

ಮೇಷ ರಾಶಿಯವರಿಗೆ ರಾಹು ಲಗ್ನದಲ್ಲಿದ್ದು, ದ್ವಾದಶದಲ್ಲಿ ಗುರುವಿರುವುದರಿಂದ ಮಾಡುವ ಕೆಲಸ - ಕಾರ್ಯ ಅಡ್ಡಿ - ಆತಂಕಗಳು, ವೃಥಾ ಧನವ್ಯಯವು ಆಗುತ್ತದೆ. ಕೆಲವೊಮ್ಮೆ ವ್ಯಕ್ತಿತ್ವಕ್ಕೆ ಸವಾಲುಗಳು, ದೋಷಾರೋಪಣೆ ಬರುವ ಸಂಭವವಿದೆ. ಗ್ರಹಗತಿಗಳು ನಮ್ಮ ಹತೋಟಿಯಲ್ಲಿ ಇಲ್ಲದಿರುವಾಗ ಮೌನಕ್ಕಿಂತ ಮದ್ದಿಲ್ಲ. ಸುಬ್ರಹ್ಮಣ್ಯ ಧ್ಯಾನದಲ್ಲಿ ನಿರತರಾಗಿರಿ.
ವೃಷಭರಾಶಿಗೆ ರಾಶ್ಯಾಧಿಪತಿ ಶುಕ್ರನ ಮನೆಯಲ್ಲೂ ಮೇಷ ರಾಶಿಯಲ್ಲಿ ರಾಹುವು ಇದ್ದು, ಬಿಡುವಿನ ಸಮಯದವಿಲ್ಲದೆ ಹಗಲು - ರಾತ್ರಿ ಕಳೆಯುತ್ತಿದೆ. ಸಮುದ್ರದ ಆಳ ತಿಳಿದವರಿಲ್ಲ. ಆದರೆ, ಅದರ ನೀರನ್ನು ಕುಡಿಯಲು ಸಾಧ್ಯವೇ, ಆಪತ್ಕಾಲದ ಧನದ ಚೀಲ ಖಾಲಿಯಾಗುವ ಸಮಯ. ಮತ್ತೆ ಉತ್ಪತ್ತಿ ಹುಡುಕಬೇಕಾಗುತ್ತದೆ. ಕೈಲಾದಷ್ಟು ಮಾಡುತ್ತೇನೆ ಎಂದು ಮಾತ್ರ ಹೇಳಬೇಕು. ತಲೆಯ ಮೇಲೆ ಲೋಕವನ್ನೇ ಹೊರುತ್ತೇನೆಂದೆರೆ ಸಾಧ್ಯವೇ? 5ರ ಶುಕ್ರ ಮತ್ತು ಬುಧ ಸ್ವಕ್ಷೇತ್ರದಲ್ಲಿದ್ದು ಶನಿಯ ಸಂಚಾರದಲ್ಲಿ ತಾಳ್ಮೆಯಿದ್ದಲ್ಲಿ ಜಾಣ್ಮೆಯಿಂದ ವ್ಯವಹಾರಗಳನ್ನು ಗೆಲ್ಲಬಹುದು.
ರಾಶ್ಯಾಧಿಪತಿಯು ಚತುರ್ಥದಲ್ಲಿ, ಪಂಚಮದಲ್ಲಿ ಕೇತು, ಅಷ್ಟಮದಲ್ಲಿ ಶನಿ, ಗುರುವಿದ್ದಾರೆ. ಗುರು ಒಬ್ಬನೇ ಕಾಪಾಡಲು ಉದ್ಯುಕ್ತನಾಗಿದ್ದಾನೆ. ಸಪ್ತಮ ಶನಿಯ ಒತ್ತಡವನ್ನು ಆರೋಗ್ಯದಲ್ಲಿ ದುಷ್ಪರಿಣಾಮ ಆಗದಂತೆ ಕಾಪಾಡಿಕೊಂಡು ದೇವರು ಏನು ಕೊಡುತ್ತಾನೋ ಅದಕ್ಕೆ ತೃಪ್ತಿಪಟ್ಟು ಮುಂದೆ ಸಾಗುತ್ತಿರಿ.
ಸಪ್ತಮ ಶನಿಯು ಕೊಟ್ಟ ಆಗುಹೋಗುಗಳನ್ನು ನಿವಾರಿಸಿ ನಿಮ್ಮನ್ನು ದಡ ಮುಟ್ಟಿಸುತ್ತಾನೆ. ಆದರೆ 9ರ ಗುರುವಿಗೆ ಪ್ರಾರ್ಥನೆಯೂ ಬೇಕು. ಅತಿಯಾದ ಒತ್ತಡದ ಜೀವನವನ್ನು ದೂರವಿಟ್ಟು, ಜಾಣ್ಮೆಯಿಂದ ಕೆಲಸವನ್ನು ಮಾಡಿಕೊಳ್ಳಬೇಕು. ಮನಸ್ಸಿಗೆ ಉದ್ವೇಗ ಬೇಡ. ಶರೀರಕ್ಕೆ ಆಯಾಸ ಬೇಡ. ನಿತ್ಯ ದತ್ತಾತ್ರೇಯ ಗುರುಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಿರಿ.
ಸಿಂಹ ರಾಶಿಯವರಿಗೆ ಆರನೇ ಮನೆಯ ಶನಿಯೊಂದೇ ಸಾಕು ನಿಮ್ಮ ಅದೃಷ್ಟ ಬದಲಾಯಿಸಲು. ಅತ್ಯಂತ ವೇಗವಾಗಿ ನಿಮ್ಮ ಕೆಲಸ ಮಾಡಲು ಉತ್ಸುಕರಾಗಿ. ಅಷ್ಟಮ ಗುರುವಿಗೆ ಶಿವಪಂಚಾಕ್ಷರಿ ಜಪ ಮಾಡಿರಿ. ಆದಿತ್ಯ ಹೃದಯ ಪಾರಾಯಣ ಮಾಡಿ. ಆರೋಗ್ಯದ ವಿಚಾರದಲ್ಲಿ ವ್ಯತ್ಯಯ ಬಂದಲ್ಲಿ ವೈದ್ಯರನ್ನು ಕಾಣಿರಿ. ಧೈರ್ಯ-ಕೀರ್ತಿ ಯಶೋಲಾಭವು ಬರುವ ಸಮಯ.
ಆತ್ಮನಲ್ಲೇ ಸೂರ್ಯ-ಬುಧ-ಶುಕ್ರನಿರುವುದು ತ್ರಿಗ್ರಹಗಳ ಸಂಕೇತ. ಆದರೆ ಶನಿ ಪಂಚಮದಲ್ಲಿ ಇದ್ದಾನೆ. ಪುಣ್ಯ ಮಾಡಿದರೆ ಶುಭಫಲವಿರುತ್ತದೆ. ಪಾಪ ಮಾಡಿದರೆ ಕಾಡುತ್ತಾನೆ. ಈ ಜನ್ಮದಲ್ಲಿ ಮಾಡಿದ ದ್ರೋಹವನ್ನು, ಪಾಪಗಳಿಗೆ ಮುಂದಿನ ಜನ್ಮದವರೆಗೂ ಕಾಯಬೇಕಾಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನೇರ ಬುದ್ಧಿಯನ್ನು ಉಪಯೋಗಿಸಿ ನಿಮ್ಮ ಗೌರವವನ್ನು ಉಳಿಸಿಕೊಳ್ಳಿ.
ಲಗ್ನದಲ್ಲೇ ಕೇತು. ರಾಶ್ಯಾಧಿಪತಿ ದ್ವಾದಶದಲ್ಲಿ ರವಿ-ಬುಧರೊಂದಿಗೆ ಇದ್ದಾನೆ. ಚಿತ್ತಾ, ಸ್ವಾತಿ, ವಿಶಾಖ ಈ ನಕ್ಷತ್ರದ ಜನರಿಗೆ ದೇವರೇ ಮಾರ್ಗ ಬದಲಾವಣೆ ಮಾಡುತ್ತಾನೆ. ಚತುರ್ಥ ಶನಿ ಕೊಟ್ಟ ಅಲ್ವ ಕಷ್ಟ ಪಕ್ಕಕ್ಕೆ ಸರಿಸಿ ವಿಷವಿಲ್ಲದ ವಿಚಾರದಲ್ಲಿ ಧನವನ್ನು, ಕೀರ್ತಿಯನ್ನು ಕೊಡುತ್ತಾನೆ. ‘ಗ’ಕಾರ ಗಣಪತಿ ಸಹಸ್ರನಾಮ ಪಾರಾಯಣ ಮಾಡಿ. ನಾಗದುರ್ಗಾ ಪ್ರಾರ್ಥನೆ. ಮಾಡಿರಿ.
ವೃಶ್ಚಿಕ
ವೃಶ್ಚಿಕ ರಾಶಿಗೆ ಪಂಚಮದಲ್ಲಿ ಗುರು, ದ್ವಾದಶದಲ್ಲಿ ಕೇತುವಿದ್ದು, ಶ್ರದ್ಧೆಯಿಂದ ಕೆಲಸವನ್ನು ಮಾಡಿದರೆ ಕಾವೇರಿ ನೀರಿನಂತೆ ನೀರು ಹರಿದು ಬರುತ್ತದೆ. ನದಿಗಳಲ್ಲಿ ನೀರು ಖಾಲಿಯಾಗಬಹುದು. ಆದರೆ ಅದು ಯಾವತ್ತೂ ಬತ್ತುವುದಿಲ್ಲ. ಯಾಕೆಂದರೆ ಅದು ದೈವದತ್ತವಾದದ್ದು. ಗೌತಮ ಋಷಿಗಳು ಭಾಗೀರಥಿಯನ್ನು ತಂದ ಪುಣ್ಯಾತ್ಮರು. ನಿಮ್ಮ ಗುರುಗಳಲ್ಲೇ ಗೌತಮರನ್ನು ಕಂಡು, ನಿಮ್ಮ ಕೈಗೆ ಎಟುಕುವ ವಸ್ತುವನ್ನು ಕೊಟ್ಟರೆ ದುಡ್ಡು ಕೈಸೇರುತ್ತದೆ. ಮುಂದಿನ ಜೀವನ ಸುಖವಾಗಿರುತ್ತದೆ.
ಓದಿ ಓದಿ ಮರುಳಾದ ಕೂಚಂಬಟ್ಟ. ಓಡಿ ಓಡಿ ಆಯಾಸಪಡುವ ಪೆದ್ದ. ಇಬ್ಬರಿಗೂ ಯಾವ ವ್ಯತ್ಯಾಸವಿಲ್ಲ. ಓಡಬೇಕು ಆದರೆ, ಆಯಾಸ ಆಗಬಾರದು. ಗುರುವಿನ ಮನೆಯಲ್ಲಿ ಹುಟ್ಟಿದ ನೀವು ಚಾಣಕ್ಯನಂತೆ ಬುದ್ಧಿ ಕಲಿತು ಕೆಲಸ ಮಾಡುವುದಕ್ಕಿಂತ ಮಾಡಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿರಬೇಕು. ಜಾಗ್ರತೆ ಇರಬೇಕು. ಯಾರಿಗೂ ತಲೆ ಬಾಗದಂತೆ ಆತ್ಮ ಗೌರವ, ವರ್ಚಸ್ಸು ಕಾಪಾಡಿಕೊಂಡು ಕೆಲಸವನ್ನು ಮಾಡಿ. ಶನಿಯ ಕಡೆಯ ಸಂಚಾರದಲ್ಲಿ ಶುಭವೇ ಆಗುತ್ತದೆ. ಹೇಳಿದ ಮಾತನ್ನು ಕೇಳಿರಿ. ಶ್ರೀರಾಮ ಚಂದ್ರನ ರಾಮಾಯಣದ ತೃತೀಯ ಸರ್ಗವನ್ನು ಓದಿರಿ.
ಮಕರದಲ್ಲೇ ಶನಿ ಇದ್ದು, ನಿಮ್ಮ ಜೇಬಿನಲ್ಲೇ ಕೆಂಡ ಇಟ್ಟುಕೊಂಡಂತೆ. ಆರಿಸುವ ಮೊದಲೇ ಸುಡುತ್ತದೆ. ಆದರೆ, ಪಾಪಗ್ರಹಗಳು ನೀಡುವ ಫಲವನ್ನು ತಡೆಯಲು ಮನುಷ್ಯನು ಸನ್ಮಾರ್ಗ, ದೈವಚಿಂತನೆ, ಮೌನದಲ್ಲೂ ಹೆಜ್ಜೆಯಿಟ್ಟು ನಡೆಯುತ್ತಿರಬೇಕು. ತ್ರಿಕಾಲದಲ್ಲಿ ಮೂರು ಗಳಿಗೆಯಾದರೂ ದೈವಚಿಂತನೆ ಇರಲಿ. ಹೆದರುವ ಅವಶ್ಯಕತೆ ಇಲ್ಲ. ಜನವರಿ 17, 2023ರ ನಂತರ ಕೆಲಸ ಕೈಗೂಡುವುದು. ಶನಿ ಅಷ್ಟೋತ್ತರ ಓದಿರಿ. ಎಳ್ಳು-ತುಪ್ಪ ಕೈಲಾದಷ್ಟು ದಾನಗಳನ್ನು ಕೊಡಿ.
