ಈ ರಾಶಿಯವರಿಗೆ ದೈವಬಲದಿಂದಲೇ ಮನೋಕಾಮನೆ ಈಡೇರುವ ಅನುಕೂಲ: ವಾರಭವಿಷ್ಯ

Vaara-Bhavishya
Published on
ಮೇಷ

17.8.23ರಿಂದ ನಿಜ ಶ್ರಾವಣ ಮಾಸ ಆರಂಭವಾಗಿ ಸೂರ್ಯನು ತನ್ನ ಸ್ವಂತ ಮನೆಯಾದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನಿಗೆ ಪ್ರೀತಿಪಾತ್ರವಾದ ಆದಿತ್ಯ ಹೃದಯ ಪಾರಾಯಣ ಮಾಡಿರಿ. ಪ್ರಾತಃಕಾಲದಲ್ಲಿ 28 ಸೂರ್ಯ ನಮಸ್ಕಾರವನ್ನು ಮಾಡಿದಲ್ಲಿ ದೇಹಕ್ಕೆ ಆರೋಗ್ಯ, ಚೈತನ್ಯ ಕೊಡುತ್ತಾನೆ. ಮೇಷ, ಸಿಂಹ, ಕಟಕ, ಕನ್ಯಾ, ಮೀನ ರಾಶಿಯವರು ಸೂರ್ಯನನ್ನು ಪ್ರಾರ್ಥನೆ ಮಾಡಲೇಬೇಕು. ಅಂಗಾರಕನು 18ನೇ ತಾರೀಖಿನಿಂದ ಕನ್ಯಾ ರಾಶಿಯನ್ನು ಪ್ರವೇಶಿಸಿರುವುದರಿಂದ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದರೆ ಸರ್ವಪಾಪಗಳನ್ನು ತೊಳೆದು ಮಂಗಳ ಉಂಟು ಮಾಡುತ್ತಾನೆ.

ವೃಷಭ

ವೃಷಭ ರಾಶಿಗೆ ಚತುರ್ಥದಲ್ಲಿ ಸೂರ್ಯನಿದ್ದು, ದ್ವಾದಶದಲ್ಲಿ ಗುರು-ರಾಹು ಇರುವುದರಿಂದ ಮಾನಸಿಕ ಒತ್ತಡ ಬಹಳವಾಗಿ ಇದ್ದು, ಶರೀರದ ಮೇಲೆ ಪರಿಣಾಮ ಉಂಟಾಗುತ್ತದೆ. ಮೊಟ್ಟ ಮೊದಲು ಶತ್ರುಗಳನ್ನು ಮೈಮೇಲೆ ಎಳೆದುಕೊಳ್ಳದೆ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಿ. ನಿಮ್ಮ ದೈವಬಲವೇ ನಿಮ್ಮನ್ನು ಕಾಪಾಡಿ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಮಿಥುನ

ರಾಶ್ಯಾಧಿಪತಿ ಬುಧನು ಸೂರ್ಯನ ಜತೆ ಸಿಂಹ ರಾಶಿಯಲ್ಲಿ ಇದ್ದು, ನಾಲಿಗೆಗೆ ಕಡಿವಾಣ ಇರಬೇಕು. ಆಸೆಗೆ ಕೊನೆಯಿರಬೇಕು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಸಲಹೆ ಕೊಡುವುದನ್ನು ನಿಲ್ಲಿಸಿ ಮಾಡುವ ಕೆಲಸವನ್ನು ವಿವೇಚನೆಯಿಂದ ಯೋಚಿಸಿ ಮಾಡಬೇಕು. ಧನ್ವಂತರಿ ದೇವರನ್ನು ಅರ್ಚಿಸಿದರೆ ದೇಹಕ್ಕೆ ಚೈತನ್ಯ, ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ.

ಕಟಕ

ಕಟಕ ರಾಶಿಗೆ ಶುಕ್ರನು ಅಲ್ಲೇ ಇದ್ದು, ಅಷ್ಟಮ ಶನಿಯು ಏಳಕ್ಕೆ ಬಂದಿರುವುದರಿಂದ, ಅತಿಯಾಗಿ ಕೆಲಸ ಮಾಡಿ ಬಳಲದೆ ಉಪಾಯವಾಗಿ ಸಾಗಿದರೆ ಅಪಾಯವು ದೂರವಾಗಿ ದೇಹಕ್ಕೆ ಆರೋಗ್ಯ, ಮನಸ್ಸಿಗೆ ನೆಮ್ಮದಿ ಇರುವುದು. ನಿಮ್ಮ ಕೆಲಸಗಳು ಒಂದು ಹಂತಕ್ಕೆ ಮುಟ್ಟಿ ನಿಮಗೆ ಯಾವ ಕೊರತೆ ಬರದಂತೆ ತಡೆಯುತ್ತದೆ. ಈ ಶ್ರಾವಣ ಮಾಸದಲ್ಲಿ ಪರಿಪೂರ್ಣವಾಗಿ ಸೋಮವಾರ ಈಶ್ವರನನ್ನು, ಶನಿವಾರದಂದು ಶನೀಶ್ವರನನ್ನು ಪೂಜಿಸಿದರೆ ಭಕ್ತಿಗೆ ಒಲಿದು ದೇವತೆಗಳು ನಿಮ್ಮ ಕಾರ್ಯಸಾಧನೆ ಮಾಡಿಸುತ್ತಾರೆ.

