ಈ ರಾಶಿಯವರಿಗೆ ಈ ವಾರ ಆರೋಗ್ಯದ ಬಗ್ಗೆ ಕಾಳಜಿ ಇರಲಿ: ವಾರಭವಿಷ್ಯ

Vara-Bhavishya-2
Published on
ಮೇಷ

ಈ ವಾರ ಸರ್ವಕಾರ್ಯಗಳು ಮುನ್ನಡೆಯುತ್ತ ಸಾಗುತ್ತವೆ. 8ನೇ ತಾರೀಖಿನವರೆಗೂ ಹೊಸ ಕಾರ್ಯಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಬಹುದು. ಆದರೆ ರಾಶಿಗಳ ಸಮುಚ್ಛಯಗಳಲ್ಲಿ ಮೇಷಾಧಿಪತಿ ಕುಜನು ಮಯೂರವಾಹನನು, ಪಾರ್ವತಿನಂದನನು. ದಶರಾತ್ರಿಗಳು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ತ್ರಿಲೋಕ ಸುಂದರಿ ಪೂಜೆಯನ್ನು ಮಾಡುವುದನ್ನು ಮರೆಯಬೇಡಿ.

ವೃಷಭ

ಶುಕ್ರಾಧಿಪತ್ಯಕ್ಕೆ ಹಾಗೂ ಲಗ್ನದಲ್ಲೇ ಇರುವ ರಾಹುವಿಗೆ ಸಿಂಹವಾಹಿನಿಯಾದ ಚಾಮುಂಡಿಯನ್ನು ಪೂಜಿಸಿ. ಸರ್ವಾಭಿಷ್ಟವನ್ನು ಸಿದ್ಧಿಸಿಕೊಳ್ಳಲು, ದಾರಿದ್ರ್ಯ, ದುಃಖವನ್ನು ದೂರವಿಡುವ ದುರ್ಗೆಯನ್ನು ಪೂಜಿಸಿ. ಇಷ್ಟಾರ್ಥಗಳನ್ನು ಕರುಣಿಸಲು 9ನೇ ಮನೆಯಲ್ಲೇ ಪೂಜಿಸಿ. ಇಷ್ಟಾರ್ಥಗಳನ್ನು ಕರುಣಿಸಲು 9ನೇ ಮನೆಯಲ್ಲೇ ಗುರುವು ಸೇರಿದ್ದಾನೆ.

ಮಿಥುನ

ಮಿಥುನ-ಕನ್ಯಾ ರಾಶಿಗಳಿಗೆ ಅಧಿಪತಿ ‘ಸೌಮ್ಯಂ ಸೌಮ್ಯೋಪೇತಂ ಸಾಮವಾಸರ ಯುಕ್ತೇನ ಅಧಿಪತಿಂ ಮಹಾವಿಷ್ಣುಂ ವಂದೇ ಶಿರಸಾ ನಮಾಮಿ’. ಅಷ್ಟಮದಲ್ಲಿ ಗುರು ಸಂಚಾರವಿದ್ದು, ಈ ಸಮಯ, ಸಂದರ್ಭಾನುಸಾರದಲ್ಲಿ ರಕ್ಷಣೆಗಾಗಿ ಮಹಾವಿಷ್ಣುವನ್ನು ಪೂಜಿಸಿ. ಅಷ್ಟಮ ಸಂಚಾರದ ಗುರು-ಶನಿ ಗೆಲ್ಲಲು ಏಕೈಕ ಪರಮೌಷಧ ವಿಷ್ಣು ಸಹಸ್ರನಾಮ.

ಕಟಕ

ಭಗವಂತನು ಕೊಟ್ಟಿರುವ ವರವೆಂದರೆ ನೀರು. ಕರುಣಾಕರನು, ಕಾರುಣ್ಯವೆಂಬ ಶಬ್ದಕ್ಕೆ ಹೊಂದುವವನು ದತ್ತದೇವನೊಬ್ಬನೆ. ನ.20ರವರೆಗೆ ಗುರುವು ಸಪ್ತಮದಲ್ಲಿದ್ದು ಶನಿಯನ್ನು ದುಷ್ಪಲ ಕೊಡದಂತೆ ಕಟ್ಟಿಹಾಕಿದ್ದಾನೆ. ಗುರುವನ್ನು ಪೂಜಿಸಿದರೆ ಸಂತಸ, ಸುಖವನ್ನು ಪಡೆದೇ ಪಡೆಯುತ್ತೀರ. ಶರೀರ ಸ್ವಾಸ್ಥ್ಯಕ್ಕೆ ಜಾನಕೀ ರಾಮನ ರಾಮಸ್ತುತಿಯನ್ನು ಪಾರಾಯಣ ಮಾಡಿದರೆ ಕಷ್ಟಗಳನ್ನು ಕಳೆದು ಇಷ್ಟವನ್ನು ಕರುಣಿಸುತ್ತಾನೆ.

ಸಿಂಹ

ಈ ರಾಶಿಯವರು ಭಾದ್ರಪದ ಅಮಾವಾಸ್ಯೆ ಯಿಂದ ಆಶ್ವೀಜ ಶುಕ್ಲ ಪೌರ್ಣಮಿಯವರೆಗೆ ಸಿಂಹಾಸನದ ಮೇಲೆ ಕುಳಿತು ಸಿಂಹಾರೂಢಳಾಗಿ ರುವ ಮಹಾದುರ್ಗೆಯನ್ನೇ ಪೂಜಿಸುವುದು. 9 ದಿನ ದುರ್ಗೆ, ಸರಸ್ವತಿಯನ್ನು ಆರಾಧಿಸಿ. ಕಾಳೀ ಅಷ್ಟೋತ್ತರವನ್ನು ಸಂಜೆಯಲ್ಲಿ ಪಾರಾಯಣ ಮಾಡಿ. ಗುರುದತ್ತಾತ್ರೇಯನಿಗೆ ನಿಮ್ಮನ್ನು ನೀವು ಸಮರ್ಪಣೆ ಮಾಡಿಕೊಂಡರೆ ಜೀವನ ಸಾರ್ಥಕ.

ಕನ್ಯಾ

ದೇವರು ಸೃಷ್ಟಿಸಿದ ಸ್ತ್ರೀಯನ್ನು ಭಕ್ತಿ, ಆದರದಿಂದ ಜಗನ್ಮಾತೆ ಎಂದೇ ಭಾವಿಸಬೇಕು. ಶರನ್ನವರಾತ್ರಿಯಲ್ಲಂತೂ ಹೆಣ್ಣನ್ನು ದೇವರೆಂದೇ ಭಾವಿಸಿ ಕನ್ನಿಕಾಪೂಜೆ, ಸುಹಾಸಿನಿ ಪೂಜೆ ಮಾಡಿ. ಪ್ರಾರ್ಥನೆಯೊಂದೇ ಮನುಷ್ಯನನ್ನು ಯಶಸ್ಸಿಗೂ, ಸುಖಕ್ಕೂ ಕೊಂಡೊಯ್ಯಬಹುದು. ದೇವಿಯನ್ನು ಪೂಜಿಸಿ, ಆರಾಧಿಸಿ.

ತುಲಾ

ನಿಮ್ಮ ರಾಶಿಗೆ ಚತುರ್ಥ ಗುರು, ಶನಿ ಇರುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ನೀಲಸರಸ್ವತಿ ಸ್ತೋತ್ರ ಪಾರಾಯಣ ಮಾಡಿರಿ. ನವದಿನಗಳ ಪರ್ಯಂತ ನಿಂಬೆಹಣ್ಣಿನ ಪಾನಕ, ಹೆಸರುಬೇಳೆ ಕೋಸಂಬರಿ ಸುಹಾಸಿನಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳಿ. ಅತ್ಯಂತ ಶುಭವೂ ಉತ್ಸಾಹವೂ ದೊರಕಿ ಜಯ ನಿಮ್ಮದಾಗುತ್ತದೆ.

ವೃಶ್ಚಿಕ

ಮನಸ್ಸು ನಿರ್ಮಲವಿರಬೇಕಾದರೆ ದೇವರನ್ನು ಭಜಿಸಿ-ಪೂಜಿಸಲೇಬೇಕು. ನಿಮ್ಮ ಕೆಲಸಗಳನ್ನು ಮುಗಿಸಿ ಧನನಿರೀಕ್ಷೆಯಲ್ಲಿರುವ ನೀವು ಐಕ್ಯರೂಪದ ಮಧ್ಯರೂಪವಾದ ಮಹಾಲಕ್ಷ್ಮಿಯನ್ನು ಪೂಜಿಸಿ. ವ್ಯಾಪಾರದಲ್ಲಿ ಧನ ಬರುವ ಕಾಲ. ದಾನಕ್ಕೂ-ಧರ್ಮಕ್ಕೂ ಉಪಯೋಗಿಸಿ ಋಣವನ್ನು ಪರಿಹರಿಸಿ, ಸಂತೋಷವನ್ನು ಕಾಣುವಿರಿ.

