ಈ ರಾಶಿಯವರಿಗೆ ಧನವು ಕೈಸೇರಿ ಆನಂದ ವೃದ್ಧಿಸುತ್ತದೆ: ವಾರ ಭವಿಷ್ಯ

E vara 1
Published on

ಮೇಷ

ದಶಮದಲ್ಲಿ ಸ್ವಕ್ಷೇತ್ರದಲ್ಲಿ ಗುರು-ಶನಿ ಯಾವ ರೀತಿಯ ಅನಾನುಕೂಲ ಗಳನ್ನೂ, ಬಾಧೆಯನ್ನೂ ಕೊಡುವುದಿಲ್ಲ. ಆದರೆ ದ್ವಾದಶದ ಅಂಗಾರಕನು ಕೆಲಸವನ್ನು ವಿಳಂಬ ಮಾಡಬಹುದು. ಕೈಬಿಡಬೇಡಿ. ಧೈರ್ಯಗೆಡಬೇಡಿ. ಕೋಪ ದೊಡ್ಡಶತ್ರು. ಶಾಂತಚಿತ್ತರಾಗಿ ವ್ಯವಹರಿಸಿದಲ್ಲಿ ಮನಸ್ಸಿಗೆ ತೃಪ್ತಿಕೊಡುವ ಕೆಲಸಗಳು ದೊರೆಯುತ್ತವೆ. ನಾಗನಿಗೆ ಭಕ್ತಿಯಿಂದ ಪೂಜಿಸಿ.

ವೃಷಭ

ರಾಹು ಶುಕ್ರನ ಮನೆಯಲ್ಲಿದ್ದು ಕೆಲವೊಂದು ಕೊರತೆ, ನ್ಯೂನತೆಯನ್ನು ಕಡಿಮೆ ಮಾಡಿರುತ್ತಾನೆ. ಮನುಷ್ಯನಿಗೆ ನೂರಾರು ಕೋಟಿ ಬೇಕು. ಆದರೆ ಪೂರ್ವಜನ್ಮದಲ್ಲಿ ಸಾವಿರಾರು ಕೋಟಿ ದಾನ ಮಾಡಿದ್ದರೆ ನೂರಾರು ಕೋಟಿನೇ ದೇವರಲ್ಲಿ ಬೇಡಿಕೆ ಇಡಿ. ಆದರೂ ದೈನಂದಿನ ವ್ಯವಹಾರ ಸಮಸ್ಯೆ ಇಲ್ಲದೆ ಆರೋಗ್ಯ ಹಾಳಾಗದ ಹಾಗೆ ದೇವರು ನಡೆಸುತ್ತಾನೆ.

ಮಿಥುನ

ವ್ಯಾಪಾರವನ್ನು, ಉದ್ಯೋಗಗಳನ್ನು ಸೃಷ್ಟಿಸುವ ಬುಧನು ಷಷ್ಠದಲ್ಲಿ, ಅಷ್ಟಮದಲ್ಲಿ ಗುರು-ಶನಿಯ ಸಮ್ಮಿಲನ. ದಾರಿಕಾಣದಾಗಿದೆ ಎಂಬಂತಿದೆ ನಿಮ್ಮ ಜೀವನ. ಭೀತಿಯ ಅವಶ್ಯಕತೆ ಇಲ್ಲ. ದುಡಿಮೆಯಲ್ಲಿ ಸಮಾಧಾನಿಸಿ ಕೆಲಸ ಮಾಡಿದಲ್ಲಿ ಹೊಟ್ಟೆತುಂಬುತ್ತದೆ. ಆದರೆ ಶನಿ ಬಿಡುವವರೆಗೂ ಗ ಕಾರ ಗಣಪತಿ ಸಹಸ್ರನಾಮ ಪಾರಾಯಣ ಮಾಡಿ.

