

ಮೇಷ ರಾಶಿಗೆ ಶನಿಯು ಏಕಾದಶದಲ್ಲಿ ಇರುವುದು ಸರ್ವ ವಿಧದಲ್ಲೂ ಶ್ರೇಯಸ್ಸು. ಆಪತ್ತು ನಿವಾರಣೆ ಮಾಡಿ 12ರ ಗುರುವಿನಿಂದ ಆಗುವ ನೋವು, ಅಶಾಂತಿ, ಧನವ್ಯಯ, ಮನೋವ್ಯಥೆಯಿಂದ ಕಾಪಾಡಲು ಅನುಗ್ರಹ ಬೇಕು. ಮೌನ ತಾಳಿದರೆ ಮಾತ್ರವೇ ಶುಭಫಲ ಪ್ರಾಪ್ತಿ. ಏಕಾದಶ ಶನಿಗೆ ಶಿವಾರ್ಚನೆ ಮಾಡಿ ಹನ್ನೆರಡರ ಗುರುವಿಗೆ ಗುರುಚರಿತ್ರೆಯ 11 ನೇ ಅಧ್ಯಾಯ ಪಾರಾಯಣ ಮಾಡಿ.
ಅತಿಯಾದ ಮಾತು; ಅತಿಯಾದ ಆಹಾರ; ಮನಸ್ಸಿಗೆ ಆಲಸ್ಯ ವಿಷಯದಲ್ಲಿ ಕಹಿಯನ್ನು ಕೊಡುತ್ತದೆ. ಗುರು ಏಕಾದಶದಲ್ಲಿ ಇದ್ದಾನೆ. ಅವನ ಕಟಾಕ್ಷದಿಂದ ಎಲ್ಲ ಸಂಕಟದಿಂದ ಪಾರಾಗಿ ಬರುತ್ತಿದ್ದೀರಿ. ಕೆಲಸ ಮಾಡುವವರು ಆಡುವುದಿಲ್ಲ. ಆಡುವವರು ಮಾಡುವುದೂ ಇಲ್ಲ, ಕೊಡುವುದೂ ಇಲ್ಲ. ಮನಸ್ಸಿನ ನೆಮ್ಮದಿ, ಧೈರ್ಯಕ್ಕೆ ಕಾರ್ತವೀರ್ಯಾರ್ಜುನ ಜಪ, ದುರ್ಗಾರ್ಚನೆ ಮಾಡಿ.
ಗುರು ಸ್ವಕ್ಷೇತ್ರ ಗತನಾಗಿ ದಶಮದಲ್ಲಿ ಇದ್ದಾನೆ, ಶುಕ್ರನು ಅಲ್ಲಿಗೆ ಬಂದು ಸೇರುತ್ತಾನೆ. ಗುರುವಿನ ಮಿತ್ರ ರಾಶಿ ಕಟಕ. ಮೀನ ರಾಶಿಯಲ್ಲಿರುವ ಗುರು ಕಾರ್ಯಗಳನ್ನು ನಿರ್ವಿಘ್ನವಾಗಿ ಮಾಡಿಸುತ್ತಾನೆ. ಬರುವ ಆಪತ್ತಿನಿಂದ ದಾಟಿ ಸುಖ ವಾಗಿರುತ್ತೀರ. ವಾಮದೇವರ ಸಂದರ್ಶನದ ಗುರುಚರಿತ್ರೆಯ ಅಧ್ಯಾಯವನ್ನು ಪಾರಾಯಣ ಮಾಡಿ. ಶುಭವಾಗುವುದು.
ಮನಸ್ಸು ಶುದ್ಧವಾಗಿದ್ದರೆ ಮನೋವೇಗವು ನೀವು ಹಾಕಿಕೊಂಡ ಗುರಿ ಮುಟ್ಟಿಸುತ್ತದೆ. ಮನಸ್ಸಿನ ತಳಮಳ ನಿಲ್ಲಿಸುವುದಕ್ಕೆ ವಿನಾಯಕನನ್ನು ಪೂಜಿಸಿ. 9ರ ಗುರುವೂ ಶುಕ್ರ ಸಹಿತನಾಗಿ ಈ ವಾರದಲ್ಲಿ ಒಳ್ಳೆಯ ಫಲ ನೀಡುತ್ತಾನೆ. ಶಿವನ ದಾರಿದ್ರ್ಯದುಃಖಹರಣ ಸ್ತೋತ್ರ ಪಾರಾಯಣ ಮಾಡಿ. ಶಿವನಿಗೆ ಖರ್ಜೂರದ ಉಂಡೆ ನೈವೇದ್ಯ ಮಾಡಿದರೆ ಆರೋಗ್ಯ, ಲಾಭ, ಸುಖ ಸಿಗುತ್ತದೆ.
