

ಮೇಷ: ಅಧಿಪತಿ ಕುಜನು ಆ.16ರಂದು ರಾಶಿಗೆ ಬಂದು ನಿಮ್ಮ ಕರ್ತವ್ಯಗಳಲ್ಲಿ ಸ್ವಲ್ಪ ಬೆಳಕನ್ನು ಚೆಲ್ಲುತ್ತಾನೆ. ಹಾಗೆಯೇ ಆ.17 ರಂದು ಸಿಂಹಾಧಿಪತಿ ಸೂರ್ಯನು ಲಗ ಪಂಚಮದಲ್ಲಿ ಬುಧ ಸಮೇತನಾಗಿದ್ದು ವ್ಯವಹಾರಗಳನ್ನು ಸುಲಭಗೊಳಿಸುತ್ತಾನೆ. ಆದರೆ ಒಂಬತ್ತರ ಗುರುವು ಕೇತು ಸಮೇತನಾಗಿರುವುದರಿಂದ ವರಸಿದ್ಧಿ ವಿನಾಯಕನನ್ನು ವಿಶೇಷವಾಗಿ ಪೂಜಿಸಿ. ದತ್ತಾತ್ರೇಯ ಗುರು ಚರಿತ್ರೆಯ ಹನ್ನೆರಡನೇ ಅಧ್ಯಾಯ ಪಠಿಸಿ.
ವೃಷಭ: ರಾಶಿಯಲ್ಲಿ ಅಂಗಾರಕ ಮಿಥುನದಲ್ಲಿ ಶುಕ್ರ-ರಾಹುಗಳ ಸ್ಥಿತಿಯಲ್ಲಿದ್ದು ಅನಗತ್ಯ ಖರ್ಚುವೆಚ್ಚಗಳಾಗುವುದು. ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಯವಾಗುವುದು. ಧನ್ವಂತರಿಯನ್ನು ಭಜಿಸಿ. ನಿಮ್ಮ ಧನಲಾಭದ ಸುಖವನ್ನು ಕಾಯ್ದುಕೊಳ್ಳಲು ಶ್ರೀ ಸೂತ್ರವನ್ನು ಪಾರಾಯಣ ಮಾಡಿ. ಕೊಲ್ಹಾಪುರ ಮಹಾಲಕ್ಷ್ಮಿಗೆ ಪ್ರಾರ್ಥನೆ ಹಾಗೂ ಮುಡಿಪನ್ನು ಕಟ್ಟಿ.
ಮಿಥುನ: ದ್ವಾದಶ ಕುಜ ಧನವನ್ನು ವ್ಯಯಿಸಿ, ಹಣಕ್ಕಾಗಿ ಪರದಾಟವಾಗಬಹುದು. ಎಚ್ಚರವಿರಲಿ. ನಿಮ್ಮ ಭಾರ್ಯುಯನ್ನು, ಗೃಹವನ್ನು ಸಂತೋಷವಾಗಿಡಿ. ಆರೋಗ್ಯ ಕಾಪಾಡಿಕೊಳ್ಳಿ. ಕಷ್ಟ ನಿವಾರಿಸಿಕೊಳ್ಳಲು ಶಮಂತಕೋಪಾಖ್ಯಾನವನ್ನು ಪಠಿಸಿ. ವಿನಾಯಕನನ್ನು ದೂರ್ವೆಯಿಂದ ಪೂಜಿಸಿ.
ಕಟಕ: ಸುಖ-ಸಂತೋಷಕ್ಕೆ ಮನುಷ್ಯನ ಪೂರ್ವಪುಣ್ಯವೇ ಮುಖ್ಯ. ಜಲರಾಶಿಯವರು ನೀವು. ನಿಮ್ಮ ದೃಢ ಭಕ್ತಿಯು ಜಲಾಶಯದ ಶೇಖರಣೆಯಂತಿದ್ದರೆ ಯಾವ ಕಷ್ಟವೂ ಬಾರದು. ಸೂರ್ಯ ಸಂಕ್ರಮಣ ಹಾಗೂ ಬುಧನು ಆದಿತ್ಯನನ್ನು 17ನೇ ತಾರೀಕಿನಂದು ಸೇರುತ್ತಾನೆ. ಶಿವನನ್ನು ಪೂಜಿಸಿ ಹಾಗೂ ಪಂಚ ಬಿಲ್ವಪತ್ರೆಗಳಿಂದ (ತುಳಸಿ, ಬಿಲ್ವಪತ್ರೆ, ಶಮೀಪತ್ರೆ, ದಾಡಿಮಾ ಪತ್ರೆ, ಬೆಟ್ಟದ ನೆಲ್ಲಿಕಾಯಿ) ಪೂಜಿಸಿ, ಅರ್ಚಿಸಿ.