ಕಟಕ

ರಾಶಿಯಲ್ಲಿ ಗುರು ಬಂದಾಗ ಉಚ್ಚನಾಗಿರುತ್ತಾನೆ. ಆದರೆ ಈಗ ಸಪ್ತಮ ಶನಿಯೊಂದಿಗೆ ಸೇರಿದ್ದಾನೆ. ಮನುಷ್ಯನ ಉಲ್ಲಾಸ, ನಿರೀಕ್ಷಿಸಿದ ಕೆಲಸಗಳು ಕೈಗೂಡುವಂತೆ ನೋಡಿಕೊಳ್ಳುತ್ತಾನೆ. ದೇಹಕ್ಕೆ ಶೀತವಾಗದಂತೆ ಯಾವಾಗಲೂ ನೋಡಿಕೊಳ್ಳಿ. ಸೋಮವಾರದ ದಿನ ವಿಶೇಷವಾಗಿ ಶಂಕರನನ್ನು ಪ್ರಾರ್ಥಿಸಿ. ಒಳ್ಳೆಯದಾಗುತ್ತದೆ.

ಸಿಂಹ

ಆರೋಗ್ಯದ ಮುಂದೆ ಯಾವ ಹಣವೂ ಅಧಿಕವಲ್ಲ. ಮಹಾತ್ಮರು ಹೇಳುತ್ತಾರೆ ದುಡ್ಡನ್ನು ಮತ್ತು ಕದ್ದ ಫಲವನ್ನು ನೆಲದ ಮೇಲೆ ಹಾಕಿದರೆ ಮಂಗಗಳು ಹಣ್ಣಿನ ಕಡೆಗೆ ನಡೆಯುತ್ತವೆ. ದುಡ್ಡನ್ನು ಮುಟ್ಟುವುದಿಲ್ಲ. ಆದರೆ ಅದೇ ದುಡ್ಡನ್ನು ಮನುಷ್ಯನ ಮುಂದೆ ಚೆಲ್ಲಿದರೆ ಆರೋಗ್ಯಕ್ಕಿಂತ, ದುಡ್ಡಿನ ಕಡೆ ವಾಲುತ್ತಾರೆ. ನಮ್ಮ ಆಯ್ಕೆ ಯಾವಾಗಲೂ ಸರಿಯಾಗಿರಬೇಕು. ದೇವರು ನಮ್ಮನ್ನು ಸರ್ವತ್ರ ಕಾಪಾಡುತ್ತಾನೆ. ಶನಿಗೆ ಕಲ್ಪೋಕ್ತವಾಗಿ ಶಿವಧ್ಯಾನ ಪೂಜೆ ಮಾಡಿದರೆ ಆರನೇ ಮನೆಯ ವಿಶೇಷ ಫಲ ನೀಡುತ್ತಾನೆ.

ಕನ್ಯಾ

ಪಂಚಮದಲ್ಲಿ ಗುರುವು ಬಂದಿರುವುದು ನಿಮ್ಮ ಒತ್ತಡ, ಅನಾರೋಗ್ಯ ಅತೃಪ್ತಿ, ವಿನಾಕಾರಣ ದುಃಖಗಳು ದೂರ ಮಾಡುವುದಕ್ಕೆ. ದೇವರು ಕೊಟ್ಟಿದ್ದಕ್ಕೆ ತೃಪ್ತಿಯೂ ಬೇಕು. ಅವನನ್ನು ಸ್ಮರಿಸಲೂ ಬೇಕು. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣವನ್ನು ಮಾಡಿ.

ತುಲಾ

ಮನುಷ್ಯನ ಬುದ್ಧಿ ಕ್ರೂರವಾದರೆ ತನಗೆ ತಾನೇ ತೊಂದರೆ ತಂದುಕೊಳ್ಳುತ್ತಾನೆ. ನೀವು ಬೇಡದ ಕೆಲಸ ಮಾಡಿ ಒತ್ತಡಕ್ಕೆ ಒಳಗಾಗಿ ನಿಭಾಯಿಸಲು ಸಾಹಸ ಪಡುತ್ತೀರಿ. ಕೆಲಸ ಮಾಡುವುದಕ್ಕೆ ಮುಂಚೆ ಯೋಚಿಸಬೇಕು. ಇಲ್ಲದಿದ್ದಲ್ಲಿ ನಿರಾಸೆ ನಿಮ್ಮನ್ನು ಕಾಡುತ್ತದೆ. ದೈವಾನುಗ್ರಹವಿದೆ. ಚಾಮುಂಡೇಶ್ವರಿ ಸ್ತೋತ್ರ ಪಠಿಸಿ. ದರ್ಶಿಸಿ.

ವೃಶ್ಚಿಕ

ನಿಮ್ಮನ್ನು, ನಿಮ್ಮ ಕಾರ್ಯವೈಖರಿಯನ್ನು ಮೆಚ್ಚಿ ಬರುವವರು ಸಾವಿರಾರು ಜನ. ಆದರೆ ಸತ್ಯಾಂಶದಲ್ಲಿ ನಿಮಗೆ ಮೂರೇ ಜನ. ಅನಾವಶ್ಯಕ ಚಿಂತೆ ಬೇಡ. ಚಿತ್ತ ಹಾಳುಮಾಡಿಕೊಳ್ಳುವುದು ಬೇಡ. ಧನವು ನಿಮ್ಮ ಕೈಸೇರಿ ಆನಂದ ವೃದ್ಧಿಸುತ್ತದೆ. ಚೇಳು ಕುಟುಕಿದರೆ ವಿಷ ಏರುತ್ತದೆ. ಆದರೆ ದೇವರು ತಲೆ ಮೇಲೆ ಹಸ್ತವನ್ನು ಇಟ್ಟರೆ ಎಲ್ಲವೂ ದೊರಕುತ್ತದೆ. ಲಕ್ಷ್ಮೀ ನರಸಿಂಹನನ್ನು ಆರಾಧಿಸಿ, ಶ್ರೀಸೂಕ್ತ ಪಾರಾಯಣವನ್ನು ಮಾಡಿ.

ಧನು

ಶನಿಯ ಸಂಚಾರ ಕಡೆಯ ಭಾಗದಲ್ಲಿದ್ದು ಇನ್ನು ಒಂದು ವರ್ಷ ಮಾತ್ರ ಇರುತ್ತದೆ. ಈ ಸಮಯದಲ್ಲಿ ಯಾವ ಕೆಡಕುಗಳು ಸಂಭವಿಸುವುದಿಲ್ಲ. ನೀವು ತಿದ್ದಿಕೊಂಡು ಜೀವನವನ್ನು ರೂಪಿಸುವ ಕಾಲ. ನಿಮ್ಮ ಅಗತ್ಯಗಳೇನು ಎಂಬುದನ್ನು ಅರಿತು ಧೈರ್ಯದಿಂದ ಮುಂದೆ ನಡೆದಲ್ಲಿ ಗುರು ದಾರಿ ತೋರುತ್ತಾನೆ. ಒಮ್ಮೊಮ್ಮೆ ನಿಮ್ಮನ್ನು ನಿರಾಸೆಗೆ ದೂಡಿ ಕೈಲಾಗದವರಂತೆ ಮಾಡುತ್ತಾನೆ. ದೈವಧರ್ಮವನ್ನು ನಂಬಬೇಕು. ಒಳ್ಳೆಯ ಸಮಯ ಹಾಳುಮಾಡದೆ ಜೀವನವನ್ನು ಸುಖಮಯವಾಗಿಸಿಕೊಳ್ಳಿ.