ಸಪ್ತಮ ಶನಿ ಅಷ್ಟಮದಲ್ಲಿ ಗುರು ಇದ್ದು, ಶುಕ್ರ ಮೀನ ರಾಶಿ ಸೇರಿ ತ್ವರಿತವಾಗಿ ಆಗಬೇಕಾದ ಕೆಲಸಗಳಲ್ಲಿ ಶ್ರದ್ಧೆ ಇದ್ದರೆ ಗುರು ಗುರಿ ಮುಟ್ಟಿಸುತ್ತಾನೆ. ರಾಮನ ಅವತಾರಕ್ಕೆ ವಿಶೇಷ ಸ್ಥಾನವಿದೆ. ಆಧ್ಯಾತ್ಮ ರಾಮಾಯಣದ ಮೂರನೇ ಸರ್ಗ ಓದಿ ಇಷ್ಟಾರ್ಥ ಸಿದ್ಧಿಸಿಕೊಳ್ಳಬಹುದು. ಸಿಂಹ ರಾಶಿಯವರು ದುರ್ಗೆ, ಗಣಪತಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿದರೆ ಯಾವ ಕೆಡುಕೂ ಬಾಧಿಸುವುದಿಲ್ಲ.
ರಾಶ್ಯಾಧಿಪತಿ ಶನಿ ಆರನೇ ಮನೆಗೆ ಬಂದಿರುವುದು ನಿಮ್ಮ ಪೂರ್ವಪುಣ್ಯದ ಲಾಭ ಶುಭವನ್ನು ಕೊಡುವುದಕ್ಕೆ. ಶನಿಯು ಬಲಿಷ್ಟನಾಗಿದ್ದಾಗ ಶ್ರಮ ವಹಿಸಿ ಕೆಲಸ ಮಾಡಿ. ಕಾರ್ಯಸಾಧನೆಗೆ ಸಪ್ತಮದಲ್ಲಿ ಗುರು ಇದ್ದಾನೆ. ಗುರುವಿಗೆ ದ್ರೋಹ ಮಾಡಿದರೆ ‘ಗುರು ನಿಂದನಂ ಕುಲ ನಾಶನಂ’ ಎಂದು ಅರಿತು ಎಚ್ಚರಿಕೆಯಿಂದ ಸಾಗಿ. ಭಗವದ್ಗೀತೆಯ 18ನೇ ಅಧ್ಯಾಯದ ಸಾರಾಂಶ ಓದಿ.
ರಾಶಿಯಲ್ಲಿ ಕೇತು ಕುಳಿತರೂ ಪರವಾಗಿಲ್ಲ. ಸಪ್ತಮ ರಾಹು ಮೇಷದಲ್ಲಿ ಇದ್ದಾನೆ. ಅತ್ಯಂತ ಸೋಜಿಗದಲ್ಲಿ ಬಾಳನ್ನು ಸರಿ ಮಾಡಿ ಧನ, ಸಂಪತ್ತು ತಂದುಕೊಡುತ್ತಾನೆ. ಖರ್ಚು ವೆಚ್ಚ ಕಡಿಮೆ ಮಾಡಿ. ನಿಮ್ಮ ಚಿಂತೆಗಳಿಗೆ ಲಗಾಮು ಹಾಕಿ ಕಾರ್ಯಸಾಧನೆಯತ್ತ ದೃಷ್ಟಿ ಹರಿಸಿದರೆ ನಿಮ್ಮನ್ನು ಮೀರಿಸುವವರು ಯಾರೂ ಇರುವುದಿಲ್ಲ. ಶುಕ್ರ ಅಷ್ಟೋತ್ತರ ಪಾರಾಯಣ ಮಾಡಿ. ಸವದತ್ತಿಯ ರೇಣುಕಾ ಯಲ್ಲಮ್ಮನನ್ನು ಪೂಜಿಸಿ ಪ್ರಾರ್ಥಿಸಿ.
ಹಿರಿಯರು ಚೇಳನ್ನು ಲಕ್ಷ್ಮಿಸ್ವರೂಪ ಎಂದು ಕರೆಯುತ್ತಾರೆ. ದುಡ್ಡನ್ನು ಯಾರು ಸರಿಯಾಗಿ ವಿನಿಯೋಗ ಮಾಡುತ್ತಾರೋ ಅಂತಹವರಿಗೆ ದೇವರು ತೊಂದರೆ ಕೊಡುವುದಿಲ್ಲ. ದೈವವನ್ನು ಕೇಳಿ ಅಥವಾ ಕೇಳದೆ ಇರಿ, ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಂಡಾರ ತುಂಬಿ ಹರಿದು ಬರುತ್ತದೆ. ಕೆಲಸ ಸಲೀಸಾಗಿ ನಡೆದು ಸಂತಸ ತರುತ್ತದೆ. ದೈವಪೂಜೆ ಬಿಡದಿರಿ.
