

ಮೇಷ : ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರಿಗೆ ದೀಪಾವಳಿಯ ಕುಬೇರ, ಧನಲಕ್ಷ್ಮಿ, ರಾಮದೇವರೇ ಅನುಗ್ರಹಿಸುತ್ತಾರೆ. ನಿಂತ ಕಾರ್ಯ ಮುಂದೆ ಸಾಗಿ, ಜನರ ಪ್ರೀತಿ ಗಳಿಸಿ ಮಡದಿ ಮಕ್ಕಳೊಂದಿಗೆ ಸಂತೋಷ ಹಂಚಿಕೊಳ್ಳುವ ಸಮಯ. ಭೂಮಿ ಹಾಗೂ ವಾಣಿಜ್ಯ, ಕೈಗಾರಿಕೆಯಲ್ಲಿ ವಿಶೇಷ ಲಾಭ ಬರುತ್ತದೆ. ರಾಷ್ಟ್ರವ್ಯಾಪಿ ಹರಡಿರುವ ಕಾಯಿಲೆ ಇಳಿಮುಖವಾದ ಮೇಲೆ ಆರು ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಭೂಲೋಕ ಸಂಚಾರ ಮಾಡಿದ ಪುಣ್ಯ ಸಂಪಾದಿಸಿಕೊಳ್ಳಿ. ಕೇವಲ ನಿಮಗಾಗಿ ಬದುಕಬಾರದು. ಇತರರಿಗಾಗಿಯೂ ಬದುಕಬೇಕು.
ವೃಷಭ : ಒಂಬತ್ತರ ಶನಿ-ಗುರು ಸಂಯೋಗದಲ್ಲಿ ಕೃತ್ತಿಕಾ, ರೋಹಿಣಿ, ಮೃಗಶಿರ ನಕ್ಷತ್ರದವರಿಗೆ ಮಾಡಿದ ಕೆಲಸಗಳು ಪೂರ್ಣಗೊಂಡು ಆನಂದ ಹೊಂದುವಿರಿ. ಮಹಾಲಕ್ಷ್ಮೀ, ಮಹಾಕಾಳಿ, ಮಹಾಸರಸ್ವತಿ ಐಕ್ಯರೂಪವಾದ ಶ್ರೀ ಶೃಂಗೇರಿ ಶಾರದೆಯನ್ನು ಪೂಜಿಸಿ. ಇಷ್ಟಾರ್ಥ ಸಿದ್ಧಿಸುತ್ತದೆ. ಸಂತೋಷವನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳಿ. ಸುಖಕರ ಜೀವನ ನಿಮ್ಮದಾಗುತ್ತದೆ.
ಮಿಥುನ : ಸಪ್ತಮ ಗುರು ಅಷ್ಟಮಕ್ಕೆ ಚಲಿಸಿ ಶನಿಯೊಂದಿಗೆ ಸೇರುತ್ತಾನೆ. ತನ್ನ ಬಲದಲ್ಲಿ ಗುರುವು ಏನನ್ನೂ ಕೊಡಲು ಕಷ್ಟಕರ. ಸಮಾಧಾನದಿಂದ ನಿಧಾನವಾಗಿ ಹೆಜ್ಜೆ ಹಾಕುವುದೇ ಮಾರ್ಗ. ಚಿಂತೆ ಮಾಡಿದರೆ ಆರೋಗ್ಯ ಕೆಡುತ್ತದೆ. ದೇವರ ಮೊರೆ ಹೋಗಿ ಒಳ್ಳೆಯ ಕಾಲಕ್ಕೆ ನಿರೀಕ್ಷಿಸಿ. ನಾಗದೇವರನ್ನು, ಹಯಗ್ರೀವನನ್ನು ಮನಸಾರೆ ಪೂಜಿಸಿ. ಕೆಡುಕುಗಳು ನಿಂತರೆ ಒಳ್ಳೆಯದಾದಂತೆ. ದೈವಚಿಂತನೆಯಿರಲಿ.
