ಈ ರಾಶಿಯವರಿಗೆ ಕಾರ್ಯದಲ್ಲಿ ಜಯ ಸಿಗುವ ಸಮಯ: ವಾರಭವಿಷ್ಯ

Vaara-Bhavishya
Published on
ಮೇಷ

ಜುಲೈ 12ರಿಂದ ಮೇಷ ರಾಶಿಯವರಿಗೆ ಏಕಾದಶ ಶನಿಯು ದಶಮಕ್ಕೆ ಬರುವುದರಿಂದ ಶನಿಯಿಂದ ಉಂಟಾದ ಕೆಲವೊಂದು ಶುಭಕಾಮನೆಗಳು ತಾತ್ಕಾಲಿಕವಾಗಿ ನಿಲ್ಲುತ್ತವೆ. ಹಳದಿ ವಸ್ತ್ರದಲ್ಲಿ ಕಡಲೆ ಬೇಳೆಯನ್ನು ದಾನ ಮಾಡುವುದರಿಂದ ಅಶುಭ ಫಲವೂ ಶುಭಕ್ಕೆ ಪರಿವರ್ತನೆಯಾಗುತ್ತದೆ. ಹೆಜ್ಜೆಯನ್ನು ಎಚ್ಚರಿಕೆಯಿಂದ ಹಾಕಿ ನಿಮ್ಮ ಸಾಧನೆಯನ್ನು ಜಾಣ್ಮೆಯಿಂದ ನಿರ್ವಹಿಸಿ.

ವೃಷಭ

ದ್ವಾದಶದಲ್ಲಿ ಕುಜ-ರಾಹು ಇರುವುದರಿಂದ ಉನ್ಮತ್ತದಿಂದ ವರ್ತಿಸಿ ಉತ್ತಮವಾದ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಗುರು ವಾಕ್ಯ ಮೀರದೆ ಧರ್ಮವನ್ನು, ದಾನವನ್ನು ಮಾಡಿದ ಮಹಾಪುರುಷ ಶ್ರೀರಾಮಚಂದ್ರನು. ಅದರಂತೆ ನೀವು ನಡೆದರೆ ಭಗವಂತನು ವಿಶೇಷ ಬೆಳಕನ್ನು ಕರುಣಿಸುತ್ತಾನೆ. 11ನೇ ಗುರುವು ರಕ್ಷಿಸುತ್ತಾನೆ. ಕುಜ-ರಾಹು ಗ್ರಹಗಳಿಗೆ ವಿಶೇಷ ಪೂಜೆ ಪ್ರಾರ್ಥನೆ ಇರಲಿ.

ಮಿಥುನ

ಮಿಥುನ ರಾಶಿಯಲ್ಲಿ ಬುಧ, ಶುಕ್ರರು ಕೂತು ನಿಮ್ಮ ಹಾದಿಯನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಅದರ ಪೂಜೆಯ ಫಲ ಪಡೆಯಬೇಕಾದರೆ ವಿಷ್ಣುವನ್ನು ಪೂಜಿಸಿ. ವಿಶೇಷವಾಗಿ ಪಂಢರಪುರದ ಪಾಂಡುರಂಗನನ್ನು ಪೂಜಿಸಿ ನಿಮ್ಮ ದಾರಿ ಸುಗಮ ಗೊಳಿಸಿಕೊಳ್ಳಿ. ದಶಮ ಗುರು ಸ್ವಕ್ಷೇತ್ರದಲ್ಲಿದ್ದು ಚಿಂತೆಯ ಅಗತ್ಯವಿಲ್ಲ.

ಕಟಕ

ನೀರು ದಾಹವನ್ನು ಇಂಗಿಸುತ್ತದೆ. ಅಭಿಷೇಕ ಪ್ರಿಯ ಶಿವನಿಗೆ ಜಲಾಭಿಷೇಕವೇ ಮುಖ್ಯವಾದದ್ದು. ನೀರಿಲ್ಲದೆ ಮನುಷ್ಯನು ಬದುಕಲಾರ. ಶುದ್ಧವಾದ ನೀರಿನಂತೆ ನಿಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಂಡು ದೇವಮಂದಿರವಾದ ದೇಹಕ್ಕೆ ಅನಗತ್ಯ ಆಯಾಸ ದೂರ ಮಾಡಿದರೆ ನಿಮಗೆ ಎಲ್ಲವೂ ಬಂದು ಕೈ ಸೇರುತ್ತದೆ. ಈಶ್ವರಾರ್ಚನೆ ಬಹುಮುಖ್ಯ. ಆಷಾಢ ಶ್ರಾವಣದಲ್ಲಿ ವಿಶೇಷವಾಗಿ ಉಮಾ ಮಹೇಶ್ವರನಿಗೆ ಫಲ ಪಂಚಾಮೃತ ಅಭಿಷೇಕ ಮಾಡಿರಿ. ಪುಣ್ಯ ವೃದ್ಧಿಸಿಕೊಳ್ಳಿ.

