ಈ ರಾಶಿಯವರಿಗೆ ಈ ವಾರ ಉತ್ತಮ ದಿನಗಳು ಬರುತ್ತವೆ: ವಾರಭವಿಷ್ಯ

Vara-Bhavishya-2
Published on

ಮೇಷ

ಈ ರಾಶಿಯವರಿಗೆ ಏಕಾದಶದಲ್ಲಿರುವ ಗುರುವು ಸೆಪ್ಟೆಂಬರ್ 14ರಿಂದ ದಶಮಕ್ಕೆ ಬಂದು ಸೇರುತ್ತಾನೆ. ಕೆಲಸಗಳು ಸ್ಥಗಿತಗೊಂಡು ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಪ್ರಾಣಕ್ಕಿಂತ ಮಿಗಿಲಾದದ್ದು ವಚನ. ಸಂಯಮ, ಸತ್ಯದ ಹಾದಿ ಹಿಡಿದರೆ ಪ್ರಕಾಶಿಸುತ್ತೀರ. ಸೆಪ್ಟೆಂಬರ್ 14ರಿಂದ ಎರಡು ತಿಂಗಳ ಕಾಲ ಜಾಗರೂಕತೆಯಿಂದ ನಡೆಯಿರಿ. ಸುಬ್ರಹ್ಮಣ್ಯ ಕವಚ ಓದಿರಿ.

ವೃಷಭ

ಪಂಚಮದಲ್ಲಿ ಕುಜನು-ಬುಧನ ಮನೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಅಸಮತೋಲನವು, ಚಿಂತೆಯೂ ಉಂಟಾಗುತ್ತದೆ. ಆದರೆ ನಿಮ್ಮ ಹಿರಿಯರು ಮಾಡಿದ ಪುಣ್ಯದಿಂದ ಗುರುವು 9ನೇ ಮನೆಯಲ್ಲಿ ಬರುವುದರಿಂದ ಸುಖ ಸಿಗುತ್ತದೆ. 8 ವಾರಗಳ ಕಾಲ ಬೇಕಾದ ಕೆಲಸ ಮಾಡಿಕೊಳ್ಳಿ. ಮಾರ್ಗತೋರಿದ ಗುರುಗಳನ್ನು ಕಡೆಗಣಿಸಬೇಡಿ. ದತ್ತಾತ್ರೇಯ ದರ್ಶನ ಪಡೆದು ಬನ್ನಿ.

ಮಿಥುನ

ಗುರುವಿಂದ ಭಾಗ್ಯವು ದೂರ ಸರಿದು, ಅಷ್ಟಮಕ್ಕೆ ಶನಿಯೊಂದಿಗೆ ಬರುತ್ತಾನೆ. ನಾಲಿಗೆಯನ್ನು ಹತೋಟಿಯಲ್ಲಿಡಿ. ಗೋಪಾಲಕೃಷ್ಣನನ್ನು ಪೂಜಿಸಿ, ಕೃಷ್ಣ ಅಷ್ಟೋತ್ತರ ಪಠಿಸಿ. ಎಂಟು ಗುರುವಾರಗಳು ಗೋವಿಗೆ ಕೈಲಾದ ಆಹಾರ ಕೊಡಿ. ಏನೂ ಆಗದಿದ್ದರೂ ಬೆಲ್ಲ-ಬಾಳೆಹಣ್ಣು ಕೊಟ್ಟು ಕಾಮಧೇನುವಿನ ಆಶೀರ್ವಾದ ಪಡೆಯಿರಿ.

ಕಟಕ

ಸಪ್ತಮಕ್ಕೆ ಬರುವ ಗುರು ಕೆಲಸ ಕಾರ್ಯಗಳಲ್ಲಿ ಸುಖ, ಸಂತೋಷವನ್ನು, ಮನಸ್ಸಿಗೆ ಉಲ್ಲಾಸವನ್ನು ತರುತ್ತಾನೆ. ಸಮುದ್ರವನ್ನು ಯಾರೂ ಕೊಡದಲ್ಲಿ ತುಂಬಿಸಲಾಗುವುದಿಲ್ಲ. ಬಾಯಾರಿಕೆ ಆದವನಿಗೆ ಒಂದು ಲೋಟ ನೀರೇ ಸಾಕು. ಶನಿಯನ್ನು ಪ್ರಾರ್ಥಿಸಿ, ಕೆಲಸ ಮಾಡಿ. ಗುರುವಿನ ಆರಾಧನೆ ಇರಲಿ. ಶಿವಾನಂದಲಹರಿಯನ್ನು ಪಾರಾಯಣ ಮಾಡಿ.

ಸಿಂಹ

ಶನಿ ಸ್ವಕ್ಷೇತ್ರದಲ್ಲಿದ್ದು ಗುರುವು ಬಂದು ಸೇರುತ್ತಾನೆ. ಕೆಲವು ಚಿತ್ರ-ವಿಚಿತ್ರ ಆಲೋಚನೆಗಳು ಮನಸ್ಸನ್ನು ಕಾಡುತ್ತವೆ. ದೃಢವಾದ ಮನಸ್ಸು ಮೈಗೂಡಿಸಿಕೊಳ್ಳಿ. ಎಂಟು ವಾರಗಳು ಕಳೆದ ಬಳಿಕ ಮತ್ತೆ ಸಪ್ತಮಕ್ಕೆ ಗುರು ಕಾಲಿಡಲಿದ್ದಾನೆ. ಎಲ್ಲವೂ ಒಳ್ಳೆಯದಾಗುತ್ತದೆ. ಭಾನುವಾರ ಸೂರ್ಯಪೂಜೆಯನ್ನು ಮಾಡಬೇಕು.

ಕನ್ಯಾ

ಆಧಿಪತ್ಯಕ್ಕೆ ಬುಧನಿರುವುದರಿಂದ ಉದ್ವೇಗ, ಕೋಪ-ತಾಪಗಳನ್ನು ದೂರವಿಟ್ಟು ಭಗವಂತನ ಧ್ಯಾನದಲ್ಲಿ ಮುಂದುವರಿದರೆ ಪಂಚಮ ಶನಿ ಇದ್ದಾಗ್ಯೂ ಶ್ರೇಯಸ್ಸನ್ನು ಕೊಡುತ್ತಾನೆ. ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಅಷ್ಟೋತ್ತರ ಪಾರಾಯಣ ಮಾಡಿ ಸುಖವಾಗಿರಿ. ತಾಳ್ಮೆಯಿಂದ ಮುಂದುವರಿಯಿರಿ. ಒಳ್ಳೆಯ ದಿನಗಳು ಬರಲಿವೆ.

ತುಲಾ

ಈ ರಾಶಿಯಲ್ಲಿ ಹುಟ್ಟಿದವರೂ ಯಾವತ್ತೂ ಅಧರ್ಮ, ಅಸತ್ಯದ ಮಾತುಗಳನ್ನಾಡಬಾರದು. ಜಾಗರೂಕತೆಯಿಂದ ನಡೆಯಿರಿ. ಚತುರ್ಥದಲ್ಲಿ ಶನಿ-ಗುರುವಿನ ಸಂಯೋಜನೆ ಇದ್ದು ಪೂರ್ವ ಪುಣ್ಯವೇ ಕಾಪಾಡಿ ನಿಮ್ಮನ್ನು ಹಿಡಿದೆಬ್ಬಿಸುತ್ತದೆ. ಧೈರ್ಯಗೆಡಬೇಡಿ. ಕುಲದೇವರನ್ನು ಪ್ರಾರ್ಥಿಸಿ.

ವೃಶ್ಚಿಕ

ಧನವು ಬಂದು ಸೇರುತ್ತದೆ. ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ, ಕಲಶದಲ್ಲಿ ಕಾಯಿಯನ್ನಿಟ್ಟು ಮಹಾಲಕ್ಷ್ಮೀಯನ್ನು ಆಹ್ವಾನಿಸಿ. ಶುಕ್ರವಾರ ಸಂಜೆಯಲ್ಲಿ ಪೂಜಿಸಿ. ಹಾಲನ್ನು ನೈವೇದ್ಯ ಮಾಡಿ. ನಿಮ್ಮ ಸಂಪತ್ತು ಕೈ ಸೇರುತ್ತದೆ. ನಿಧಾನವಾದರೂ ನಿಮ್ಮ ಸಂಕಲ್ಪ ಈಡೇರುತ್ತದೆ. ಪ್ರಾತಃಕಾಲದಲ್ಲಿ 11 ಬಾರಿ ಮಹಾಲಕ್ಷ್ಮೀ ಅಷ್ಟಕ ಪಠಿಸಿ.

ಧನು

ಕಷ್ಟಗಳು ಬರುವುದು ನಿಮ್ಮನ್ನು ಧೈರ್ಯದಿಂದ ನಡೆಸಲು. ಈ ವಾರದಲ್ಲಿ ದೊಡ್ಡ ಸಾಧನೆ ಮಾಡುತ್ತೀರಿ. ವಾಮನ ಮೂರ್ತಿಯನ್ನು ಪೂಜಿಸಿ. ಮೂರೂ ಲೋಕವನ್ನು ಗೆಲ್ಲುವ ಶಕ್ತಿಯನ್ನು ಹೊಂದುತ್ತೀರ. ನಿಮ್ಮ ಅಭೀಷ್ಟಗಳು ಸಿದ್ಧಿಸುವುದು.

ಮಕರ

ಲಗ್ನಕ್ಕೆ ಗುರುಬಂದು ಶನಿಯ ಬಲವನ್ನು ದೈವಬಲವಾಗಿ ಪರಿವರ್ತಿಸಿ ನಿಮಗೆ ಒಳ್ಳೆಯ ಕಾಲವನ್ನು ಉಂಟು ಮಾಡುತ್ತಾನೆ. ಜನ್ಮದಲ್ಲಿ ಶನಿಯಿರುವುದರಿಂದ 11 ಶನಿವಾರ ಲಕ್ಷ್ಮೀನರಸಿಂಹನನ್ನು ಧ್ಯಾನಿಸಿ. ಬೆಲ್ಲ, ನಿಂಬೆಹಣ್ಣು, ಹೆಸರು ಬೇಳೆಯನ್ನು ನಿಮ್ಮ ಊರಲ್ಲಿ ಪುರಾತನವಾದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಅರ್ಪಿಸಿ. ಅವನು ನಿಮ್ಮನ್ನು ಕೈಹಿಡಿದು ನಡೆಸುವನು.

ಕುಂಭ

12ರಲ್ಲಿ ಶನಿಯಿರುವುದರಿಂದ ಎಚ್ಚರವಾಗಿರಬೇಕು. ನಿಮ್ಮ ಗುರುಗಳನ್ನು ಕೇಳಿ ಶನಿಶಾಂತಿ ಮಾಡಲು ಉದ್ಯುಕ್ತರಾಗಿ. ದಶರಥ ವಿರಚಿತ ಶನಿಸ್ತೋತ್ರವನ್ನು ಪಠಿಸಿ. ಗುರುನರಸಿಂಹನನ್ನು ಪ್ರಾರ್ಥಿಸಿ. ನರಸಿಂಹ ಸಹಸ್ರನಾಮ ಪಾರಾಯಣ ಮಾಡಿ.

ಮೀನ

ಮೀನು ನೀರನ್ನು ಬಿಟ್ಟಿರುವುದಿಲ್ಲ. ಮನುಷ್ಯನು ದೇವತಾ ಪ್ರಾರ್ಥನೆ ಬಿಟ್ಟಿರಬಾರದು. ದ್ವಾದಶ ಗುರುವು ಏಕಾದಶಕ್ಕೆ ಬರುತ್ತಾನೆ. ಹನ್ನೊಂದನೆ ಮನೆಯ ಗುರು-ಶನಿ ಭಾಗ್ಯವನ್ನು ಅನುಭವಿಸಿ. ಶನಿ ಪ್ರದೋಷದ ಸಾಂಬಸದಾಶಿವನ ವ್ರತಕಥೆಯನ್ನು 16 ವಾರಗಳ ಕಾಲ ಸೋಮವಾರ ಪಾರಾಯಣ ಮಾಡಿ. ಉತ್ತಮ ದಿನಗಳು ಬರುತ್ತವೆ. ಬಿಲ್ವಷ್ಟೋತ್ತರದಲ್ಲಿ ಈಶ್ವರನನ್ನು ಅರ್ಚಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net