

ಮೇಷ: ಅಲ್ಲಿ ಶಿಷ್ಯನು ಮುನಿಗಳಲ್ಲಿ ಗುರುಚರಿತ್ರೆ ನಿರೂಪಣೆ ಮಾಡಲು ಕೇಳಿಕೊಂಡಾಗ ಗುರುಗಳು, ‘ನಿನಗೆ ದೃಢವಾದ ಗುರುಭಕ್ತಿ ಇಲ್ಲ. ಆದ್ದರಿಂದ ಸಂಕಟಪಡುತ್ತ ಶನಿಯು ಇಲ್ಲದೆ ನಡೆದಿದ್ದೆಯೇ’ ಎಂದಿದ್ದಾರೆ. ಪುಣ್ಯ ತೆಗೆದುಕೊಳ್ಳಬೇಕಾದರೆ ಪೂರ್ವಜನ್ಮದ ಪಾಪ ಕಳೆದಿರಬೇಕು. ದ್ವಿತೀಯದಲ್ಲಿ ಗುರು ಇರುವುದರಿಂದ ನಿಮ್ಮ ಎಲ್ಲ ಸಂಕಟ ದೂರ ಮಾಡಿ ಹರಸಿದ್ದಾನೆ. ತಾಳ್ಮೆಯಿಂದ ಇರಿ. ಭಗವಂತನನ್ನು ಸ್ಮರಿಸಿ.
ವೃಷಭ: ಲಗ್ನದಲ್ಲಿ ಗುರು ಇದ್ದು, ಕೆಲವೊಂದು ಬಾರಿ ದಾರಿ ಕಾಣದೆ, ದಿಕ್ಕು ತಪ್ಪುವ ಸಾಧ್ಯತೆಗಳಿರುತ್ತವೆ. ಕೆಲಸದಲ್ಲಿ ಬಹುಧನ ಬಂದು ಸೇರುವ ಕಾಲ. ಮನುಷ್ಯನಿಗೆ ಕಷ್ಟ ಬಂದಾಗ ದೇವರನ್ನು ಸ್ಮರಿಸಿದರೆ ಅವನೇ ಕಷ್ಟವನ್ನು ದೂರಪಡಿಸುತ್ತಾನೆ. ಲಕ್ಷ್ಮಿಸಹಿತ ಶ್ರೀನಿವಾಸ ದೇವರನ್ನು ಪೂಜಿಸಿರಿ. ಕುಲದೇವರನ್ನು ಪ್ರಾರ್ಥಿಸಿ.
ಮಿಥುನ: ಸ್ವಾಭಾವಿಕವಾಗಿ ಗುರುವು ಕೆಟ್ಟದ್ದನ್ನು ನೀಡುವುದಿಲ್ಲ. ಆದರೆ ಗುರು ದ್ವಾದಶಕ್ಕೆ ಬಂದಿರುವುದರಿಂದ ಮಿತ್ರರು, ಸ್ವಂತದವರು ಎಲ್ಲರೂ ನಿಮ್ಮ ಶತ್ರುಗಳಾಗಿ ಕಾಣುತ್ತಾರೆ. ನೀವು ಶತ್ರುತ್ವವನ್ನು ಬೆಳೆಸದೆ ನಿಮ್ಮ ಕುಲದೇವರನ್ನು ಆರಾಧಿಸಿ. ಚಿತ್ತವನ್ನು ಕಳೆದುಕೊಳ್ಳದೆ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಕಟಕ: ಏಕಾದಶ ಗುರು ಏನನ್ನೂ ಕೊಡಬಲ್ಲ. ‘ಅನ್ನ ಮಯಂ ಪ್ರಾಣಮಯಂ’ ಎಂಬಂತೆ ನಿಮ್ಮ ಸುಖದ ದಿನಗಳು ಮುಂದುವರಿಯಲಿದೆ. ಆರೋಗ್ಯ ಮತ್ತು ಸುಖ ಎರಡೂ ನಿಮ್ಮ ಕೈಯಲ್ಲಿ ಇದೆ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ಉಮಾಮಹೇಶ್ವರನನ್ನು ಪೂಜಿಸಿ, ಪ್ರಾರ್ಥಿಸಿ.