ಸಿಂಹ

ಗುರುವು ಅಷ್ಟಮದಲ್ಲಿ ಸ್ವಕ್ಷೇತ್ರದಲ್ಲಿ ಇದ್ದರೂ ಪೂಜೆಯ ಮೊದಲನೇ ಪ್ರಾರ್ಥನೆಯೇ ಗುರು ಗಣೇಶಾಭ್ಯೋ ನಮಃ ಎಂದು ಆರಂಭಿಸುವೆವು. ನಿತ್ಯವೂ ಗುರುವನ್ನು ಪೂಜಿಸಿ ದತ್ತಾತ್ರೇಯ ಧ್ವನಿಯಾದ ಗುರುಚರಿತ್ರೆಯನ್ನು ನಿತ್ಯವೂ ಪಾರಾಯಣ ಮಾಡಿರಿ. 12ನೇ ಜುಲೈನಿಂದ ಶನಿಯು ಷಷ್ಠಕ್ಕೆ ಬಂದು ನಿಮ್ಮ ಆಸೆ ಅಭಿಲಾಷೆ ಪೂರೈಸಿ, ಬಾಳನ್ನು ಬಂಗಾರವಾಗಿ ಮಾಡುತ್ತಾನೆ. ಸೂರ್ಯನ ಕವಚ, ಅಷ್ಟೋತ್ತರ ಪಠನೆ ನಿತ್ಯವೂ ಇರಲಿ.

ಕನ್ಯಾ

ಷಷ್ಠ ಶನಿಯು ಹಿಂದಕ್ಕೆ ಸರಿದು ಮತ್ತೆ ಸ್ವಲ್ಪ ಕಾಲ ಪಂಚಮ ಶನಿಯ 5 ತಿಂಗಳ ಪ್ರವಾಸವು ನಿಮ್ಮನ್ನು ಕೆಲವೊಂದು ವಿಚಾರದಲ್ಲಿ ಸಿಕ್ಕಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡುವ ಕಾಲ. ಗುರು ಮಾತನ್ನು ಮೀರದೆ, ಅಸತ್ಯ ನುಡಿಯದೆ ನಿಮ್ಮನ್ನು ಸರಿಪಡಿಸಿಕೊಂಡರೆ ಜೀವನವು ಸುಖದ ಹಾದಿಯಲ್ಲಿ ಸಾಗುತ್ತದೆ. ಗುರುವಾಯೂರಪ್ಪನನ್ನು ಪೂಜಿಸಿ.

ತುಲಾ

ನೀರಿನಲ್ಲಿ ಕಟ್ಟಿಗೆಯು ತೇಲುತ್ತಾ ಸಾಗುತ್ತದೆ. ನಿಮಗೆ ಗುರುವು ಷಷ್ಠದಲ್ಲಿ ಇರುವುದರಿಂದ ಮನುಷ್ಯನಿಗೆ ಯಾರೂ ಕೆಟ್ಟವರಿಲ್ಲ. ಯಾರೂ ಕೆಟ್ಟದ್ದನ್ನು ಮಾಡು ವುದಿಲ್ಲ. ನಮ್ಮ ಕರ್ವನುಸಾರದ, ಶುಭಾಶುಭ ಫಲ. ದುರ್ಗೆಯನ್ನು ಪ್ರಾರ್ಥಿಸಿ. ಸದ್ವಿದ್ಯೆ, ಕೀರ್ತಿ, ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ.

ವೃಶ್ಚಿಕ

ಗ್ರಹಗಳಲ್ಲಿ ಅತ್ಯಂತ ತೀಕ್ಷ್ಣ ಗ್ರಹವಾದ ಶನಿಯು ಕೆಟ್ಟದ್ದನ್ನು ಮಾಡುವನೆಂಬ ಭೀತಿ ಉಂಟಾಗುವುದು ಸಹಜ. ಆದರೆ, ಶನಿಯು ಮಹಾದೇವನ ಸೃಷ್ಟಿಯಾಗಿ ಅವನ ಮಾತೆಯಾದ ಛಾಯಾದೇವಿಯ ಪ್ರೀತಿಯ ಪುತ್ರನು. ಮಾತೃಭಕ್ತಿ ಒಂದರಿಂದಲೇ ಅವನು ಗ್ರಹಗಳ ಪುಂಜದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ. ಈಗ ಬರುವ ಮೂರನೇ ಮನೆ ಶನಿಯು, ಪಂಚಮ ಗುರುವು ಕೇಳಿದ್ದನ್ನು ಕೊಡುತ್ತಾನೆ.

