ಈ ರಾಶಿಯವರು ಮಾತಾ-ಪಿತರಿಗೆ ಏನು ಮಾಡಿದ್ದೀರಿ ಎಂದು ನೆನಪಿಸಿಕೊಳ್ಳಿ: ವಾರಭವಿಷ್ಯ

Vara-Bhavishya-2
Published on

ಮೇಷ

ಈ ರಾಶಿಯವರಿಗೆ ದ್ವಿತೀಯದಲ್ಲಿ ರಾಹುವಿದ್ದು, ಏಕಾ ಗುರುವು, ರಾಹು ಶುಕ್ರನ ಮನೆಯಲ್ಲಿ ಇರುವುದು ಆರ್ಥಿಕವಾಗಿ ಅನುಕೂಲಕರವಾಗಿಯೂ, ಕೆಲವು ವಿಚಾರ-ವಿಷಯಗಳಲ್ಲಿ ಆತಂಕ ಮೂಡಿ ಮನೋಧೈರ್ಯವನ್ನು ಕಟ್ಟಿಹಾಕುತ್ತದೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ವಲ್ಲಿ-ದೇವಸೇನಾಸಮೇತ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ.

ವೃಷಭ

ಲಗ್ನದಲ್ಲಿ ರಾಹು ಶುಕ್ರನ ಆಧಿಪತ್ಯ ಹೊಂದಿರುವುದರಿಂದ ಆಕಸ್ಮಿಕವಾಗಿ ಮನಸ್ಸಿಗೆ ವಿಷಯ-ವಿಚಾರಗಳಲ್ಲಿ ಹಿನ್ನೆಡೆ, ಹಿತಶತ್ರುಗಳಿಂದ ಸಂಕಟ ಬರುತ್ತದೆ. ಅದನ್ನು ಎದುರಿಸಲು ಸಜ್ಜಾಗಿರಿ. ಧೈರ್ಯವು ನಿಮ್ಮನ್ನು ಕಾಪಾಡುತ್ತದೆ. ಮಿಕ್ಕಂತೆ ಕೆಲಸ ಸಾಧಾರಣ ಮಟ್ಟದಲ್ಲಿ ಸಾಗುವುದರಿಂದ ಮನುಷ್ಯನಿಗೆ ತೃಣವೂ ಅಧಿಕವಾಗಿ ಕಾಣುತ್ತದೆ. ಚಾಮುಂಡೇಶ್ವರಿಯನ್ನು ಪೂಜಿಸಿ.

ಮಿಥುನ

ಜುಲೈ 25ರಂದು ಮಿಥುನ ರಾಶಿಗೆ ಅಧಿಪತಿ ಬುಧನು ಸಿಂಹ ರಾಶಿಗೆ ಬಂದು ಸೇರಿದ್ದಾನೆ. 9ರ ಗುರು ನಿಮ್ಮನ್ನು ರಕ್ಷಿಸಲೆಂದೇ ನವಮದಲ್ಲಿ ಕೂತಿದ್ದಾನೆ. ಗುರುವು ಶನಿಯ ಮನೆಯಲ್ಲಿದ್ದು, ಶನಿ ಅಷ್ಟಮದಲ್ಲಿ ಇರುವುದರಿಂದ ಧರ್ಮ-ಕರ್ವಧಿಪತಿ ಶನಿಯನ್ನು ಅನಂತವಾಗಿ ಪೂಜಿಸಿ. ದುಃಖದುಮ್ಮಾನಗಳು ದೂರವಾಗಲು ಈ ಮಂತ್ರವನ್ನು 48 ದಿನಗಳ ಕಾಲ ಪಠಿಸಿ.

|| ಅತ್ರಿಪುತ್ರೋ ಮಹಾತೇಜಾ ದತ್ತಾತ್ರೆಯೋ ಮಾಹಾಮುನೀಃ ||

|| ತಸ್ಯ ಸ್ಮರಣಮಾತ್ರೇಣ ಸರ್ವಪಾಪ್ಯೆಃ ಪ್ರಮುಚ್ಯತೇ||

ಕಟಕ

ಸಪ್ತಮ-ಅಷ್ಟಮದಲ್ಲಿ ಶನಿ ಸಂಚಾರವಿದ್ದು, ಆತುರ ಬೇಡ. ಕಾರ್ಯವನ್ನು ಜಯಿಸಬೇಕೆ ಹೊರತು ಆರೋಗ್ಯ ಕಳೆದುಕೊಳ್ಳಬೇಡಿ. ಎತ್ತರದಲ್ಲಿ ಹತ್ತಬೇಡಿ. ಹತ್ತಿರವೆಂದು ಓಡಬೇಡಿ. ಆರೋಗ್ಯವೇ ಸರ್ವಸ್ವ. ರಾಶ್ಯಾಧಿಪತಿ ಚಂದ್ರನಿಗಾಗಿ ಚಂದ್ರಷ್ಟೋತ್ತರ ಓದಿ ಮನಸ್ಸನ್ನು ನಿಯಂತ್ರಿಸಿಕೊಳ್ಳಿ.