ಕಟಕ : ಸಪ್ತಮಕ್ಕೆ ಗುರುವು ಬಂದು ಸೇರಲಿದ್ದಾನೆ. ನಿಮ್ಮ ಕೆಲಸದಲ್ಲಿ ಅವಾಂತರ ಬೇಡ. ಯಾವುದೇ ಕೆಲಸವನ್ನು ಆತುರ ಮಾಡಿದಲ್ಲಿ ನಿರೀಕ್ಷಿತ ಫಲ ಸಿಗುವುದಿಲ್ಲ. ಕೋಪದ ಇನ್ನೊಂದು ಅರ್ಥವೇ ಅವಾಂತರ. ದಿಕ್ಕುತಪ್ಪಬೇಡಿ. ನಿಧಾನವಾಗಿ ಯೋಚಿಸಿ ಕೆಲಸ ಮಾಡಿ. ಆದದ್ದೆಲ್ಲ ಆಗಲಿ. ಗೋವಿಂದನ ನೆನಪಿರಲಿ. ಚಾಣಾಕ್ಷತೆಯಿಂದ ಯೋಚಿಸಿ ಜಯ ಕಂಡುಕೊಳ್ಳಿ.
ಸಿಂಹ : ದೇವರು ಕೊಟ್ಟ ಬೆಳಕನ್ನು ಬಾಳಿನಲ್ಲಿ ಬೆಳಗಿಸಿಕೊಳ್ಳಿ. ಮೋಡ ಮಿಂಚಿದ್ದರೂ ಸೂರ್ಯನು ಜ್ಞಾನದ ಬೆಳಕನ್ನು ಚೆಲ್ಲುತ್ತಿರುತ್ತಾನೆ. ಶನಿಯು ಆದರಲ್ಲಿದ್ದು, ನಿಮ್ಮ ಪರಾಕ್ರಮಕ್ಕೆ ತಕ್ಕ ಲಾಭ ಕೊಡುತ್ತಾನೆ. ಗುರು ಬಲವಿಲ್ಲದಿದ್ದರೂ ಸಿಂಹ ರಾಶಿಯವರು ಅನಂತವಾಗಿ, ಅನನ್ಯವಾಗಿ ಕುಲದೇವರನ್ನು, ಇಷ್ಟದೇವರನ್ನು ಮನಸಾರೆ ಪೂಜಿಸಿ ಶ್ರೇಯಸ್ಸನ್ನು ತಂದುಕೊಳ್ಳಬೇಕು. ಗುರುವಿನ ಸ್ಮರಣೆ ಇರಲಿ. ನಷ್ಟವಿಲ್ಲ, ಲಾಭವುಂಟು.
ಕನ್ಯಾ : ಭಯವನ್ನು ಹೊಡೆದೋಡಿಸಬೇಕಾದರೆ ಹಸ್ತ, ಉತ್ತರ, ಚಿತ್ತಾ ನಕ್ಷತ್ರದ ಒಂದನೇ ಪಾದದವರು ಲಕ್ಷ್ಮೀನರಸಿಂಹನ ಆರಾಧನೆ ಮಾಡಬೇಕು. ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಅನುಮಾನ. ಗ್ರಹಗಳು ಚೆನ್ನಾಗಿದ್ದು ಆತ್ಮಸ್ಥೈರ್ಯ ಕಳೆದುಕೊಂಡರೆ ಆರೋಗ್ಯವನ್ನು ಹಾಳುಮಾಡಿಕೊಂಡಂತೆ. ನಿತ್ಯವೂ ಮೃತ್ಯುಂಜಯನನ್ನು ಪ್ರಾರ್ಥಿಸಿ. ದೇವರು ನಿಮ್ಮನ್ನು ಉಪವಾಸ ಇಟ್ಟಿಲ್ಲ. ಜೇಬನ್ನೂ ಖಾಲಿಮಾಡಿಲ್ಲ. ಧೈರ್ಯದಿಂದ ಎಲ್ಲವನ್ನು ಎದುರಿಸಿ ಸಂತೋಷ ಹೊಂದಿ.
