ಸೈಬರ್ ಹೆಲ್ಪ್‌ಲೈನ್ 1930ರ ಜತೆಗೆ ವೆಬ್‌ಬಾಟ್

1930
Published on

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣ ತಡೆಯಲು ರಾಜ್ಯದಲ್ಲಿ ಹೆಲ್ಪ್‌ಲೈನ್-1930ರ ಜತೆಗೆ ವೆಬ್ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ತಿಳಿಸಿದ್ದಾರೆ.

ನಗರದ ಎಂಜಿ ರಸ್ತೆಯಲ್ಲಿ ಎಡಿಜಿಪಿ ಸಿಎಲ್ಎಂ ಕಾರ್ನರ್ ಹೌಸ್ ಕಚೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾದ ಸೈಬರ್ ಕ್ರೈಂ ಹೆಲ್ಪ್‌ಲೈನ್-1930ರ ವೆಬ್ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಅಲೋಕ್ ಮೋಹನ್, ರಾಜ್ಯದಲ್ಲಿ 1930ಕ್ಕೆ 2022ರಲ್ಲಿ 1.30 ಲಕ್ಷ ಕರೆಗಳು ಬಂದಿದ್ದು, 2024 ರಲ್ಲಿ 8.26 ಲಕ್ಷ ಮತ್ತು 2025ರ ಮಾರ್ಚ್ ಅಂತ್ಯಕ್ಕೆ 4.34 ಲಕ್ಷಕ್ಕೆ ಏರಿಕೆಯಾಗಿದೆ.

ಕರೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಪರ್ಕ ಸಿಗದೆ ಇರುವ ಕರೆಗಳ ಸಂಖ್ಯೆಯೂ ಹೆಚ್ಚಾಗಿತ್ತು. ಗೋಲ್ಡನ್ ಅವರ್‌ನಲ್ಲಿ ದೂರು ದಾಖಲಿಸಲು ಸಾಧ್ಯವಾಗದೆ ನಾಗರಿಕರು ಆಸಹಾಯಕರಾಗಿದ್ದರು.

ಸೈಬರ್ ಕಳ್ಳರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿರಲಿಲ್ಲ. ವಂಚನೆ ಮಾಡಿದ ಹಣವನ್ನು ಬ್ಲ್ಯಾಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಇಲಾಖೆಯು, ಸಮಸ್ಯೆಯನ್ನು ಪರಿಹರಿಸಲು ದೂರುದಾರರ ಕರೆಗಳನ್ನು ಹಣಕಾಸು ಸಂಬಂಧಿತ ದೂರುಗಳು, ಹಣಕಾಸೇತರ ಸಂಬಂಧಿತ ದೂರುಗಳು ಸ್ಥಿತಿ ವಿಚಾರಣೆಗಳು ಮತ್ತು ಸೈಬರ್ ಅಪರಾಧ ಸಂಬಂಧಿತ ಕುಂದುಕೊರತೆ ಕರೆಗಳಾಗಿ ಐವಿಆರ್ ವ್ಯವಸ್ಥೆಯ ಮೂಲಕ ವರ್ಗೀಕರಿಸಲಾಗಿದೆ.

ಇದರಿಂದಾಗಿ ಹೊಸ ದೂರನ್ನು ಸಕಾಲದಲ್ಲಿ ದಾಖಲಿಸುವವರಿಗೆ ಆದ್ಯತೆ ನೀಡಲಾಗಿದೆ. ವೆಬ್ಬಾಟ್ ಮೂಲಕ ಮಾಹಿತಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಎಸ್‌ಎಂಎಸ್ ಮೂಲಕ ವೆಬ್ಬಾಟ್ ಲಿಂಕ್ ಅನ್ನು ಕಳುಹಿಸಲಾಗುವುದು.

ನಂತರ ಈ ಸಹಾಯವಾಣಿಯ ಸಿಬ್ಬಂದಿ ಮೂಲಕ ಸದರಿ ಮಾಹಿತಿಯನ್ನು ಎನ್‌ಸಿಆರ್‌ಪಿಯಲ್ಲಿ ದಾಖಲಿಸಲಾಗುವುದು. ಸಾರ್ವಜನಿಕರಿಗೆ 1930 ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹಾಗೂ ಕಾಲ್ ಡ್ರಾಪ್‌ಗಳನ್ನು ಸಹ ತಡೆಯಲು ಸಹಾಯವಾಗುತ್ತದೆ.