ಧನು

ಎಲ್ಲ ಕೆಲಸ ಕಾರ್ಯಗಳಲ್ಲೂ ಜಯ ದೊರಕಿ ನಿಮ್ಮ ಆಧಿಪತ್ಯ ಸೃಷ್ಟಿಸಬೇಕಾದರೆ ದೇವರೇ ನಿಮ್ಮ ಬೆನ್ನಹಿಂದೆ ಇದ್ದು ನಡೆಸಬೇಕು. ಅಂತೆಯೇ ಗ್ರಹಗಳ ವಿದ್ಯಮಾನದಲ್ಲೀಗ ಗುರುವು ದ್ವಿತೀಯದಲ್ಲೂ, ಸಾಡೇಸಾತಿಯ ಬಲವು ತಗ್ಗುವುದಲ್ಲದೆ ನಿಮ್ಮನ್ನು ಖುಷಿಕೊಟ್ಟು ನಡೆಸುತ್ತಾನೆ. ನಡೆಸುವವಳೂ- ನುಡಿಸುವವಳು ಜ್ಞಾನದೇವತೆ ಸರಸ್ವತಿಯೇ, ಸುಜ್ಞಾನದಿಂದ ನಿಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಿ.

ಮಕರ

ನವಗ್ರಹ ರಾಜಾಧಿರಾಜನು, ಛಾಯಾದೇವಿ- ಸೂರ್ಯ ಪುತ್ರನಾದ ಶನಿಯು ಸಮಯ ಪ್ರಜ್ಞೆಯನ್ನು ಕೊಟ್ಟು ನ್ಯಾಯದ ಹಾದಿಗೆ ಮನುಷ್ಯನನ್ನು ಕೊಂಡೊಯ್ಯುತ್ತಾನೆ. ಈ ಸಮಯದಲ್ಲಿ ಶಾರದೆ, ದುರ್ಗೆ, ಲಲಿತಾ ಪರಮೇಶ್ವರಿಯ ರೂಪವನ್ನು ಧರಿಸಿದ ವಳ ಶ್ರೀಚಕ್ರ ರಾಜರಾಜೇಶ್ವರಿಯನ್ನು ಪೂಜಿಸಿದರೆ ಭಗವದ್ಭಕ್ತಿಯು ಶನಿಯ ತಾಪಗಳಿಂದ ಕಾಪಾಡುತ್ತದೆ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.

ಕುಂಭ

ಶನಿಯ ಸ್ವಗೃಹವಾದ ಕುಂಭರಾಶಿಗೆ ಶನಿಯು ಹನ್ನೆರಡಕ್ಕೆ ಬಂದಿರುವುದೂ ಶುಭ ಸಮಯವಲ್ಲವೆಂದು ಶಾಸ್ತ್ರ ನಿರ್ಣಯಕಾರರೇ ಹೇಳಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶಾಂತಿಯುಕ್ತವಾದ ಮನಸ್ಸು, ಆರೋಗ್ಯ ಕೊಡುವಂತಹ ಆಯಸ್ಸು ಅತ್ಯಗತ್ಯ. ಈ ಸಮಯವನ್ನು ಹಾಳುಮಾಡದೆ 9 ದಿನಗಳು ನವಗ್ರಹ ಅಷ್ಟೋತ್ತರ ಪಾರಾಯಣ ಮಾಡಿ.

ಮೀನ

ಈ ರಾಶಿಗೆ ಭಗವಂತನೇ ದುಷ್ಟಾಕ್ಷರಗಳನ್ನು ಅಳಿಸಿ ಸ್ವಷ್ಟಾಕ್ಷರಗಳನ್ನು ಬರೆದು ನಿಮ್ಮ ಹಣೆಬರಹ ತಿದ್ದಿರುತ್ತಾನೆ. ಜೀವನದ ಸುಸಮಯಕ್ಕಾಗಿ ಪರಮಾತ್ಮನನ್ನು ಪ್ರಾರ್ಥಿಸಿ. ಏಕಾದಶ ಗುರುವು ಧನಸಂಪತ್ತನ್ನು, ಏಕಾದಶ ಶನಿ ಲಾಭ, ಕೀರ್ತಿ ಆಯಸ್ಸು ಕೊಡುವುದರಲ್ಲಿ ಸಂದೇಹವಿಲ್ಲ. ರುದ್ರಪಾರಾಯಣ ಮಾಡಿ. ಖಡ್ಗಮಾಲಾ ಸ್ತೋತ್ರವನ್ನು ತಪ್ಪದೇ ಪಠಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net