ಈ ರಾಶಿಯವರಿಗೆ ಶತ್ರುಸಂಹಾರದಲ್ಲಿ ಜಯ, ಅವಶ್ಯವಿರುವಷ್ಟು ಧನವೂ ದೊರಕುತ್ತದೆ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷಾಧಿಪತಿ ಕುಜನು ಶನಿಯೊಡನಿದ್ದು, ಸಂಘರ್ಷ ಉಂಟುಮಾಡಿದರೆ ಗುರು-ಶುಕ್ರರ ಸಂಯೋಗ ನಡೆದು ರಾಷ್ಟ್ರದಲ್ಲಿ ವಿಚಿತ್ರ ಬದಲಾವಣೆ ಆಗುವುದು. ನಾನಾ ಥರದ ನಿಷ್ಠುರ ಉಂಟಾಗುವ ಸಂಭವ. ದ್ವಾದಶ ಗುರು ಇರುವುದರಿಂದ ಕ್ಷೇಮಕಾಲವಲ್ಲ. ದತ್ತಾತ್ರೇಯನ ಪ್ರಾರ್ಥನೆ ಇರಲಿ. ಪಳನಿ ಸುಬ್ರಹ್ಮಣ್ಯನನ್ನೂ ಪ್ರಾರ್ಥಿಸಿ. ನರಸಿಂಹನನ್ನು ಪೂಜಿಸಿ. ಒಳ್ಳೆಯ ಫಲ ನೀಡುತ್ತಾನೆ. ಏಳಿಗೆಯಲ್ಲಿ 11ರ ಶನಿ ಒಳ್ಳೆಯ ಲಾಭ, ಧನ, ಕೀರ್ತಿ ತರುತ್ತಾನೆ.

ವೃಷಭ

ವೃಷಭ ರಾಶಿಯಲ್ಲಿ ರವಿಯು ಸೇರಿದ್ದು, ಬುಧನ ಜತೆ ಇದ್ದಾನೆ. ಮನಸ್ಸಿಗೆ ತೋಚಿದ್ದನ್ನು ಮಾಡಿ, ಆಮೇಲೆ ವ್ಯಥೆ ಪಡಬೇಡಿ. ದೈವವನ್ನು ಎಂದೂ ಮರೆಯಬಾರದು. ಯಾರನ್ನೂ ನಿಂದಿಸಬೇಡಿ. ನಾಲಿಗೆಯ ಪಾವಿತ್ರ್ಯ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಫಲ ನೀಡುತ್ತಾನೆ. ಒಳ್ಳೆಯ ದಿನಗಳು ಬರಲಿವೆ.

ಮಿಥುನ

ಗುರುವು ಶುಕ್ರನೊಂದಿಗೆ ಇದ್ದು, ದ್ವಾದಶ ಶನಿ ಕುಜರ ಪಾಪ-ಪುಣ್ಯ, ಗೆಲುವು-ಸೋಲು ಸಮಾನವಾಗಿದ್ದು, ನೀಡುತ್ತಾರೆ. ಆದರೆ ದಶಮ ಗುರು ಸಂತೈಸಿ ಕಾಪಾಡುತ್ತಾನೆ. ಆಡುವ ಮಾತುಗಳ ಬಗ್ಗೆ ಎಚ್ಚರವಿರಲಿ. ನಿಮಗೆ ಗೆಲುವು ಕೊಡದೆ ನಿಮ್ಮನ್ನು ಉಪಯೋಗಿಸಿಕೊಂಡು ತೇಜೋವಧೆ ಮಾಡುವವರಿಗೆ ಪಾಠ ಕಲಿಸುತ್ತಾನೆ. ಮುತ್ತಿನಂಥ ಮಾತಾಡಿದರೆ ಆಡುವ ಮಾತುಗಳೇ ಫಲಕಾರಿಯಾಗುತ್ತವೆ. ಆರೋಗ್ಯದ ಬಗ್ಗೆ ಗಮನವಿರಲಿ.

ಕಟಕ

ಮನುಷ್ಯನ ಮನಸ್ಸಿಗೆ ಚಂದ್ರನೇ ಅಧಿಪತಿ. ಮನಸ್ಸು ಚೆನ್ನಾಗಿದ್ದರೆ ದೇವರು ಆರೋಗ್ಯ ಕೊಡುವ ಮೂಲಕ ನಿಮ್ಮ ಇಚ್ಛೆ ಪೂರ್ಣಗೊಳಿಸುತ್ತಾನೆ. ನವಮ ಗುರು ಎಲ್ಲ ಕೊಡುವ ಗ್ರಹ. ಅಷ್ಟಮ ಶನಿಯಿಂದ ಶರೀರಕ್ಕೆ ಆಯಾಸ ಮಾಡದೆ ಧ್ಯಾನಾಸಕ್ತರಾದರೆ ಗುರು ದತ್ತಾತ್ರೇಯನು ನಿಮ್ಮನ್ನು ರಕ್ಷಿಸುತ್ತಾನೆ.