ಸೈಬರ್ ಕಳ್ಳರಿಂದ ಶೇ.16 ಹಣ ಜಪ್ತಿ :

ಸೈಬರ್ ಹೆಲ್ಪ್‌ಲೈನ್-1930ರ ಮೂಲಕ 2022ರಲ್ಲಿ 20,894 ದೂರುಗಳು ದಾಖಲಾಗಿವೆ. 113 ಕೋಟಿ ರೂ. ವಂಚನೆಗೆ ಒಳಗಾಗಿದ್ದು, ಈ ಪೈಕಿ 8 ಕೋಟಿ ರೂ. ಜಪ್ತಿ ಮಾಡಲಾಗಿದೆ. ಇದೇ ರೀತಿ

2024ರಲ್ಲಿ 97,929 ದೂರು ದಾಖಲಾಗಿದ್ದು, 2,396 ಕೋಟಿ ರೂ.ಗೆ ವಂಚನೆಗೆಯಾಗಿದೆ. 226 ಕೋಟಿ ರೂ. ಮಾತ್ರ ತಡೆಹಿಡಿಯಲಾಗಿದೆ. ವಂಚನೆ ಮೊತ್ತದ ಶೇ.9 ಆಗಿರುತ್ತದೆ. ಉನ್ನತ್ತೀಕರಣದ ಪರಿಣಾಮ 2025ರ ಮೊದಲ ತ್ರೈಮಾಸಿಕದಲ್ಲಿ 38 ಸಾವಿರ ಪ್ರಕರಣಗಳು ದಾಖಲಾಗಿದ್ದು, ಶೇ.16 ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಜಪ್ತಿಗೆ ಸಾಧ್ಯವಾಗಿದೆ.

ವಿಶೇಷತೆ ಏನು :

1930ರ ಸಹಾಯವಾಣಿಯಲ್ಲಿ ಈ ಹಿಂದಿನ ದೂರವಾಣಿ ಮೂಲಸೌಕರ್ಯವನ್ನು ಬದಲಾಯಿಸಿ ಸಿಪ್‌ಲೈನ್‌ಗಳಿಗೆ ಉನ್ನತೀಕರಿಸಲಾಗಿದೆ. ಕರೆಗಳ ನಿರ್ವಹಿಸಲು ಸಹಾಯವಾಗಿದೆ. ಭಾಷಾ ಆಯ್ಕೆಗೆ ಐವಿಆರ್ ವ್ಯವಸ್ಥೆ ಕಲ್ಪಿಸಿದ್ದು, ದೂರುದಾರರ ಸಂವಹನಕ್ಕಾಗಿ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಭಾಷೆ ಆಯ್ಕೆ ಮಾಡಲು ಅನುವು ಮಾಡಲಾಗಿದೆ.

ಹಣಕಾಸೇತರ ಸಂಬಂಧಿತ ದೂರುಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ಬಗೆಗಿನ ಮಾಹಿತಿ ಲಿಂಕ್ ಅನ್ನು ಎಸ್‌ಎಂಎಸ್ ಮುಖಾಂತರ ದೂರುದಾರರಿಗೆ ನೀಡಲಾಗುವುದು. ವಂಚನೆಗೊಳಗಾದವರು ಮತ್ತು ವಂಚಕರ ಬಗೆಗಿನ ಮಾಹಿತಿಯನ್ನು ಸಹ ಸಂಗ್ರಹಿಸಿ, ಶೇಖರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಮಾಹಿತಿಯಿಂದ ತನಿಖಾಧಿಕಾರಿಗಳು ಆರೋಪಿಯ ಬಗ್ಗೆ ಹಾಗೂ ವಂಚನೆಗಳ ಬಗ್ಗೆ ವಿಶ್ಲೇಷಿತ ಮಾಹಿತಿ ಪಡೆಯಬಹುದಾಗಿದೆ. ದಿನದ 24 ಗಂಟೆಗಳ ಕಾಲವೂ ಉತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net