ಸಿಂಹ: ರಾಶ್ಯಾಧಿಪತಿ ರವಿಯು ರಾಶಿಗೆ ಬಂದು ಸೇರುವಾಗ ಬೆಳಕು ನಿಮ್ಮಲ್ಲಿದೆ. ಆಹಾರ, ಬೆಳಕನ್ನು ಹಂಚಿಕೊಂಡು ಬಾಳುವುದೇ ಮಾನವ ಧರ್ಮ. ಗುರು, ಶನಿ ಸ್ಥಿತಿ ಉಜ್ವಲವಾಗಿದೆ. ದೈವವನ್ನು ಮರೆತರೆ ಎಲ್ಲವೂ ಶೂನ್ಯ. ಎಚ್ಚರವಿರಲಿ. ಸೂರ್ಯನಾರಾಯಣ ಕವಚ ಸ್ತೋತ್ರವನ್ನು ಪಾರಾಯಣ ಮಾಡಿ. ಸ್ವರ್ಣ ಗೌರಿಯನ್ನು ಪೂಜಿಸಿ ನಿಮ್ಮ ಬಾಳು ಬಂಗಾರವಾಗಲಿ.
ಕನ್ಯಾ: ನೀವು ಏನು ಪುಣ್ಯ ಮಾಡಿದ್ದೀರೋ ಅದರಂತೆ ಸಿಗುವುದು. ಧನ್ವಂತರಿ ಜಪ ಮಾಡಿ ಆರೋಗ್ಯ ಸರಿಪಡಿಸಿಕೊಳ್ಳಿ. ಬೇಡದ ಔಷಧ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳಬೇಡಿ. ಧರ್ಮ ಕರ್ಮಾಧಿಪತಿ ಶನಿ ಪಂಚಮದಲ್ಲಿದ್ದಾನೆ. ಬೇರೆಯವರಿಗೆ ಕೊಟ್ಟ ನೋವು ನಿಮ್ಮನ್ನು ಕಾಡುತ್ತಿದೆ. ಗುರುಚರಿತ್ರೆ ಪಾರಾಯಣ, ದತ್ತಾತ್ರೇಯ ಸಹಸ್ರನಾಮ ಭಜಿಸಿ.
ತುಲಾ: ಏಕಾದಶದಲ್ಲಿ ರವಿ ಬುಧರು ಅತ್ಯುತ್ತಮವಾದ ಲಾಭ, ಸುಖ, ಸಂತೋಷವನ್ನು ತರುತ್ತಾರೆ. ನಿಮಗೆ ನೋವು ಕೊಟ್ಟವರು ಪಶ್ಚಾತ್ತಾಪ ಪಡುವ ಕಾಲವಿದು. ನೀವು ಸಾಧಕರಾಗಿ ಬದುಕಬೇಕೇ ಹೊರತು ಬಾಧಕರಾಗಬಾರದು. ನಿಮ್ಮ ಚಿಹ್ನೆ ತಕ್ಕಡಿ. ನ್ಯಾಯ, ಅನ್ಯಾಯವನ್ನು ತುಲನೆ ಮಾಡಿ. ಹಯಗ್ರೀವ, ಶ್ರೀ ಲಕ್ಷ್ಮೀ ನರಸಿಂಹನನ್ನು ಪೂಜಿಸಿ.
ವೃಶ್ಚಿಕ: ಬ್ರಹ್ಮಚಾರಿಯು ಹುಡುಗಿಗಾಗಿ ಕಾಯುವುದು, ವೃಶ್ಚಿಕ ರಾಶಿಯವರು ದುಡ್ಡಿಗಾಗಿ ಕಾದಿರುವುದು ಸಹಜ. ಧನಕ್ಕೆ ಪಾಪ-ಪುಣ್ಯದ ಪರಿವೆಯಿಲ್ಲ. ನಿಮ್ಮ ಲಲಾಟದಲ್ಲಿ ಬರೆದಿರುವುದು ಕೈ ಸೇರುವ ಕಾಲ. ಪರಶುರಾಮನನ್ನು ಧ್ಯಾನ ಮಾಡಿ, ನೀಲಿದೇವಿ ಸ್ತೋತ್ರವನ್ನು ಪಠಿಸಿ, ಆಸುಪಾಸಿನಲ್ಲಿ ನಿಮ್ಮ ಅದೃಷ್ಟ ಬದಲಾಗಿ ಇಚ್ಛೆಗಳು ಪೂರ್ಣಗೊಳ್ಳುತ್ತವೆ.