ಮಕರ

ಸ್ವಕ್ಷೇತ್ರದ ಶನಿ ಗುರುವಿನೊಂದಿಗೆ ಇದ್ದು ದೈವೇಚ್ಛೆಯಲ್ಲಿ ಅತ್ಯಾವಶ್ಯಕವಾದುದನ್ನು ಮಾತ್ರ ಮಾಡಿಕೊಡಲು ಶಕ್ತನಾಗಿರುತ್ತಾನೆ. ದಶರಥ ವಿರಚಿತ ಶನಿಸ್ತೋತ್ರವನ್ನು ನಿತ್ಯವೂ ಓದಿ. ಕೈಹಿಡಿದು ನಡೆಸುವವನು ಈ ಲೋಕದಲ್ಲಿ ಏಕಮಾತ್ರ ದೇವರ ದೇವನಾದ ಮಹಾದೇವರು. ವ್ಯಕ್ತಾವ್ಯಕ್ತ ಸ್ವರೂಪದಲ್ಲಿ ವಿಷ್ಣುವನ್ನು, ಶಿವನನ್ನು ಅರ್ಚಿಸಿ, ಜೀವನ ದಾರಿಯನ್ನು ಉತ್ತಮಪಡಿಸಿಕೊಳ್ಳಬಹುದು.

ಕುಂಭ

ನೀವು ಬಯಸಿದ್ದನ್ನು ಪರಿಪೂರ್ಣವಾಗಿ ಕೊಡುವುದು ದೇವರಿಗೆ ಬಿಟ್ಟ ವಿಷಯ. ಪೂರ್ವಜನ್ಮದ ಪಾಪ-ಪುಣ್ಯಗಳನ್ನು ನೋಡಿ ದೇವರು ಬಯಸಿದ್ದನ್ನು ಕೊಡುತ್ತಾನೆ. ಅಲ್ಲಿಗೆ ನೀವು ತೃಪ್ತಿ, ಸಮಾಧಾನವನ್ನು ಪಡೆದುಕೊಳ್ಳಬೇಕು. ವೆಂಕಟೇಶ ಮಹಾತ್ಮೆಯನ್ನು ಪಾರಾಯಣ ಮಾಡಿ. ಮಾಡಿದ ಕರ್ಮಕ್ಕೆ ಪಶ್ಚಾತ್ತಾಪ ಪಟ್ಟು ನಡೆದರೆ ಸುಖ ಸಿಗುತ್ತದೆ. ಆನಂದವು ಅನುಭವಿಸಬೇಕಾದ ವಿಷಯ. ಧನಕ್ಕೆ ಕೊರತೆ ಇರುತ್ತದೆ. ಮುಂದಿನ ದಿನಗಳಲ್ಲಿ ಸುದಿನವಿರುತ್ತದೆ.

ಮೀನ

ಜಗದೊಡೆಯನ ಸೇವೆಯನ್ನು ಮಾಡಿ. ಸುಂದರವಾದ ಜಗತ್ತಲ್ಲಿ ಬದುಕಲು ಭಗವಂತನು ನಿಮಗಾಗಿ ವಿಚಾರದಲ್ಲಿ ಗುರು-ಶನಿಯ ಸಂಯೋಗದಲ್ಲಿ ಕುಳಿತಿದ್ದಾನೆ. ಕಾಲ ಪಕ್ವವಾಗಿದೆ. ಆರೋಗ್ಯ, ಆಯಸ್ಸು, ಧನಕ್ಕೆ ಯೋಚಿಸುವ ಅಗತ್ಯವಿಲ್ಲ. ನಿಮ್ಮ ಆಲೋಚನೆ ಏನೇ ಇದ್ದರೂ, ದೇವರು ಕೊಟ್ಟ ಆನಂದವನ್ನು ಅನುಭವಿಸುವ ಕಡೆಗೆ ಧ್ಯಾನಿಸಿ, ಪೂಜಿಸಿ. ದೈವಕ್ಕೂ, ಮಾತಾ-ಪಿತೃಗಳಿಗೂ, ಗುರುಗಳಿಗೂ ಕೃತಜ್ಞರಾಗಿರಿ. ಇನ್ನು ಅಧಿಕ ಫಲ ದೊರೆಯುತ್ತದೆ. ದತ್ತ ಸಹಸ್ರನಾಮ ಪಠಿಸಿ. ಶ್ರೀಪಾದ ಶ್ರೀವಲ್ಲಭ ಚರಿತ್ರೆಯನ್ನು ಪಾರಾಯಣ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net