ಈ ರಾಶಿಯವರು ಬಂದಿದ್ದನ್ನು ಅನುಭವಿಸಿ, ಸುಖವನ್ನು ಹಂಚಿಕೊಳ್ಳಬೇಕು: ವಾರಭವಿಷ್ಯ

Vaara-Bhavishya
Published on
ಮೇಷ

ದ್ವಾದಶದಲ್ಲಿ ಗುರುವಿದ್ದಾನೆ. ಗುರುವು ಮುನಿದರೆ ಹರಿಹರ, ಬ್ರಹ್ಮರು ಏನನ್ನೂ ಮಾಡಲಾಗುವುದಿಲ್ಲ. ಶನಿ ಕೂಡ ತಟಸ್ಥನಾಗಬಹುದು. 2023ನೇ ಇಸವಿ ಮುಗಿಯುವವರೆಗೂ ಗುರುವನ್ನು ಅನಂತವಾಗಿ ಪ್ರಾರ್ಥಿಸಿ, ಸಂತೃಪ್ತಿಗೊಳಿಸಿ. ದೈವಮಾರ್ಗದಲ್ಲಿ ಸಾಗಿದರೆ 11ರ ಶನಿ ಒಳ್ಳೆಯದನ್ನು ಮಾಡಿ 2023ನೇ ಇಸವಿಯಿಂದ ಒಳ್ಳೆಯ ಫಲ ಕಾಣಬಹುದು.

ವೃಷಭ

ಏಕಾದಶದಲ್ಲಿ ಗುರು-ಶುಕ್ರರು ಇದ್ದು, ನಿಮಗೆ ನಿಮ್ಮ ಇಷ್ಟಾರ್ಥವನ್ನು ಪೂರೈಸಿ ಹರಸುತ್ತಾರೆ. ದೈವಗುರು ರಾಕ್ಷಸ ಗುರುವಿನೊಂದಿಗೆ ಬೆರೆತು ಕೆಲವೊಂದು ವಿಚಾರದಲ್ಲಿ ಹಿನ್ನಡೆ, ಅತೃಪ್ತಿ ಉಂಟಾಗಬಹುದು. ಹೆದರಬೇಡಿ, ಹರಿಹರ ಕಾಯದಿದ್ದರೂ ಗುರು ಕಾಯುತ್ತಾನೆ. ಗುರುವಿನ ಅನುಗ್ರಹ, ಮಾರ್ಗದರ್ಶನವನ್ನು ಪಡೆದು ಸುಖವನ್ನು ಕಾಣಿರಿ. ಶ್ರೀಶೈಲ ಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ ಮಾಡಿಸಿ.

ಮಿಥುನ

ಸಮಾನಾಂತರದಲ್ಲಿ ಗುರುವು ದಶಮದಲ್ಲಿ ಇದ್ದು, ಶನಿಯು 9ರಲ್ಲಿ ತಾತ್ಕಾಲಿಕವಾಗಿ ಬಂದಿರುತ್ತಾನೆ. ಅವನ ಉಪಯೋಗವನ್ನು ಪಡೆದುಕೊಂಡು ಸಮಸ್ಯೆ ದೂರ ಮಾಡುತ್ತಾನೆ. ಗುರುಕಟಾಕ್ಷ ಮಧ್ಯಮವಾಗಿದೆ. ಗುರುವಿಗೆ ಪ್ರಾರ್ಥಿಸಿ. ಶನಿಯ ಪ್ರೀತಿಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕಟಕ

ಒಂಬತ್ತರ ಮನೆಯಲ್ಲಿ ನಿಮ್ಮನ್ನು ಕಾಪಾಡಲು ಗುರುವು ಕೊಡುತ್ತಾನೆ. ಕೊಡಿಸುತ್ತಾನೆ. ನೀವು ಕೂಡ ಸಹಾಯಹಸ್ತ ಚಾಚಬೇಕು. 8ರಲ್ಲಿ ಶನಿಯಿದ್ದಾನೆ. ಕೆಲವೊಂದು ಅಡೆತಡೆಗಳು ಎದುರಾಗಿ, ಮನಸ್ಸಿಗೆ ಅಹಿತ, ಕಿರಿಕಿರಿಯನ್ನು ಉಂಟು ಮಾಡಬಲ್ಲವು. ಅದರಿಂದ ಪಾರಾಗಲು ವಿಶೇಷ ಗಮನ ಕೊಡಿ. ಸಾವಿರ ದಾರಿಗಳು ಸಿಗುತ್ತವೆ.

