ಈ ರಾಶಿಯವರಲ್ಲಿ ವಿಶೇಷವಾದ ಬದಲಾವಣೆ ಬಂದು ಕೆಲಸ ಕಾರ್ಯಗಳು ಆಗುತ್ತವೆ: ವಾರಭವಿಷ್ಯ

Vaara-Bhavishya
Published on
ಮೇಷ

ಭಾದ್ರಪದ ಮಾಸ ಆರಂಭವಾಗಿ 13 ದಿನ ಕಳೆದಿವೆ. ಶ್ರಾವಣ ಭಾದ್ರಪದ ಮಾಸವು ವಿಶೇಷವಾಗಿ ವ್ರತದಿ ಕಲ್ಪಗಳು ವರವನ್ನು ಕೊಡುವ ವರಸಿದ್ಧಿ ವಿನಾಯಕ ಪೂಜೆಯು, ಭಾಗ್ಯವನ್ನು ಕೊಡಲು ಅನಂತಪದ್ಮನಾಭ ವ್ರತವು, ಮಾನಸ ಸರೋವರದಲ್ಲಿ ನೆಲೆಸಿರುವ ಉಮಾಮಹೇಶ್ವರ ವ್ರತವು, ಸೆ. 29ರಂದು ಪೌರ್ಣಮಿ ಎಂದು ಮಂಗಳಕರ ವ್ರತಗಳು ಸಂಪನ್ನವಾಗಿದೆ. ಪಿತೃ ದೇವತೆಗಳನ್ನು ತೃಪ್ತಿಪಡಿಸಲು ಪಿತೃಪಕ್ಷ ಆರಂಭವಾಗಿ ನಂತರದಲ್ಲಿ ಮಾತೃ ಪಕ್ಷದಲ್ಲಿ ಶರನ್ನವರಾತ್ರಿ ಪ್ರಾರಂಭವಾಗುತ್ತದೆ. ಮೇಷದಲ್ಲೇ ರಾಹು ಇದ್ದು ಗೊಂದಲಗಳು ಇರುತ್ತದೆ. ಆದ್ದರಿಂದ ಕೆಲವೊಂದು ಬದಲಾವಣೆಗಳು ಉಂಟಾಗಿ ನಿಮ್ಮ ಪೂರೈಸಲು ಕನ್ಯಾ ರವಿಗೆ ನಿಮ್ಮ ಹಿರಿಯರು ಮಾಡಿದ ಪಿತೃ ಕಾರ್ಯಗಳನ್ನು ಮಾಡಿದಲ್ಲಿ ಬೇಕಾದನ್ನು ಗಳಿಸಿಕೊಳ್ಳಬಹುದು.

ವೃಷಭ

ದ್ವಾದಶದಲ್ಲಿ ಗುರು ಪರಿಪೂರ್ಣವಾಗಿ ಫಲ ಕೊಡದಿದ್ದರೂ ನಿಮಗೆ ಯಾವುದೇ ತರಹದ ಅನಾರೋಗ್ಯ ತಂದೊಡ್ಡಲು ಸಾಧ್ಯವಿಲ್ಲ. ದಶಮದಲ್ಲಿ ಶನಿಯು ಸ್ವ ಕ್ಷೇತ್ರದಲ್ಲಿ ಇರುವುದರಿಂದ ಶ್ರಮವಹಿಸಿ ಕೆಲಸ ಮಾಡಿದಲ್ಲಿ ಉತ್ತಮ ಫಲ ಪಡೆಯಬಹುದು. ಅಕ್ಟೋಬರ್​ನಲ್ಲಿ ರಾಹು ಮೀನ ರಾಶಿಗೆ ಬಂದ ನಂತರ ನಿಮ್ಮಲ್ಲಿ ವಿಶೇಷವಾದ ಬದಲಾವಣೆ ಬಂದು ನಿಮ್ಮ ಕೆಲಸ ಕಾರ್ಯಗಳು ಆಗುತ್ತವೆ. ಲಕ್ಷ್ಮೀನರಸಿಂಹನನ್ನು ಪೂಜಿಸಿ. ಗುರುವಿಗಾಗಿ ದಕ್ಷಿಣ ಮೂರ್ತಿಯನ್ನು ಪೂಜಿಸಿ, ಪ್ರಾರ್ಥಿಸಿ ಕಡಲೆಕಾಳು ದಾನ ಕೊಡಿ.

