

ಮೇಷ: 9.2.2025ರಂದು ಭೀಷ್ಮ ದ್ವಾದಶಿ, ಭೀಮಸೇನಾ ಜಯಂತಿ ಆಚರಿಸುವ ವಾಡಿಕೆ ಇದೆ. ಆದರೆ ಮಹಾಭಾರತ ಹಾಗೂ ರಾಮಾಯಣಕ್ಕೆ ಅತ್ಯಂತ ಪ್ರಾಶಸ್ಱವಿರುತ್ತದೆ. ನೀವು ಕೆಲಸವನ್ನು ಅಧಿಕ ಪ್ರಯತ್ನದಿಂದ ಮಾಡಬೇಕು. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ನಿಮಗೆ ಸದ್ಯ ಶನಿ ಸಂಚಾರದ ದುಷ್ಪಲಗಳು ಬರುವುದಿಲ್ಲ. ಭಾಗವತ ಪಾರಾಯಣ ಮಾಡಿರಿ.
ವೃಷಭ: ರಾಶಿಯವರಿಗೆ ಕೆಲವೊಂದು ವಿಚಾರಗಳಲ್ಲಿ ಜಯವು ಸಿಗದಿದ್ದರೂ, ಕೆಲಸಗಳು ಆಗಲಿಲ್ಲ ಎಂದುಕೊಂಡರೂ ದೈವಸಂಕಲ್ಪದಲ್ಲಿ ನಿಮಗೆ ಒಳಿತಾಗುವ ಕಾರಣವಿರುತ್ತದೆ. ಗ್ರಹಗಳು ಕೊಡುವ ಶುಭಫಲಕ್ಕೆ ಮಾ. 29ರವರೆಗೆ ಕಾಯಬೇಕು. ಅನಂತ ಪದ್ಮನಾಭನನ್ನು ದರ್ಶಿಸಿದರೆ ಒಳ್ಳೆಯ ಕಾಲವು ನಡೆಯುತ್ತದೆ.
ಮಿಥುನ: ರಂಗನಾಥನೊಬ್ಬನೇ ಮಿಥುನ ರಾಶಿಯವರನ್ನು ಕಾಪಾಡಬಲ್ಲನು. ಮನುಷ್ಯನ ಆಗು ಹೋಗುಗಳಿಗೆ ಭಕ್ತಿಯಿಂದ ಪೂಜಿಸಿದಲ್ಲಿ ಎದ್ದು ಬಂದು ಅವನೇ ಕಾಪಾಡುತ್ತಾನೆ. ಎಲ್ಲಾದರೂ ಒಂದು ಕಡೆ ಹೋಗಿ ಶ್ರೀರಂಗನನ್ನು ದರ್ಶಿಸಿ ಬನ್ನಿ. ತುಳಸಿ ಅರ್ಚನೆ ಮಾಡಿಸಿ. ನಿತ್ಯವೂ ಭಗವದ್ಗೀತೆಯ 4ನೇ ಅಧ್ಯಾಯ ಪಠಿಸಿ.
ಕಟಕ: 11ರ ಗುರು ಎಲ್ಲ ಶುಭವನ್ನು ನೀಡುತ್ತಾನೆ. ಅಷ್ಟಮ ಶನಿಯಿಂದ ಅಡಚಣೆ ಇದ್ದರೂ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ರುದ್ರನೇ ಗುರುವಾಗಿ ಏಕಾದಶ ಸ್ಥಾನದಲ್ಲಿ ಕುಳಿತಿದ್ದಾನೆ. ಸದಾ ಶಿವಪಾರ್ವತಿಯನ್ನು ಧ್ಯಾನ ಮಾಡಿ. ಎಲ್ಲವೂ ಸಿಕ್ಕಿ ಸಂತೋಷವೂ ನಿಮ್ಮ ಬೆನ್ನ ಹಿಂದೆ ಇರುತ್ತದೆ.
ಸಿಂಹ: ಸಿಂಹವು ಕಾಡಿನಲ್ಲಿರುವಾಗ ಭಯಂಕರವಾಗಿರುತ್ತದೆ. ಈ ತತ್ವವನ್ನು ಅರಿತು ಗುರಿ ಬಿಡದೆ ನಿಮ್ಮ ಕೆಲಸದಲ್ಲಿ ಮುಂದೆ ಸಾಗಿದರೆ ಸಿಂಹವಾಹಿನಿ ದುರ್ಗೆಯೇ ಕಾಪಾಡುತ್ತಾಳೆ. ಸೂರ್ಯ ನಾರಾಯಣನನ್ನು ಪೂಜಿಸಿ. ಆದಿತ್ಯ ಹೃದಯ 11 ಬಾರಿ ಪಾರಾಯಣ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸುತ್ತದೆ.
ಕನ್ಯಾ: ಈಗಿನ ಗುರು-ಶನಿ ಗ್ರಹಗಳ ಸ್ಥಿತಿಯು ಅನುಕೂಲವಿದ್ದಾಗ ಸುಖ ಸಂತೋಷ ವೃದ್ಧಿಸಿಕೊಳ್ಳಿ. ಕನ್ಯಾ ಮಾಸದಲ್ಲಿ ನರಸೋಬವಾಡಿಯಲ್ಲಿ ಇರುವ ಸಂಗಮದಲ್ಲಿ ಮಿಂದು ಪೂರ್ವಜರಿಗೆ ತಿಲತರ್ಪಣ ಮಾಡಿದಲ್ಲಿ ಶ್ರೇಯಸ್ಸು ಒದಗಿ ಬರುತ್ತದೆ. ಒಳ್ಳೆಯ ಫಲವೇ ದೊರೆಯುತ್ತದೆ.