ದ್ವಿತೀಯದಲ್ಲಿ ಗುರುವಿದ್ದಾನೆ. ದ್ವಾದಶದಲ್ಲಿ ಶನಿಯಿದ್ದಾನೆ. ಪಾಪ-ಪುಣ್ಯ ಲಾಭ-ನಷ್ಟಗಳ ಸಮತೋಲನವನ್ನು ಗ್ರಹಗಳೇ ಮಾಡಿಬಿಟ್ಟಿವೆ. ದೇವರ ಅನುಗ್ರಹ ಬೇಕಾದಲ್ಲಿ ಅಂಜುಬುರಕರಿಗೆ ಕೈಗೆ ಸಿಗುವುದಿಲ್ಲ. ಧೈರ್ಯ-ಉತ್ಸಾಹ ಕಳೆದುಕೊಂಡರೆ ಮುಂದೆ ಮಾಡುವುದು ಏನು? ಈ ಸಮಸ್ಯೆಯನ್ನು ದಾಟಲು ಸಾಲಿಗ್ರಾಮದ ಗುರುನರಸಿಂಹನನ್ನು ಪೂಜಿಸಿ-ಧ್ಯಾನಿಸಿ. ನರಸಿಂಹನ ಗುಡಿಗೆ 5 ಗುರುವಾರ ಹೋಗಿಬನ್ನಿ. ಸಮಾಧಾನ, ಶಾಂತಿ, ಧೈರ್ಯವು ಸಿಕ್ಕು, ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ.
ಲಗ್ನದಲ್ಲೇ ಗುರು, ಶಕಾದಶದಲ್ಲಿ ಶನಿ, ದ್ವಿತೀಯದಲ್ಲಿ ರಾಹು ಇದ್ದು, ಆಕಸ್ಮಿಕವಾಗಿ ಬಂದೊದಗಿದ ದೈವಸಾಕ್ಷಾತ್ಕಾರದ ಸಮಯ. ಬೇಡದ ವಿಚಾರವನ್ನು ತೆಗೆದು ಬಂಗಾರದಂತಿರುವ ಬಾಳನ್ನು ಹಾಳು ಮಾಡಿಕೊಳ್ಳಬಾರದು. ಕುಟುಂಬದಲ್ಲಿ ಜಗಳವಿದ್ದಲ್ಲಿ, ಅಶಾಂತಿ ಇದ್ದಲ್ಲಿ ಗ್ರಹಗಳು ಉಚ್ಚ ಸ್ಥಾನದಲ್ಲಿ ಇದ್ದರೂ ಫಲ ನೀಡುವುದಿಲ್ಲ. ಈ ವಿಷಯವನ್ನು ಅರಿತು ಸಂಸಾರ ಸಮಸ್ಯೆಯನ್ನು ‘ಯಥಾಯೋಗ್ಯಂ ತಥಾಕುರು’ ಎಂಬಂತೆ ಯಾರಿಗೂ ದುಃಖಕೊಡದೆ ಮುಂದುವರಿಸಿ. ಉಮಾಮಹೇಶ್ವರನನ್ನು ಧ್ಯಾನಿಸಿ, ಪೂಜಿಸಿ. ಯಾವ ದೇವರು ದೇವೀ ಸ್ವರೂಪ ಪತ್ನಿಯರಲ್ಲಿ ತಪು್ಪ ಹುಡುಕಲಿಲ್ಲ. ಸಂಸಾರಿಯಾದ ದೇವತೆಗಳು ಲೋಕಕ್ಕೆ ಕೊಟ್ಟ ಕೊಡುಗೆ ಇದು.