ಮಿಥುನ

ಮಿತವಾದ ಮಾತು ಹಿತವಾದ ನುಡಿ, ಶಿಸ್ತುಬದ್ಧ ಜೀವನ ನಡೆಸುವ ಅಗತ್ಯವಿದೆ. ಮಾತು ಬೆಳ್ಳಿ, ಆದರೆ ಮೌನ ಬಂಗಾರವೆಂದು ಹೇಳುತ್ತಾರೆ. ನಿಮಗೆ ಯಾವುದಕ್ಕೂ ಕಡಿಮೆ ಇಲ. ಗುರು ರಾಹುವಿನ ಸಂಪರ್ಕದಲ್ಲಿದ್ದರೂ 9 ರ ಶನಿಯು ನಿಮಗೆ ಫಲದಾಯಕನಾಗಿರುತ್ತಾನೆ. ನಿಮ್ಮನ್ನು ಯಾರೇ ಬಿಟ್ಟು ಹೋಗಲಿ ಹೊಸ ಶೈಲಿಯ ಜೀವನವನ್ನು ಮೈಗೂಡಿಸಿಕೊಂಡರೆ ಸಂತೋಷ ನಿಮ್ಮದಾಗುತ್ತದೆ. ದೈವ ಬಲ, ಜನ ಬಲ, ಧನಬಲ, ಗ್ರಹ ಬಲ ಎಲ್ಲವೂ ಬಂದು ಸೇರುತ್ತದೆ. ಬೇಲೂರು ಚೆನ್ನಕೇಶವನನ್ನು ಪೂಜಿಸಿ ದೇವರಿಗೆ ಕೆಂಪು ಬಣ್ಣದ ಪೀತಾಂಬರ ಕೊಟ್ಟು ಬನ್ನಿ ಒಳ್ಳೆಯದಾಗುತ್ತದೆ.

ಕಟಕ

ತಲೆನೋವು ಬಂದರೆ ಯೋಚನೆಗಳಿಗೆ ಕಡಿವಾಣ ಹಾಕಬೇಕು. ಕಾಲು ನೋವು ಬಂದರೆ ಕಾಲಿಗೆ ಬುದ್ಧಿ ಹೇಳಬೇಕು. ಅಂದರೆ ಚಟುವಟಿಕೆಗಳನ್ನು ನಿಮ್ಮ ಇತಿಮಿತಿಯಲ್ಲಿ ಇಟ್ಟುಕೊಂಡು ಸಂಯಮ ತಾಳ್ಮೆಯಿಂದ ನಡೆದರೆ ಆರೋಗ್ಯವು ಸುಧಾರಿಸುತ್ತದೆ. ಉಮಾ ಮಹೇಶ್ವರನ ವ್ರತ ಕಥೆಯನ್ನು ಸಂಪೂರ್ಣವಾಗಿ ಓದಿರಿ. ಶ್ರೇಯಸ್ ಅನ್ನು ಬೇಡಿರಿ. ಲೋಕಕ್ಕೆ ಮಾತಾಪಿತರಾದ ಪಾರ್ವತಿ ಪರಮೇಶ್ವರನನ್ನು ಪೂಜಿಸಿ. ಶನಿ ಸ್ತೋತ್ರ ಪಠಿಸಿ.

