

ಮೇಷ: ಏಕಾದಶದಲ್ಲಿ ಶನಿಯು, ದ್ವಿತೀಯ ಗುರುವು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಉದ್ಯುಕ್ತನಾಗಿಸಿದರೂ, ದ್ವಾದಶ ರಾಹುವಿಗೆ ಸರ್ಪಸೂಕ್ತವನ್ನು ಪಾರಾಯಣ ಮಾಡಿಸಿ, ಬೆಳ್ಳಿ ನಾಗರಾಜನಿಗೆ ಅಭಿಷೇಕ ಮಾಡಿರಿ. ರಾಹುವು ಮನಸ್ಸು, ಬುದ್ಧಿಯನ್ನು ಪರಿಪೂರ್ಣವಾಗಿ ಕೂಡಿಸುವುದರಿಂದ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.
ವೃಷಭ: ಅಗತ್ಯ ವಿಚಾರವು ಯಾವುದು, ಅನಗತ್ಯವಾದುದು ಯಾವುದು ಎಂದು ಅರ್ಥಮಾಡಿಕೊಂಡು, ಯಾರಿಗೆ ಉಪಕಾರ ಮಾಡಬೇಕು. ಮಾಡದಿದ್ದರೆ ಏನಾಗುತ್ತ ದೆಂಬ ಅರಿವು ಇಟ್ಟುಕೊಂಡು ಕೆಲಸ ಮಾಡಿದರೆ ಕಾರ್ಯಗಳು ಯಶಸ್ವಿಯಾಗುತ್ತದೆ. ಏಕಾದಶಿ ರಾಹುವು ಸರಿದು ಶನಿಯ ಜತೆಗೂಡುವುದರಿಂದ ಸಮಾಧಾನದಿಂದ ವರ್ತಿಸಿ. ಸಾರ್ಥಕ ನಿರ್ಣಯ ತೆಗೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ.
ಮಿಥುನ: ಗುರುವು 2025ರ ಮೇ ತಿಂಗಳಿನಿಂದ ಲಗ್ನಕ್ಕೆ ಬಂದು ಸೇರುತ್ತಾನೆ. ಶನಿಯು ಮಾರ್ಚ್ ನಂತರ ದಶಮಕ್ಕೆ ಬರುತ್ತಾನೆ. ದೈವಬಲವನ್ನು ವೃದ್ಧಿಪಡಿಸಿಕೊಳ್ಳಿ. ತಂದೆ-ತಾಯಿಯೇ ಮೊದಲ ಗುರು. ಅವರ ಆಶೀರ್ವಾದ ಪಡೆಯಿರಿ. ಧನ-ಕನಕ ಪ್ರಾಪ್ತಿಯಾಗುತ್ತದೆ. ಲಕ್ಷ್ಮೀ ಸಹಿತ ಸತ್ಯನಾರಾಯಣನನ್ನು ಪೂಜಿಸಿ, ಪ್ರಾರ್ಥಿಸಿ.
ಕಟಕ: 11ರ ಗುರು ಭಾಗ್ಯದಲ್ಲಿ ಇರುವುದರಿಂದ ಏನೇನು ಒಳ್ಳೆಯದು ಇದೆಯೋ ಅದೆಲ್ಲವೂ ಲಭಿಸುತ್ತದೆ. ಕಟಕ ರಾಶಿಯವರು ಹೆಚ್ಚು ಪುಣ್ಯವಂತರು. ನಿಮ್ಮ ಪುಣ್ಯ ಸಂಗ್ರಹದಿಂದ ಗುರುವು ವಿಶೇಷ ಫಲವನ್ನು ಕೊಡುತ್ತಾನೆ. ಗುರುಭಕ್ತಿ, ಗುರುಪೂಜೆಯನ್ನು ಮುಂದುವರಿಸಿ. ನಂಜನಗೂಡಿನ ಶ್ರೀಕಂಠೇಶ್ವರನನ್ನು ದರ್ಶಿಸಿ ಬನ್ನಿ.