ಸಿಂಹ: ಕುತಂತ್ರವನ್ನು ದೇವರು ಒಪು್ಪವುದಿಲ್ಲ. ಮಂತ್ರದಿಂದ ದೇವತೆಗಳನ್ನು ಒಲಿಸಿಕೊಳ್ಳಬೇಕು. ಸೂರ್ಯನ ಸಹಸ್ರಕಿರಣವೇ ನಿಮ್ಮನ್ನು ಕಾಪಾಡುತ್ತದೆ. ದುಷ್ಟರ ಬಗ್ಗೆ ಚಿಂತೆಯನ್ನು ಬಿಡಿ. ದೈವಾಂಶಸಂಭೂತನಾಗಿ ಅಂತರಂಗದಲ್ಲಿ ವಾಸಿಸುವ ಅನಂತನನ್ನು ಪೂಜಿಸಿ, ಎಲ್ಲವನ್ನೂ ಪಡೆದುಕೊಳ್ಳಿ.
ಕನ್ಯಾ: ಆರನೇ ಮನೆಯ ಶನಿ, ಒಂಬತ್ತನೇ ಮನೆಯ ಗುರು ಸತ್ಯವಂತರನ್ನು ನಿಮ್ಮ ಊಹೆಗೂ ಮಿಗಿಲಾದ ಆನಂದವನ್ನು ಕೊಟ್ಟು ಸಲಹುತ್ತಾನೆ. ಕೊಡಬೇಕಾದನ್ನು ಕೊಟ್ಟು ನಿಮ್ಮ ಪಾಲಿಗೆ ಬಂದದ್ದನ್ನು ಇಟ್ಟುಕೊಂಡರೆ ಸಾಕು ನೀವು ಅನೇಕ ಕಾಲ ಸುಖವಾಗಿ ಇರುತ್ತಿರಿ. ಒಳ್ಳೆಯ ಆರೋಗ್ಯವನ್ನು ಕೊಟ್ಟು ಕಾಪಾಡು ಎಂಬ ನಿತ್ಯ ಪ್ರಾರ್ಥನೆ ಇರಲಿ.
ತುಲಾ: ಅನ್ಯರಿಗಾಗಿ ದುಃಖಿಸುವುದರಿಂದ ಕಾಲ ವ್ಯರ್ಥವು, ಪುಣ್ಯದ ಕ್ಷೀಣವು ಏರ್ಪಡುತ್ತದೆ. ಗ್ರಹಗಳು ತಕ್ಕ ಮಟ್ಟಿಗೆ ಇದ್ದರೂ, ಶನಿ, ಗುರು ವಕೃತ್ವದ ಮೇಲೆ ಅವಲಂಬಿಸಿದ್ದರೂ, ನೀವು ಜಾಣ್ಮೆಯಿಂದ ವರ್ತಿಸಿದರೆ ನಿಮಗೆ ಕಷ್ಟವೆಂಬುದು ಇಲ್ಲವಾಗುತ್ತದೆ. ತ್ರಿಲೋಕರಕ್ಷಕನಾದ ಶ್ರೀಕೃಷ್ಣನನ್ನು,ನಾಗೇಂದ್ರ ದೇವರನ್ನು ಪೂಜಿಸಿ.
ವೃಶ್ಚಿಕ: ದೇಹ, ಮನಸ್ಸಿನಲ್ಲಿ ಚೈತನ್ಯ ಇದ್ದಾಗಲೇ ಮನುಷ್ಯನು ವ್ಯವಹಾರದ ಚಿಂತೆಯನ್ನು ಮಾಡಬೇಕು. ಭಗವಂತನಿಗೆ ದಾಸನಾಗಬೇಕು. ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಂಡು ದಡವನ್ನು ಸೇರಬೇಕು. ವಿಹಿತವಾಗಿ ಖರ್ಚು ವೆಚ್ಚಗಳನ್ನು, ಉದ್ಯೋಗ, ವ್ಯಾಪಾರದಲ್ಲಿ ಸಾಲವಿದ್ದಲ್ಲಿ ಅದಕ್ಕೆ ಅದ್ಯತೆ ಕೊಟ್ಟು ಸಪ್ತಮ ಗುರುವಿನ ಫಲ ಪಡೆಯಬಹುದು. ಸುಬ್ರಮಣ್ಯ ದೇವರನ್ನು ಪ್ರಾರ್ಥಿಸಿ.
