ವಾರ ಭವಿಷ್ಯ: ಈ ರಾಶಿಯವರಿಗೆ ಭಾಗ್ಯ ತೆರೆಯುವ ಕಾಲ

ವಿಜಯವಾಣಿ-4-4
Published on

ಮೇಷ: :ರಾಶಿಯಲ್ಲಿ ಜನಿಸಿದವರಿಗೆ ದೈವ ಋಣ, ಪಿತೃ ಋಣ ತೀರಿಸುವುದು ಆದ್ಯ ಕರ್ತವ್ಯವಾಗಿದ್ದು ಅದನ್ನು ಕೂಡಲೇ ಪರಿಪೂರ್ಣ ಮಾಡಿಕೊಂಡರೆ ಭಾಗ್ಯದ ಬಾಗಿಲು ತೆರೆದಂತೆ ದೈವವೂ ಹರಸುತ್ತಾನೆ. ಸದ್ಬುದ್ದಿ ಉಂಟಾಗುತ್ತದೆ. ದೇವತಾ ಪ್ರಾರ್ಥನೆಯನ್ನು ತೀರಿಸುವ ಕಾಲವು ಬಂದಿದೆ. ವಿಳಂಬ ಮಾಡಿದಲ್ಲಿ ಅಪಾಯ.

ವೃಷಭ: ಮಳೆ ಬರುವ ಕಾಲಕ್ಕೆ ಬಂದೇ ಬರುತ್ತದೆ. ದೇವರು ಮಾಘದಿಂದ ಪಂಚ ಮಾಸಗಳಲ್ಲಿ ಬಿಸಿಲ ಬೇಗೆಯನ್ನು ತರುತ್ತಾನೆ. ಮನುಷ್ಯನ ದೇಹ ಹವಾಮಾನಕ್ಕೆ ಒಗ್ಗೂಡಿಸಿಕೊಳ್ಳುವಂತೆ ಸೃಷ್ಟಿಸಿರುತ್ತಾನೆ. ನಿಮ್ಮ ಭಾಗ್ಯ ತೆರೆಯುವ ಕಾಲ. ಅನಂತಪದ್ಮನಾಭನನ್ನು ಪೂಜಿಸಿ. ಕೌಂಡಿನ್ಯ ಋಷಿಗೆ ರಾಜ್ಯ ತಂದುಕೊಟ್ಟ ಹಾಗೆ ನಿಮಗೂ ರಾಜಯೋಗ ತಂದು ಕೊಡುತ್ತಾನೆ.

ಮಿಥುನ: ರಾಶ್ಯಾಧಿಪತಿ ಬುಧನು ದೇವರು ಇದ್ದಾನೆ ಎಂದು ತೋರಿಸಲು ಮಾನವ ವೇಷ ಧಾರಣೆ ಮಾಡಿ ಲೋಕಕ್ಕೆ ಧರ್ಮ ನ್ಯಾಯ ಸತ್ಯವನ್ನು ಕಾಪಾಡಲು ಭಗವಂತನೇ ಧರೆಗೆ ಇಳಿದು ಬಂದದ್ದನ್ನು ನಾವು ಕೇಳಿದ್ದೇವೆ. ಮನಬಂದಂತೆ ಮಾತಾಡಿ ಅನ್ಯರ ಶಾಪಕ್ಕೆ ಒಳಗಾಗದಿರಿ. ಗ್ರಹ ಬಲವು ಅಷ್ಟೇನೂ ಇಲ್ಲದಿರುವುದರಿಂದ ತಂದೆ ತಾಯಿಯನ್ನು ಪೂಜಿಸಿ ನಿಮ್ಮ ಸಂತೋಷವನ್ನು ವೃದ್ಧಿಸಿಕೊಳ್ಳಿ.

ಕಟಕ: ಕಾಲ ಕಾಲಕ್ಕೆ ಊಟ ಮಾಡಿ ದೇಹಕ್ಕೆ ರೋಗ ತಗುಲದಂತೆ ನೋಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರಬೇಕು. ಔಷಧಿಯನ್ನು ತೆಗೆದುಕೊಂಡು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ‘ಔಷಧೋ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಿದ್ದಾರೆ. ಗುರುಬಲವಿದ್ದು ಸುಖ ಸಂತೋಷವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಿ. ಈಶ್ವರನನ್ನು ಪೂಜಿಸಿ.