ಸಿಂಹ

ಸಿಂಹ ರಾಶಿಗೆ ಸೂರ್ಯನು 17.8.23ರಂದು ಬಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾನೆ. ಕೆಲಸ ಕಾರ್ಯಗಳನ್ನು ನಡೆಸಿಕೊಟ್ಟು ಸಹಕರಿಸುತ್ತಾನೆ. ಸಪ್ತಶ್ವೇತ ಅಶ್ವಗಳಲ್ಲಿ ಕುಳಿತಿರುವ ಸೂರ್ಯನಾರಾಯಣನ ಅನುಗ್ರಹ ಪಡೆಯಲು ಸೂರ್ಯಾಷ್ಟಕವನ್ನು ಓದಿರಿ. ಸಪ್ತಮ ಶನಿಯಿಂದ ಆಗುವ 9ರ ರಾಹುವಿನಿಂದ ಆಗುವ ವಿಘ್ನಗಳನ್ನು ತಡೆ ಒಡ್ಡಿ ನಡೆಯಬೇಕಾದರೆ ಷಣ್ಮುಖನ ಆರಾಧನೆ ಮಾಡಿರಿ.

ಕನ್ಯಾ

18.8.23ರಿಂದ ಕುಜನು ಬುಧನ ಮನೆಗೆ ಬಂದಿರುತ್ತಾನೆ. ಅದು ಅವನ ಮನೆಯಲ್ಲದಿದ್ದರೂ ಬುಧನ ಮನೆಯಲ್ಲಿ ಅವನು ಮಾಡುವುದೆಲ್ಲವೂ ಸರಿ. ಕುಜನು ಪಾಪಗ್ರಹ. 8ರಲ್ಲಿ ಗುರುವೂ ಸೇರಿರುವುದರಿಂದ, ಕುಂಭಕೋಣಂ ಹತ್ತಿರ ಇರುವ ಸ್ವಾಮಿಮಲೈಯ ‘ಸ್ವಾಮಿನಾಥಸ್ವಾಮಿ’ (ಷಣ್ಮುಖ) ಅರ್ಚಿಸಿ, ದರ್ಶಿಸಿ. ಸಂಕಟಗಳು ದೂರವಾಗುತ್ತವೆ.

ತುಲಾ

ಸಪ್ತಮ ಗುರು ಒಬ್ಬನೇ ಸಾಕು ಸುಖ ಕೊಡಲು, ಬಾಳಿನಲ್ಲಿ ಕೀತಿಯನ್ನು ಸಾಧಿಸಲು. ಬಹಳ ಕಷ್ಟಪಟ್ಟು ಕೆಲಸ ಮಾಡುವ ನೀವು ಕೇತುವಿಗಾಗಿ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಗಣೇಶನನ್ನು ಅರ್ಚಿಸಿ ವೈಭವ, ರಾಜ ಸನ್ಮಾನವನ್ನು ಪಡೆಯಿರಿ. ಆರೋಗ್ಯಕ್ಕೆ ತೊಂದರೆಯಿಲ್ಲ. ಬಾಳಿಗೆ ಬೆಳಕು ಬರುವ ಸಮಯವಿದು.

ವೃಶ್ಚಿಕ

ದ್ವಾದಶದಲ್ಲಿ ಕೇತು, ಏಕಾದಶದಲ್ಲಿ ಅಂಗಾರಕ, ದಶಮದಲ್ಲಿ ರವಿ-ಬುಧ ಇರುವುದು ನಿಮ್ಮ ಒಳಿತಿಗಾಗಿ. ಹಠ ಬಿಡದ ತ್ರಿವಿಕ್ರಮನಂತೆ ಕೆಲಸ ಆಗುವವರೆಗೂ 12 ಕೈಗಳನ್ನು ಹೊಂದಿರುವ ಷಣ್ಮುಖನನ್ನು ಬಿಡಲೇಬೇಡಿ. ಬಿಟ್ಟರೆ ಕೆಟ್ಟಿರಿ. ಪರಮಾತ್ಮನು ತನ್ನ 12 ಕೈಗಳಲ್ಲಿ ಭಾಗ್ಯವನ್ನು ತುಂಬಿಕೊಡುತ್ತಾನೆ. ನಿಮ್ಮ ಸಮಯಕ್ಕೆ ಕಾದಿರಿ. ಜಯವು ನಿಮ್ಮದೆ.

ಧನಸ್ಸು

ರಾಶಿ ಶನಿಯ ವಕ್ರಗತಿ ನಿಮ್ಮ ಕೆಲಸದ ವೇಗವನ್ನು ಕಡಿಮೆ ಮಾಡಿದೆ. ಆದರೆ, ಗುರುವು ಪಂಚಮದಲ್ಲಿ ಇರುವುದರಿಂದ, ‘ಪಂಚಮಂ ಕಾರ್ಯ ಸಿದ್ಧಿಹಿಃ’ ಎಂಬಂತೆ ಏನನ್ನು ಬೇಕಾದರೂ ಪಡೆಯಬಹುದು. ಶನಿಗಾಗಿ ರುದ್ರ ಪಾರಾಯಣ ಮಾಡಿ. ಈಶ್ವರನ ಆರಾಧನೆ ಮಾಡಿದರೆ ಅಧಿಕ ಫಲವು ದೊರೆಯುತ್ತದೆ. ಗುರುಸ್ಮರಣೆ ಇರಲಿ. ಗುರುಚರಿತ್ರೆ ಪಠಣ ಮಾಡುವುದು ನಿಮ್ಮ ಏಳಿಗೆಗಾಗಿ. ಗಾಣಗಾಪುರಕ್ಕೆ ತೆರಳಿ ಗುರುದತ್ತಾತ್ರೇಯನನ್ನು ದರ್ಶಿಸಿ.

ಮಕರ

ವಕ್ರಗತಿಯಲ್ಲಿರುವ ಶನಿಯು ಮಕರವನ್ನು ಸೇರಿದ್ದರೂ, ಯಾವ ದುಷ್ಪಲ ನೀಡುವ ಸಂದರ್ಭವಿಲ್ಲ. ಕೊರತೆ ಇರುತ್ತದೆ. ಆದ್ದರಿಂದ ನಂಜನಗೂಡಿನ ಶ್ರೀಕಂಠೇಶ್ವರನನ್ನು ಪೂಜಿಸಿ. ಶ್ರಾವಣ ಮಾಸದಲ್ಲಿ ಅಭಿಷೇಕವನ್ನು ಮಾಡಿಸಿ ಬನ್ನಿ. ಎಳ್ಳು-ಬೆಲ್ಲ ದಾನ ನೀಡಿ.

ಕುಂಭ

ವಕ್ರ ಶನಿ ದ್ವಾದಶಕ್ಕೆ ಬಂದಿದ್ದರೂ ಮೂರರ ಗುರು-ರಾಹು ಸಂಕೋಲೆಗಳನ್ನು ತಂದೊಡ್ಡುತ್ತದೆ. ಕೆಲಸವು ಒಮ್ಮೆಲೆ ಆಗದಿದ್ದರೂ ಹಂತಹಂತವಾಗಿ ಮಾಡಿಕೊಂಡು ದೈವಬಲ ಬೇಕಾದಲ್ಲಿ, ಶನಿಯ ಸಂಚಾರವಿರುವುದರಿಂದ ಸರ್ವಪಾಪಗಳನ್ನು ಕತ್ತರಿಸುವ ತಿರುಪತಿಯಲ್ಲಿ ನೆಲೆಸಿರುವ ಶ್ರೀನಿವಾಸನನ್ನು ದರ್ಶಿಸಿ. ತಿರುತ್ತನಿಯಲ್ಲಿರುವ ಸುಬ್ರಹ್ಮಣ್ಯನನ್ನು ಪೂಜಿಸಿ, ದರ್ಶಿಸಿ ಬನ್ನಿ. ಒಳ್ಳೆಯದಾಗುತ್ತದೆ.

ಮೀನ

ರಾಶ್ಯಾಧಿಪತಿ ಗುರು ದ್ವಿತೀಯದಲ್ಲಿದ್ದು, ದೈಹಿಕವಾಗಿ ಯಾವ ಆತಂಕ ಇರುವುದಿಲ್ಲ. ನಮ್ಮ ಜೇಬಿನಲ್ಲಿ ನಾವೇ ಚೇಳನ್ನು ಬಿಟ್ಟುಕೊಂಡರೆ ಹೇಗೆ? ನೀವೇ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಚಿಂತೆಯಲ್ಲಿ ಮುಳುಗಿ ದೈವವನ್ನು ಮರೆತು ಯಾವುದೋ ವಿಚಾರದಲ್ಲಿ ಮುಳುಗಿದರೆ ಅದಕ್ಕೆ ಯಾರೂ ಹೊಣೆಗಾರರಲ್ಲ. ಶನಿ ಸಂಚಾರವಿದ್ದು, ಮನಸ್ಸನ್ನು ನಿಗ್ರಹಿಸಲು ದೈವಬಲ ಬೇಕೇಬೇಕು. ಗುರುಚರಿತ್ರೆ ಪಾರಾಯಣ ನಿತ್ಯವೂ ಮಾಡಿರಿ. ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net