ಈ ರಾಶಿಯವರಿಗೆ ಗುರು ದುಡ್ಡಿಗೆ, ಆನಂದಕ್ಕೆ, ಸುಖಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾನೆ: ವಾರಭವಿಷ್ಯ

Vaara-Bhavishya
Published on
ಮೇಷ

ಗುರು ಕುಂಭ ರಾಶಿಯಲ್ಲಿದ್ದು, 11ನೇ ಮನೆಯ ಫಲವನ್ನೂ ನೀಡುವುದರಲ್ಲಿ ಅನುಮಾನವಿಲ್ಲ. ಸ್ವಾರ್ಥವಿಲ್ಲದ ಜೀವನ, ಫಲಾಪೇಕ್ಷೆ ಇಲ್ಲದೆ ಮಾಡಿದ ಉಪಕಾರ ಎಂದಿಗೂ ಮನುಷ್ಯನನ್ನು ಕಾಪಾಡುತ್ತದೆ. ಪಿತೃಗಳನ್ನು ಸ್ಮರಿಸಿ, ಸಂಕ್ರಾಂತಿಯ ಸೂರ್ಯನು ಒಳ್ಳೆಯ ಫಲ ನೀಡುತ್ತಾನೆ.

ವೃಷಭ

ರಾಹುವು ಉಚ್ಚ ಸ್ಥಾನದಲ್ಲಿದ್ದರೂ, ನಿಮಗೆ ಜನ್ಮದಲ್ಲಿ ಇರುವುದರಿಂದ ಆಪಾದನೆಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಹಿಡಿದ ಕೆಲಸ ನೆರವೇರುವುದು ಅಷ್ಟು ಸುಲಭವಲ್ಲ. ಮುಂದಾಲೋಚನೆ ಮಾಡಿಯೇ ಮುನ್ನುಗ್ಗ ಬೇಕು. ಪಿತೃಗಳನ್ನು ಮರೆಯದಿರಿ. ಮನಸ್ಸಿಗೆ ದುಗುಡ, ಚಿಂತ ದೂರವಾಗಬೇಕಾದರೆ ದುರ್ಗೆಯನ್ನು ಪ್ರಾರ್ಥಿಸಿ.

ಮಿಥುನ

ಈ ರಾಶಿಯವರಿಗೆ ಒಂಭತ್ತರ ಗುರು ಸಂಚಾರವಿದ್ದು, ಅಷ್ಟಮದಲ್ಲಿ ರವಿಯು ಶನಿಯ ಜೊತೆ ಸೇರಿಸುವುದರಿಂದ ಕೆಲವೊಂದು ಬಗೆಹರಿಯದ ಸಮಸ್ಯೆಗಳು ಉದ್ಭವಿಸಿ, ಮನಸ್ಸಿನ ಶಾಂತಿಯನ್ನು ಕದಡುತ್ತದೆ. ಆದರೆ ಗುರುವು ರಕ್ಷಣೆಯನ್ನು ನೀಡುತ್ತಾನೆ. ದ್ವಾದಶ ರಾಹುವಿಗಾಗಿ ಗಾಯತ್ರಿ ಉಪಾಸನೆ ಮಾಡಿದರೆ ಮನಸ್ಸು ಶಾಂತಚಿತ್ತ ವಾಗುವುದು. ತಂದೆ-ತಾಯಿಯನ್ನು ಗುರು ಎಂದು ತಿಳಿದು ನಮಸ್ಕರಿಸಿ.

ಕಟಕ

ಗ್ರಹಸಂಚಾರದಲ್ಲಿ ಸಪ್ತಮದಲ್ಲಿ ಬುಧನಿರುವುದರಿಂದ, ಸೂರ್ಯನು ಅಲ್ಲೇ ಇರುವುದರಿಂದ ಮನಸ್ಸು ನಿಶ್ಚಿಂತೆಯಿಂದ ಇರುತ್ತದೆ. ಅಷ್ಟಮ ಗುರುವಿಗೆ ದತ್ತಾತ್ರೇಯನನ್ನು ಆರಾಧಿಸಿ. ಶರೀರವನ್ನು ಕಾಪಾಡಿ ಕೊಳ್ಳಲು ಶ್ರೀರಾಮಚಂದ್ರನನ್ನು ಬೇಡಿದರೆ ಕ್ಷಿಪ್ರವಾಗಿ ಫಲ ದೊರೆಯುತ್ತದೆ. ಏಪ್ರಿಲ್ ತಿಂಗಳವರೆಗೂ ಕಾಯಿರಿ. ಚಂದ್ರನ ಮನೆಯಾದ್ದರಿಂದ ಜನ್ಮದಾತೆಯನ್ನು ಪೂಜಿಸಿ.

