

ಮೇಷ: ಸೂರ್ಯಗ್ರಹಣದ ಛಾಯೆಯು ಸೂರ್ಯನನ್ನು ಮರೆಮಾಡಿ ಎಲ್ಲಾ ಕಡೆ ಪ್ರಭಾವ ಬೀರಲಿದೆ. ಭಾನುವಾರ ಸೂರ್ಯಗ್ರಹಣ ಆಗಿರುವುದರಿಂದ ರಾಷ್ಟ್ರಕ್ಕೆ ಭೀತಿ. ಈ ರಾಶಿಗೆ ಸೂರ್ಯನು ಪಂಚಮದಲ್ಲಿ ಇರುತ್ತಾನೆ. ಸೂರ್ಯನನ್ನು ಪ್ರಾರ್ಥನೆ ಮಾಡಿ ಮುಂದುವರಿದರೆ ಕೆಲಸ ಕೈಗೂಡಿ ಆರೋಗ್ಯವೂ ಚೆನ್ನಾಗಿರುತ್ತದೆ. ಭೂಭಾರವನ್ನು ಭಗವಂತನು ಪರಿಹರಿಸುತ್ತಾನೆ. ಮನಸ್ಸಿನ ಭಾರವನ್ನು ಇಳಿಸಬೇಕಾದರೆ ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಅನಂತವಾಗಿ ಅರ್ಚಿಸಿ.
ವೃಷಭ: ಆರ್ಥಿಕವಾಗಿ ತೊಂದರೆ ಉಂಟಾಗಬಹುದು. ಬರಬೇಕಾದ ಹಣವು ವಿಳಂಬವಾಗಬಹುದು. ಮಹಾಲಕ್ಷ್ಮೀಯನ್ನು ಪೂಜಿಸಿ. ಮನುಷ್ಯನಿಗೆ ಆಮ್ಲಜಕನವು ಎಷ್ಟು ಮುಖ್ಯವೋ ಒಳ್ಳೆಯ ಜೀವನ ನಡೆಸಲು ಧನವೂ ಬೇಕಾಗುತ್ತದೆ. ಮಿಕ್ಕಂತೆ ಗ್ರಹಗಳು ಸುಸ್ಥಿತಿಯಲ್ಲಿದ್ದು, ಯಾವ ನಷ್ಟಕಷ್ಟಗಳು ಬರುವುದಿಲ್ಲ. ಈ ರಾಶಿಯವರು ಇಂದಿನಿಂದ 11 ರಾತ್ರಿಗಳು 3 ದಿನಗಳಾಗಿ ವಿಂಗಡಿಸಿ ಕಾಳಿ- ಲಕ್ಷ್ಮೀ- ಸರಸ್ವತಿಯನ್ನು ಪೂಜಿಸಿದರೆ ಭಾಗ್ಯೋದಯವಾಗುತ್ತದೆ.
ಮಿಥುನ: ಲಗ್ನದಲ್ಲಿ ಗುರುವು ಕೇವಲ ಒಂದೇ ತಿಂಗಳು ಇರುವುದರಿಂದ ಆನಂತರದಲ್ಲಿ ದ್ವಿತೀಯಕ್ಕೆ ಬರುತ್ತಾನೆ. ಅಲ್ಲಿಂದ ಮಿಥುನ ರಾಶಿಯವರಿಗೆ ಜೀವನವು ಸ್ವಲ್ಪ ಮಟ್ಟಿಗೆ ಸುಧಾರಿಸಿ ಮಾಡುವ ಕಾರ್ಯದಲ್ಲಿ ಯಶಸ್ಸು-ಕೀರ್ತಿ ಲಭ್ಯವಾಗುತ್ತದೆ. 9ರಲ್ಲಿ ವಕ್ರನಾದ ಶನಿ ಇದ್ದು ದೈವಬಲದ ಕೊರತೆಯಿಲ್ಲ. ನಿಮ್ಮ ಇಚ್ಛೆಗಳು ಪೂರೈಸುತ್ತದೆ.
ಕಟಕ: ಈ ರಾಶಿಯವರಿಗೆ ದ್ವಾದಶದಲ್ಲಿ ಗುರುವಿರುತ್ತಿದ್ದರೂ, ಕಟಕ ರಾಶಿಗೆ ಗುರು ಉಚ್ಛನಾಗಿದ್ದು, ದ್ವಾದಶದಲ್ಲೇ ಇರಲಿ, ನೀಚ ಸ್ಥಾನದಲ್ಲೇ ಇರಲಿ, ಶಾಶ್ವತ ಫಲವನ್ನೇ ಕೊಡುತ್ತಾನೆ. ಈಶ್ವರ ನನ್ನು ಪೂಜಿಸಲು ಮರೆಯದಿರಿ. ಚಂದ್ರಾಷ್ಟೋತ್ತರ ಸಹಿತ ಪಾರ್ವತಿ ಅಷ್ಟೋತ್ತರ ಪಠಿಸಿ.
