Web Exclusive | ಒಂದೇ ವರ್ಷದಲ್ಲಿ 22 ಶಿಶುಗಳ ರಕ್ಷಣೆ; ಮಲೆನಾಡಿಗೆ ಬೇಕಿದೆ ದತ್ತು ಸ್ವೀಕಾರ ಕೇಂದ್ರ

Web Ex
Published on

| ಅರವಿಂದ ಅಕ್ಲಾಪುರ ಶಿವಮೊಗ್ಗ

ಹೆಚ್ಚಿನ ಸಂಖ್ಯೆಯಲ್ಲಿ ಒಪ್ಪಿಸಲ್ಪಟ್ಟ ಹಾಗೂ ಪರಿತ್ಯಕ್ತ ಮಕ್ಕಳು ಪತ್ತೆಯಾಗುವ ಜಿಲ್ಲೆಗಳ ಪೈಕಿ ರಾಜ್ಯದಲ್ಲಿ ಶಿವಮೊಗ್ಗಕ್ಕೆ ಎರಡನೇ ಸ್ಥಾನ. ಆದರೆ ಇಲ್ಲಿ ದತ್ತು ಸ್ವೀಕಾರ ಕೇಂದ್ರವಿಲ್ಲದಿರುವುದು ಮಕ್ಕಳ ರಕ್ಷಣಾ ಘಟಕಕ್ಕೆ ಸವಾಲಾಗಿದೆ.

ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದ ಮಕ್ಕಳನ್ನು ಉಡುಪಿ ದತ್ತು ಸ್ವೀಕಾರ ಕೇಂದ್ರಕ್ಕೆ ಸೇರಿಸಲಾಗುತ್ತಿತ್ತು. ಬಳಿಕ ನೆರೆಯ ಚಿಕ್ಕಮಗಳೂರು ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು. ಈಗ ಚಿಕ್ಕಮಗಳೂರು ಕೇಂದ್ರದಲ್ಲೂ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳು ಇರುವುದರಿಂದ ಹಾವೇರಿ ಕೇಂದ್ರಕ್ಕೆ ಸೇರಿಸಲಾಗುತ್ತಿದೆ.

ಸರ್ಕಾರ ಮಕ್ಕಳ ರಕ್ಷಣಾ ಘಟಕಗಳ ಮೂಲಕ ಒಪ್ಪಿಸಲ್ಪಟ್ಟ ಹಾಗೂ ಪರಿತ್ಯಕ್ತ ಮಕ್ಕಳ ರಕ್ಷಣೆ ಮಾಡುತ್ತಿದೆ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯುತ್ತದೆ. ಮಕ್ಕಳ ರಕ್ಷಣೆ ವಿಷಯದಲ್ಲಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಮಾನದಂಡಕ್ಕೆ ಅನುಗುಣವಾಗಿ ದತ್ತು ಸ್ವೀಕಾರ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ.

ಒಂದು ವರ್ಷ 22 ಮಕ್ಕಳು

2019-20ರಲ್ಲಿ ಜಿಲ್ಲೆಯಿಂದ 22 ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಸೇರಿಸಲಾಗಿದೆ. ಈ ಪೈಕಿ ಚಿಕ್ಕಮಗಳೂರು ಕೇಂದ್ರಕ್ಕೆ 18 ಹಾಗೂ ಹಾವೇರಿಗೆ 4 ಮಕ್ಕಳನ್ನು ಕಳುಹಿಸಲಾಗಿದೆ. ಈ ವರ್ಷ ಮಾರ್ಚ್​ನಿಂದ ಇದುವರೆಗೆ 4 ಮಕ್ಕಳು ಪತ್ತೆಯಾಗಿದ್ದು, ಅಷ್ಟೂ ಮಕ್ಕಳನ್ನು ಹಾವೇರಿ ದತ್ತು ಸ್ವೀಕಾರ ಕೇಂದ್ರಕ್ಕೆ ಸೇರಿಸಲಾಗಿದೆ.

ದತ್ತು ಸ್ವೀಕಾರ ಕೇಂದ್ರದಲ್ಲಿ ಪ್ರತಿ 10 ಮಕ್ಕಳಿಗೆ ಆರು ಮಂದಿ ಆಯಾಗಳನ್ನು ನೇಮಕ ಮಾಡಲಾಗುತ್ತದೆ. ಆರಂಭದಲ್ಲಿ ಪ್ರತಿ ಕೇಂದ್ರಕ್ಕೆ 10 ಮಕ್ಕಳ ದಾಖಲಾತಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೇಂದ್ರದ ನಿರ್ವಹಣೆ ಗಮನಿಸಿ ಅದನ್ನು ಕ್ರಮೇಣ 15 ಹಾಗೂ 20ಕ್ಕೆ ಏರಿಕೆ ಮಾಡಲಾಗುತ್ತಿದೆ. ನೆರೆಯ ಜಿಲ್ಲೆಗಳ ದತ್ತು ಸ್ವೀಕಾರ ಕೇಂದ್ರಗಳು ಹೆಚ್ಚು ಮಕ್ಕಳ ಆರೈಕೆಯ ಮಾನದಂಡ ಹೊಂದಿಲ್ಲ. ಈ ಕಾರಣದಿಂದ ಶಿವಮೊಗ್ಗದಲ್ಲೇ ದತ್ತು ಸ್ವೀಕಾರ ಕೇಂದ್ರ ತೆರೆಯಬೇಕಾದ ಅನಿವಾರ್ಯತೆಯಿದೆ.

ಅಡಾಪ್ಷನ್​ ಸೆಂಟರ್

ನವಜಾತ ಶಿಶುಗಳೇ ಹೆಚ್ಚು

ಶಿವಮೊಗ್ಗದಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ನವಜಾತ ಶಿಶುಗಳ ದಾಖಲಾತಿಯೇ ಹೆಚ್ಚು. ಮೂರು ದಿನದಿಂದ ಆರಂಭವಾಗಿ ಮೂರು ತಿಂಗಳವರೆಗಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಬರುತ್ತಿದ್ದಾರೆ. ತಾಯಿಯಿಂದ ದೂರಾಗುವ ಈ ನವಜಾತ ಶಿಶುಗಳಿಗೆ ಸೂಕ್ತ ರಕ್ಷಣೆ ಅವಶ್ಯ.

ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ನವಜಾತ ಶಿಶುಗಳು ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ನೆರೆ ಜಿಲ್ಲೆಗಳ ದತ್ತು ಸ್ವೀಕಾರ ಕೇಂದ್ರಕ್ಕೆ ಮಕ್ಕಳನ್ನು ಕರೆದೊಯ್ಯುವ ವೇಳೆ ಅತ್ಯಂತ ಮುಂಜಾಗ್ರತೆ ವಹಿಸಬೇಕು. ಹೀಗಾಗಿ ಶಿವಮೊಗ್ಗದಲ್ಲೇ ದತ್ತು ಸ್ವೀಕಾರ ಕೇಂದ್ರ ಆರಂಭಿಸುವುದರಿಂದ ನವಜಾತ ಶಿಶುಗಳ ರಕ್ಷಣೆಗೆ ಒತ್ತು ನೀಡಬಹುದು.

ಹೆತ್ತವರಿಗೆ ಬೇಡವಾದ ಕೂಸುಗಳು

ಅಪ್ರಾಪ್ತರು, ಅವಿವಾಹಿತರು ಜನ್ಮ ನೀಡಿದ ನವಜಾತ ಶಿಶುಗಳೇ ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಬರುತ್ತವೆ. ಕಳೆದ ಸಾಲಿನಲ್ಲಿ ರಕ್ಷಣಾ ಘಟಕಕ್ಕೆ ಸೇರ್ಪಡೆಯಾದ 22 ಶಿಶುಗಳ ಪೈಕಿ ಮೂವರು ಮಾತ್ರ ಪರಿತ್ಯಕ್ತ ಮಕ್ಕಳು. ಉಳಿದ 19 ಒಪ್ಪಿಸಲ್ಪಟ್ಟ ನವಜಾತ ಶಿಶುಗಳು.

ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿನ ಅಪ್ರಾಪ್ತರು ಹಾಗೂ ಅವಿವಾಹಿತ ಮಹಿಳೆಯರು ತಾವು ಜನ್ಮ ನೀಡುವ ಮಕ್ಕಳನ್ನು ಪೊರೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿವೆ. ಇಂತವರು ಮಕ್ಕಳನ್ನು ರಕ್ಷಣಾ ಘಟಕಕ್ಕೆ ಕಾನೂನುಬದ್ಧವಾಗಿ ಒಪ್ಪಿಸುತ್ತಾರೆ. ಅಷ್ಟಾಗಿಯೂ ಅವರಿಗೆ ತಮ್ಮ ಮಗುವನ್ನು ಹಿಂದಕ್ಕೆ ಪಡೆದುಕೊಳ್ಳಲು 60 ದಿನಗಳ ಅವಕಾಶ ನೀಡಲಾಗುತ್ತದೆ. ಹೀಗೆ ಮಗುವನ್ನು ಹಿಂಪಡೆದ ಪ್ರಕರಣಗಳು ತೀರಾ ವಿರಳ ಎನ್ನುತ್ತಾರೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ.

ಕೆಲ ಪ್ರಕರಣಗಳಲ್ಲಿ ಮಗುವಿಗೆ ಜನ್ಮ ನೀಡಿ ಬಳಿಕ ಸಮಾಜ ಹಾಗೂ ಕುಟುಂಬದ ಭಯದಿಂದ ನವಜಾತ ಶಿಶುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟು ಹೋಗುವುದೂ ಉಂಟು. ಇಂತಹ ಮಕ್ಕಳನ್ನು ಸಕಾಲದಲ್ಲಿ ರಕ್ಷಿಸಿ ಅವುಗಳ ಪಾಲನೆ ಮಾಡಲು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಅನುಕೂಲವಾಗಲು ದತ್ತು ಕೇಂದ್ರವೊಂದರ ಅನಿವಾರ್ಯತೆಯಿದೆ.

ಶಿವಮೊಗ್ಗದಲ್ಲಿ ದತ್ತು ಸ್ವೀಕಾರ ಕೇಂದ್ರ ಆರಂಭಿಸುವುದರಿಂದ ನವಜಾತ ಶಿಶುಗಳ ಪಾಲನೆಗೆ ಹೆಚ್ಚು ಅನುಕೂಲವಾಗುತ್ತದೆ. ಆರಂಭದಲ್ಲಿ ಉಡುಪಿ ಬಳಿಕ ಚಿಕ್ಕಮಗಳೂರು ಈಗ ಹಾವೇರಿ ದತ್ತು ಸ್ವೀಕಾರ ಕೇಂದ್ರಕ್ಕೆ ಮಕ್ಕಳನ್ನು ಕರೆದೊಯ್ಯಬೇಕಾದ ಅನಿವಾರ್ಯತೆಯಿದೆ. ಅಲ್ಲಿನ ಕೇಂದ್ರಗಳ ಮೇಲೂ ಒತ್ತಡ ಹೆಚ್ಚುತ್ತಿದೆ.| ಜಿ.ಎಂ.ರೇಖಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧ್ಯಕ್ಷೆ.
ಶಿವಮೊಗ್ಗದಲ್ಲಿ ದತ್ತು ಸ್ವೀಕಾರ ಕೇಂದ್ರ ಆರಂಭದ ಬಗ್ಗೆ ಪ್ರಸ್ತಾವನೆಗಳು ಬಂದಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಿಸಲ್ಪಟ್ಟ ಮಕ್ಕಳ ಸಂಖ್ಯೆಯನ್ನು ಗಮನಿಸಿದರೆ ಇಲ್ಲಿ ದತ್ತು ಸ್ವೀಕಾರ ಕೇಂದ್ರ ತೆರೆಯುವುದು ಸೂಕ್ತ ಎನಿಸುತ್ತದೆ. ಈ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು.| ಡಾ.ಅಂತೋಣಿ ಸೆಬಾಸ್ಟಿಯನ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net