ಸಿಂಹ

ಕೇಳಿದ್ದನ್ನು ಕೊಡುವ ದೇವರು ಒಬ್ಬನೇ. ಯಾರಿಗೆ ನೀವು ಏನೇ ಹೇಳಿದರು ಅದನ್ನು ನಡೆಸುವುದು ನಿಮ್ಮ ಧರ್ಮ. ಎಲ್ಲರಿಗೂ ಸುಖವನ್ನು ಬಯಸಿ ಉಪಕಾರ ಮಾಡಬೇಕು. ನಿಮ್ಮ ಮನೋಆರೋಗ್ಯದಿಂದ ಹಿಡಿದು ಎಲ್ಲ ವಿಚಾರಗಳಲ್ಲೂ ಸುಖವಿದೆ. ಷಷ್ಟದಲ್ಲಿ ರವಿ, ಬುಧ, ಶನಿ ಇರುವುದು ಶುಭವೇ. ರಾಮಅಷ್ಟೋತ್ತರ ಪಠಿಸಿ. ತಿಲ ತರ್ಪಣ ನೀಡಿ. ಪಿತ್ರುಗಳೇ ನಿಮ್ಮನ್ನು ಕಾಪಾಡುತ್ತಾರೆ.

ಕನ್ಯಾ

ಷಷ್ಟದಲ್ಲಿ ಗುರುವಿದ್ದರೂ, ಶನಿಯ ಮನೆಯಲ್ಲಿ ಇದ್ದಾನೆ. ಅದರಿಂದ ಈಶ್ವರನನ್ನು ಅರ್ಚಿಸಬೇಕು. ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡಿ ಮುನ್ನಡೆಸುತ್ತಾನೆ. ಮರೆಯದೆ ಒಂಭತ್ತರ ರಾಹುವಿಗೆ ನಾಗದೇವರನ್ನು ಪೂಜಿಸಿ. ಯಾವುದೋ ಜನ್ಮದಲ್ಲಿ ಘಟಿಸಿದ ಪಿತೃಶಾಪಗಳಿಂದ ಮುಕ್ತಿ ಪಡೆಯುವ ಕಾಲ. ಪಿತೃಗಳಿಗೆ ತಿಲ ತರ್ಪಣ, ಸ್ವಯಂಪಾಕ ನೀಡಿರಿ. ಒಳ್ಳೆಯ ಪರಿವರ್ತನೆ ಕಾಣಬಹುದು.

ತುಲಾ

ಚತುರ್ಥದಲ್ಲಿ ಶನಿ ಇದ್ದರೂ ಕೆಲಸದಲ್ಲಿ ಒತ್ತಡವಿದ್ದು, ಮನೋವಿಶ್ರಾಂತಿ ಎಂಬುದು ದೂರದ ಮಾತು. ಕಾರ್ಯಕ್ಷೇತ್ರದಲ್ಲಿ ಜಯ ಕೊಟ್ಟು ಗುರುವು ಮುಂದೆ ಸಾಗಿಸುತ್ತಾನೆ. ಪಿತೃಗಳನ್ನು ತೃಪ್ತಿ ಪಡಿಸಿ. ಅವರ ಆಶೀರ್ವಾದ ಪಡೆದರೆ ಹಣದ ಕೊರತೆ ಇರುವುದಿಲ್ಲ. ಶ್ರಮಕ್ಕೆ ತಕ್ಕ ಫಲ ಸಿಕ್ಕಿ, ಗೌರವವೂ ಸಿಗುತ್ತದೆ.

ವೃಶ್ಚಿಕ

ರವಿ, ಬುಧ, ಶನಿ ಗ್ರಹಗಳು ವೃಶ್ಚಿಕ ರಾಶಿಯವರಿಗೆ ತೃತೀಯದಲ್ಲಿ ಇದ್ದು, ಚತುರ್ಥದಲ್ಲಿ ಗುರುವಿದ್ದಾನೆ. ಲಗ್ನದಲ್ಲಿ ಕೇತು, ಸಪ್ತಮದಲ್ಲಿ ರಾಹು ಇರುವುದರಿಂದ ವಿನಾಯಕ ಶಾಂತಿಯನ್ನು ಮಾಡಿ. ಬೆಳ್ಳಿಯ ಸರ್ಪ ನಿಮ್ಮ ಮನೆಯಲ್ಲಿದ್ದರೆ ಅದಕ್ಕೆ ಪೂಜೆ ಮಾಡಿ. ಕ್ಷಿಪ್ರವಾಗಿ ನಿಮ್ಮ ಕೆಲಸವೂ ಈಡೇರುತ್ತದೆ. ಅಕಸ್ಮಾತಾಗಿ ವಿಸ್ಮರಣೆಯಿಂದ ಪಿತೃಗಳನ್ನು ನೆನೆಯದೆ ಇರುವ ಕಾಲವಿರುತ್ತದೆ. ಅದರಿಂದ ಮಾತಾಪಿತೃಗಳನ್ನು ಧ್ಯಾನಿಸಿ ಆಶೀರ್ವಾದ ಪಡೆಯಿರಿ.