ಸಿಂಹ: ಆಗಸ್ಟ್ 22ರಿಂದ ಬುಧನು ಚಂದ್ರನ ಮನೆಯಲ್ಲಿದ್ದು ಶುಕ್ರನು ಕನ್ಯಾ ರಾಶಿಯಲ್ಲಿರುತ್ತಾನೆ. ಸಪ್ತಮದಲ್ಲಿ ರಾಹು ಇದ್ದಾನೆ. ದೈವ ಯೋಗದಿಂದ ಏನನ್ನೂ ಜಯಿಸಬಹುದು. ದೇವರು ಕೊಟ್ಟದ್ದಕ್ಕೆ ತೃಪ್ತಿ ಪಟ್ಟರೆ, ಕೊಡಬೇಕಾದ್ದನ್ನು ಅನಂತವಾಗಿ ಕೊಟ್ಟು ನಿಮ್ಮನ್ನು ರಕ್ಷಿಸುತ್ತಾನೆ. ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ, ಗಣೇಶನನ್ನು ಪೂಜಿಸಿ, ಲಕ್ಷ್ಮಿ ಕಟಾಕ್ಷವನ್ನು ಪಡೆದುಕೊಳ್ಳಿ.

ಕನ್ಯಾ: ಶುಕ್ರನು ಬುಧನ ಮನೆಯಲ್ಲಿರುವುದು ಶುಭದ ಸಂಕೇತ. ಕೊಡಬೇಕಾದ್ದನ್ನು ಕೊಟ್ಟು ನಿಮ್ಮನ್ನು ಹರಸುತ್ತಾನೆ. ರಾಶಿಯಲ್ಲಿ ಕೇತು, ಸಪ್ತಮದಲ್ಲಿ ರಾಹು ಇರುವುದರಿಂದ ಏನನ್ನು ಪಡೆಯಲೂ ನಿರಂತರ ಪ್ರಯತ್ನವೂ, ಛಲವೂ ಇರಬೇಕು. ಗ್ರಹಗತಿಗಳು ನಿಮಗೆ ಬೇಕಾದ ವರ ಕೊಡಬೇಕೆಂದರೆ ಗುರುವನ್ನು, ಶನಿಯನ್ನು ಪ್ರಾರ್ಥಿಸಿ.

ತುಲಾ: ರಾಶಿಯವರಿಗೆ ಬಿಡುವೇ ಇಲ್ಲದ ದಿನಗಳು. ಎಲ್ಲಾ ಕಾರ್ಯಗಳನ್ನು ಮೈ ಮೇಲೆ ಎಳೆದುಕೊಂಡು ದಿನ, ರಾತ್ರಿ , ಮಾಸ, ಸಂವತ್ಸರದ ಅರಿವೇ ಇರುವುದಿಲ್ಲ. ನಿಮಗೆ ಶರೀರಕ್ಕೆ ಆಯಾಸವು ದೂರವಾಗಲು ಚಂದ್ರ ಅಷ್ಟೋತ್ತರವನ್ನು ಪಠಿಸಿ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿದಲ್ಲಿ ಮನೋ ಇಚ್ಛೆಗಳು ಪರಿಪೂರ್ಣವಾಗುತ್ತವೆ.

ವೃಶ್ಚಿಕ: ತಂಪಾದ ಗಾಳಿಯು ಬೀಸಿದಾಗ ಅದು ವರುಣನ ಕೃಪೆಯಿಂದ ಎಂದು ಹೇಳಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗಳು ತಂಪಾದ ಗಾಳಿಯನ್ನು ಕೊಡುತ್ತಾ ಜೇಬಿಗೆ ದುಡ್ಡನ್ನು ತಂದುಕೊಡುವ ಕಾಲ. ಇರುವ ಸಂಕಟವು ಪರಿಹಾರ ಆಗುವುದರಲ್ಲಿ ಸಂದೇಹ ಬೇಡ. ಸುಬ್ರಹ್ಮಣ್ಯನ ಮೂಲ ಮಂತ್ರ ಪಠಿಸಿ, ಪೂಜಿಸಿ. ಹೇರಳವಾದ ಧನ ಸಂಪತ್ತನ್ನು ಪಡೆಯಲು ಅನುಕೂಲವಾಗುತ್ತದೆ.