ತುಲಾ : ದೇವರು ನಿಮ್ಮನ್ನು ತಕ್ಕಡಿಯಲ್ಲಿ ತೂಗುತ್ತಿದ್ದಾನೆ. ಉಯ್ಯಾಲೆಯಲ್ಲಿ ತೂಗಿದರೆ ಎಂತಹವರಿಗೂ ನಿದ್ದೆ ಬರುತ್ತದೆ. ನಿಮ್ಮ ಆಗುಹೋಗು ಶುಭಾಶುಭ ಲಾಭನಷ್ಟಗಳನ್ನು ತೂಗಿ ನ್ಯಾಯಸಮ್ಮತವಾಗಿ ಬರಬೇಕಾದ ಪಾಲನ್ನು ನಿಮಗೆ ಕೊಡುತ್ತಾನೆ. ಇನ್ನೊಬ್ಬರಿಗೆ ಬುದ್ಧಿ ಹೇಳಬೇಡಿ. ಕೊಂಕುಮಾತಿನಿಂದ ನಿಮ್ಮ ಮನಸ್ಸು ನೋಯಿಸುತ್ತಾರೆ. ಹೇಳಿದ ಮಾತನ್ನು ಕೇಳಿದ ಚಿತ್ತಾ 3, ವಿಶಾಖ, ಸ್ವಾತಿ ನಕ್ಷತ್ರದವರು ಉಪ್ಪರಿಗೆ ಏರಿ ಬೆಳೆದು ದೊಡ್ಡವರಾಗಬಹುದು. ತಪ್ಪದೆ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಿ. ಸಂಜೆಯಲ್ಲಿ ಇಷ್ಟದೇವರಿಗೆ ತುಪ್ಪದ ಆರತಿ ಬೆಳಗಿ.
ವೃಶ್ಚಿಕ : ಕಾದಿದ್ದಾಗಿದೆ. ವಿರಾಮವೂ ಆಗಿದ್ದು, ದುಡ್ಡಿಲ್ಲದೆ ಜೇಬು ಖಾಲಿಯಾಗಿದೆ. ಎಲ್ಲವನ್ನೂ ತಂದುಕೊಡುವುದು ಪೂರ್ವಜನ್ಮದಲ್ಲಿ ಮಾಡಿದ ಪುಣ್ಯಕೆಲಸಗಳು. ನಿಮ್ಮನ್ನು ದೇವರೇ ಮೆಚ್ಚಿ ಬರಬೇಕಾದ ಸ್ವತ್ತು, ವ್ಯವಹಾರದಲ್ಲಿ ಸರಿಯಾದ ಹಂಚಿಕೆ ಎಲ್ಲಾ ಕೊಡುತ್ತಾನೆ. ನಿಮ್ಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ. ಕುಬೇರಲಕ್ಷ್ಮಿಯನ್ನು ಪೂಜಿಸಿ ವರವನ್ನು ಕೇಳಿ. ಆನಂದ ನಿಮ್ಮ ಪಾಲಿಗಿದೆ.
ಧನಸ್ಸು : ಅಧಿಪತಿ ಗುರುವು ಚಲಿಸುವ ಸಮಯ. ನೀವು ಚಲಿಸದೆ ಇದ್ದರೆ, ಸ್ಥಿರ ಮನಸ್ಸು ಲಾಭ ತಂದುಕೊಡುತ್ತದೆ. ಇನ್ನೊಬ್ಬರ ತಪ್ಪು ಹುಡುಕಿ ನಾವು ಕೆಟ್ಟವರಾಗಬಾರದು. ನಿಮ್ಮ ಕಾರ್ಯಸಾಧನೆಯೇ ಗುರಿಯಾಗಲಿ. ಗ್ರಹಗಳು ಚೆನ್ನಾಗಿದೆ. ಆರೋಗ್ಯ ವೃದ್ಧಿಯಾಗಿದೆ. ಶ್ರಮದಿಂದ ಗಳಿಸಿದ ಸ್ವತ್ತು, ಸುಖ ಎಂದಿಗೂ ನಾಶ ಆಗುವುದಿಲ್ಲ. ಗುರು ಅಧಿಪತ್ಯದ ನೀವು ದೇವರನ್ನು ಮರೆತರೆ ನಿಮ್ಮ ಜನನಕ್ಕೆ ಅರ್ಥವೇ ಇಲ್ಲ. ದತ್ತದೇವರು, ದುರ್ಗಾಮಾತೆಯನ್ನು ಹೃದಯಮಂದಿರದಲ್ಲಿಟ್ಟು ಪೂಜಿಸಿ.