ಧನಸ್ಸು: ದೈವ ಗುರು ರಾಶಿಯಲ್ಲಿದ್ದು, ನಿರಾಸೆಗಳನ್ನು ಆಸೆಯ ಪಥಕ್ಕೆ ಕೊಂಡೊಯ್ಯುತ್ತಾನೆ. ನವಗ್ರಹ ಮಹಾಮಂತ್ರಗಳಲ್ಲಿ ಗುರು ಮಂತ್ರವನ್ನು ಕಲಿತು 28 ಸಲ ಸರಸ್ವತಿ ಮಂತ್ರ ಸಮೇತ ಜಪಮಾಡಿ. ನೀವು ಇನ್ನೊಬ್ಬರಿಗೆ ಮಾದರಿಯಾಗಬೇಕು. ಕಲಹ, ನಿಷ್ಠುರ ಮಾತುಗಳು ಬಾಧಿಸಬಹುದು. ಇದಕ್ಕೆ ಮೌನವೇ ಸರಿಯಾದ ಉತ್ತರ.
ಮಕರ: ಸ್ವಕ್ಷೇತ್ರದಲ್ಲಿ ಶನಿ ಪ್ರಭಾವ ನವೆಂಬರ್ 20ರ ವೇಳೆಗೆ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ. ಕಾರ್ಯಕರ್ತ ದೈವ, ಅನುಮೋದಚ್ಛ ಪ್ರೇರಕ, ಒಳ್ಳೆಯದನ್ನು ಮಾಡಲು ಸಲಹೆ, ಸಹಾಯ ಮಾಡುವವನು, ಪ್ರೇರಣೆ ಕೊಟ್ಟವರು ಈ ನಾಲ್ವರೂ ಮುಖ್ಯ. ತಿಲಗುಡವನ್ನು ದಾನ ಮಾಡಿ. ವರಸಿದ್ಧಿ ವಿನಾಯಕನನ್ನು ಅರ್ಚಿಸಿ. ಶಮಂತಪೋಖ್ಯಾನ ಪಾರಾಯಣ ಮಾಡಿ.
ಕುಂಭ: ಅಧಿಪತಿ ಶನಿ. ಶನಿಯ ದ್ವಾದಶ ಸ್ಥಾನವು ಕಾಯ್ದ ಕಬ್ಬಿಣದಂತೆ, ಕಾದ ಕಬ್ಬಿಣಕ್ಕೆ ಜಲ ಹಾಕಿದರೆ ಉಷ್ಣತೆಯನ್ನು ಪಡೆದುಕೊಳ್ಳುತ್ತದೆ. ನಿಮ್ಮ ಜೀವನವು ಸದ್ಯದಲ್ಲಿ ಈ ಹಾದಿಯಲ್ಲಿದೆ. ಬೇಕಾಗಿರುವುದು ಮನಃಶಾಂತಿ ಹಾಗೂ ಆರೋಗ್ಯ, ಇದ್ದದ್ದನ್ನು ಜೋಪಾನ ಮಾಡಿಕೊಂಡು ತೃಪ್ತಿಯಿಂದ ಇರುವುದು. ದುರ್ಗೆಯು ತನ್ನ ದೋಣಿಯಲ್ಲಿ ಕೂರಿಸಿಕೊಂಡು ದಡ ಸೇರಿಸುತ್ತಾಳೆ. ದುರ್ಗಾಸಹಸ್ರನಾಮ ಪಠಿಸಿ.
ಮೀನ : ಹತ್ತರ ಗುರು, ಹನ್ನೊಂದರ ಶನಿ ಎಲ್ಲವನ್ನು ಕೊಡುವ ಕಾಲ. ಇಲ್ಲದ್ದನ್ನು ಚಿಂತಿಸಿ ಸಮಯ ಹಾಳುಮಾಡುವುದು ಬೇಡ. ಮೀನಾಧಿಪತಿಯೇ ಧನಸ್ಸಿನಲ್ಲಿರುವಾಗ ನಿಮ್ಮ ಪೂರ್ವಜನ್ಮದ ಪುಣ್ಯಕಾಲ. ಸಂತಸವನ್ನು, ಸಿಹಿಯನ್ನು ಹಂಚಿಕೊಂಡು ಬಾಳುವುದು ಶ್ರೇಯಸ್ಕರ, ತಾಳ್ಮೆಯಿರಲಿ. ಕಾಳಿಕಾಂಬ ಅಷ್ಟೋತ್ತರ ಪಾರಾಯಣ ಮಾಡಿ.