ಧನಸ್ಸು: ರಾಶಿಯವರನ್ನು ಕಾಪಾಡುವುದು ಪಿತೃ ಪುಣ್ಯ ದೈವ ಪುಣ್ಯ ಹಾಗೂ ಮಾತೃಬಲ. ಇಷ್ಟಪಟ್ಟದ್ದನ್ನು ಜನ್ಮದಾತೆಯೇ ಕೊಡುತ್ತಾಳೆ. ನಿಮ್ಮನ್ನು ಭೂಮಿಗೆ ತಂದವಳು ನಿಮ್ಮ ಭಾಗ್ಯದಲ್ಲಿ ಬರೆದಿದ್ದಾಳೆ. ಆತುರ ಬೇಡ, ಒಳ್ಳೆಯ ಕಾಲವು ಬಂದೇ ಬರುತ್ತದೆ . ಆರೋಗ್ಯ, ಆಯಸ್ಸು ಒಳ್ಳೆಯ ಸ್ಥಾನಮಾನವನ್ನು ಕೊಟ್ಟು ಹರಸುತ್ತಾಳೆ. ಪಾರ್ವತಿ ಪರಮೇಶ್ವರನನ್ನು ಪೂಜಿಸಿ ಬೇಕಾದ್ದನ್ನು ಪಡೆದುಕೊಳ್ಳಿ.

ಕುಂಭ: ಶನಿಯ ಬಲವನ್ನು ನೋಡಿರುತ್ತೀರಿ. ನೋವನ್ನು ನೋಡಿರುತ್ತೀರಿ. ಅಲ್ಪಕಾಲ ತಡೆದರೆ ಏಳೂವರೆ ವರ್ಷದ ಶನಿ ಕಾಟವು ದಾಟುತ್ತದೆ. ಹಗಲಲ್ಲಿ ಮನುಷ್ಯನು ಸೂರ್ಯನ ಶಕ್ತಿಯಿಂದ ಕೆಲಸ ಮಾಡುವಂತೆ ನಿಮ್ಮ ಕೆಲಸಗಳು ಅತ್ಯಂತ ವೇಗವಾಗಿ ಸಾಗುತ್ತದೆ. ಶನೇಶ್ವರನನ್ನು ಪ್ರಾರ್ಥಿಸಿ, ಶನಿ ಅಷ್ಟೋತ್ತರ ಪಠಿಸಿ. ಎಳ್ಳೆಣ್ಣೆ ದಾನ ಮಾಡಿ.

ಮಕರ: ಕೆಲವೊಂದು ಸಮಸ್ಯೆಗಳು ಎದುರಾಗುವ ಕಾಲ. ಗುರು ಬಲವು ಇಲ್ಲ. ಅಸಮಾಧಾನ, ಆತಂಕ, ಆತುರದಿಂದ ಕೆಲಸ ಮಾಡಿ ಆ ಕೆಲಸವೂ ಹಾಳಾಗಿ ಒಂದೊಂದೇ ಬಂದು ನಿಮ್ಮ ಮೈ ಮೇಲೆ ಎರಗಿ ಇಷ್ಟಾರ್ಥವನ್ನು ಪೂರೈಸಲು ಕಷ್ಟ ಸಾಧ್ಯವಾಗುತ್ತದೆ. ದೈವಬಲ ಒಂದೇ ನಿಮ್ಮ ಕೈ ಹಿಡಿಯುತ್ತದೆ. ಕುಲದೇವರನ್ನು ಪ್ರಾರ್ಥಿಸಿ, ನಿತ್ಯವೂ ಶನೇಶ್ಚರ ಅಷ್ಟೋತ್ತರ ಪಠಿಸಿ. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿ.

ಮೀನ: ರಾಶಿಯವರಿಗೆ ದ್ವಾದಶ ಶನಿಯು ಜನ್ಮಕ್ಕೆ ಬರುವ ಹೊತ್ತು. ನಿಮ್ಮ ದೇಹಾರೋಗ್ಯವು ನಿಮ್ಮ ಕೈಯಲ್ಲಿದೆ. ಬೇಡದ್ದಕ್ಕೆ ಚಿಂತೆ ಮಾಡಿ ಇರುವ ಸುಖವನ್ನು ಹಾಳು ಮಾಡಿಕೊಳ್ಳಬಾರದು. ಗುರು ಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿ. ಸರ್ವಸಂಕಟ ಪರಿಹಾರವಾಗುತ್ತದೆ. ದತ್ತ ದೇವರೇ ಕಾಪಾಡುತ್ತಾನೆ. ದತ್ತಾತ್ರೇಯ ಅಷ್ಟೋತ್ತರವನ್ನು ನಿತ್ಯವೂ ಪಾರಾಯಣ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net