ಸಿಂಹ

ಶನಿ-ಗುರುಗಳು ಬದಲಾಗಿ ಗುರುವು ತನ್ನ ರಾಶಿಯಲ್ಲಿ ಇರುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ವಿಚಾರ ವಿನಿಮಯ ಮಾಡಿ. ಸಂಯಮದಿಂದ ಯೋಚಿಸಿ ಕೆಲಸ ಮಾಡಿದ್ದಲ್ಲಿ ನಿಮಗೆ ಅನುಕೂಲವಾಗುವುದು. ಶನಿಯ ಪ್ರಾರ್ಥನೆ ಇರಲಿ, ಗುರುವಿಗೆ ಪ್ರಾರ್ಥನೆ ಸಲ್ಲಿಸಲು ಮರೆಯದಿರಿ. ಗುರುಪರಂಪರಾ ಸ್ತೋತ್ರ ಪಠಿಸಿ.

ಕನ್ಯಾ

ಶನಿಯು ತಾತ್ಕಾಲಿಕವಾಗಿ ಪಂಚಮದಿಂದ ಷಷ್ಟಕ್ಕೆ ಹೋದರೂ, ಸಪ್ತಮ ಗುರುವು ಆನಂದವನ್ನೂ, ಸುಖವನ್ನೂ ಕೊಡುತ್ತಾನೆ. ಬೇಕಾದ್ದನ್ನು ಪಡೆಯಲು ದೈವಸಹಾಯ ಬೇಕು. ನಿಮಗೆ ನೆರವಾದವರನ್ನು ಮರೆಯಬೇಡಿ. ಕುಲದೇವರನ್ನು ಪ್ರಾರ್ಥಿಸಿ. ಸುಖವನ್ನು ಕಂಡುಕೊಳ್ಳಿ.

ತುಲಾ

ಶನಿ ಚತುರ್ಥದಿಂದ ಪಂಚಮಕ್ಕೆ ಬಂದಿದ್ದಾನೆ. ಚತುರ್ಥ-ಪಂಚಮದಲ್ಲಿ ಶನಿಯು ಸಮಾನಾಂತರ ಫಲ ನೀಡುತ್ತಾನೆ. ಶನಿಯು ಪಂಚಮಕ್ಕೆ ಸ್ವಕ್ಷೇತ್ರದಲ್ಲಿ ಇರುವುದರಿಂದ ಅವನ ಪ್ರಾರ್ಥನೆ ಮಾಡಿ. ಧರ್ಮ, ಸತ್ಯ ಮಾರ್ಗದಲ್ಲಿ ತೊಡಗಿಸಿಕೊಂಡರೆ ನಿಮ್ಮನ್ನು ಕಾಯುತ್ತಾನೆ. ಶನಿಪಿಪ್ಪಲಾ ಸ್ತೋತ್ರವನ್ನು ಪಠಿಸಿ. ತಿಲಾತೈಲವನ್ನು ದಾನ ಮಾಡಿ.

ವೃಶ್ಚಿಕ

ಗುರು ಪಂಚಮದಲ್ಲಿ ಇರುವುದರಿಂದ ನಿಮ್ಮ ಕೆಲಸಗಳು ಯಾವುದೇ ಅಡೆ-ತಡೆಗಳು ಇಲ್ಲದೆ ಮುಂದೆ ಸಾಗುತ್ತವೆ. ಸಾಗುವ ಮಾರ್ಗದಲ್ಲಿ ಏನೇನು ಬಂದು ಸೇರಬೇಕೋ ಅದೆಲ್ಲವೂ ಸಿಗುತ್ತದೆ. ಗುರು ದತ್ತಾತ್ರೇಯನನ್ನು ನಿತ್ಯವೂ ಪೂಜಿಸಿ. ಗುರುಚರಿತ್ರೆಯ 14ನೇ ಅಧ್ಯಾಯವನ್ನು ಓದಿರಿ. 2023ರ ಏಪ್ರಿಲ್ ಒಳಗೆ ಋಣಬಾಧೆಯಿಂದ ಮುಕ್ತಿ ಪಡೆದು ಸಂತೋಷ ಕಾಣಬಹುದು.

