಗಿ ನಡೆದರೆ ಜೀವನವನ್ನು ಸರಿಪಡಿಸಿಕೊಂಡು, ನವಚೈತನ್ಯವನ್ನು ಪಡೆಯಬಹುದು. ಶನಿಯು ನಿಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತಾನೆ. ದಶಮ ಗುರುವಿಗೆ ಗುರುಚರಿತ್ರೆಯ 5ನೇ ಅಧ್ಯಾಯ ಪಾರಾಯಣ ಮಾಡಿ.

ಕಟಕ

ಮಾತು ಚೆನ್ನಾಗಿರಲಿ. ನೊಂದವರಿಗೆ ಸಹಾಯ ಮಾಡಿದರೆ, ಹಸಿದವನಿಗೆ ಅನ್ನವನ್ನು ಕೊಟ್ಟರೆ ಆ ಪುಣ್ಯ ನಿಮ್ಮನ್ನು ಕಾಪಾಡುತ್ತದೆ. ನಿತ್ಯವೂ ಗುರುಚರಿತ್ರೆಯ ಒಂದು ಅಧ್ಯಾಯವನ್ನು ಪಾರಾಯಣ ಮಾಡಿರಿ. ಕ್ಷೇಮವಾಗಿ ಇರಲು ಶಿವಸಹಸ್ರನಾಮ ಪಾರಾಯಣ ಮಾಡಿರಿ.

ಸಿಂಹ

ಸಿಂಹ ರಾಶ್ಯಾಧಿಪತಿ ರವಿಯು ಬುಧನೊಂದಿಗೆ 10ರಲ್ಲಿ ಇದ್ದಾನೆ. ಕೆಲವೊಂದು ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ವಿವೇಚನೆಯಿಂದ ಮುಂದೆ ಸಾಗಬೇಕು. ತ್ರಿಮೂರ್ತಿ ಸ್ವರೂಪ ದತ್ತಾತ್ರೇ ಯನು ನಿಮಗೆ ದಾರಿ ತೋರುವನು. ಸಂಬಂಧಿ ಕರೊಂದಿಗೆ, ಗೆಳೆಯರೊಂದಿಗೆ ವಿವಾದ ಬೇಡ. ಸಹಸ್ರಕಿರಣ ಸೂರ್ಯನಾರಾಯಣನನ್ನು ಪ್ರಾರ್ಥಿಸಿ.

ಕನ್ಯಾ

ಗ್ರಹಬಾಧೆ ಇಲ್ಲ. ಸಪ್ತಮ ಗುರು ನವೋಲ್ಲಾಸ ತರುತ್ತಾನೆ. ನೂತನ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿ. ಮನೆಗಳಲ್ಲಿ ಮಂಗಳಕಾರ್ಯಗಳು ನಡೆದು, ನೀವು ಆರೋಗ್ಯವಾಗಿ ಇರುವಂತೆ ರಕ್ಷಣೆ ಸಿಗುತ್ತದೆ. ಆರರ ಶನಿ ಬದಲಾಗುವವರೆಗೂ ಒಳ್ಳೆಯ ಫಲ ಕೊಡುತ್ತಾನೆ. ಆದರೂ ತಪ್ಪದೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ತುಲಾ

ದೈವಕೃಪೆ ಒಂದಿದ್ದರೆ, ಆರೋಗ್ಯ ತುಂಬಿದ ಆಯಸ್ಸು ಇದ್ದರೆ ಧನಸಂಪಾದನೆ ಕಷ್ಟವಲ್ಲ. ಪಂಚಮ ಶನಿ, ಷಷ್ಠ ಗುರುವಿಗಾಗಿ ಏಕೈಕ ಪರಿಹಾರ ನಿತ್ಯ ಗುರುಚರಿತ್ರೆಯ 14ನೇ ಅಧ್ಯಾಯದ ಪಾರಾಯಣ. ಗಣಪತಿಯನ್ನು ದೂರ್ವೆಯಿಂದ ಪೂಜಿಸಿ. ಅವನ ಮಾತೆಯನ್ನೂ ಸಹಸ್ರನಾಮದಿಂದ ಅರ್ಚಿಸಿ. ನಿಮ್ಮ ಬಾಧೆಗಳು ದೂರವಾಗುತ್ತವೆ.

ವೃಶ್ಚಿಕ

ಭಗವಂತನು ಧನವನ್ನು ನೀಡಿ, ಲೆಕ್ಕವನ್ನು ಕೇಳುತ್ತಾನೆ. ಅದಕ್ಕಾಗಿಯೇ ನಮ್ಮ ಗುರುಪರಂಪರೆಯಲ್ಲಿ ಪಾತ್ರರಿಗೆ ದಾನ ಮಾಡಿ ಎಂದಿದೆ. ಯಾರು ಏನೇ ಹೇಳಲಿ ದಾನ-ಧರ್ಮವನ್ನು ಮಾಡಿರಿ. ಅಂತೆಯೇ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನಿಮ್ಮ ಗುರುಗಳನ್ನು ವಂದಿಸಿ. ಅವರ ಸಲಹೆಯಂತೆ ನಡೆಯಿರಿ. ಬಾಳು ಬಂಗಾರವಾಗುತ್ತದೆ.

ಧನು

ತಾತ್ಕಾಲಿಕವಾಗಿ ಶನಿಯು ಮೂರರಲ್ಲಿ ಇದ್ದು, ಸಂತಸ ವನ್ನು, ಸೋಜಿಗವಾದ ಘಟನೆಗಳನ್ನು ತೋರುತ್ತಾನೆ. ಆನಂದವನ್ನು ಉಂಟುಮಾಡುತ್ತಾನೆ. ಸ್ವಕ್ಷೇತ್ರ ಗುರುವು ಪ್ರಾರ್ಥನೆ ಇಲ್ಲದೆ ಏನನ್ನೂ ಕೊಡುವುದಿಲ್ಲ. ನಿತ್ಯವೂ ಗುರುಚರಿತ್ರೆಯ ಒಂದು ಅಧ್ಯಾಯವನ್ನು ಪಾರಾಯಣ ಮಾಡಿರಿ. ರುದ್ರಪಾರಾಯಣವನ್ನು ಮಾಡಲೇಬೇಕಾದ ಸಮಯವಿದು.

ಮಕರ

ಉಷಾ, ಶ್ರವಣ, ಧನಿಷ್ಠ, ಶತಭಿಷ ನಕ್ಷತ್ರಗಳಿಗೆ ಇನ್ನೂ ಶನಿಸಂಚಾರವು ಬಾಕಿ ಇದ್ದು, ಜನವರಿ 2023ರ ನಂತರ ಶನಿಯು ಕುಂಭಕ್ಕೆ ತೆರಳುತ್ತಾನೆ. ಶ್ರದ್ಧಾ, ಭಕ್ತಿಯಿಂದ ಶಿವಪ್ರಾರ್ಥನೆ ಮಾಡಿದಲ್ಲಿ ಮಕರಕ್ಕೆ ದ್ವಿತೀಯ ಶನಿಯು ಶೇಕಡ 60 ಸುಖ ತರುತ್ತಾನೆ. ಅಷ್ಟೋತ್ತರ ಪಾರಾಯಣ ಅವಶ್ಯ. ಕೈಲಾದಷ್ಟು ಅನ್ನದಾನ ಮಾಡಿ. ಗುರುಗಳನ್ನು ಸಂದರ್ಶಿಸಿ.

ಕುಂಭ

ಜನ್ಮದಲ್ಲಿ ಶನಿಯಿದ್ದು, ಜುಲೈ ನಂತರ ಹಿಂದೆ ಸರಿಯುತ್ತಾನೆ. ದ್ವಿತೀಯ ಗುರು ರಕ್ಷಣೆ ನೀಡುತ್ತಾನೆ. ಆದರೂ ಕೆಲವೊಂದು ವಿಘ್ನಗಳು, ವಿಳಂಬ ಇದ್ದೇ ಇರುತ್ತದೆ. ಶನಿಪಿಪ್ಪಲಾ ಸ್ತೋತ್ರ, ದಶರಥ ವಿರಚಿತ ಶನಿಅಷ್ಟಕವನ್ನು ಓದಿರಿ. ಗ್ರಹವನ್ನು ಸಂತೃಪ್ತಗೊಳಿಸಿದರೆ, ಶನಿ ಸಂಚಾರವಿದ್ದರೂ ತಕ್ಕ ಮಟ್ಟಿಗೆ ಸಂತಸ ನೀಡಿ, ಮುಂದೆ ಕೊಂಡೊಯ್ಯುತ್ತಾನೆ.

ಮೀನ

ಮೀನ ರಾಶಿಯವರಿಗೆ ಏಳೂವರೆ ವರ್ಷದ ಶನಿಸಂಚಾರ ಆರಂಭವಾಗಿದೆ. ಸಮಸ್ಯೆಯ ಸುರಿಮಳೆಯೇ ಬಂದೊದಗಬಹುದು. ಎಲ್ಲದಕ್ಕೂ ಪರಿಹಾರ ಗುರುವೊಬ್ಬನೇ. ಇದ್ದದ್ದನ್ನು ಜೋಪಾನ ಮಾಡಿಕೊಂಡು ಮುಂದೆ ಸಾಗಬೇಕು. ಸಾಲವೂ ಬೇಡ; ಕೊಡುವುದೂ ಬೇಡ. ಈ ನಿಯಮ ಪಾಲಿಸಿದ್ದಲ್ಲಿ ತೊಂದರೆಯಿಂದ ಪಾರಾಗುವಿರಿ. ಅರ್ಧನಾರೀಶ್ವರ ಸ್ತೋತ್ರವನ್ನು ಪಾರಾಯಣ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net