ಸಿಂಹ: ಸಿಂಹ ರಾಶಿಯವರನ್ನು ಕಾಯುವುದು ಧೈರ್ಯಬಲವೊಂದೆ. ಗುರುವು ಶನಿಯು ಶುಭ ಸ್ಥಾನದಲ್ಲಿ ಇಲ್ಲವೆಂದು ಹೆದರಬೇಡಿ. ಪೂರ್ವಾರ್ಜಿತ ಪುಣ್ಯವನ್ನು ಪರಮಾತ್ಮನೇ ಕರುಣಿಸಿ ಅಪೇಕ್ಷೆ ಈಡೇರಿಸುತ್ತಾನೆ. ಆರೋಗ್ಯಕ್ಕಾಗಿ ಸೂರ್ಯನನ್ನು, ಕೆಲಸ ಕಾರ್ಯ ದಡಮುಟ್ಟಲು ದುರ್ಗೆಯನ್ನು ಪ್ರಾರ್ಥಿಸಿ. ವಾಕ್ ಶಕ್ತಿಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ಕನ್ಯಾ: 9ರ ಗುರು ಷಷ್ಠಿಯಲ್ಲಿ ಶನಿ ಕೊಡಬೇಕಾದ್ದನ್ನು ಸಾಕಷ್ಟು ಕೊಟ್ಟಿದ್ದಾರೆ. ನೀವು ಮಾಡುವ ಪುಣ್ಯ ಕೆಲಸಗಳು ಕ್ಷೀಣಿಸಬಾರದು. ಮುಂದೆ ಶನಿಯು ಸಪ್ತಮಕ್ಕೆ, ಗುರು ದಶಮಕ್ಕೆ ಬಂದಾಗ, ಈಗ ಮಾಡಿದ ಪುಣ್ಯ ಕಾಯುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಕಾಸರ ಗೋಡಿನ ಎಡನೀರು ಮಠದಲ್ಲಿನ ದಕ್ಷಿಣಾಮೂರ್ತಿ, ಕೃಷ್ಣನನ್ನು ದರ್ಶಿಸಿ ಬನ್ನಿ.
ತುಲಾ: ಸನ್ಯಾಸಾಶ್ರಮ ಶ್ರೇಷ್ಠವೆಂದು 42 ಕುಲಗಳ ಉದ್ಧಾರ ಮಾಡುತ್ತ ದೆಂದು ಶಾಸ್ತ್ರಗಳ ಸಾರಾಂಶವು ಹೇಳುತ್ತದೆ. ಯತಿವರ್ಗದಲ್ಲಿ ಶ್ರೇಷ್ಠರು, ಭಗವದ್ಭಕ್ತರು, ಶಿವನ ಆರಾಧಕರನ್ನು ಸಂದರ್ಶಿ ಸಿದಾಗ ಎಲ್ಲ್ಲ ಗ್ರಹಬಾಧೆಗಳು ನಿವಾರಣೆಯಾಗುತ್ತದೆ. ಶ್ರೀಚಕ್ರವನ್ನು ಪೂಜಿಸುವ ತಪೋಶಕ್ತಿ ಉಳ್ಳ ಸ್ವರ್ಣವಲ್ಲಿ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಶ್ರೀಚಕ್ರ ಪೂಜೆ ನೋಡಿ, ದರ್ಶಿಸಿ ಬನ್ನಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ವೃಶ್ಚಿಕ: ಕಳೆದ ಮೂರು ವರ್ಷ ಕಷ್ಟವೇನೆಂಬುದು ಅರ್ಥವಾಗಿದೆ, ಕಷ್ಟದ ವಿರುದ್ಧ ಸುಖ, ದುಃಖದ ವಿರುದ್ಧ ಸಂತೋಷ. ಇದಕ್ಕೆ ಪರಿಹಾರವು ದೈವ ಪ್ರಾರ್ಥನೆ ಒಂದೇ. ನಿಮ್ಮ ಕಷ್ಟ ನಿವಾರಣೆಯಾಗಿ ಶುಭ ಸಮಯದಲ್ಲಿ ಕೈಹಿಡಿದು ನಡೆಸಿರುವ ಭಗವಂತನು, ಅವನು ತೋರಿರುವ ದಾರಿಯಲ್ಲಿ ಸಾಗಿದರೆ ಧನಾಗಮನವಾಗುತ್ತದೆ. ಗ್ರಹಗಳ ನಕಾರಾತ್ಮಕ ಶಕ್ತಿಯು ದೂರವಾಗಿ ಅಂದುಕೊಂಡ ಕೆಲಸವನ್ನು ಜಯಿಸಬಹುದು.