ಧನಸ್ಸು: ನಿಮ್ಮ ಕ್ಷೇಮಕ್ಕಾಗಿ, ಲೋಕಕಲ್ಯಾಣಕ್ಕಾಗಿ ನಿತ್ಯವೂ ಗುರುಭಕ್ತಿಯನ್ನು ಮಾಡ ಲೇಬೇಕು. ಗ್ರಹಗಳ ಸಂಯೋಜನೆ ಹೇಗಾದರೂ ಇರಲಿ ಗುರು ಕೃಪೆ ಒಂದು ಇದ್ದರೆ ಏನನ್ನೂ ಸಾಧಿಸಬಹುದು. ವ್ಯವಹಾರಗಳನ್ನು ಸಮತೋಲನದಲ್ಲಿ ಮುನ್ನಡೆಸಿಕೊಂಡು ಬೇಕಾದ ಕಾರ್ಯಗಳನ್ನು ಮಾಡಿಕೊಳ್ಳಬಹುದು. ನಿತ್ಯ ಗುರುಚರಿತ್ರೆಯ ಒಂದು ಅಧ್ಯಾಯದ ಪಾರಾಯಣವಿರಲಿ.
ಮಕರ: ರಾಶಿಯವರು ಮಂದಹಾಸ ಬೀರುತ್ತ ಸಾಗಿದರೆ ಪರಮಾತ್ಮನು ಒಲಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅಂದರೆ ನಗುಮುಖದಿಂದ ಕೆಲಸವು ಜಯದ ಹಾದಿ ಹಿಡಿಯ ಬೇಕಾದರೆ, ಶನಿ ಕೊಟ್ಟ ಕಷ್ಟ ಕಳೆಯಬೇಕಾದರೆ ಶ್ರೀರಾಮನನ್ನೇ ಪೂಜಿಸಬೇಕು.
ಕುಂಭ: ಪರಮಾತ್ಮನನ್ನು ನೀವು ದೃಢಭಕ್ತಿಯಿಂದ ಆರಾಧಿಸಿದರೆ,ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಲಗ್ನದಲ್ಲಿ ಶನಿ ಇರುವುದರಿಂದ ಗಣೇಶನನ್ನು ಪ್ರಾರ್ಥಿಸಿ. ವರಸಿದ್ಧಿ ವಿನಾಯಕನನ್ನು ಪ್ರಾರ್ಥಿಸಿ, ಕಷ್ಟ ಕಳೆದುಕೊಳ್ಳಿ. ಶನಿ ಕೊಡುವ ವಿಘ್ನಗಳನ್ನು ದೂರ ಮಾಡಿ ನಿಮ್ಮನ್ನು ಕಾಪಾಡುತ್ತಾನೆ. ಈ ಮಂತ್ರ ಜಪಿಸಿ: ಅಚಿಂತ್ಯಾವ್ಯಕ್ತ ರೂಪಾಯ ನಿರ್ಗಣಾಯ ಗುಣಾತ್ಮನೇ | ಸಮಸ್ತ ಜಗದಾಧಾರ ಮೂರ್ತಯೇ ಬ್ರಹ್ಮಣೆ ನಮಃ ||
ಮೀನ: ರಾಶಿಯವರು ದ್ವಿತೀಯದಲ್ಲಿರುವ ಅಂಗಾರಕನನ್ನು ಪೂಜಿಸಿ. ನೆಮ್ಮದಿಯ ಜೀವನ ಸಾಗಿಸಲು ಪರಮಾತ್ಮನ ಕೃಪೆ ಬೇಕೇಬೇಕು. ಪಾರ್ವತಿಸಹಿತ ಸಾಂಬಸದಾಶಿವನನ್ನು ಆರಾಧಿಸಿ. ಆರೋಗ್ಯ, ಒಳ್ಳೆಯ ಜೀವನ ನಡೆಸಲು ಬೆಳಕನ್ನು ಕೊಡುತ್ತಾನೆ. ನಂಜನಗೂಡಿನ ಶ್ರೀಕಂಠೇಶ್ವರನನ್ನು ಪ್ರಾರ್ಥಿಸಿ. ಸಾಧ್ಯವಾದಲ್ಲಿ ದರ್ಶನ ಪಡೆಯಿರಿ