ಧನು

ಗುರುವಿನ ಮನೆಗೆ ಶುಕ್ರನು ಬಂದು ಕುಜನು ಅಲ್ಲೇ ಇರುವುದರಿಂದ ನಿಮಗೆ ಸಹನೆ ಇರಬೇಕು. ಶರೀರಕ್ಕೆ ಅತಿಯಾದ ಆಯಾಸ ಬೇಡ. ಮಾಡುವ ಕೆಲಸಗಳಲ್ಲಿ ಹಿರಿಯರ ಮಾರ್ಗದರ್ಶನ, ಗುರುವಿನ ಅನುಗ್ರಹ ಪಡೆದು ಮುನ್ನಡೆಯಿರಿ. ಸೂರ್ಯನು ಮಕರಕ್ಕೆ ಹೊರಡುತ್ತಾನೆ. ನಿಮ್ಮ ವಿಜಯ ಆರಂಭವಾಗಬೇಕಾದರೆ ಮಾತೆಗೆ ಗೌರವ, ಮನಸ್ಸಿನಲ್ಲಿ ಹೃದಯದಲ್ಲಿ ತಂದೆ-ತಾಯಿಗಳು ನೆಲೆಸುವಂತೆ ನೋಡಿಕೊಳ್ಳಿರಿ. ಗುರುಚರಿತ್ರೆ ಪಾರಾಯಣ ಸದಾ ಇರಲಿ.

ಮಕರ

ಶನಿಯ ಜೊತೆಗೆ ರವಿಯು ಬಂದು, ಎರಡನೇ ಮನೆಯಲ್ಲಿ ಗುರು ಇರುವುದರಿಂದ ಕೆಲಸಗಳು ಸಾಗುತ್ತಿರುತ್ತವೆ. ಸತ್ಯದ ಬೆಳಕನ್ನು ನೀಡುವವನು ಸೂರ್ಯನಾರಾಯಣ. ತಪ್ಪದೇ ಸೂರ್ಯನಮಸ್ಕಾರ, ಸೂರ್ಯ ಅಷ್ಟಕ ಮಾಡಿರಿ. ಗೋಧಿ, ಕಪ್ಪು ತಿಲ ದಾನ ಮಾಡಿರಿ. ವ್ಯಾಪಾರ-ವಹಿವಾಟುಗಳಲ್ಲಿ ಜಾಗ್ರತೆ ವಹಿಸಿ. ತಂದೆ-ತಾಯಿಯರನ್ನು ಸ್ಮರಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ.

ಕುಂಭ

ಈ ರಾಶಿಯಲ್ಲಿ ಗುರುವಿದ್ದು, ದ್ವಾದಶದಲ್ಲಿ ಶನಿ, ಬುಧ, ರವಿ ಇರುವುದು ಆರೋಗ್ಯದ ಬಗ್ಗೆ ಎಚ್ಚರವಹಿಸಿ ಎಂಬ ಸಂದೇಶ ರವಾನಿಸುತ್ತದೆ. ಪ್ರಾಣಾಪಾಯ ಇಲ್ಲದಿದ್ದರೂ ಅವರು ನೀಡಿದ ಶರೀರವನ್ನು ಆರೋಗ್ಯದಿಂದ ಕಾಪಾಡಿಕೊಳ್ಳುವುದು ಮನುಷ್ಯನ ಕೆಲಸ. ದ್ವಾದಶದಲ್ಲಿ ಸೂರ್ಯನು ಇರುವುದರಿಂದ ಪಿತೃಗಳ ಋಣವನ್ನು ತೀರಿಸಲು ಪಿತೃಕಾರ್ಯಗಳನ್ನು ಮಾಡಿ. ಸುಂದರಕಾಂಡದ ಪಂಚಕಾಂಡಗಳನ್ನು ಈ ವಾರದಲ್ಲಿ ಪಾರಾಯಣ ಮಾಡಿ. ಆಂಜನೇಯ ಸೇವೆ ಮಾಡಿ, ಒಳ್ಳೆಯ ಫಲವನ್ನು ಪಡೆಯಿರಿ.

ಮೀನ

ಈ ರಾಶಿಯವರಿಗೆ ದ್ವಾದಶದಲ್ಲಿ ಗುರುವಿದ್ದರೂ ಕ್ಷೇಮಕ್ಕೆ ಕೊರತೆಯಿಲ್ಲ. ಗುರು ರಾಶಿಯಲ್ಲಿ ಜನಿಸಿದ ನಿಮಗೆ ದುಡ್ಡಿಗೆ, ಆನಂದಕ್ಕೆ, ಸುಖಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾನೆ. ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಿರುತ್ತದೆ. ಭಗವತಿ ಲಲಿತಾ ಪರಮೇಶ್ವರಿಯನ್ನು ಪೂಜಿಸಿ. ಏಕಾದಶದಲ್ಲಿ ಶನಿ ಇರುವುದು ನಿಮಗೆ ಶುಭಸಮಯ. ಮತ್ತೆ ಶನಿ ಏಕಾದಶಕ್ಕೆ ಬರಬೇಕಾದರೆ 33 ವರ್ಷಗಳು ಬೇಕು. ಒಳ್ಳೆಯ ಕಾಲವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಒಳ್ಳೆಯ ಕೆಲಸ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net