ಧನು

ಶನಿಯು ತೃತೀಯಕ್ಕೆ ಬಂದು ನಿಮಗೆ ಮಾರ್ಗವನ್ನು ತೋರಿಸಿ, ಕೈ ಹಿಡಿದು ನಡೆಸುತ್ತಾನೆ. ಧನುರ್-ಮೀನಾಧಿಪತಿ ಅವನ ಸ್ವಂತ ಮನೆಯಲ್ಲಿ ಇರುವುದರಿಂದ ನಿಮ್ಮನ್ನು ದೇವರೇ ರಕ್ಷಿಸುತ್ತಾನೆ. ರಾಹು-ಕೇತುವಿನಿಂದ ಉದ್ವೇಗವೂ ಬೇಡ. ಆತುರದ ನಿರ್ಧಾರಗಳೂ ಬೇಡ. ತಂದೆ-ತಾಯಿಯನ್ನು ಪೂಜಿಸಿ, ವಂದಿಸಿ. ಗುರುಪ್ರಾರ್ಥನೆ ಸದಾ ಇರಲಿ.

ಮಕರ

ಜನ್ಮಶನಿಯು ಕಡೆಯ ಭಾಗದ ಶನಿ ಸಂಚಾರಕ್ಕೆ ಸಜ್ಜಾಗಿದ್ದಾನೆ. ಕಳೆದ ಐದು ವರ್ಷಗಳಿಂದ ಇದ್ದ ದುಃಖ-ದುಮ್ಮಾನ ಇರುವುದಿಲ್ಲ. ಆದರೂ ಮೀತಿ ಮೀರಿದ ಆಸೆ ಅಥವಾ ನಿಲುಕದ ಬಯಕೆ ಬೇಡ. ಇತಿ-ಮಿತಿ ಅರಿತು ಸಂಸಾರ ಸಾಗಿಸಿ. ಶನಿ ಅಷ್ಟೋತ್ತರ ಪಾರಾಯಣವಿರಲಿ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ದಾರಿಯನ್ನು ತೋರಿಸುತ್ತಾನೆ.

ಕುಂಭ

ಜನ್ಮದಲ್ಲಿ ಶನಿ, ದ್ವಿತೀಯ ಗುರು ಇರುವುದರಿಂದ ನಿಮ್ಮ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಟ್ಟಲ್ಲಿ ಗುರುವು ನಿಮಗೆ ರಕ್ಷಣೆಯನ್ನು ಕೊಡುತ್ತಾನೆ. ಸುಖವಾದ ಮಾರ್ಗದಲ್ಲಿ ಸಾಗಿಸುತ್ತಾನೆ. ಅನಂತವಾದ ದೈವಭಕ್ತಿ ಇರಬೇಕು. ಮುಳ್ಳಿನ ಹಾದಿಯ ಬಿಟ್ಟು ಸುಖವಾದ ಮಾರ್ಗದಲ್ಲಿ ನಡೆಸುವವನು ಆ ದೇವರೆ ಎಂಬುದನ್ನು ಮರೆಯದಿರೋಣ. ಬಂದಿದ್ದನ್ನು ಅನುಭವಿಸಿ, ಸುಖವನ್ನು ಹಂಚಿಕೊಳ್ಳಬೇಕು. ರಾಮಾಯಣವನ್ನು ಪಾರಾಯಣ ಮಾಡಿ.

ಮೀನ

ರಾಶ್ಯಾಧಿಪತಿ ಮೀನದಲ್ಲೇ ಇದ್ದು, ದ್ವಾದಶ ಶನಿ ಬಂದಿರುವುದು ಶನಿ ಸಂಚಾರದ ಸೂಚನೆ. ತಾತ್ಕಾಲಿಕವಾಗಿ ಶನಿ ಜುಲೈ 12ರ ನಂತರ ಏಕಾದಶಕ್ಕೆ ಬರುತ್ತಾನೆ. ಅಲ್ಲಿಯವರೆಗೂ ಜೀವನಶೈಲಿಯಲ್ಲಿ ನಿಧಾನವಾಗಿ, ಯೋಚಿಸಿ ಸಾಗಿ. ಶನಿಪ್ರೀತಿಗಾಗಿ ಸೋಮವಾರದಂದು ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ. ಅವನನ್ನು ದರ್ಶಿಸಿ. ನಿಮ್ಮನ್ನು ಕಾಡುವುದನ್ನು ಬಿಟ್ಟು ಕಾಪಾಡುತ್ತಾನೆ. ಹರಿಹರರನ್ನು ಪೂಜಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net