ವಾರಭವಿಷ್ಯ: ಹೀಗಿದೆ ನೋಡಿ 12 ರಾಶಿಗಳ ಫಲಾಫಲ

ವಾರಭವಿಷ್ಯ: ಹೀಗಿದೆ ನೋಡಿ 12 ರಾಶಿಗಳ ಫಲಾಫಲ
Published on

ಮೇಷ: ಇದೇ ಮೂರನೇ ತಾರೀಕಿನಿಂದ 9ನೇ ತಾರೀಕಿನವರೆಗೂ ಕಾರ್ತಿಕ ಮಾಸದ ಮಧ್ಯ ಭಾಗವು ನಡೆಯುತ್ತದೆ. ಭಾನುವಾರ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಮಾಡಿ ಹೆಣ್ಣು ಮಕ್ಕಳು ಸುಖ ಸೌಭಾಗ್ಯವನ್ನು ಕರುಣಿಸು ಎಂದು ಮಹಾವಿಷ್ಣುವನ್ನು ಬೇಡುತ್ತಾರೆ. ವಿಷ್ಣುವನ್ನು ಆರಾಧಿಸಿ. ಸಕಲ ಸುಖ ಸಂಪತ್ತು ಕೊಟ್ಟು ಹರಸುತ್ತಾನೆ.

ವೃಷಭ: ನ. 5ರ ಹುಣ್ಣಿಮೆಯನ್ನು ದೊಡ್ಡ ಗೌರಿ ಹುಣ್ಣಿಮೆ ಎನ್ನುತ್ತಾರೆ. ಗೌರಿ ಪೂಜೆಯಿಂದ ಸಕಲ ಸೌಭಾಗ್ಯ ಪಡೆಯಿರಿ. ನ. 3ರಂದು ಕಾರ್ತಿಕ ಮಾಸದ ಸೋಮವಾರ ಪೂಜೆ ಮಾಡಿರಿ. ದುಷ್ಟಾಕ್ಷರ ಅಳಿಸಿ ಶುಭಾಕ್ಷರ ಬರೆಯುವವರು ಹರಿಹರರೇ. ಈಶ್ವರನನ್ನು ಪೂಜಿಸಿದರೆ ಯಾರಿಗೂ ಹೆದರುವ ಅಗತ್ಯವಿಲ್ಲ. ಆಡುವ ಮಾತುಗಳು ಮುತ್ತಿನಂತಿರಬೇಕು.

ಮಿಥುನ: ನ. 5ರಂದು ಕಾರ್ತಿಕ ಮಾಸದ ಹುಣ್ಣಿಮೆ. 4 ಮಾಸಗಳ ಚಾತುರ್ವಸ ವ್ರತ ಮುಗಿಯುವ ಕಾಲ. ಬುಧವಾರ ಭರಣಿ ಮಧ್ಯದಲ್ಲಿ ಪೌರ್ಣಮಿ ಬರುತ್ತದೆ. ನ. 4ರ ಚತುರ್ದಶಿಯಂದು ವಿಷ್ಣು ನಾಮ ಜಪ ಮಾಡಿ. ಎಲ್ಲ ಸುಖ ಅನುಭವಿಸಿ. ಆರೋಗ್ಯ, ಆಯಸ್ಸು ಸಂತೋಷವನ್ನು ಕೊಟ್ಟು ದೇವರು ಹರಸುತ್ತಾನೆ.

ಕಟಕ: ಈ ರಾಶಿಯವರಿಗೆ ಲಗ್ನದಲ್ಲಿ ಗುರು ಇದ್ದು, ಶುಭಾಂಶ ಹೊಂದಿರುತ್ತಾನೆ. ಗುರು ಚರಿತ್ರೆ 14ನೇ ಅಧ್ಯಾಯ ಪಾರಾಯಣ ಹಾಗೂ ವ್ಯಾಸ ಪೂಜೆ ಸಮಾಪ್ತಿ ಕೂಡಿ ಬಂದಿರುವುದರಿಂದ ಮಹಾ ವಿಷ್ಣುವಿನ ದಶಾವತಾರದ ಭಗವದ್ಗೀತೆ ಅಥವಾ ವೈಕುಂಠ ಏಕಾದಶಿ ವ್ರತ ಕಥೆ ಓದಿದರೆ ಒಳ್ಳೆಯ ಫಲವಿದೆ.

ಸಿಂಹ: ಲಗ್ನಕ್ಕೆ 12ರಲ್ಲಿ ಗುರು. ಸುಮ್ಮನೆ ಕೂತರೂ ವಿಷಯ ಅಲೆಯಂತೆ ಬಂದು ತನ್ನ ಕೆಲಸ ಮಾಡುತ್ತಿರುತ್ತದೆ. ಸ್ವತಂತ್ರ ಬುದ್ಧಿಯಿಂದ ನೀವು ಗುರುವನ್ನು ನೋಡಬಲ್ಲಿರಿ. ದೇವಾನುಗ್ರಹಕ್ಕೆ ಪಾತ್ರರಾಗುವ ಏಕೈಕ ರಾಶಿ ನಿಮ್ಮದು. ಕೆಲಸದ ಒತ್ತಡದಲ್ಲಿ ದೇವರನ್ನು ನಂಬಿ ಸಾಗಿರಿ. ಶಿವಪೂಜೆ ಮುಂದುವರೆಸಿ. ಸೂರ್ಯ ಅಷ್ಟಕ ಪಾರಾಯಣ ಮಾಡಿ.

ಕನ್ಯಾ: ಈ ರಾಶಿಯವರಿಗೆ 11ರ ಗುರು ಭೋಗಭಾಗ್ಯ ತರುತ್ತಾನೆ. ನ. 11ರಿಂದ ಗುರು ವಕ್ರನಾಗಿ ದಶಮದಲ್ಲಿ ಇರುತ್ತಾನೆ. ಕಾರ್ಯ ನಿಧಾನ, ಗುರು ಬಲ ಕಡಿಮೆ. ಸಪ್ತಮ ಅಷ್ಟಮ ಶನಿ ಸಂಚಾರವಿದೆ. ಅರಿತು ಹೆಜ್ಜೆ ಹಾಕಿ. ಯಾರಿಗೂ ನೋವಾಗದಂತೆ ನಡೆದುಕೊಳ್ಳಿ. ವಚನಭ್ರಷ್ಟರಾಗಬೇಡಿ. ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮ ಎಂಬ ಅಡಿಪಾಯದಲ್ಲಿ ದೇವರನ್ನು ಪೂಜಿಸಬೇಕು. ಎಚ್ಚರಿಕೆಯಿಂದ ಸಾಗಿರಿ.

ತುಲಾ: ರಾಶಿಯಲ್ಲಿ ಶುಕ್ರ ಇದ್ದು ಆರರ ಶನಿ ಗುರು ದಶಮದಲ್ಲಿ ಇದ್ದಾನೆ. ಬಾಣಕ್ಕೆ ಗುರಿಯಿರಬೇಕು. ದೈವವೆಂಬ ಬಾಣ ಹೂಡಲು ಭಕ್ತಿ ಇರಬೇಕು. ಯಾವುದೇ ವಿದ್ಯೆ ಅಪೂರ್ಣವಾಗಿ ಕಲಿತರೆ ಫಲವಿಲ್ಲ. ಅನ್ನವೊಂದಿದ್ದರೆ ಊಟವಾಗುವುದಿಲ್ಲ. ಭಕ್ತಿಯೊಂದಿಗೆ ದೇವರ ಧ್ಯಾನವೂ ಮುಖ್ಯ. ದುರ್ಗಾ ಸಹಸ್ರನಾಮ ಪಠಿಸಿ. ದುರ್ಗೆ ಕಾಪಾಡುತ್ತಾಳೆ.

ವೃಶ್ಚಿಕ: 9ರ ಗುರು ಕಟಕ ರಾಶಿಯಲ್ಲಿ ಶುಭಫಲ ನೀಡುತ್ತಾನೆ. ಶನಿ 5ನೇ ಮನೆ ಸೇರಿದ್ದು, 4 ಮತ್ತು 5ನೇ ಮನೆಯಲ್ಲಿ ಎಲ್ಲವೂ ನಮ್ಮಂತೆ ಆಗದಿದ್ದರೂ ದೈವಕಟಾಕ್ಷ ಒಂದಿದ್ದರೆ ಶಾಪ ತಾಪ ಕಳೆದು ಧನಾನುಕೂಲ ಉಂಟಾಗುತ್ತದೆ. ಗುರುವಿಗೆ ಸರಿಸಾಟಿಯಾದುದಿಲ್ಲ. ಗುರುವನ್ನು ಪೂಜಿಸಿ.