ಸಿಂಹ

ಧೈರ್ಯಂ ಸರ್ವತ್ರ ಸಾಧನಂ ಅಂದರೆ ಧೈರ್ಯ ಇದ್ದವನಿಗೆ ಕಾಡಿನ ಭಯವು, ಕಳ್ಳರ ಭಯವೂ ಇಲ್ಲ. ಏಕೆಂದರೆ ಸಿಂಹ ರಾಶಿಯಲ್ಲಿ ಹುಟ್ಟಿದವರು ಪರಮ ದೈವಭಕ್ತರು. ಗುರುವನ್ನು ಪೂಜಿಸುವರು ಸೂರ್ಯನನ್ನೂ ಆರಾಧಿಸುವವರಾಗಿರುತ್ತಾರೆ. ಪ್ರಾಥಃಕಾಲದಲ್ಲಿ ಗುರು ಗಣೇಶನನ್ನು ಪೂಜಿಸಿ. ಸರ್ವಸಿದ್ಧಿಯನ್ನು ಪಡೆಯಿರಿ, ಸುಖವಾಗಿರಿ. ತಾಳ್ಮೆಯಿಂದ ಚಾಣಾಕ್ಷತನದಿಂದ ವ್ಯವಹಾರವನ್ನು ದಡ ಸೇರಿಸಲು ದೈವ ಭಕ್ತಿ ಅತ್ಯಗತ್ಯ.

ಕನ್ಯಾ

ಚಂಚಲ ಮನಸ್ಸು, ಮನುಷ್ಯನನ್ನ ಮುಂದೆ ಹೋಗಲು ಬಿಡುವುದಿಲ್ಲ. ಏನನ್ನೂ ಸಾಧಿಸಲು ಬಿಡುವುದಿಲ್ಲ. ಮಲಗಬೇಕಾದ ವೇಳೆಯಲ್ಲಿ ಎಚ್ಚರವಾಗಿದ್ದು, ಬೆಳಕಿನಲ್ಲಿ ನಿದ್ರಾ ದೇವಿಯು ಆವರಿಸುತ್ತಾಳೆ. ಅದು ಅಷ್ಟಮ ಗುರುವಿನ ದೋಷವೆಂದೇ ತಿಳಿದು ಗುರು ಚರಿತ್ರೆಯ ಹದಿನಾಲ್ಕನೇ ಅಧ್ಯಾಯವನ್ನು ಪಾರಾಯಣ ಮಾಡಿ. ದಾನ ಧರ್ಮ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ.

ತುಲಾ

ತುಲಾ ರಾಶಿಯಲ್ಲಿ ಹುಟ್ಟಿದವರು ಅತ್ಯಂತ ದೈವಭಕ್ತರು. ಅದರಲ್ಲೂ ಹೆಣ್ಣು ಮಕ್ಕಳನ್ನು ಸೂಕ್ಷ್ಮ, ಸುಂದರ ಪಿತಾಂಬರ ಉಟ್ಟ ದುರ್ಗಾಪರಮೇಶ್ವರಿ ಎಂದೇ ತಿಳಿಯಬೇಕು. ಜೀವನದಲ್ಲಿ ದುರ್ಗಿಯನ್ನು ನಂಬಿದರೆ ದಡ ಸೇರಿಸುತ್ತಾಳೆ. ಇಂದಿನಿಂದ 15 ದಿನಗಳ ಕಾಲ ನಿಮ್ಮ ಹಿರಿಯರನ್ನು ಸ್ಮರಿಸಿ ಪೂಜಿಸಿ ನಿಮ್ಮ ಮಾತಾಪಿತರು ಹೇಳಿದಂತೆ ಕೇಳಿ ನಡೆಯಿರಿ, ಅವರ ಪಾದಕ್ಕೆ ನಮಸ್ಕರಿಸಿ. ಜೀವನ ಪಾವನವಾಗಿ ಎಲ್ಲ ಕೆಲಸಗಳಲ್ಲಿ ಜಯ ದೊರಕುತ್ತದೆ.