ಗುರು ಶುಕ್ರ ಸಂಯೋಗದಲ್ಲಿ ಬಂದು ಸರಿಯಾಗಿ ಗ್ರಹಗಳು ಫಲ ಕೊಡುವ ಸಮಯ ಬಂದಿದೆ. ನೀವು ಸಾಗುವ ದಾರಿ ಚೆನ್ನಾಗಿ ಇರಬೇಕು. ಗುರಿ ಮುಟ್ಟಲು ಗರುಡನ ಅನುಗ್ರಹ ಇರಬೇಕು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ನಿಮಗೆ ಸ್ಥಾನಮಾನಗಳು ತನ್ನಿಂದ ತಾನೇ ಬಂದು ಸೇರುತ್ತದೆ. ವಿಶೇಷ ಧನಲಾಭ ತಂದುಕೊಡುತ್ತದೆ.
ಶನಿಯ ತಾಪ ಕಡಿಮೆ ಆಗಿದೆ. ತೃತೀಯ ಗುರು ಅಲ್ಪಸ್ವಲ್ಪ ಕೊಡುತ್ತಾನೆ. ತೃಪ್ತಿಯೊಂದಿದ್ದರೆ ಅದೇ ಅನಂತವಾಗುತ್ತದೆ. ಹಗ್ಗವೇ ಹಾವೆಂದುಕೊಳ್ಳುವ ನೀವು ಹಗ್ಗ-ಹಾವಿನ ನಡುವಿನ ವ್ಯತ್ಯಾಸ ತಿಳಿದು ನಡೆಯಿರಿ. ಕಾರ್ಯಸಾಧನೆಗೆ ಬೆಲೆ ಕೊಟ್ಟು ಶನಿಯ ಪ್ರಸನ್ನತೆಗೆ ಎಲ್ಲ ಶನಿವಾರ ವಿಶೇಷವಾದ ಪೂಜೆ ಮಾಡಿ ಎಳ್ಳು ದೀಪ ಹಚ್ಚಿ, ಎಳ್ಳುಂಡೆ ನೈವೇದ್ಯ ಮಾಡಿ.
ಜನ್ಮಶನಿ ವ್ಯಸನ, ಸಮಸ್ಯೆಗಳನ್ನು ಕೊಟ್ಟರೂ ದ್ವಿತೀಯ ಗುರು ಒಬ್ಬನೇ ಸಾಕು ನಿಮ್ಮನ್ನು ಹರಸಿ ಎಲ್ಲವನ್ನೂ ನೀಡುತ್ತಾನೆ. ನಿಮ್ಮ ಗುರುಗಳಿಗೆ ಏನು ಕೊಟ್ಟಿದ್ದೀರ ಎಂದು ಒಮ್ಮೆ ಆಲೋಚಿಸಿ. ಅಕ್ಷರದಾತ ಗುರು. ಮಾರ್ಗ ಸಂರಕ್ಷಕ ಗುರು. ಜನ್ಮ ಕೊಟ್ಟವರನ್ನು ಪಾರ್ವತಿ ಪರಮೇಶ್ವರರಂತೆ ಪೂಜಿಸಿದರೆ ಸಂಕಟ ಕಡಿಮೆ ಆಗಿ ಬಾಳನ್ನು ಸುಖವಾಗಿ ಸಾಗಿಸಬಹುದು.
ಸ್ವಕ್ಷೇತ್ರದ ಗುರು, ಹನ್ನೆರಡರ ಶನಿ ನಿಮಗೆ ಯಾವ ಅಶುಭವನ್ನೂ ಉಂಟು ಮಾಡುವುದಿಲ್ಲ. ಶಿವನು ಒಲಿಯದಿದ್ದರೂ ಪರವಾಗಿಲ್ಲ, ಗುರು ಎಂಬ ಶಬ್ದವೊಂದರಿಂದಲೇ ಎಲ್ಲ ಪಾಪಗಳು ನಾಶವಾಗುತ್ತವೆ. ಗುರುವನ್ನು ನಂಬಿದರೆ ಎಲ್ಲವೂ ಬಂದು ಕೈ ಸೇರುತ್ತದೆ. ಯಾರಿಗೂ ನೋವುಂಟು ಮಾಡಬೇಡಿ. ಸೋಮವಾರದದಂದು ಶಿವಪೂಜೆ ಮಾಡಿ, ವ್ರತ ಕಥೆ ಓದಿದರೆ ನೀವೇ ಧನ್ಯರು.