

ತಿರುವನಂತಪುರ: ಕರೊನಾ ಸೋಂಕು ತಡೆಯ ಲಾಕ್ಡೌನ್ ಹಲವು ವಿಶೇಷಗಳಿಗೆ, ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುವಂತೆ ಮಾಡುತ್ತಲೇ ಇದೆ. ಈಗ ಅಂಥದ್ದೇ ಒಂದು ವಿರಳ ವಿದ್ಯಮಾನ ಕೇರಳದ ರಾಜಧಾನಿ ತಿರುವನಂತಪುರದ ವಟ್ಟಿಯೂರುಕಾವು ಸಮೀಪ ನಡೆದ ಈ ಮದುವೆ!
ಆಟ್ಟುಕ್ಕಲ್ ನಿವಾಸಿ ಶಶಿಧರನ್ ಮತ್ತು ಬಿಂದು ದಂಪತಿಯ ಪುತ್ರ ಅಖಿಲ್, ವಟ್ಟಿಯೂರುಕಾವು ನಿವಾಸಿ ಸೋಮಶೇಖರನ್ ಮತ್ತು ಗೀತಾ ದಂಪತಿಯ ಪುತ್ರಿ ಆತಿರಾ. ಎಲ್ಲರಂತೆ ಇವರೂ ದೊಡ್ಡ ಹಾಲ್ನಲ್ಲೇ ಮದುವೆಯಾಗಲು ಸಿದ್ಧತೆ ನಡೆಸಿದ್ದವರು. ಆದರೆ, ಲಾಕ್ಡೌನ್ ಕಾರಣಕ್ಕಾಗಿ ಸರಳವಾಗಿ ಮದುವೆಯಾಗಿ ಎಂಬ ನಿಯಮ ಚಾಲ್ತಿಯಲ್ಲಿದೆ. ಅದನ್ನು ಪಾಲಿಸಿಕೊಂಡೇ ಆತಿರಾ ಮತ್ತು ಅಖಿಲ್ ಸರಳವಾಗಿಯೇ ಕೊಡುಂಗನ್ನೂರು ದೇವಿ ದೇವಸ್ಥಾನದಲ್ಲಿ ಮದುವೆಯಾದರು. ಮದುವೆಯ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಮುಗಿದ ಕೂಡಲೇ ನೂತನ ವಧು-ವರರು ಜತೆಯಾಗಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.
ಮದುಮಕ್ಕಳ ವೇಷಭೂಷಣದಲ್ಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಹೊಸ ಜೋಡಿಯನ್ನು ಕಂಡು ಪೊಲೀಸರು ಗಾಬರಿಯಾದ್ರು.. ಬಳಿಕ ವಿಚಾರ ತಿಳಿದು ಖುಷಿಯಾದ ಅವರು ಆ ಜೋಡಿಯನ್ನು ಬರಮಾಡಿಕೊಂಡ್ರು. ಅಲ್ಲೇ ಇದ್ದ ಹಾಲ್ನಲ್ಲಿ ಔತಣಕೂಟಕ್ಕೆ ಬೇಕಾದ ಏರ್ಪಾಡನ್ನು ಮಾಡಿದರು. ಎಲ್ಲರೂ ಒಟ್ಟಿಗೇ ಔತಣ ಸವಿದರು. ಇದರ ಹಿನ್ನೆಲೆ ಬಗ್ಗೆ ಪ್ರತಿಕ್ರಿಯಿಸಿರುವ ಜೋಡಿ, ಲಾಕ್ಡೌನ್ ಅವಧಿಯಲ್ಲಿ ಪೊಲೀಸರ ನಿಸ್ವಾರ್ಥ ಸೇವೆ ಕಂಡು ಅವರನ್ನು ಗೌರವಿಸಲು ಔತಣಕೂಟವನ್ನು ಪೊಲೀಸ್ ಠಾಣೆಯಲ್ಲೇ ನಡೆಸಲು ತೀರ್ಮಾನಿಸಿತ್ತು. ಪೊಲೀಸರಿಗೆ ಇವರ ಉದ್ದೇಶ ಮನವರಿಕೆಯಾದ ಕೂಡಲೇ ಎಲ್ಲವೂ ಸುಸೂತ್ರವಾಗಿ ನಡೆಯಿತು. ಪೊಲೀಸರು ಕೂಡ ಹೊಸ ಜೋಡಿಯ ದಾಂಪತ್ಯಕ್ಕೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)