ಸಿಂಹ

ಗುರು-ಶನಿ ಸಂಚಾರದಿಂದ ಎಲ್ಲವೂ ಶುಭವಾಗುವುದು. ಗುರು ಕಟಾಕ್ಷಸಂಪಾದಿಸಲು ಜೀವನ ಪರ್ಯಂತ ಗುರುಚರಿತ್ರೆ ಪಾರಾಯಣ ಸಾಗಲಿ. ಜೀವನೋಪಾಯಕ್ಕೆ ಕಷ್ಟವೆಂಬುದೇ ಇಲ್ಲ. ನಿಮಗೆ ಬಂದ ಸಂಪತ್ತು-ಶುಭವನ್ನು ಇಲ್ಲದವರೊಂದಿಗೆ ಹಂಚಿಕೊಳ್ಳಿ. ಆಗಸ್ಟ್ 2ರಂದು ಸುಬ್ರಹ್ಮಣ್ಯವನ್ನು ಪ್ರಾರ್ಥಿಸಲು ಮರೆಯದಿರಿ.

ಕನ್ಯಾ

ಕನ್ಯಾರಾಶಿಯಲ್ಲಿ ಜನಿಸಿದವರು ಆಜನ್ಮಪರ್ಯಂತ ಷೋಡಶದಾನಗಳನ್ನು ಮಾಡಿ ಜನ್ಮಾಂತರದ ಪಾಪ ನಿವಾರಿಸಿಕೊಳ್ಳಬೇಕು. ಉತ್ತರ, ಹಸ್ತ, ಚಿತ್ತ ಸದ್ಯದಲ್ಲಿ ಪಂಚಮ ಶನಿಗೆ ಸಿಲುಕಿದ್ದಾರೆ. ದೈವ, ಋಷಿ, ಪಿತೃಋಣ ಯಾವುದನ್ನೂ ತೀರಿಸಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವುದಕ್ಕೆ ನೀವೇ ಕಾರಣ. ದೇವಕಾರ್ಯ ನಿಧಾನ ಮಾಡಿದರೂ ಪರವಾಗಿಲ್ಲ. ಮಾತಾ-ಪಿತರಿಗೆ ಏನು ಮಾಡಿದ್ದೀರಿ ಎಂದು ನೆನಪಿಸಿಕೊಳ್ಳಿ.

ತುಲಾ

ತುಲಾಸಂಕ್ರಮಣದಲ್ಲಿ ರಂಗನಾಥನ ಸಾನಿಧ್ಯದಲ್ಲಿ ಸ್ನಾನ ಮಾಡಿ. ಶನಿ, ರಾಹು, ಗ್ರಹಸ್ಥಿತಿ ಚೆನ್ನಾಗಿಲ್ಲದಿರುವಾಗ ರಂಗನಾಥನಿಗೆ ವಸ್ತ್ರ ನೀಡಿದರೆ ಪರಿಸ್ಥಿತಿ ಸುಧಾರಿಸುತ್ತದೆ. ರಂಗನಾಥನ ಅಷ್ಟೋತ್ತರ ಪಠಿಸಿ. ಭಯ ಬೇಡ, ಒಳಿತಾಗುತ್ತದೆ. ರಂಗನಾಥ ಸ್ವಾಮಿಯು ದುಷ್ಟಾಕ್ಷರಗಳನ್ನು ಅಳಿಸಿ, ಸ್ವರ್ಣಾಕ್ಷರಗಳನ್ನು ಬರೆದು ಕಾಪಾಡುತ್ತಾನೆ.

ವೃಶ್ಚಿಕ

ಮನುಷ್ಯನ ಆಗುಹೋಗುಗಳಿಗೆ ಗ್ರಹಗಳು ಒಂದೇ ಕಾರಣವಲ್ಲ. ಅನೇಕ ಜನ್ಮಗಳ ಪಾಪ-ಪುಣ್ಯ ಬೆರೆತು ನಮ್ಮನ್ನು ಕೂಡಿಸುತ್ತದೆ, ಕೆಡಿಸುತ್ತದೆ. ತೃತೀಯ ಶನಿ ನಿಮಗೆ ನಾನಾ ವಿಧದ ಲಾಭ, ಸುಖವನ್ನು ಕೊಟ್ಟು ಆನಂದ ನೀಡಬೇಕಾಗಿತ್ತು. ಅದು ಆಗಿಲ್ಲವೆಂದರೆ ಲಕ್ಷ್ಮೀನರಸಿಂಹನನ್ನು ಪೂಜಿಸಿ, ಧ್ಯಾನಿಸಿ. ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ. ಗಣಪತಿಯನ್ನು ಪ್ರಾರ್ಥಿಸಲು ಮರೆಯದಿರಿ.

ಧನು

ಜೀವನ ರಣರಂಗವಲ್ಲ. ಸಮಾಧಾನ- ಸಮಚಿತ್ತದಿಂದ ದೈವಸಂಭೂತರಾದರೆ ದೇವರು ದಾರಿತೋರುತ್ತಾನೆ. ಎಲ್ಲ ಶುಭವನ್ನು ಹೇಳಬಹುದು. ಅದನ್ನು ಕೇಳಿ ಮಾಡಲು ನಿಮ್ಮ ಸಂಕಲ್ಪವಿರಬೇಕು. ರಾಮಾಯಣ ಪಾರಾಯಣ ಮಾಡಿ. ರಾಮ ಅಷ್ಟೋತ್ತರ ಪಠಿಸಿ.

ಮಕರ

ವಿಜಯ, ಸಂತಸ, ಸುಖವನ್ನು ಪಡೆಯಬೇಕಾದರೆ ದೈವಾನುಗ್ರಹವಿರಬೇಕು. ಈ ಶನಿಸಂಚಾರದಲ್ಲಿ ಮಕರರಾಶಿಯವರು ದಾಟಬೇಕಾದರೆ ಪರಮಾತ್ಮನ ಅನುಗ್ರಹ ಬೇಕು. 2023ರವರೆಗೆ ಶನಿಪಿಪ್ಪಲಾ ಸ್ತೋತ್ರ ಪಾರಾಯಣ ಮಾಡಿ. ಶಿವಾರ್ಚನೆ ಮಾಡಿ. ಅಶ್ವತ್ಥಪ್ರದಕ್ಷಿಣೆ ಹಾಕಿದಲ್ಲಿ ಕಷ್ಟಕಾರ್ಪಣ್ಯ ದಾಟಿ ಸಾಗಬಹುದು.

ಕುಂಭ

ಶನಿ ಮನೆಯಲ್ಲಿ ಗುರುಸಂಚಾರವಿದ್ದು, ಗುರುವು ಮನೆಯ ಅಧಿಪತಿ ಶನಿಯ ಮಾತನ್ನು ಕೇಳಬೇಕಾಗುತ್ತದೆ. ‘ನಾನು-ನನ್ನದು’ ಎಂಬ ಅಹಂಕಾರ ತ್ಯಜಿಸಿ ದೇಶಕಾಲ ಪದಾರ್ಥಾನುಸಾರ ಶನಿಸಂಚಾರದಲ್ಲಿ ಸಾಗಬೇಕು. ಅರಿತು ಹಿತನುಡಿಯಲ್ಲಿ ನಡೆದರೆ ನಿಮ್ಮನ್ನು ಕರುಣಾಸಮುದ್ರ ದತ್ತದೇವರೇ ಕಾಪಾಡುವನು. ಶನಿಯು ಭಯ, ದುಃಖವನ್ನು ಕೊಟ್ಟು ನಿಮ್ಮ ಆತ್ಮಶಕ್ತಿ ಪರೀಕ್ಷಿಸುತ್ತಾನೆ.

ಮೀನ

ಲಾಭದಲ್ಲಿ ಶನಿಯಿರುವುದರಿಂದ ಲಾಭಕ್ಕಾಗಿ ಹೋರಾಡಬೇಕಿಲ್ಲ. ಗುರುವು ದ್ವಾದಶದಲ್ಲಿರುವುದರಿಂದ ನಿಮ್ಮ ರಾಶಿಯ ಗ್ರಹನಾಯಕನು ನಿಮ್ಮ ಮಾತು ಕೇಳಬೇಕಾದರೆ ಸಮಾಧಾನ-ಸಂತೃಪ್ತಿ-ಸತ್​ಚಿಂತನೆ, ದೈವಭಕ್ತ, ಜನ್ಮದಾತರಿಗೆ ಕೃತಜ್ಞರಾಗಿ, ಅವರ ಸ್ಮರಣೆಯಲ್ಲಿ ಮುಂದುವರಿದರೆ ದ್ವಾದಶ ಗುರುವು ಏಕಾದಶ ಗುರುವಿನ ಫಲನೀಡುತ್ತಾನೆ. ಇಷ್ಟಾರ್ಥ ಸಿದ್ಧಿ ಹಾಗೂ ಲಾಭ ಪಡೆಯಲು ಮಹಾಕಾಳೇಶ್ವರನನ್ನು ಪೂಜಿಸಿ. ಶಿವಪಂಚಾಕ್ಷರಿಯನ್ನು ಪಠಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net