ಸಿಂಹ

ಮಾತಿಗಿಂತ ವೈರಿಯಿಲ್ಲ. ಸತ್ಯಕ್ಕಿಂತ ಬೇರೊಂದು ಸಾಕ್ಷಿಯಿಲ್ಲ. ಎರಡನ್ನೂ ಕೊಡುವವನೆ ಅರುಣದಲ್ಲಿ ಉದಯವಾಗುವ ಛಾಯಾಸಹಿತ ಸೂರ್ಯನಾರಾಯಣ ಸ್ವಾಮಿ. ಸೂರ್ಯನ ಪ್ರಾರ್ಥನೆಯಿಂದ ಪ್ರಜ್ಞೆ, ವಿದ್ಯಾ, ಕೀರ್ತಿ, ಆಯಸ್ಸು, ಆರೋಗ್ಯ ಪ್ರಾಪ್ತವಾಗುತ್ತದೆ ಎಂದು ವೇದಸಾರಿದೆ. ನಿತ್ಯವೂ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ. ಸೂರ್ಯ ಅಷ್ಟೋತ್ತರ ಪಠಿಸಿ. ದಶಾವತಾರ ಸ್ವರೂಪಿ ಲಕ್ಷ್ಮೀ ನರಸಿಂಹನೇ ಕಾಪಾಡುತ್ತಾನೆ.

ಕನ್ಯಾ

ಆನಂದವೆಂಬುದು ಮನಸ್ಸಿನ ಒಂದು ನಿಶ್ಚಲ ನಂಬಿಕೆ. ಆನಂದ ಪಡೆಯಬೇಕಾದರೆ ಸತ್ಯವೂ ಬೇಕು. ಚಂಚಲ ಮನಸ್ಸನ್ನು ಕಟ್ಟಿಹಾಕಲು ಭಗವಂತನ ಕರುಣೆ ಬೇಕು. ಸಪ್ತಮ ಗುರು ಷಷ್ಠದಲ್ಲಿದ್ದು, ಶನಿಯಿಂದ ಎಲ್ಲ ಕಾರ್ಯಗಳನ್ನು ನಿಮ್ಮ ಇಷ್ಟದಂತೆ ಮುನ್ನಡೆಸುತ್ತಾನೆ. ಮಹಾವಿಷ್ಣುವನ್ನು ಭಜಿಸಿ. ರಾಮಾಯಣದ ಮಧ್ಯಭಾಗದ ರಾಮಗೀತೆಯನ್ನು ಪ್ರಾರ್ಥಿಸಿ.

ತುಲಾ

ರಾಶಿಯಲ್ಲಿ ಕೇತುವು ಕೂತು ಶುಭವನ್ನು ಕೊಡುವುದು ನಿಧಾನ. ಒಂದೆಡೆ ಪಂಚಮ ಶನಿಯ ಒತ್ತಡ. ಆರನೇ ಮನೆಯ ಶನಿಯ ಬಲ ಕಡಿಮೆ ಇರುವುದರಿಂದ ‘ಏನಾದರೂ ಬರಲಿ ಎಂತಾದರೂ ಬರಲಿ ಗೋವಿಂದನ ದಯೆ ಇರಲಿ’ ಎಂದು ಲಕ್ಷ್ಮೀನರಸಿಂಹನ ಮಂತ್ರವನ್ನು ಪಾರಾಯಣ ಮಾಡಿ. ಪಂಚಮ ಶನಿ ಮುಗಿಯುವವರೆಗೆ ದುರ್ಗಾಸಹಸ್ರನಾಮ ಪಾರಾಯಣ ಮಾಡಿ. ಶನಿ ಅಷ್ಟೋತ್ತರ ಪಠಿಸಿ. ದೈವವೇ ಮುನ್ನಡೆಸುತ್ತಾನೆ.

ವೃಶ್ಚಿಕ

ಶುಕ್ರ ಮತ್ತು ಗುರುವು ಪಂಚಮದಲ್ಲಿದ್ದು, ಅಂಗಾರಕನು ಶನಿ ಜತೆಯಿರುವುದರಿಂದ ಭೂಲಾಭ, ಧನಲಾಭ, ಕೀರ್ತಿ, ಯಶಸ್ಸು ಕೊಡುತ್ತಾನೆ. ಚತುರ್ಥ ಶನಿ ಕೆಲವೊಂದು ಅಡ್ಡಿ ಮಾಡಿದರೂ, ಗುರುವಿಗೆ ಶ್ರೀದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯವನ್ನು ಪಾರಾಯಣ ಮಾಡಿ. ಕುಜನಿಗಾಗಿ ಸುಬ್ರಹ್ಮಣ್ಯನನ್ನು, ಲಕ್ಷ್ಮೀ ನರಸಿಂಹನನ್ನು ಪ್ರಾರ್ಥಿಸಿ. ಹಿರಿಯರ ಆಶೀರ್ವಾದ ಇರಲಿ. ದುರ್ಗಾಮಾತೆಯ ದರ್ಶನದಿಂದ ಯಶಸ್ಸನ್ನು ಕಂಡುಕೊಳ್ಳಬಹುದು.