ಧನಸ್ಸು: ಈ ರಾಶಿಯವರಿಗೆ ಅಷ್ಟಮದಲ್ಲಿ ಗುರು ಇರುವುದರಿಂದ ದೇಹಾಲಸ್ಯ, ಜಡತ್ವ ಬಂದು ಕೆಲವೊಮ್ಮೆ ನಿಲ್ಲಲು ಕೂರಲು ಆಗದೇ ನೋವು ಉಂಟಾಗಬಹುದು. ಅದನ್ನು ನಿವಾರಿಸುವವನು ಒಬ್ಬನೇ. ಅದೇ ಸುಬ್ರಮಣ್ಯ ದೇವರು. ಒಳ್ಳೆಯ ಫಲ ಪಡೆಯಲು ಷಣ್ಮುಖನನ್ನು ಕುಕ್ಕೆಯಲ್ಲಿ ದರ್ಶಿಸಿ ಬನ್ನಿ. ಜೀವನದ ಹೊಸ ರೂಪ ತೋರಿ ಹಸಿರು ಮಾರ್ಗದಲ್ಲಿ ನಡೆಸುತ್ತಾನೆ.

ಮಕರ: ಗುರು 7ರಲ್ಲಿದ್ದಾನೆ. ಗುರುವನ್ನು ಪೂಜಿಸಿ. ಗುರು ಅಷ್ಟೋತ್ತರ ಪಠಿಸಿ. ರಾಘವೇಂದ್ರ ಸ್ವಾಮಿಯವರನ್ನು ಮಂತ್ರಾಲಯದಲ್ಲಿ ಅಥವಾ ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿ ದರ್ಶಿಸಿ. ಕರ್ಮ ಕಳೆದು ಕೆಲಸ ಮುಂದೆ ಸಾಗುತ್ತದೆ. ಸನ್ಯಾಸಾಶ್ರಮದ ಉತ್ತುಂಗಕ್ಕಿರುವ ಉತ್ತರಾದಿಮಠದ ಸತ್ಯಾತ್ಮತೀರ್ಥರನ್ನು ದರ್ಶಿಸಿ. ಪುಣ್ಯಪುರುಷರ ಪಾದ ಸ್ಪರ್ಶದಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಕುಂಭ: ಪವಿತ್ರವಾದ ಶುದ್ಧ ಜಲವನ್ನು ಕುಡಿಯಲು, ಸ್ನಾನ ಮಾಡಲು ಪುಣ್ಯ ಇರಬೇಕು. ಶನಿ ಸಂಚಾರ 2 ವರ್ಷ ಇರುವುದರಿಂದ ಗಾಣಗಾಪುರದಲ್ಲಿರುವ ಅಷ್ಟತೀರ್ಥದಲ್ಲಿ ಸ್ನಾನ ಮಾಡಿ. ಹನುಮಾನ್ ಚಾಲೀಸಾ 11 ಬಾರಿ ಓದಿ. ದತ್ತನನ್ನು ದರ್ಶಿಸಿ. ಶನಿ ಕಾಟದ ತಾಪ ದೂರ ಸರಿದು ಬೆಳಕಿನ ದಾರಿ ತೋರಿಸುತ್ತಾನೆ.

ಮೀನ: ನಾನು, ನನ್ನದು ಎಂಬುದು ನಮ್ಮ ಪರಿಕಲ್ಪನೆ. ‘ನಾನು’ ಶಬ್ದಕ್ಕೆ ಅರ್ಥವಿಲ್ಲ. ‘ನಾವು’ ಎಂದರೆ ದೇವರೇ ನಮ್ಮ ಆತ್ಮ ಸೇರುತ್ತಾನೆ. ಜೀವಾತ್ಮ ಪರಮಾತ್ಮ ಒಂದೇ. ಪರಮಾತ್ಮನನ್ನೇ ಹೃದಯ ಮಂದಿರದಲ್ಲಿ ಇರಿಸಿ. ಗುರು ಪರಂಪರೆಯನ್ನು ಪೂಜಿಸಿ. ಗುರುವಂಶವನ್ನು ಅರಿತು ಪುಣ್ಯಾತ್ಮರ ಅಧಿಷ್ಠಾನಕ್ಕೆ ಹೋಗಿ 1 ಗಂಟೆ ಮೌನವಾಗಿ ಕುಳಿತು ಪ್ರಾರ್ಥಿಸಿ. ಶನಿಯ ತಾಪ ಕಡಿಮೆಯಾಗಿ ಪಂಚಮ ಗುರು ಸದ್ಯದ ಫಲ ಕೊಡಬೇಕಾದರೆ ಈ ಮಾರ್ಗ ಅನುಸರಿಸಬೇಕು. ದೇವರೇ ಸದ್ಬುದ್ಧಿ ಕೊಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net