Web Exclusive|ನಾಡದೇವಿ ಚಾಮುಂಡಿಗೆ ನಿಲ್ಲದ ‘ಬರ್ಜಿತ್’ : ಕೋವಿಡ್ ಸಂಕಷ್ಟದಲ್ಲೂ ಪೊಲೀಸರಿಂದ ಗೌರವ ವಂದನೆ

POLICE PARADE IN CHAMUNDI TEMPLE (1)
Published on

ಅವಿನಾಶ್ ಜೈನಹಳ್ಳಿ ಮೈಸೂರು: ನಾಡದೇವಿ ಚಾಮುಂಡೇಶ್ವರಿಗೆ ಕೋವಿಡ್ ಸಂಕಷ್ಟದಲ್ಲೂ ಪೊಲೀಸರು ಗೌರವ ವಂದನೆ ಸಲ್ಲಿಸುವುದನ್ನು ಮುಂದುವರಿಸಿದ್ದಾರೆ. ಮೈಸೂರು ಅರಸರ ಕಾಲದಲ್ಲಿ ‘ಬರ್ಜಿತ್’ ಹೆಸರಿನಲ್ಲಿ ಸಿಪಾಯಿಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದ ಚಾಮುಂಡೇಶ್ವರಿ ದೇವಿ ಈಗ ಪೊಲೀಸರಿಂದಲೂ ಗೌರವ ವಂದನೆ ಸ್ವೀಕರಿಸುತ್ತಿದ್ದಾಳೆ. ಕೋವಿಡ್-19ನಿಂದ ಕೇಂದ್ರ ಸರ್ಕಾರ ಘೊಷಣೆ ಮಾಡಿದ್ದ ಲಾಕ್​ಡೌನ್​ನಲ್ಲೂ ಬೆಟ್ಟದ ತಾಯಿಗೆ ಪೊಲೀಸ್ ಇಲಾಖೆಯಿಂದ ನಿತ್ಯ ಈ ಗೌರವ ವಂದನೆ ಸಲ್ಲಿಸಲಾಗಿದೆ. ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದ ಸಂದರ್ಭದಲ್ಲೂ ಗೌರವ ವಂದನೆ ಮುಂದುವರಿದಿದೆ.

ಬರ್ಜಿತ್ ಎಂದರೇನು? ಪೊಲೀಸರಿಂದ ನಿತ್ಯ ನಡೆಯುವ ಈ ಗೌರವ ವಂದನೆ ಶತಮಾನಗಳ ಹಿಂದೆ ‘ಬರ್ಜಿತ್’ ಎಂದೇ ಖ್ಯಾತಿ ಪಡೆದಿತ್ತು. ಇದನ್ನು ರಾಜ-ಮಹಾರಾಜರ ಕಾಲದಲ್ಲಿ ಬರ್ಜಿತ್ ಹೆಸರಿನಿಂದ ನಡೆಸಲಾಗುತ್ತಿತ್ತು. ವಾದ್ಯಗಳೊಂದಿಗೆ ಹಲವು ಸಿಪಾಯಿಗಳು ದೇವಸ್ಥಾನದ ಪ್ರವೇಶ ದ್ವಾರದಲ್ಲಿ ನಾಡದೇವತೆಗೆ ಈ ಗೌರವ ವಂದನೆ ಸಲ್ಲಿಸುತ್ತಿದ್ದರು. ಮಹಾರಾಜ ಆಳ್ವಿಕೆ ಕೊನೆಗೊಂಡು, ಪ್ರಜಾಪ್ರಭುತ್ವ ಸರ್ಕಾರ ಬಂದ ಬಳಿಕ ಪೊಲೀಸರು ಗೌರವ ವಂದನೆ ಪದ್ಧತಿ ಮುಂದುವರಿಸಿದ್ದಾರೆ.

ನಿತ್ಯ ಗೌರವ ವಂದನೆ: ಘಂಟಾನಾದದೊಂದಿಗೆ ವಿಶೇಷ ಪೂಜೆ ಪುರಸ್ಕಾರಗಳನ್ನು ಸ್ವೀಕರಿಸುವುದು ದೇವಿಯ ದಿನಚರಿ. ಜತೆಗೆ ಪ್ರತಿದಿನ ಮಹಾಮಂಗಳಾರತಿ ನಡೆಯುವ ಬೆಳಗ್ಗೆ 9.30 ಮತ್ತು ರಾತ್ರಿ 8.30ರ ಸಮಯದಲ್ಲಿ ಪೊಲೀಸರೊಬ್ಬರು ವಂದನೆ ಸಲ್ಲಿಸುತ್ತಿದ್ದಾರೆ.

ಬಹಳ ಹಿಂದಿನಿಂದಲೂ ಚಾಮುಂಡೇಶ್ವರಿ ತಾಯಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ರೀತಿ ದೇಶದ ಯಾವುದೇ ದೇಗುಲದಲ್ಲೂ ಗೌರವ ವಂದನೆ ನಡೆಯುವುದಿಲ್ಲ. ಮಹಾರಾಜರಿಗೆ ಸಲ್ಲಿಸುವಂತೆ ಚಾಮುಂಡೇಶ್ವರಿ ತಾಯಿಗೂ ಗೌರವ ವಂದನೆ ಸಲ್ಲಿಸಲಾಗುತ್ತಿದೆ. ಲಾಕ್​ಡೌನ್ ಸಂದರ್ಭದಲ್ಲೂ ಇದು ಮುಂದುವರಿದಿದ್ದು, ಎಂದೂ ನಿಂತಿಲ್ಲ. ಶಶಿಶೇಖರ ದೀಕ್ಷಿತ್, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ

ನವರಾತ್ರಿ, ಆಷಾಢ ಸೇರಿ ಇನ್ನಿತರ ವಿಶೇಷ ದಿನಗಳಲ್ಲಿ ಇಬ್ಬರು ಕಾನ್​ಸ್ಟೇಬಲ್ ವಂದನೆ ಸಲ್ಲಿಸುತ್ತಾರೆ. ಇದು ಮೂಲ ಮೂರ್ತಿಗೆ ಮಾತ್ರವಲ್ಲದೆ ಉತ್ಸವ ಮೂರ್ತಿಗೂ ದೊರೆಯಲಿದೆ. ಗರ್ಭಗುಡಿಯಲ್ಲಿ ಮೂಲ ವಿಗ್ರಹಕ್ಕೆ ಮೌನವಾಗಿ ವಂದನೆ ಸಲ್ಲಿಸುವ ಪೊಲೀಸರು, ಉತ್ಸವ ಮೂರ್ತಿಯನ್ನು ದೇವಸ್ಥಾನದ ಹೊರ ಆವರಣದಲ್ಲಿರುವ ಮಂಟಪದಲ್ಲಿ ಕೂರಿಸಿ ವಂದನೆ ಸಲ್ಲಿಸುತ್ತಾರೆ.

ಇತಿಹಾಸ ದೊಡ್ಡದು: ಯದುವಂಶದ ಕುಲದೇವತೆ ಚಾಮುಂಡೇಶ್ವರಿಗೆ ಈ ರೀತಿಯ ಗೌರವ ವಂದನೆ ಸಲ್ಲಿಸುವುದನ್ನು ಕ್ರಿ.ಶ.1799 ನಂತರ ಮೈಸೂರು ರಾಜರು ಆರಂಭಿಸಿದರು ಎನ್ನಲಾಗುತ್ತದೆ. ನಾಲ್ಕನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ಬಳಿಕ ಮೈಸೂರು ಒಡೆಯರಿಗೆ ರಾಜ್ಯದ ಒಂದು ಭಾಗವನ್ನು ಬ್ರಿಟಿಷರು ನೀಡಿದರು. ಹೀಗೆ ಮತ್ತೆ ಸಿಕ್ಕ ರಾಜ್ಯಕ್ಕೆ ತಾಯಿ ಚಾಮುಂಡೇಶ್ವರಿಯೇ ಕಾರಣ ಎನ್ನುವುದು ರಾಜವಂಶಸ್ಥರ ಭಾವನೆ.

ಹಾಗಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ತಾವು ಪಟ್ಟಕ್ಕೇರಿದ ಬಳಿಕ ದೇವಿಯನ್ನು ಪೂಜಿಸಲು ತಮಿಳುನಾಡಿನಿಂದ ಆಗಮಿಕರನ್ನು ಕರೆತಂದರು. ಅಲ್ಲಿಯವರೆಗೂ ದೇವಿಯನ್ನು ‘ಶಿವಾಚಾರ್ಯ’ರು ಪೂಜಿಸುತ್ತಿರುತ್ತಾರೆ. ಜತೆಗೆ ದೇಗುಲವನ್ನು ವಿಸ್ತರಿಸಿ ರಾಜಗೋಪುರವನ್ನು ನಿರ್ವಿುಸಿದರು. ಹೀಗೆ ಚಾಮುಂಡೇಶ್ವರಿ ದೇವಿಗೆ ಅದ್ಧೂರಿತನ ನೀಡಿದ ಮುಮ್ಮಡಿ ಅವರು ತಮ್ಮ 1815 ಮತ್ತು 1818ರ ಮಧ್ಯೆ ಈ ‘ಬರ್ಜಿತ್’ ಪದ್ಧತಿಯನ್ನು ಪ್ರಾರಂಭಿಸಿರಬಹುದು ಎಂದು ಇತಿಹಾಸಕಾರರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net