ತುಲಾ: ಈ ರಾಶಿಯವರಿಗೆ ಪಂಚಮದಿಂದ ಶನಿಯು ಷಷ್ಠಕ್ಕೆ ತೆರಳಿ ನಿಮ್ಮ ಭಾಗ್ಯದ ಬಾಗಿಲು ತೆರೆದು ಕನಕಧಾರೆಯು ನಿಮಗೆ ಹರಿದು ಬರುತ್ತದೆ. ಕನಕಧಾರಾ ಸ್ತೋತ್ರ ಪಠಿಸಿ, ಕೊಲ್ಹಾಪುರದ ಮಹಾಲಕ್ಷ್ಮೀಯನ್ನು ದರ್ಶಿಸಿ ಬನ್ನಿ. ಎಲ್ಲವೂ ಚೆನ್ನಾಗಿದೆ. ಸುಖಕ್ಕೆ ಸಮಯವನ್ನು ಅನುಭವಿಸಿ.
ವೃಶ್ಚಿಕ: ಶನಿ ಚತುರ್ಥದಿಂದ ಪಂಚಮಕ್ಕೆ ಹೋಗುವ ಕಾಲ. ಶನಿ ಸ್ವಕ್ಷೇತ್ರದಲ್ಲಿದ್ದು ಆಗುವ ಕೆಲಸ ನಿಲ್ಲುವುದಿಲ್ಲ. ಆದರೆ ಪ್ರಯತ್ನವು ದ್ವಿಗುಣವಾಗಿರಬೇಕು. ಷಣ್ಮುಖನ ಪ್ರಾರ್ಥನೆ ಅಗತ್ಯ. ಪಂಚಮಕ್ಕೆ ಶನಿಯು ಬರುವ ಮುನ್ನ ತಿರುಚಂದೂರಿಗೆ ತೆರಳಿ ದೇವರನ್ನು ದರ್ಶಿಸಿ ಬನ್ನಿ. ಧನದ ಕೈಚೀಲ ನಿಮ್ಮ ಕೈಯಲ್ಲಿ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಧನಸ್ಸು: ಗುರುವು 7ನೇ ಮನೆಗೆ ಬರಲಿ. ಅಲ್ಲಿಯವರೆಗೆ ಯಥಾ ಸ್ಥಿತಿಯಲ್ಲಿ, ಯಥಾವಿಧಿಯಲ್ಲಿ ಪೂಜೆಯನ್ನು ಮಾಡಿರಿ. ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಯಾರ ಆಸರೆ ಇಲ್ಲದೆ ಜೀವನ ನಡೆಸುವ ಬಲ ನಿಮ್ಮಲ್ಲಿದೆ. ಏಕೆಂದರೆ ಗುರು ನಿಮ್ಮ ರಾಶ್ಯಾಧಿಪತಿಯಾಗಿದ್ದಾನೆ. ನಿತ್ಯ ಗುರುಪೂಜೆ ಮಾಡಿರಿ.
ಮಕರ: ಶನಿ ದೃಷ್ಟಿಯು ಮುಂದಿದೆ. ಉಳಿದಿರುವ ಶನಿ ಸಂಚಾರದಲ್ಲಿ ನಿಮ್ಮ ದಿನಚರಿ ಹಾಕಿಕೊಂಡರೆ ನಿಮ್ಮ ಅಡಿಪಾಯ ಸರಿಯಾಗಿ ಶನಿಯು ಮುಂದೆ ಸಾಗಿದ ನಂತರ ಭವ್ಯವಾದ ಅರಮನೆಯನ್ನೇ ಕಟ್ಟಬಹುದು. ಶನಿಯನ್ನು ಹಾಗೂ ಮೀನಾಕ್ಷಿ ಸುಂದರೇಶ್ವರನನ್ನು ಪ್ರಾರ್ಥಿಸಿ ಪೂಜಿಸಿ.
ಕುಂಭ: ಮನುಷ್ಯನಿಗೆ ಛಲವಿದ್ದರೆ ಸಾಲದು. ಬಲವಿರಬೇಕು. ಬಲವಿದ್ದರೆ ಸಾಲದು. ಸತ್ ಸಂಕಲ್ಪವಿರಬೇಕು. ನಿಮ್ಮ ಮನೋ ಇಚ್ಛೆ ಪೂರ್ಣಗೊಳ್ಳಬೇಕಾದರೆ ದೇವರ ಕೃಪೆ, ಪಿತೃಗಳ ಆಶೀರ್ವಾದ ನಿಮಗೆ ಸಹಾಯ ಮಾಡುವುದು. ಆನಂದವನ್ನು ಅನುಭವಿಸಲು ಪುಣ್ಯವಿರಬೇಕು. ದೇವತಾ ಪೂಜೆಯೂ ಜತೆಗಿರಬೇಕು.
ಮೀನ: ಬೆಳಕಿಗೆ ಸಮನಾದ ಪದವಿಲ್ಲ. ಸೂರ್ಯನ ಬೆಳಕು ಆಚೆ ಇದ್ದರೂ ಪರದೆ ಹಾಕಿ ಒಳಗೆ ಕತ್ತಲೆ ಮಾಡಬಹುದು. ಹಾಗೆಯೇ ನಿಮ್ಮ ಆತ್ಮ ಜ್ಯೋತಿಯನ್ನು ಬೆಳಗಿಸಿ. ಶನಿಯು ಲಗ್ನಕ್ಕೆ ಬಂದಾಗ ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆಯಾಚಿಸಿ, ಧೈರ್ಯದಿಂದ ಮುನ್ನುಗ್ಗಿ, ವಿನಾಯಕನನ್ನು ಪೂಜಿಸಿ.