ಮಕರ : ಜನ್ಮಲಗ್ನದಲ್ಲಿ ಗುರು, ಶನಿ ಸೇರಿ ಕೆಲವೊಂದು ಕಷ್ಟಕಾರ್ಪಣ್ಯ ಕಡಿಮೆಯಾಗುವ ಸಾಧ್ಯತೆಯಿದೆ. ಇದ್ದಾಗ ಸಹಾಯ ಮಾಡಿ. ಅನ್ನವನ್ನು ಕೊಟ್ಟವರಿಗೆ ದೇವರು ಎಂದಿಗೂ ಕನ್ನಹಾಕುವ ಬುದ್ಧಿ ಕೊಡುವುದಿಲ್ಲ. ನಾವು ಏನನ್ನು ಕೊಡುತ್ತೇವೋ ಅದನ್ನು ಪಡೆದುಕೊಳ್ಳುತ್ತೇವೆ. ಕೆಲಸದಲ್ಲಿ ದಾಕ್ಷಿಣ್ಯ ಬೇಡ. ಫಲಹೊಂದುತ್ತೀರ. ನವಗ್ರಹ ಪೂಜಿಸಿ, ಲಕ್ಷ್ಮೀಸಹಿತ ಶ್ರೀನಾರಾಯಣನನ್ನು ಆರಾಧಿಸಿ. ತಿಲಾ ಸೇರಿಸಿ ಗುಡಾನ್ನವನ್ನು ನೈವೇದ್ಯ ಮಾಡಿ.
ಕುಂಭ : ಕುಂಭ ಎಂದರೆ ಕಳಶ, ಮಡಕೆ ಎಂದು ಅರ್ಥ. ಕಳೆದಲ್ಲಿ ವಜ್ರವೂ ಸಿಕ್ಕಬಹುದು. ಇಲ್ಲದಿದ್ದರೆ ಚೇಳು ಕುಟುಕಬಹುದು. ಪಾಪಪುಣ್ಯಗಳನ್ನು ಯಾವ ರೀತಿ ಮಾಡಿರುತ್ತೀರೋ ಅದರಂತೆ ಊಟಮಾಡುತ್ತೀರಾ. ಇಡಗುಂಜಿ ಗಣಪನನ್ನು ಪೂಜಿಸಿ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ. ಒಳ್ಳೆಯ ಕಾಲ ಬರುತ್ತದೆ.
ಮೀನ : ಗುರುವಿನ ಕರುಣೆ ನಿಮ್ಮ ಮೇಲಿದ್ದು ಎಲ್ಲವನ್ನೂ ಕೊಡುತ್ತಿದ್ದಾನೆ. ಕೊಟ್ಟಾಗ ಇನ್ನೊಬ್ಬರಿಗೂ ಕೊಟ್ಟು ಸುಖ ಹೊಂದಬೇಕು ಎಂಬುದಕ್ಕೆ ಅರ್ಥವಿಲ್ಲ. ಸಾಕು ಎಂದಾಗ ದೇವರು ಇನ್ನಷ್ಟು ಕೊಡುತ್ತಾನೆ. ಪಾವನಲಕ್ಷ್ಮೀ, ಸರಸ್ವತಿಯನ್ನು ಆರಾಧಿಸಿ. ನಿಮಗೆ ಯಾವುದೂ ಕಡಿಮೆಯಾಗಿಲ್ಲ. ನಿಮ್ಮ ಲೆಕ್ಕಾಚಾರದಂತೆ ಎಲ್ಲವೂ ನಡೆದು ಭಗವಂತನು ನಿಮ್ಮನ್ನು ಸಂತೋಷದ ತುಟ್ಟತುದಿಯಲ್ಲಿ ಇಟ್ಟಿರುತ್ತಾನೆ. ಮೀನರಾಶಿ ಅಧಿಪತಿ ಗುರು ದತ್ತಾತ್ರೇಯನನ್ನು ಪೌರ್ಣಮಿಯಂದು ಆರಾಧಿಸಿ.