ಧನು

ರಾಶ್ಯಾಧಿಪತಿ ಗುರುವು ತೃತೀಯದಲ್ಲೂ, ಶನಿಯು ದ್ವಿತೀಯಕ್ಕೆ ಅಂತ್ಯ ಭಾಗದ ಶನಿಯ ಸಂಚಾರ ಇವೆಲ್ಲವೂ ನಿಮ್ಮನ್ನು ನೀವು ತಿದ್ದಿಕೊಂಡು, ಮಾಡಬಾರ ದ್ದನ್ನು ಮಾಡದೆ, ಎಚ್ಚರದಿಂದ ಸಾಗುವ ಕಾಲವಿದು. ಸಂಕಷ್ಟಕ್ಕೆ ಗುರುವೇ ನಿಮ್ಮನ್ನು ರಕ್ಷಿಸುವುದು. 5 ತಿಂಗಳು ಮಾತಾ ಪಿತರನ್ನು ಪೂಜಿಸಿದರೆ ಶುಭ ಫಲ.

ಮಕರ

ಸ್ವಕ್ಷೇತ್ರಕ್ಕೆ, ಜನ್ಮಕ್ಕೆ ಶನಿಯು ಬರುತ್ತಾನೆ. ಅವನು ತಂಗುವ ಕಾಲ 5 ತಿಂಗಳು ಮಾತ್ರ. ನಿಮಗೆ ಮೀನ ಗುರುವು ಬೇಕಾದ್ದನ್ನು ಕೊಡುತ್ತಾನೆ, ಹರಸುತ್ತಾನೆ. ಜನವರಿ 2003ರವರೆಗೂ ಪ್ರತಿ ಶನಿವಾರದಂದು ನೀಲಿ ವಸ್ತ್ರದಲ್ಲಿ ಕರಿಎಳ್ಳನ್ನು ಇರಿಸಿ ಅತ್ಯುತ್ತಮನಾದ, ಅನುಷ್ಠಾನ ಮಾಡುವ ಬ್ರಾಹ್ಮಣನಿಗೆ ಕೈಲಾದ ದಕ್ಷಿಣೆಯನ್ನು ಇಟ್ಟು ದಾನ ಮಾಡಿ. ನಿಮ್ಮ ಕಾರ್ಯಗಳು ಪೂರೈಸುತ್ತವೆ.

ಕುಂಭ

ದ್ವಾದಶಕ್ಕೆ ಶನಿ ಬಂದರೂ, ದ್ವಿತೀಯದಲ್ಲಿ ಗುರು ಇರುವುದರಿಂದ ಯಾವ ಹಾಹಾಕಾರವೂ ಬರದೆ ಪೂರ್ವ ಪುಣ್ಯದ ಅನುಸಾರ ಗುರು ದತ್ತಾತ್ರೇಯನು ಕಾಪಾಡುತ್ತಾನೆ. ದ್ವಾದಶದ ಶನಿಗೆ ಕರಿಬಟ್ಟೆಯಲ್ಲಿ ಕರಿಎಳ್ಳನ್ನು ಇಟ್ಟು ಬ್ರಾಹ್ಮಣರಿಗೆ ದಾನ ಮಾಡಿ ಶನಿಯ ತಾಪವು ತಗ್ಗಿ ನಿಮ್ಮ ಕಾರ್ಯಗಳನ್ನು ಮುನ್ನಡೆಸುತ್ತಾನೆ. ಶನಿಯ ಅಷ್ಟೋತ್ತರ ಪಾರಾಯಣ ನಿತ್ಯವೂ ಮಾಡಿ. ಶಿವಾಲಯಕ್ಕೆ ತುಪ್ಪ, ಬಿಲ್ವವನ್ನು ಕೊಡಿ. ನಿಮಗೆ ಬೇಕಾದ್ದನ್ನು ಕೊಡಲು ಶಿವನಿದ್ದಾನೆ.

ಮೀನ

ದ್ವಾದಶ ಶನಿಯು ಮತ್ತೆ ಏಕಾದಶಕ್ಕೆ ಬಂದು, ಲಗ್ನದಲ್ಲಿ ಗುರುವಿರುವುದರಿಂದ ನಿಮಗೆ ಮತ್ತೆ ಉತ್ತಮ ಕಾಲ. ನಿಮಗೆ ಕಾರ್ಯದಲ್ಲಿ ಜಯ ಸಿಗುವ ಸಮಯ. ಆಗದ ಕೆಲಸಗಳು ಪೂರ್ಣವಾಗಿ ಮನಃತೃಪ್ತಿಯಾಗಿ ಫಲವನ್ನು ನೀಡುತ್ತದೆ. ನಿಮ್ಮ ರಾಶ್ಯಾಧಿಪತಿ ಗುರುವು ಸಂತೋಷವನ್ನು ಕೊಡುತ್ತಾನೆ. ದಾನ, ಧರ್ಮವಿರಲಿ. ದತ್ತಾತ್ರೇಯನನ್ನು ಪೂಜಿಸಿ, ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net