ಧನು

ಗುರುವಿನ ರಾಶಿ ಧನಸ್ಸು ಹಾಗೂ ಮೀನ. ರಾಮನ ಬಾಣ ಬಿಟ್ಟ ಕಡೆ ಹೋಗುತ್ತಿತ್ತು. ಮತ್ತೆ ಬತ್ತಳಿಕೆಗೆ ಬಂದು ಸೇರುತ್ತಿತ್ತು. ಶ್ರೀರಾಮಚಂದ್ರನ ಅನುಗ್ರಹ ಪಡೆಯುವುದು ಮಹಾಸಂಕಲ್ಪವಾಗಿರಲಿ. ಆಯಾಸದಿಂದ ಓಡಿದವನು ಸೋಲುತ್ತಾನೆ. ಆಲೋಚನೆ ಮಾಡಿ ಓಡಿದರೆ ಜಯಶೀಲನಾಗುತ್ತಾನೆ. ರಾಮ ಅಷ್ಟೋತ್ತರ ಪಾರಾಯಣ ಇರಲಿ. ನಿತ್ಯವೂ ದಕ್ಷಿಣಾಮೂರ್ತಿಯನ್ನು ಸ್ಮರಿಸಿ. ಕೆಲಸವನ್ನು ಮುಂದುವರಿಸಿ.

ಮಕರ

ಮಕರ ರಾಶಿಗೆ ಗುರುವು ಮೂರರಲ್ಲಿ, ಶನಿಯು ದ್ವಿತೀಯದಲ್ಲಿದ್ದು, ದುಃಖ-ಲಾಭವು ಸಮಾನವಾಗಿದೆ. ಬಯಸದ ತೊಂದರೆಗಳು ಈಶ್ವರ ಸೃಷ್ಟಿಯ ಶನಿಯ ಹುತ್ತದಲ್ಲಿವೆ. ಗುರುವು ಸ್ವಕ್ಷೇತ್ರದಲ್ಲಿದ್ದು, ಶನಿಯನ್ನು ಪ್ರಾರ್ಥಿಸಿ. ತಾಪವು ಕಡಿಮೆಯಾಗಿ ನಿಮ್ಮ ಆಸೆಯಂತೆ ನಡೆಯಲು ಬಿಡುತ್ತಾನೆ. ಮಾರ್ತಾಂಡ ಭೈರವ ಅಷ್ಟೋತ್ತರವನ್ನು ಪಠಿಸಿ. ಶತ್ರುಸಂಹಾರದಲ್ಲಿ ಜಯ. ಅವಶ್ಯವಿರುವಷ್ಟು ಧನವೂ ದೊರಕುತ್ತದೆ.

ಕುಂಭ

ನಾವು ಲೋಕಕ್ಕೆ ಬಂದಿರುವುದು ಪಾಪಗಳನ್ನು ಬಿಟ್ಟು, ಪುಣ್ಯಪ್ರಾಪ್ತಿ ಮಾಡಿ ಹೋಗುವುದಕ್ಕಾಗಿ. ಪುಣ್ಯವೆಂಬುದು ಬೇಕಾದರೆ ದೇವರು ಕೊಟ್ಟಿದ್ದನ್ನು ಇಟ್ಟು ಹೋಗದೆ ಕೊಟ್ಟು ಹೋಗಬೇಕು. ಧರ್ವಚರಣೆ ತಪ್ಪದೇ ಇರಲಿ. ರಾಶಿಯ ಒಡೆಯನಾದ ಶನಿಯೇ ಕಾಪಾಡುತ್ತಾನೆ. ಕುರುವಪುರದ ದತ್ತನನ್ನು ಅರ್ಚಿಸಿ, ಭಜಿಸಿ. ಕುಮಸಿ ಸ್ಥಳಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಕೈಲಾದ ಸೇವೆ ಮಾಡಿ ಒಳ್ಳೆಯದನ್ನು ಪಡೆದುಕೊಳ್ಳಿ.

ಮೀನ

ಆತ್ಮಕಾರಕನಾದ ಗುರುವು ಲಗ್ನದಲ್ಲೇ ಇರುವುದು. ಸಮಯೋಚಿತ ಸಲಹೆಗಳನ್ನು ನಿಮ್ಮ ಮಿದುಳಲ್ಲಿ ಪ್ರವಹಿಸಿ ನಡೆಸುತ್ತಾನೆ. ಎಚ್ಚರವಿರಲಿ. ಇದು ಶನಿಯ ಏಳೂವರೆ ಸಂಚಾರ ಕಾಲ. ಅನನ್ಯವಾಗಿ ಶಿವಪೂಜೆ, ಕೈಲಾದ ದಾನ, ಧರ್ಮ ಮಾಡಿದರೆ ಅಶುಭ ಶಬ್ದಗಳಾಗಲಿ, ಹಿಂಸಾತ್ಮಕ ಘಟನೆಗಳಾಗಲಿ ನಡೆಯುವುದಿಲ್ಲ. ಗುರುವಿಗೆ ಶರಣು ಹೋದರೆ ನಿಮ್ಮನ್ನು ಕಾಪಾಡುತ್ತಾನೆ. ನಿತ್ಯವೂ ದತ್ತನನ್ನು ಪೂಜಿಸಿ. ಭಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net