

Wedding Card : ಉತ್ತರ ಪ್ರದೇಶದ ಅಮೇಥಿಯ ಮುಸ್ಲಿಂ ಕುಟುಂಬವೊಂದಕ್ಕೆ ಸೇರಿದ ಮದುವೆ ಆಹ್ವಾನ ಪತ್ರಿಕೆ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಮದುವೆ ಕಾರ್ಡ್ ಜನಪ್ರಿಯವಾಗಲು ಅದರ ಮೇಲೆ ಮುದ್ರಿಸಲಾದ ಚಿತ್ರಗಳೇ ಕಾರಣ. ಆ ಚಿತ್ರಗಳನ್ನು ನೋಡಿದವರೆಲ್ಲ ಹುಬ್ಬೇರಿಸುತ್ತಿದ್ದಾರೆ. ಅಷ್ಟಕ್ಕೂ ಆ ಮದುವೆ ಆಮಂತ್ರಣದಲ್ಲಿ ಏನಿದೆ ಎಂಬುದನ್ನು ನಾವೀಗ ತಿಳಿಯೋಣ.
ಅಮೇಥಿಯ ಮುಸ್ಲಿಂ ಕುಟುಂಬ ತಮ್ಮ ಮಗಳು ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದು ದೇವರು ಮತ್ತು ದೇವತೆಗಳ ಚಿತ್ರಗಳನ್ನು ಮುದ್ರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಗುರಿಯಾಗಿದೆ.
ಸಂಪೂರ್ಣ ವಿವರಕ್ಕೆ ಬರುವುದಾದರೆ, ಅಮೇಥಿಯ ಸಿಂಗಾಪುರದ ಬ್ಲಾಕ್ನ ಅಲ್ಲಾದಿನ್ ಗ್ರಾಮದ ಶಬ್ಬೀರ್ ಟೈಗರ್ ಅವರ ಪುತ್ರಿ ಸೈಮಾ ಬಾನೋ ಎಂಬಾಕೆ ಇದೇ ನವೆಂಬರ್ 8 ರಂದು ಮದುವೆಯಾಗಿದ್ದಾರೆ. ಈ ಮದುವೆ ಕಾರ್ಡ್‌ನಲ್ಲಿ ಹಿಂದು ದೇವರುಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಗಣೇಶ, ಕೃಷ್ಣ ಮತ್ತು ರಾಧೆಯ ಚಿತ್ರಣಗಳಿವೆ.
ಸೈಮಾ ಬಾನೋ ಅವರು ರಾಯ್ ಬರೇಲಿ ಜಿಲ್ಲೆಯ ಮಹಾರಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆನ್‌ಪುರ್ ಗ್ರಾಮದ ಇರ್ಫಾನ್ ಎಂಬುವರನ್ನು ವಿವಾಹವಾದರು. ಪಾಸಿಟಿವ್ ಸಂದೇಶವನ್ನು ನೀಡಲು ಮತ್ತು ಸಹೋದರತ್ವದ ಭಾವನೆಯನ್ನು ಉತ್ತೇಜಿಸಲು ಹಿಂದು ದೇವರುಗಳ ಚಿತ್ರಗಳನ್ನು ಕಾರ್ಡ್‌ಗಳಲ್ಲಿ ಮುದ್ರಿಸಲಾಗಿದೆ. ನಮ್ಮ ಈ ನಡೆ ಹಿಂದು-ಮುಸ್ಲಿಂ ಏಕತೆಯನ್ನು ಬಲಪಡಿಸುತ್ತದೆ ಮತ್ತು ಜನರು ಪರಸ್ಪರರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತಾರೆ ಎಂದು ವಧುವಿನ ತಂದೆ ಶಬ್ಬೀರ್ ಹೇಳಿದ್ದಾರೆ.
ನಿಮ್ಮ ಈ ನಿರ್ಧಾರದ ಬಗ್ಗೆ ನಿಮ್ಮ ಸಮಾಜದ ಬಾಂಧವರು ಏನು ಹೇಳಿದರು ಎಂದು ಶಬ್ಬೀರ್ ಅವರನ್ನು ಪ್ರಶ್ನಿಸಿದಾಗ, ಅದು ನನಗೆ ಮುಖ್ಯವಲ್ಲ. ಸಮಾಜದಲ್ಲಿ ಸಾಂಘಿಕ ಸೌಹಾರ್ದತೆ ಮೂಡಿಸಿ, ಉತ್ತಮ ಸಂದೇಶ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಉತ್ತರಿಸಿದರು. ಶಬ್ಬೀರ್ ಅವರ ಈ ಮಾತು ಕೇಳಿ ಬಹಳಷ್ಟು ಮಂದಿ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಈ ಮದುವೆ ಆಮಂತ್ರಣ ಪತ್ರಿಕೆ ನೀಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)