ವೃಶ್ಚಿಕ

ಹರಿಚಿತ್ತ ಸತ್ಯವಾದದ್ದು. ನರಚಿತ್ತ ತಾತ್ಕಾಲಿಕವಾದದ್ದು. ಹರಿಯನ್ನು ಭಜಿಸಿ ಕೊಂಡಾಡಿದರೆ ಏನು ಬೇಕಾದರೂ ಸಿಗುತ್ತದೆ. ಕಷ್ಟಕಾರ್ಪಣ್ಯಗಳು ದೂರವಾಗಿ ಸುಖವಾಗಿರುತ್ತಾನೆ. ಲಕ್ಷ್ಮೀನಾರಾಯಣ ಪಾರಾಯಣ ಮಾಡಿದರೆ ಬೇಕಾದ್ದೆಲ್ಲ ಸಿಕ್ಕು ಆಕಾಶವನ್ನೇ ಮುಟ್ಟುವ ಸಮಯವೂ ಬರುತ್ತದೆ. ಜೀವನದಲ್ಲಿ ಧನದ ಅಗತ್ಯವಿದೆ. ಹಣವನ್ನು ಕೊಡುವವನು ಸುಬ್ರಮಣ್ಯ ದೇವರೇ. ನಿಮ್ಮ ಇಷ್ಟ ದೇವರನ್ನು ಪೂಜಿಸಿ. ಮನೋ ಕಾಮನೆಗಳನ್ನು ಪೂರೈಸಿಕೊಳ್ಳಿ.

ಧನು

ಸಂಪಾತಿ ಹಾಗೂ ಜಟಾಯು ಒಬ್ಬರ ಮೇಲೆ ಒಬ್ಬರು ಹಾರುತ್ತಾ ಜಟಾಯುವಿಗೆ ಎಲ್ಲಿ ತೀಕ್ಷ್ಣವಾದ ಸೂರ್ಯ ಕಿರಣವೂ ಬೀಳುತ್ತದೆ ಎಂದು ಹೆದರಿ ಸಂಪಾತಿ ಅವನನ್ನು ರಕ್ಷಿಸುತ್ತಾನೆ. ಅದರಂತೆ ಜೀವನದಲ್ಲಿ ನಿಮಗೆ ರಕ್ಷಣೆ ಬೇಕಾದರೆ ಗುರುವೇ ಕರ್ಮಗಳನ್ನು ಕಳೆದು ಸತ್ಕರ್ಮಗಳಲ್ಲಿ ನಿಮ್ಮನ್ನು ತೊಡಗಿಸಿ ಧನ ಕೀರ್ತಿಯನ್ನು ಕೊಡುತ್ತಾನೆ. ನಿಮ್ಮ ಸಮಯಕ್ಕಾಗಿ ಕಾಯಿರಿ. ಡಿಸೆಂಬರ್ ನಂತರ ನಿಮ್ಮ ಜೀವನವು ನಾಗಾಲೋಟದಲ್ಲಿ ಸಾಗುತ್ತದೆ. ಮನುಷ್ಯರನ್ನು ತಿದ್ದಬಹುದು. ಕುದುರೆಯನ್ನು ನೀರಿನ ತನಕ ಕೊಂಡೊಯ್ಯಬಹುದು. ಅದರಂತೆ ಹಲವಾರು ಬಾರಿ ಕೊಟ್ಟ ಎಚ್ಚರಿಕೆಯನ್ನು ಮರೆತಿದ್ದೀರಿ. ಸುಂದರ ಕಾಂಡ ಪಾರಾಯಣವನ್ನು ಮಾಡಿದರೆ ಜೀವನವು ಯಶಸ್ಸಿನತ್ತ ಸಾಗುತ್ತದೆ.