ಸಿಂಹ: ಏಕಾದಶದಲ್ಲಿ ಗುರುವು ಇರುವುದರಿಂದ ನಿಮಗೆ ಶೋಭೆ, ಕೀರ್ತಿ, ತೇಜಸ್ಸು ಕೊಡುತ್ತಾನೆ. ಸೂರ್ಯನ ಮನೆಯಾದ ಸಿಂಹ ರಾಶಿಯವರು ಪ್ರಾತಃ ಕಾಲದಲ್ಲಿ ಸೂರ್ಯನಾರಾಯಣನನ್ನು ಪೂಜಿಸಿ, ಆದಿತ್ಯ ಹೃದಯ ಪಾರಾಯಣ ಮಾಡಿದರೆ ಏಳಿಗೆ. ಶತಾಯುಷ್ಯ ಪೂರೈಸುವುದರಲ್ಲಿ ಸಂಶಯವಿಲ್ಲ. ಮನಸ್ಸು ಸ್ಥಿರವಾಗಿರಬೇಕು. ಹೃದಯದಲ್ಲಿ ಪರಮಾತ್ಮನ ವಾಸ ಸದಾ ಇರಲಿ.
ಕನ್ಯಾ: ಈ ರಾಶಿಯವರಿಗೆ ದಶಮ ಗುರು ಮನುಷ್ಯನಿಗೆ ಬೇಕಾದ ಫಲವನ್ನು ಕೊಡದಿದ್ದರೂ, ದೈವ ಬಲ ಹೆಚ್ಚಲು ನೀವು ನಿಮ್ಮ ಕುಲಗುರುಗಳನ್ನು ಸಂದರ್ಶಿಸಿ ಪ್ರತ್ಯೇಕ ದಕ್ಷಿಣಮೂರ್ತಿ ಸ್ತೋತ್ರ ಪಠಿಸಿ. ಕಡಲೆ ಬೇಳೆ ದಾನ ಕೊಟ್ಟು ಜೀವನ ಸಾರ್ಥಕ ಪಡಿಸಿಕೊಳ್ಳಿ, ಆರೋಗ್ಯದ ಕಡೆ ಹೆಚ್ಚು ಗಮನವಿರಲಿ.
ತುಲಾ: ಗ್ರಹಗಳು ವಕ್ರಗತಿಯಲ್ಲಿ ಹಿಂದಕ್ಕೆ ಜರುಗಿದ್ದು ತಾತ್ಕಾಲಿಕವಾಗಿ ಸಂಕಷ್ಟಗಳು ಎದುರಾದಂತೆ ಕಂಡರೂ, ನವೆಂಬರ್ ನಂತರದಲ್ಲಿ ಕೆಲಸದಲ್ಲಿ ಅತ್ಯಂತ ಶ್ರೇಯಸ್ಸನ್ನು ಕಾಣುತ್ತೀರಿ. ಯಶಸ್ಸು, ಧನ, ಕೀರ್ತಿ, ಸಂಪತ್ತನ್ನು ಪಡೆಯಬೇಕಾದರೆ ತುಲಾರಾಶಿಯವರು ದುರ್ಗೆಯನ್ನು ಪೂಜಿಸಲೇಬೇಕು. ದುರ್ಗೆಯೇ ಸಾಗರ ದಾಟಿಸಿ ಸುಖವೆಂಬ ದಡವನ್ನು ಸೇರಿಸುತ್ತಾಳೆ.
ವೃಶ್ಚಿಕ: ಅಲ್ಪ ಕಾಲದ ಕಷ್ಟಗಳು ಹೋಗುವ ಕಾಲ ಬಂದಿದೆ. ಅಕ್ಟೋಬರ್ನಿಂದ 9ನೇ ಮನೆಗೆ ಗುರುಬಂದು ಸೇರುತ್ತಾನೆ. ಸಾಲಸೋಲವು ಬಗೆಹರಿಸಿಕೊಂಡು, ಚಿಂತಿತ ಕಾರ್ಯ ಸುಲಭ ರೀತಿಯಲ್ಲಿ ಆಗಿ ಸಂತೋಷದ ಸಮಯ ನೋಡುತ್ತೀರಿ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಲೇಬೇಕು. ಅವನೊಬ್ಬನೇ ಸಾಕು, ನಿಮ್ಮ ರಥವನ್ನು ಕ್ಷೇಮವಾದ ಜಾಗಕ್ಕೆ ಮುಟ್ಟಿಸಲು.