ಧನಸ್ಸು: ವಿದ್ಯೆಯೇ ದೇವರು. ಸಂಪತ್ತು- ಸುಖವನ್ನು ಕಾಣಬೇಕಾದರೆ ವಿದ್ಯೆ, ಸುಜ್ಞಾನ, ದೈವಬಲವು ಇದ್ದರೆ ಸರ್ವ ಸಂಕಟ ಪರಿಹಾರವಾಗುತ್ತದೆ. ಗುರು ರಾಶಿಯಲ್ಲಿ ಜನಿಸಿದ ನೀವು ಯಾವ ಗ್ರಹಗಳ ಶುಭಾಶಯಗಳನ್ನು ಅರಿತು ಕೆಲಸ ಮಾಡಬೇಕಾಗಿಲ್ಲ. ಗುರುಗಳನ್ನು, ಜನ್ಮ ಕೊಟ್ಟವರನ್ನು ವಿಶೇಷವಾಗಿ ಗೌರವಿಸಿ. ವಂದಿಸಿ. ಜೀವನದಲ್ಲಿ ಆಕಾಶದೆತ್ತರಕ್ಕೆ ಬೇಳೆಯುತ್ತೀರಿ.
ಮಕರ: ಸೂರ್ಯನು ಬ್ರಾಹ್ಮೀ ಮುಹೂರ್ತದ ನಂತರ ಕಾಣಸಿಗುತ್ತಾನೆ. ಮಂಜು ಸರಿದು ಬೆಳಕು ಮೂಡುತ್ತದೆ. ಅಂತಹ ಸೂರ್ಯನ ಕೃಪೆ ಸಂಪಾದಿಸಿದರೆ ಶನಿಯ ಸಂಕೋಲೆಯಿಂದ ಬಿಡಿಸಿಕೊಳ್ಳುವಿರಿ. ಶ್ರವಣ, ಧನಿಷ್ಠ, ಉತ್ತರಾಷಾಢ ನಕ್ಷತ್ರದವರು ಮುಂದಿನ ಒಳ್ಳೆಯ ದಿನಗಳಿಗೆ ಸಿದ್ಧರಾಗಿ. ವಿಷ್ಣುವಿನ ಪ್ರಾರ್ಥನೆ ಇರಲಿ. ದೇವಿ ಖಡ್ಗಮಾಲಾ ಸ್ತೋತ್ರ ಪಠಿಸಿ.
ಕುಂಭ :ಶನಿಯು ಮಾರ್ಚ್ನಿಂದ ದ್ವಿತೀಯಕ್ಕೆ ಬರುವುದರಿಂದ ಕಷ್ಟದ ದಿನ ಕಳೆದು ಇರುಳು ಸರಿದು ಬೆಳಕಾಗುತ್ತದೆ. ಪಾರ್ವತಿ ಸಹಿತ ಸಾಂಬ ಸದಾಶಿವನನ್ನು ಅರ್ಚಿಸಿ ಅವರ ಕೃಪೆ ಪಡೆದರೆ ನಿಮ್ಮನ್ನು ಯಾರೂ ಮುಟ್ಟಲಾರರು. ಕೆಲಸಗಳು ಕೈಗೂಡಿ, ಕಾರ್ಯಗಳು ಜಯದ ಕಡೆ ಸಾಗುತ್ತದೆ. ನಿಮ್ಮ ದಿನವನ್ನು ನಿಮ್ಮಂತೆ ಮಾಡಿಕೊಳ್ಳಲು ಶ್ರೀಶೈಲ ಮಲ್ಲಿಕಾರ್ಜುನನನ್ನು ದರ್ಶಿಸಿದರೆ, ಬಾಳು ಬಂಗಾರವಾಗುವುದರಲ್ಲಿ ಸಂದೇಹವೇ ಬೇಡ. ಮಣ್ಣು ಕೂಡ ಮಾಣಿಕ್ಯವಾಗುವ ಸಮಯ. ಶುಭವಾಗಲಿ.
ಮೀನ: ದ್ವಾದಶಾವತಾರ ರೂಪ ತಾಳಿದ ಮಹಾವಿಷ್ಣುವನ್ನು ಪ್ರಾರ್ಥಿಸಿ. ‘ಹಂ ಹನುಮತೇ ನಮಃ’ ಎಂದು ಜಪಿಸಿದರೆ ನಿಮ್ಮ ನಕಾರಾತ್ಮಕ ಚಿಂತನೆ ದೂರವಾಗಿ ಸಕಾರಾತ್ಮಕ ವಿಚಾರದಲ್ಲಿ ತೊಡಗಿಸಿಕೊಂಡು ಬಾಳನ್ನು ಬೆಳಗಿಸಿಕೊಳ್ಳಬಹುದು. 5 ತಿಂಗಳ ಕಾಲ ನಿತ್ಯ ಸುಂದರಕಾಂಡ ಪಾರಾಯಣ ಮಾಡಿ. ತೊಂದರೆ ದೂರವಾಗಿ ನಿಮ್ಮ ತಾಕತ್ತು ಹೆಚ್ಚಾಗುವುದು.