ಈ ರಾಶಿಯವರಿಗೆ ಸ್ಥಿರಾಸ್ತಿಗಳನ್ನು ಖರೀದಿಸುವ ಕಾಲ: ವಾರ ಭವಿಷ್ಯ

E vara Featured
Published on

ಮೇಷ

ಸಿಂಹ ರಾಶಿಯ ಅಧಿಪತಿ ಸೂರ್ಯನು ಮೇಷಕ್ಕೆ ದಶಮದಲ್ಲಿದ್ದು ಜ.14ರಿಂದ 21ರವರೆಗೆ ಶುಕ್ರ, ಗುರು, ಶನಿ, ರವಿ, ಬುಧ ಪಂಚಗ್ರಹ ಯೋಗವನ್ನು ತರುತ್ತಾನೆ. ದೇವರನ್ನು ಪ್ರಾರ್ಥಿಸಿ. ಸೂರ್ಯನಿಗೆ ಶನಿಯ ಮನೆ ಮಿತ್ರಸ್ಥಾನ. ಕಠಿಣ ಮಾತು, ವೈಮನಸ್ಯ ಬೇಡ. ಸಮಯ ಉಪಯೋಗಿಸಿ ಕಾರ್ಯಸಾಧನೆ ಮಾಡಿಕೊಳ್ಳಿ.

ವೃಷಭ

ಒಂಬತ್ತರ ಗುರು-ಶನಿ ಅದೇ ಮನೆಯಲ್ಲಿ ರವಿ-ಬುಧರು ವೃಷಭದಲ್ಲಿ ಅಧಿಪತಿ ಶುಕ್ರನು ಬಂದು ಕೂರುತ್ತಾನೆ. ಹನ್ನೆರಡರ ಅಂಗಾರಕನಿಂದ ಖರ್ಚು ಹೆಚ್ಚಾಗಬಹುದು. ಆದರೆ ವಿಚಾರ ಮುಂದಿಟ್ಟುಕೊಂಡು ಸೌಮ್ಯತೆ ಯಿಂದ ಇದ್ದಲ್ಲಿ ಲಾಭ ಬಂದು ಸೇರುತ್ತದೆ. ದುರ್ಗೆಯನ್ನು ಪ್ರಾರ್ಥಿಸಿ. ರಾಹುವು ದುಡ್ಡಿನ ದಾಹ ಕಳೆದು ಆರೋಗ್ಯ ಕೊಡುತ್ತಾನೆ.

ಮಿಥುನ

ಅಷ್ಟಮದಲ್ಲಿ ರವಿ, ಬುಧ, ಶುಕ್ರ, ಶನಿ, ಗುರು, ಪಂಚಗ್ರಹ ಗಳು 8ನೇ ಮನೆಯಲ್ಲಿದ್ದಾಗ ನಿಮಗೇ ಅರ್ಥವಾಗದೆ ಪರಿಸ್ಥಿತಿ ಬಿಗಡಾಯಿಸಿ ನಿಮ್ಮ ತಾಳ್ಮೆ ಪರೀಕ್ಷಿಸುತ್ತಾರೆ. ಎಚ್ಚರವಾಗಿ ಸಾಗಬೇಕು. ಆರೋಗ್ಯಕ್ಕಾಗಿ ಧನ್ವಂತರಿಯ ಜಪ ಮಾಡಿ. ‘ಓಂ ನಮೋ ನಾರಾಯಣ’ ಎಂಬ ಅಷ್ಟಾಕ್ಷರಿ ಮಂತ್ರವೇ ನಿಮ್ಮ ಜೀವನಕ್ಕೆ ರಾಮಬಾಣ.

ಕಟಕ

ಗಾಳಿ ಇಲ್ಲದೆ ಎಲೆ ಕೂಡಾ ಅಲ್ಲಾಡುವುದಿಲ್ಲ. ಮನುಷ್ಯನ ಪ್ರಯತ್ನ ಸಾಫಲ್ಯವಾಗಬೇಕಾದರೆ ವಿಷ್ಣುವನ್ನೇ ಮೊರೆ ಹೋಗಿ. ನಿಮ್ಮ ಮನೆಯ ಹತ್ತಿರ ವಿಠ್ಠಲನ ದೇವಸ್ಥಾನವಿದ್ದರೆ ಸಂದರ್ಶಿಸಿ. ಬೇಕಾದ್ದನ್ನು ಪಡೆದುಕೊಳ್ಳಿ. ಸಪ್ತಮದ ಗುರುವು ಮಾಡಿದ ಕೆಲಸಕ್ಕೆ ಫಲವನ್ನು ನೀಡುತ್ತಾನೆ.

