

ಮೇಷ ಪಂಚದಿನಗಳು ಉಳಿದಿರುವ ಪಕ್ಷಮಾಸದಲ್ಲಿ ಸೂರ್ಯನ ತೇಜಸ್ಸು ಪಿತೃಗಳಿಗೆ ಮೋಕ್ಷ ಕೊಡಲೆಂದೇ ಗುರುವಾರ ಬಂದು ಸೇರಲಿದೆ. ಪಿತೃಗಳ ಋಣ ತೀರಿಸಲು ಮರೆಯಬೇಡಿ. ಜಗತ್ತಿಗೆ ತಂದೆಯೇ ಮೊದಲ ಗುರು. ಪಿತೃಗಳನ್ನು ಸಂತೃಪ್ತಿಪಡಿಸಿ ಸೂರ್ಯನನ್ನು ಪ್ರಾರ್ಥಿಸಿ. ಈ ರಾಶಿಯಿಂದ ಹನ್ನೆರಡು ರಾಶಿಯವರೆಗೂ ಪಿತೃಗಳ ಋಣ ಇದಕ್ಕೆ ಇರುತ್ತದೆ. ಅಗೋಚರವಾದ ಶುಭಫಲಗಳನ್ನು ನೀಡಲು, ರಕ್ಷಿಸಲು ಪಿತೃಗಳು ಬೆನ್ನ ಹಿಂದೆ ಇದ್ದಾರೆ. ಧ್ಯಾನಿಸಿ, ಪೂಜಿಸಿ, ಆರಾಧಿಸಿ.
ವೃಷಭ ವೃಷಭ ರಾಶಿಗೆ ದ್ವಿತೀಯ ರಾಹು ಸಂಚಾರ ಕೈಗೊಂಡು ಬರುವವನಿದ್ದಾನೆ. ಗುರುವಿನ ಜೊತೆಯಲ್ಲಿರುವ ಕೇತು ವೃಶ್ಚಿಕಕ್ಕೆ ಸೇರುತ್ತಾನೆ. ಅಲ್ಪಸ್ವಲ್ಪ ವಿಚಾರಗಳಲ್ಲಿ ಬೆಳಕು ಕಾಣಿಸುತ್ತದೆ, ದೇಹಾರೋಗ್ಯ ಸ್ಥಿರವಾಗುವತ್ತ ಸಾಗಲಿದೆ. ಸೆ. 20 ರವರೆಗೆ ಎಲ್ಲಿಯೂ ಹೋಗದಿರಿ. ಎಚ್ಚರವಹಿಸಿ. ದುರ್ಗಾ ಅಷ್ಟೋತ್ತರ ಜೊತೆಗೆ ಶುಕ್ರ ಅಷ್ಟೋತ್ತರ ಪಠಿಸಿ.
ಮಿಥುನ ರಾಹು, ಸಪ್ತಮ ಗುರು - ಕೇತುವಿನಿಂದ ಬಾಧಿತರಾದ ನೀವು ಕಡೆಗೂ ಈ ಸಂಕೊಲೆ ಬಿಡಿಸಿಕೊಂಡು ಸಪ್ತಮ ಗುರುವಿನ ಅನುಗ್ರಹ ಪಡೆಯಲು ಯಶಸ್ವಿಯಾಗುವಿರಿ. ಕಾರ್ಯಗಳು ನಿರ್ದಿಷ್ಟ ಹಂತ ತಲುಪಲಿವೆ. ಕರ್ಕಾಟಕ ಶುಕ್ರ, ಕನ್ಯಾರಾಶಿಯಲ್ಲಿ ಸೂರ್ಯ ಒಳ್ಳೆಯದನ್ನು ಮಾಡುವರು. ವಿಷ್ಣುವನ್ನು, ಹಯಗ್ರೀವನನ್ನು ಪೂಜಿಸಿ, ಆರಾಧಿಸಿ.
ಕಟಕ ರಾಶಿಯಲ್ಲಿ ಉಚ್ಚ ಗುರುವಿನ ಮನೆಯಲ್ಲಿ ಶುಕ್ರನು ಕುಳಿತಿದ್ದಾನೆ. ಮನೆಗೆ ಹೊಸ ವಸ್ತುಗಳು ಬಂದು ಸೇರಲಿವೆ. ನಿರ್ಭೀತರಾಗಿರಿ. ನಿಮ್ಮನ್ನು ಶುಕ್ರನು ಕಾಪಾಡಿ ಗುರುವಿನ ಆರನೇ ಮನೆಯ ಸಂಕಟ ಬರದಂತೆ ನೋಡಿಕೊಳ್ಳುತ್ತಾನೆ. ಆಸೆಗೆ ಹಿಡಿತವಿರಲಿ. ಬೇಕಾದ್ದೆಲ್ಲ ಸಿಗುವುದಿಲ್ಲ. ಸಿಕ್ಕಿರುವುದೇ ನಿಮ್ಮ ಭಾಗ್ಯ. ಅದನ್ನು ವೃದ್ಧಿಸಿಕೊಳ್ಳಿ.
ಸಿಂಹ ಸೂರ್ಯನು ಸೆ. 16ರಂದು ಕನ್ಯಾ ರಾಶಿಯನ್ನು ಸೇರಿ ಆತಂಕ ಕಡಿಮೆ ಮಾಡಿ ನಿಮಗೆ ಬರಬೇಕಾದ ಯೋಗಗಳನ್ನು ಕೊಟ್ಟೇ ಕೊಡುತ್ತಾನೆ. ಆದರೆ ನೆನಪಿರಲಿ, ಸಿಂಹ ರಾಶಿಗೆ ಸೂರ್ಯನು ಆಧಿಪತಿ. ಅವನನ್ನು ಮರೆತಲ್ಲಿ ನಿಮ್ಮ ಬಾಳು ಪರಿಪೂರ್ಣವಾಗುವುದಿಲ್ಲ. ಪಿತೃಕಾರ್ಯಗಳನ್ನು ಮಾಡಿ ಪುಣ್ಯವನ್ನು ವೃದ್ಧಿಸಿ, ಶುಭಫಲಗಳನ್ನು ಅನುಭವಿಸಿ.
ಕನ್ಯಾ ಬಂಧನ ಕ್ಷೇತ್ರದಲ್ಲಿ ಸೂರ್ಯನು ಬಂದು ಬುಧಾದಿತ್ಯ ಯೋಗ ಉಂಟುಮಾಡಿದರೂ ಆಯುಧಗಳನ್ನು ಹಿಡಿದು ಆಟವಾಡಬೇಡಿ. ಬೇರೆಯವರ ಜೀವನದಲ್ಲಿ ಆಟವಾಡಿ ಸಂಕಟ ಕೊಡುವುದನ್ನು ಈಶ್ವರನು ಒಪು್ಪವುದಿಲ್ಲ. ಎಲ್ಲರನ್ನೂ ಗೌರವಿಸಿ. ತಿಲತರ್ಪಣ, ಬ್ರಾಹ್ಮಣ ಭೋಜನ ಮಾಡಿಸಿ ಶಾಪಗಳಿಗೆ ಪರಿಹಾರ ಮಾಡಿಕೊಳ್ಳಿ.
ತುಲಾ ಹನ್ನೆರಡರ ಸೂರ್ಯ ಉದ್ವೇಗ, ಆತುರವನ್ನು ಕೊಡುತ್ತಾನೆ. ಅದಕ್ಕಾಗಿ ಆದಿತ್ಯ ಹೃದಯ ಪಾರಾಯಣವನ್ನು ಮಾಡಿ. ನಿಮ್ಮ ಸಂಕಟಗಳನ್ನು ದೇವರೇ ನೀಗಿಸುತ್ತಾನೆ. ನೀವು ವಿಶಾಲ ಮನಸ್ಸುಳ್ಳವರು. ಕೋಪ ಬಿಟ್ಟು ವ್ಯವಹರಿಸಿದರೆ ಸಂತೋಷ ಸಿಗುತ್ತದೆ. ಸೂರ್ಯನಾರಾಯಣ ಅಷ್ಟೋತ್ತರ, ಲಲಿತಾ ತ್ರಿಷ್ಪತಿಯನ್ನು ಪಾರಾಯಣ ಮಾಡಿ.
ವೃಶ್ಚಿಕ ಏಕಾದಶಕ್ಕೆ ಬುಧಾದಿತ್ಯರು ಬರುವವರಿದ್ದಾರೆ. ಗುರು ದತ್ತಾತ್ರೇಯನ ಅಂಶದಲ್ಲಿ ಯಾರೋ ನಿಮ್ಮ ಜೀವನದಲ್ಲಿ ಬರಬಹುದು, ಮೃಷ್ಟಾನ್ನ ಭೋಜನ ಮಾಡಿಸಿ ಸತ್ಕರಿಸಿ. ಹಿರಿಯರ ಸ್ಮರಣೆ - ಪಿತೃಗಳಿಗೆ ತಿಲ ತರ್ಪಣ, ಪಂಚಭಕ್ಷ ಪರಮಾನ್ನ ನೀಡಿ. ಕುಬೇರನ ಭಂಡಾರದಲ್ಲಿ ಒಂದು ಭಾಗ ಸಿಕ್ಕರೂ ಸಾಕಲ್ಲವೆ? ಸುಖವಾಗಿರಿ.
ಧನಸ್ಸು ಸೆ.20ಕ್ಕೆ ರಾಹು-ಕೇತುವಿನ ಸಂಚಾರದಿಂದ ಕೇತುವಿನಿಂದ ಬಿಡಿಸಿಕೊಂಡ ನೀವು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಗುರುವು ರಾಶಿಯಲ್ಲೇ ಇದ್ದು ರಾಜಮಾರ್ಗವನ್ನು ತೋರಿಸುತ್ತಾನೆ. ದೇವರನ್ನು, ಜನಕ - ಜನನಿಯರನ್ನು ಮರೆಯಬೇಡಿ. ಶ್ರೀದತ್ತಾತ್ರೇಯ ಸಹಸ್ರನಾಮ ಪಾರಾಯಣ ಮಾಡಿ.
ಮಕರ ಮಕರ ರಾಶಿಯ ಒಡೆಯ ಶನಿ ನಿಮ್ಮನ್ನು ಬಾಧಿಸಿದರೂ ಪರವಾಗಿಲ್ಲ. ತಿಳಿವಳಿಕೆಯನ್ನು ಕೊಟ್ಟು, ಜೀವನ ಶೈಲಿಯನ್ನು ಬದಲಾಯಿಸಿ ಮುಂದಿನ ದಿನಗಳಲ್ಲಿ ನಿಮ್ಮನ್ನು ಜನರು ಮೆಚ್ಚುವಂತೆ ಮಾಡುತ್ತಾನೆ. ಶಿವಸಹಸ್ರನಾಮ ಪಾರಾಯಣಮಾಡಿ. ಶನಿಯ ತಾಪವನ್ನು ಕಳೆದುಕೊಳ್ಳಿ. ವಿಷ್ಣು ಪುರಾಣವನ್ನು ತಪ್ಪದೇ ಪಾರಾಯಣ ಮಾಡಿ.
ಕುಂಭ ರಾಶ್ಯಾಧಿಪತಿ ದ್ವಾದಶದಲ್ಲಿದ್ದು ಮಾಡಿದ ಪಾಪಗಳನ್ನು, ತಪ್ಪುಗಳನ್ನು ನಿಮಗೆ ತೋರಿಸುವ ಸಮಯ. ನಿಮ್ಮನ್ನು ತಿದ್ದಿಕೊಳ್ಳಿ. ಸಂಯಮ, ಭಗವದ್ಭಕ್ತಿ ಅಗತ್ಯ. ಜನಕ - ಜನನಿಯರ ಸೇವೆ ಮಾಡಿದಲ್ಲಿ ಉತ್ತಮ ದಿನವನ್ನು ನೋಡಬಹುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. ಎಷ್ಟು ಸಾಧ್ಯವೋ ಅಷ್ಟು ಜೇನುತುಪ್ಪ ದಾನ ಕೊಡಿ.
ಮೀನ ನಿಮಗೆ ಭಾಗ್ಯವು ಕೈಹಿಡಿಯಲಿದೆ. ದೇಶಕ್ಕೆ ಬಂದಿರುವ ಆಪತ್ತು ದತ್ತಾತ್ರೇಯನಿಂದ ದೂರವಾಗಲಿದೆ. ದೇಶದ ಆರ್ಥಿಕ ಸಂಕಟ, ವ್ಯಾಧಿ, ಗಲಭೆಯಂಥ ಅನಾಹುತಗಳನ್ನು ತಪ್ಪಿಸಲು ನಿಮ್ಮ ಪ್ರಾರ್ಥನೆಯಿರಲಿ. ಏಕೆಂದರೆ ನಿಮಗೆ ಗುರುವಿನ ಅನುಗ್ರಹವಿದೆ. ಹಾಗಾಗಿ ನಿಮ್ಮ ಪ್ರಾರ್ಥನೆ ದೇಶಕ್ಕೆ ಒಳ್ಳೆಯದು ಮಾಡುತ್ತದೆ. ಕೂಡಿ ಬಾಳುವವರಾಗಿ.