

ಮೇಷ: ಶ್ರಾವಣ ಮಾಸವು ಶುಭ ಶುಕ್ರವಾರದೊಂದಿಗೆ ಆರಂಭವಾಗಿದ್ದು, ಹಬ್ಬ- ಹರಿದಿನಗಳು, ವ್ರತಾದಿ ಗಳನ್ನು ಮಾಡುವ ಸಮಯ. ಶನಿಯು ವಕ್ರನಾಗಿ ಏಕಾದಶ ಫಲವನ್ನು ನೀಡುತ್ತಿದ್ದಾನೆ, ನಿಂತು ಹೋದ ಕೆಲಸಗಳು ಮುಂದುವರಿದು ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡು ನಿಟ್ಟುಸಿರು ಬಿಡುವ ಕಾಲ. ಆದರೆ ಏಳೂವರೆ ವರ್ಷದ ಶನಿ ಸಂಚಾರ ಪ್ರಾರಂಭವಾಗಿದ್ದು ಎಚ್ಚರಿಕೆಯಿಂದ ಸಾಗಬೇಕು. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪ್ರಾರ್ಥಿಸಿದರೆ ಕೆಲಸದಲ್ಲಿ ಮುನ್ನಡೆ.
ವೃಷಭ: ದ್ವಿತೀಯದಲ್ಲಿ ಗುರುವು ಶುಕ್ರನೊಂದಿಗಿದ್ದು, ಸಕಾರಾತ್ಮಕ ಚಿಂತನೆಯಿಂದ ವ್ಯಾಪಾರದಲ್ಲಿ ಲಾಭವನ್ನು, ಸರ್ವತೋಮುಖ ಬೆಳವಣಿಗೆಯನ್ನು ನೀಡುತ್ತಾನೆ. ಶನಿಯು ವಕ್ರನಾಗಿ ದಶಮ ಸ್ಥಾನದಲ್ಲಿದ್ದು, ವೃತ್ತಿಯಲ್ಲಿ, ರಾಜಕೀಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ ರೂಢಿಸಿ ಕೊಂಡಲ್ಲಿ ದೇವರೇ ಒಳ್ಳೆಯ ಮಾರ್ಗವನ್ನು ಸೂಚಿಸುತ್ತಾನೆ. ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ.
ಮಿಥುನ: ಲಗ್ನದಲ್ಲಿ ಗುರು, ದ್ವೀತಿಯದಲ್ಲಿ ರವಿಯು ಬುಧನೊಂದಿಗಿದ್ದು, ಬುಧಾಧಿತ್ಯಯೋಗವನ್ನು ಸೂಚಿಸುತ್ತದೆ. ಧನಲಾಭ, ಸಂಸಾರದಲ್ಲಿ ಸುಖ ಅನುಭವಿಸುತ್ತೀರಿ. ನಿಮ್ಮ ವಾಕ್ಶಕ್ತಿಯಿಂದ ಕೆಲಸಗಳಲ್ಲಿ ಮನ್ನಣೆ ಹಾಗೂ ಗೌರವ ಸಿಗುತ್ತದೆ. ಧರ್ಮ ನಿಷ್ಠೆ, ನ್ಯಾಯಬದ್ಧವಾಗಿ ನಡೆದರೆ, ನಿಮಗೆ ಆತ್ಮಸಾಕ್ಷಾತ್ಕಾರವಾಗಿ ಸುಖವಾದ ಜೀವನವನ್ನು ನಡೆಸಬಹುದು. ತಪ್ಪದೇ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿದರೆ, ಒಳ್ಳೆಯ ಫಲಗಳನ್ನು ಕಾಣಬಹುದು.
ಕಟಕ: ದ್ವಿತೀಯದಲ್ಲಿ ಕೇತುವಿರುವುದರಿಂದ ನಿಮ್ಮ ಆಸೆಗಳು ಈಡೇರುತ್ತವೆ ಎಂದು ಭಾವಿಸಿದರೆ ಅದು ವಿರುದ್ಧವಾಗಿ ಹೋಗುತ್ತದೆ. ನಿಮಗೆ ಮನಸ್ಸಿಗೆ ಅಸಮಾಧಾನವನ್ನು ತಂದು, ಮಾಡುವ ಕೆಲಸಗಳಲ್ಲಿ ಶ್ರದ್ಧೆಯನ್ನು ಕಳೆದುಕೊಂಡು ಆತಂಕಪಡುವ ಸಮಯ ಇದಾಗಿದೆ. ಚಿತ್ತಾಪುರದ ಸಮೀಪವಿರುವ ಎಲ್ಲಮ್ಮ ದೇವಿಯನ್ನು ದುರ್ಗೆಯ ರೂಪದಲ್ಲಿ ಕಂಡುಬನ್ನಿ. ನಿಮ್ಮ ಜೀವನದಲ್ಲಿ ಹೊಸ ಬೆಳಕನ್ನು ನೀಡುತ್ತಾಳೆ.