ಸಿಂಹ

ಆರನೇ ಮನೆಯ ರವಿ, ಗುರು, ಶನಿ, ಶುಕ್ರ, ಬುಧರು ಅಲ್ಲೇ ನಿಂತಿರುತ್ತಾರೆ. ಆದರೆ ಶನಿ ಒಬ್ಬನೇ ನಿಮ್ಮ ಕೆಲಸಗಳನ್ನು ತೃಪ್ತಿಕರವಾಗಿ ಮಾಡಿಕೊಟ್ಟು ವಿಜೃಂಭಿಸುತ್ತಾನೆ. ಇತರ ನಾಲ್ಕು ಗ್ರಹಗಳು ಬುದ್ಧಿಯನ್ನು ಮಂಕುಮಾಡಿ ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತಾರೆ. ಗುರುವಿನ ಪೂಜೆ, ಸೂರ್ಯಕವಚ ಪಾರಾಯಣ ಮಾಡಿ. ಎಲ್ಲವನ್ನು ಪಡೆಯಬಹುದು.

ಕನ್ಯಾ

ಪಂಚಮದಲ್ಲಿ ಗುರುವು ಶುಭದ ಸೂಚನೆ. ಆದರೆ ಶನಿಯಿಂದ ಓಟವನ್ನು ಓಡಲೂ ಆಗದು, ಗೆಲ್ಲಲೂ ಆಗದು. ಈ ಕಾಲದಲ್ಲಿ ಪಡೆದುಕೊಂಡಿದ್ದೇ ಭಾಗ್ಯ ಎಂದುಕೊಂಡು ವ್ಯವಹಾರವನ್ನು ಮುಂದುವರಿಸಿ. ಆಲಸ್ಯಂ ಅಮೃತಂ ವಿಷಂ ಎಂಬುದನ್ನು ಮರೆಯಬೇಡಿ. ಶ್ರೀ ಕೃಷ್ಣನನ್ನು ಸದಾ ಭಜಿಸಿ-ಪೂಜಿಸಿ.

ತುಲಾ

ಸ್ವಕ್ಷೇತ್ರದಲ್ಲಿ ಶನಿಯು ಚತುರ್ಥದಲ್ಲಿದ್ದು ಅಲ್ಪಸ್ವಲ್ಪ ತಡೆಯಿದ್ದರೂ ಮಾಡುವ ಕೆಲಸ ನಿಲ್ಲಿಸಬೇಡಿ. ಧನಕ್ಕೆ ಕೊರತೆಯಿಲ್ಲ. ‘ಓದಿ ಓದಿ ಮರುಳಾದ ಕೂಚಂಭಟ್ಟ’ ಎಂಬಂತೆ ಮಾಡಿದ ಕೆಲಸವನ್ನೇ ಮಾಡಿದರೂ ಅದರಲ್ಲೇ ಜಾಣ್ಮೆ ತೋರಿ. ಕೀರ್ತಿ ಬರುವ ಸಮಯ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

ವೃಶ್ಚಿಕ

ಓಡಲು ಮೈದಾನವೂ ಬೇಕು- ಕುದುರೆಯೂ ಬೇಕು. ಕುದುರೆ ಸಾಕಲು ನಮಗೆ ಯೋಗ್ಯತೆ ಇದೆಯೇ ಎಂದು ಮೊದಲು ಅರಿವಿರಬೇಕು. ಅಶ್ವಾರೂಢನಾದ ಖಂಡೋಭನನ್ನು ಪೂಜಿಸಿ. ಧನವನ್ನು ಕಾಣುವ ಸಮಯ ಧರ್ಮವನ್ನು ಕಾಪಾಡಿದವನಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ಸ್ಥಿರಾಸ್ತಿಗಳನ್ನು ಖರೀದಿಸುವ ಕಾಲ.

ಧನು

ಧನಸ್ಸು ಅಧಿಪತಿ ಗುರು ಎರಡರಲ್ಲಿದ್ದು ಶರವೇಗದಿ ಸೂರ್ಯನೂ ಬಂದು ಸೇರಿದ್ದಾನೆ. ರವಿ-ಬುಧರು ಯೋಗವನ್ನು ಕೊಡುತ್ತಾರೆ. ಆತುರದ ನಿರ್ಧಾರ ಬೇಡ. ‘ಎಡವಿದವನು ಅಡವಿಯನ್ನು ಸೇರುತ್ತಾನೆ’. ನಿಧಾನ ಗತಿಯಲ್ಲಿ ಹೆಜ್ಜೆ ಇಟ್ಟಲ್ಲಿ ಅನ್ಯರಿಂದ ಸಹಾಯ ಹಾಗೂ ನಿಂತುಹೋದ ಕೆಲಸ ನೆರವೇರುತ್ತವೆ. ಧನಸ್ಸು-ಮೀನ ರಾಶಿಯಲ್ಲಿ ಹುಟ್ಟಿದವರು ಗುರುಋಣ ತೀರಿಸಲೇಬೇಕು.

ಮಕರ

ಮಕರದ ಶನಿ ನಿಮ್ಮನ್ನು ಪರೀಕ್ಷೆ ಮಾಡಲು ಭೀತಿ, ಕಾರ್ಯವಿಘ್ನ ತಂದೊಡ್ಡುತ್ತಾನೆ. ಜೀವಾತ್ಮನಲ್ಲಿ ಪರಮಾತ್ಮನು ವಾಸವಾಗಿದ್ದಾನೆಂದು ಅರಿತರೆ ದೇವರನ್ನು ಹುಡುಕುವ ಕೆಲಸ ಬೇಡ. ದೇವರನ್ನು ಮರೆತರೂ ದೇವರು ನಿಮ್ಮನ್ನು ಮರೆಯುವುದಿಲ್ಲ. ನಿತ್ಯವೂ ಭಕ್ತಿಯ ದಾರಿ ತೋರಿ ಶುಭ ಕೋರಿ ಮುಂಬರುವ ಕಷ್ಟದ ದಿನಗಳು ಸುಖದಿಂದಿರುವಂತೆ ನೋಡಿಕೊಳ್ಳುತ್ತಾನೆ.

ಕುಂಭ

ದ್ವಾದಶದಲ್ಲಿ ಪಂಚ ಗ್ರಹಗಳು ಎಚ್ಚರಿಕೆಯ ಘಂಟೆ ಹೊಡೆಯುತ್ತಿರುತ್ತವೆ. ಇನ್ನು 14 ದಿನ ಕೆಲಸ-ಕಾರ್ಯಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಹರಿನಾಮ ಸ್ಮರಣೆ ಇರಲಿ. ವಿಶೇಷವಾದ ಕಾರ್ಯ ಆಗುವ ಸಮಯವಲ್ಲ. ಸಮಯಕ್ಕಾಗಿ ಕಾದು ಕುಳಿತವನೇ ಪರಾಕ್ರಮಿ ಎಂದು ದೇವರೇ ತೋರಿಸಿಕೊಡುತ್ತಾನೆ. ಶ್ರೀರಾಮಾಯಣದ ಅರಣ್ಯಕಾಂಡದ ಪ್ರಥಮ ಸರ್ಗ ಓದಿ ಪುಣ್ಯ ಸಂಪಾದಿಸಿ.

ಮೀನ

ಐದು ಗ್ರಹಗಳು 11ನೇ ಮನೆಯಲ್ಲಿ ಸೇರಿ ತೃಪ್ತಿಕರ ಜೀವನವನ್ನು ಕೊಟ್ಟಿರುತ್ತಾರೆ. ತೃಪ್ತಿಯಿದ್ದಾಗ ದೇವರು, ಧರ್ಮ ಜ್ಞಾಪಕ ಬರುವುದು ಕಡಿಮೆ. ಇನ್ನು 15 ತಿಂಗಳು ನಿಮಗೆ ಅಡೆ-ತಡೆ ಇರುವುದಿಲ್ಲ. ಉಜ್ಜಯಿನಿ ಮಹಾಕಾಳೇಶ್ವರನನ್ನು ಭಜಿಸಿ ಪೂಜಿಸಿದರೆ ಕಾಲವು ಬೇಡದ್ದನ್ನು ಬಿಟ್ಟು ಬೇಕಾದ್ದನ್ನು ಕೊಡಲು ದೇವರೊಬ್ಬನಿಂದ ಮಾತ್ರವೇ ಸಾಧ್ಯ. ಈಶ್ವರ, ಸುಬ್ರಹ್ಮಣ್ಯ, ದುರ್ಗೆಯನ್ನು ಆರಾಧಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net