ಮಕರ

ಮನುಷ್ಯನ ಜೀವನದಲ್ಲಿ ಕತ್ತಲು ಯಾವಾಗಲೂ ಇರುವುದಿಲ್ಲ. ಕತ್ತಲೆ ಎಂಬುದು ದೇಹ ವಿಶ್ರಾಂತಿಗಾಗಿ. ಆ ಕತ್ತಲನ್ನು ಓಡಿಸಲು ಬೆಳಕಿನ ಸಹಾಯ ಬೇಕಾಗುತ್ತದೆ. ಸಮಯವು ಈಗ ಚೆನ್ನಾಗಿದೆ. ಪ್ರಯತ್ನ ಮಾಡಿದರೆ ನಿಮಗೆ ಬೇಕಾದನ್ನು ಪಡೆದು ಕೊಳ್ಳಬಹುದು. ಸುಖವಾದ ಜೀವನ ಸಾಗಿಸಬಹುದು. ಶನಿಯನ್ನು ಅರ್ಚಿಸಿ. ಗುರು ನರಸಿಂಹನನ್ನು ಆರಾಧಿಸಿ.

ಕುಂಭ

4 ಕಂಬಗಳಿಲ್ಲದೆ ಯಾವ ಪ್ರವೇಶವನ್ನು ಮುಚ್ಚಲಾಗುವುದಿಲ್ಲ. ಈ ವಿಚಾರವನ್ನು ಮನಸ್ಸಲ್ಲಿ ಇಟ್ಟುಕೊಂಡು ನೀವು ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳಲು ದೇವರು ಕೊಟ್ಟ ಛಾವಣಿಯಲ್ಲಿ ದೈವ ಭಕ್ತಿಯನ್ನು ಅಳವಡಿಸಿಕೊಂಡು ನಡೆದರೆ ಕೆಲಸಗಳು ಪರಿಪೂರ್ಣಗೊಳ್ಳುತ್ತದೆ. ಜನ್ಮ ಶನಿಗಾಗಿ ಶನಿಯ ಅಷ್ಟೋತ್ತರ ಪಾರಾಯಣ ಮಾಡಿ. ತಿಲಾ ದಾನ ನೀಡಿ, ಸೋಮವಾರದಂದು ಈಶ್ವರನಿಗೆ ಬಿಲ್ವಾರ್ಚನೆಯನ್ನು ಮಾಡಿಸಿ. ಶುಭವಾಗುತ್ತದೆ.

ಮೀನ

ಮೀನ ರಾಶಿಯವರು ಅನ್ಯರ ಸ್ವಭಾವವನ್ನು ಟೀಕೆ ಮಾಡುತ್ತಾ, ಇನ್ನೊಬ್ಬರ ದೋಷವನ್ನು ಹುಡುಕುವ ಸ್ವಭಾವ ಬಿಟ್ಟು ಯಾವ ಜವಾಬ್ದಾರಿ ಇದ್ದರೂ ಅದು ದೇವರು ಕೊಟ್ಟ ಕೆಲಸವೆಂದು ಮಾಡಿದರೆ ಒಳಿತಾಗುತ್ತದೆ. ದ್ವಿತೀಯದಲ್ಲಿ ರಾಹುವಿನ ಸಂಪರ್ಕದಲ್ಲಿ ಇದ್ದರೂ ನಿಮಗೆ ಕೊಡುವುದನ್ನೆಲ್ಲ ಕೊಟ್ಟಿದ್ದಾನೆ. ದ್ವಾದಶದಲ್ಲಿ ಶನಿ ಇದ್ದರೂ ನಿಮಗೆ ಅಗತ್ಯವಿರುವುದು ಕೊಟ್ಟು ಅನುಕೂಲ ಮಾಡಿಕೊಟ್ಟಿರುತ್ತಾನೆ. ಗುರುವಿನ ಕೃಪೆಯಾದರೆ ಏನು ಸಿಗುವುದಿಲ್ಲ? ನಿಮ್ಮ ಕುಲಗುರುಗಳನ್ನು ಪೂಜಿಸಿ ಪ್ರಾರ್ಥಿಸಿ, ಶ್ರದ್ಧೆಯಿಂದ ಗುರು ದತ್ತಾತ್ರೇಯನನ್ನು ಪೂಜಿಸಿ ಶುಭ ಫಲಗಳನ್ನು ಪಡೆದುಕೊಳ್ಳುತ್ತೀರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net