ಸಿಂಹ: ಸಿಂಹ ರಾಶಿಯವರು ಹರಿಯುವ ನೀರಿನಂತೆ. ಈ ರಾಶಿಯಲ್ಲಿ ಜನರು ನಿಂತಲ್ಲೇ ನಿಂತುಬಿಟ್ಟರೆ ಏನೂ ಸಾಧಿಸಲಾರರು. ಮಾನಸಿಕವಾಗಿ ಪೆಟ್ಟು ತಿಂದು ದಾರಿ ಕಾಣದಂತಾಗುತ್ತಾರೆ. ಆತ್ಮಸ್ಥೈರ್ಯ, ಧೈರ್ಯವನ್ನು ಕಳೆದುಕೊಳ್ಳದೆ ಇರುವುದು ಭಗವಂತನು ನಿಮಗೆ ಕೊಟ್ಟಿರುವ ಏಕೈಕ ವರ. ನೀವು ಬಾಳಬೇಕು, ಮತ್ತೊಬ್ಬರ ಬಾಳಿನಲ್ಲಿ ಕಷ್ಟವನ್ನು ಹೋಗಲಾಡಿಸಬೇಕು. ಅರುಣದೇವರ ಪ್ರಾರ್ಥನೆ ಇರಲಿ.
ಕನ್ಯಾ: ಕನ್ಯಾ ರಾಶಿಯಲ್ಲಿ ಜನಿಸಿದವರು ದ್ವಿಸ್ವಭಾವ ಉಳ್ಳವರು. ಸ್ಥಿರವಾದ ಬುದ್ದಿಯು ಇಲ್ಲದಿದ್ದರೆ ಸಂಕಟ ಎದುರಿಸಬೇಕಾಗುತ್ತದೆ. ಸರಸ್ವತಿಯನ್ನು ಪ್ರಾರ್ಥಿಸಿ. ಬುದ್ದಿ್ದ ಚುರುಕಾಗಿ, ಕೆಲಸಗಳು ನಡೆದು ಜೇಬು ತುಂಬುತ್ತದೆ. ನಾನು ಎಂದು ಉಂಟಾಗುವ ಶಬ್ದವನ್ನು ನಾವು ಎಂದು ಮಾಡಿಕೊಂಡು ಎಲ್ಲವೂ ದೈವವೆಂದರೆ ದೈವವೇ ಕೈಹಿಡಿಯುತ್ತದೆ. ದುರ್ಗೆಯನ್ನು ಪ್ರಾರ್ಥಿಸಿ ಪೂಜಿಸಿ.
ತುಲಾ: ಎಷ್ಟೇ ಒಳ್ಳೆಯ ಸಮಯವಿದ್ದರೂ ರಕ್ಷಣೆ ಮಾಡುವವನು ದೈವವೊಬ್ಬನೇ. ನಮ್ಮ ವಾಣಿಯು ಚೆನ್ನಾಗಿದ್ದರೆ ಜಗತ್ತನ್ನೇ ಗೆಲ್ಲಬಹುದು. ಮನಸ್ಸಿನಿಂದ ಮಾಡಿದ ಕಾರ್ಯ ಎಲ್ಲರೂ ಮೆಚ್ಚುವಂತೆ ಇರುತ್ತದೆ, ಗುರು ಅಷ್ಟೋತ್ತರ ಪಾರಾಯಣ ಮಾಡಿ. ನಿಮ್ಮ ಸಂಪ್ರದಾಯದಂತೆ ಆಚರಣೆಗಳನ್ನು ಮುಂದುವರಿಸಿ.
ವೃಶ್ಚಿಕ: ಮನಸ್ಸೇ ವಿಷವಾಗಿ, ಕಣ್ಣೆರಡು ಬೇಡವಾದ ವಿಷಯದ ಬಗ್ಗೆ ಅಂದಾಜು ಮಾಡಿದರೆ ಮನುಷ್ಯನಿಗೆ ದಾರಿ ಕಾಣುವುದೇ? ಈ ದೇಹದಲ್ಲಿ ಅತಿ ಸುಂದರವಾದ ಅಂಗವೆಂದರೆ ಕಣ್ಣುಗಳು. ನೀವೇ ಖುದ್ದಾಗಿ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಪಠಿಸಿ. ಸುಬ್ರಹ್ಮಣ್ಯ ಮೂಲಮಂತ್ರ ಅನುಷ್ಠಾನ ಮಾಡಿ. ಕಷ್ಟಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡುವವನು ಭಗವಂತನೊಬ್ಬನೇ. ಧೈರ್ಯ, ಸಾಹಸಕ್ಕೆ ಜ್ಞಾನವನ್ನು ನೀಡುವ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.