ಧನಸ್ಸು: ಸಪ್ತಮದಲ್ಲಿ ಗುರುವಿದ್ದು ‘ಸಪ್ತಾಶ್ವ ಸಪ್ತಮೇ ಅರುಣ ಪ್ರಸೀದತು’- ಸೂರ್ಯನ ರಥಕ್ಕೆ ಏಳು ಅಶ್ವಗಳು. ನಿಮಗೆ 7ನೇ ಮನೆಯಲ್ಲಿ ಗುರು ಸಾಕಷ್ಟು ದೈವಬಲ ನೀಡಿ ನಿಮ್ಮನ್ನು ಮುಂದೆ ಕರೆದುಕೊಂಡು ಹೋಗುತ್ತಾನೆ. ಸುಖವಾಗಿರುತ್ತಿರಿ. ತಂದೆಗಿಂತ ಗುರುವಿಲ್ಲ ತಾಯಿಗಿಂತ ದೇವಿಯಿಲ್ಲ. ಅವರನ್ನು ಪೂಜಿಸಿದರೆ ಸಾಕು ನಿಮ್ಮಭಾಗ್ಯ ಚಕ್ರವು ಬೇಕಾದ ಫಲ ನೀಡುತ್ತದೆ.
ಮಕರ: ಈ ರಾಶಿಯವರಿಗೆ ಅಲ್ಪಕಾಲ ಶನಿ ಹಿಂದಕ್ಕೆ ಬಂದಿರುವುದರಿಂದ ಕೆಲಸಕ್ಕೆ ಅಡೆತಡೆ ಉಂಟಾಗುತ್ತದೆ. ಅದನ್ನು ಲೆಕ್ಕಿಸದೆ ತಾತ್ಕಾಲಿಕವಾದ ಗ್ರಹಗಳ ಚಲನೆಗೆ ವಿಚಲಿತರಾಗಬೇಡಿ. ಭಾಗ್ಯವನ್ನು ಕೊಡುವ ದಾತನು ನಿಮಗೆ ಕೊಟ್ಟೇ ಕೊಡುತ್ತಾನೆ. ದೇವರ ಸ್ಮರಣೆ ಇರಲಿ. ನಿಮ್ಮ ಸಮಯಕ್ಕಾಗಿ ಕಾದರೆ ಯಶಸ್ಸನ್ನು ಪಡೆಯುತ್ತೀರಿ.
ಕುಂಭ: ಲಗ್ನಾತ್ ವಕ್ರ ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ. ಆದರೂ ಸುಮ್ಮನೆ ಕುಳಿತಿರುವವರು ನೀವಲ್ಲ, ಏನೇನೋ ಮಾಡಲು ಹೋಗಿ, ಕೈಸುಟ್ಟುಕೊಳ್ಳಬೇಡಿ. ವಿನಮ್ರತೆಯಿಂದ ಶನಿಯ ಸ್ತೋತ್ರ ಪಠಿಸಿ. ಪಂಚಮದಲ್ಲಿ ಗುರುವಿದ್ದು, ನೀವು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಪ್ರಸನ್ನ ವೆಂಕಟೇಶ್ವರನನ್ನು ಪೂಜಿಸಿ.
ಮೀನ: ವಿವಿಧ ಅವತಾರ ತಾಳಿದವನು ಶ್ರೀಮನ್ನಾರಾಯಣನು. ದೈವ ಬಲ ಒಂದಿದ್ದರೆ ಏನನ್ನೂ ಸಾಧಿಸಬಹುದು. ಚತುರ್ಥದಲ್ಲಿ ಗುರು ವಿದ್ದು, ಶನಿಯು 12ರಿಂದ ಲಗ್ನಕ್ಕೆ ನವೆಂಬರ್ನಲ್ಲಿ ಬರುತ್ತಾನೆ, ಒಳ್ಳೆಯ ಸಮಯಕ್ಕಾಗಿ ಕಾದಿರಿ, ಗುರು ರಾಶಿಯಲ್ಲಿ ಹುಟ್ಟಿದ ನಿಮಗೆ ಗುರುವೇ ದಾರಿ. ದತ್ತಮೂಲ ಮಂತ್ರವನ್ನು ಜಪಿಸಿ.