ಧನುಸ್ಸು: ಆತುರಕ್ಕೆ ಪರ್ಯಾಯ ಶಬ್ದ ಅಂಧಕಾರ. ಆತುರವಾಗಿ ಕೆಲಸ ಮಾಡಿ ಒಳ್ಳೆಯ ಫಲ ಕಳೆದುಕೊಳ್ಳಬೇಡಿ. ಧನು ರಾಶಿಯಲ್ಲಿ ಹುಟ್ಟಿದ ನಿಮಗೆ ಗುರು ಅಧಿಪತ್ಯವಿರುತ್ತದೆ. ನೀವು ಈ ಸಮಯದಲ್ಲಿ ಸಪ್ತಮ ಗುರುವಿನ ರಕ್ಷಣೆಯನ್ನು ಪಡೆಯಬೇಕಾದರೆ ಈಶ್ವರ ನನ್ನು ಪ್ರಾರ್ಥಿಸಿ. ಮಹೇಶ್ವರನಲ್ಲೇ 3 ಸ್ವರೂಪವಿದೆ. ಶಿವಪಂಚಾಕ್ಷರಿಯನ್ನು ಪಠಿಸಿ. ಬೇಕಾದ ವರವನ್ನು ಪಡೆಯಬಹುದು.
ಮಕರ: ಅಲ್ಪ ಕಾಲ ಶನಿ ಸಂಚಾರವು ಆರಂಭವಾಗಿ ವಕ್ರ ಶನಿಯಿಂದ ಉಂಟಾಗಿ ನೆನೆಸಿದ ಕಾರ್ಯಗಳು ಚುರುಕಾಗಿ ಓಡುವುದಿಲ್ಲ. ಆದರೆ ಶನಿಯ ಸಂಚಾರ ಕಾಲದಲ್ಲಿ ಅವಿವೇಕದಿಂದ ಮಾಡುವ ಕೆಲಸಗಳಿಗೆ ದಂಡ ತೆರಬೇಕಾಗುತ್ತದೆ ನಿಧಾನವಾಗಿ ಯೋಚಿಸಿ. ಈ ಸಮಯವನ್ನು ದಾಟಿರಿ. ಕೈಲಾದ ದಾನವನ್ನು ಮಾಡಿ. ದಾನದ ಫಲವೇ ಧನವೆಂದು ಶಾಸ್ತ್ರಕಾರರು ಹೇಳುತ್ತಾರೆ. ದಾನದಿಂದ ಯಥೇಚ್ಛವಾದ ಧನವೂ ಬಂದು ಸೇರುತ್ತದೆ.
ಕುಂಭ: ವಕ್ರ ಶನಿ-ರಾಹು, ಶನಿ ಮನೆಯಲ್ಲಿ ಇರುವುದರಿಂದ ಕೆಲವೊಮ್ಮೆ ಚಿಂತಾಜನಕ ಹಂತ ತಲುಪುತ್ತೀರಿ. ಭಗವಂತನ ಕರುಣೆ ಅಪಾರ. ಚಿಂತೆಯನ್ನು ದೂರವಿಟ್ಟು, ಸುಂದರಕಾಂಡ ಪಾರಾಯಣ ಮಾಡಿ. ನಿಮ್ಮ ಕೆಲಸಗಳನ್ನು ಮುಂದುವರಿಸಿ. ಹನುಮಂತನು ಕೆಲಸಗಳನ್ನು ನಡೆಸುತ್ತಾನೆ. ‘ಹಂ ಹನುಮತೇ ನಮಃ’ ಎಂಬ ಮೂಲಾಕ್ಷರ 108 ಬಾರಿ ಜಪ ಮಾಡಿ. ಹನುಮಾನ್ ಚಾಲೀಸಾ ಪಠಿಸಿ.
ಮೀನ: ಹನುಮಂತನು ಕಾರ್ಯನಿಮಿತ್ತ ಲಂಕೆಗೆ ಪ್ರಯಾಣ ಮಾಡಿ ರಾವಣನಿಗೆ ಕಾಳಿಸ್ವರೂಪಳಾದ ಸೀತೆಯನ್ನು ದರ್ಶಿಸಿ ಅನುಗ್ರಹ ಪಡೆದು ರಾಮನ ವಿಜಯಕ್ಕೆ ಕಾರಣನಾಗುತ್ತಾನೆ -ಇದರರ್ಥ ಕಾರ್ಯಸಾಧನೆ ಮಾಡಿರೆಂಬುದು. ಇದು ಮೊದಲನೆಯ ಪಾಠವಾದರೆ ಎರಡನೇಯ ಪಾಠವು ದೈವವನ್ನು ನಂಬಿಕೆಟ್ಟವರಿಲ್ಲ, ಮನುಷ್ಯನಿಗೆ ಸಂಯಮ, ಶಿಸ್ತು ಉಪಕಾರ ಸ್ಮರಣೆ ಬೇಕೆಂಬುದು. ಮನಸಾ ಸಾಕ್ಷಾತ್ ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ.