ಬಿಳಿ ಜುಬ್ಬಾ ಹಾಕಿ, ಬಿಳಿ ಕಾರಲ್ಲಿ ಬಂದು ಸ್ಥಾನ ಕೇಳೋದಲ್ಲ!

DK Shivakumar
Published on

ಬೆಂಗಳೂರು: ಬಿಳಿ ಜುಬ್ಬಾ ಹಾಕಿ, ಬಿಳಿ ಕಾರಲ್ಲಿ ಬಂದು ಸ್ಥಾನ ಕೇಳೋದಲ್ಲ, ಮೊದಲು ಸಂಘಟನೆ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಎಂದು ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗದರಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಬೇಕೆಂದು ಆಕಾಂಕ್ಷಿ ಹೊಂದಿದ್ದ 10ಕ್ಕೂ ಹೆಚ್ಚು ಮಂದಿ ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡ ಡಿ.ಕೆ.ಶಿವಕುಮಾರ್ ಈ ರೀತಿ ಮಾತಲ್ಲೇ ಚುಚ್ಚಿದರು.
ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ. ನಾಲ್ಕು ಓಟ್ ಹಾಕಿಸದೆ ಬಂದು ಸ್ಥಾನ ಕೇಳ್ತೀರಾ? ಮೊದಲು ನಿಮ್ಮ ಬೂತ್‌ನಲ್ಲಿ ಸಂಘಟನೆ ಮಾಡಿ
ಬೂತ್‌ಗಳಲ್ಲಿ ಲೀಡ್ ಕೊಡಿಸಿ ಬಂದು ನಾಯಕತ್ವ ಕೇಳಿ. ಇಲ್ಲದೆ ಹೋದರೆ ನಾಯಕತ್ವ ಕೊಡೋದಿಲ್ಲ ಎಂದು ಗದರಿಸಿದರು.
ನಾವು ಹೊಸ ನಾಯಕತ್ವ ಬೆಳೆಸುತ್ತೇವೆ. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನೂ ಎಷ್ಟು ದಿನ ಈ ಸ್ಥಾನದಲ್ಲಿ ಇರುತ್ತೇನೆ ಅನ್ನುವುದು ಗೊತ್ತಿಲ್ಲ. ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿಗೊಳಿಸಬೇಕು, ಬೂತ್ ಮಟ್ಟದಲ್ಲಿ ಗಟ್ಟಿ ಮಾಡಬೇಕಾಗಿದೆ ಎಂದರು.
ಕೆಲಸ ಮಾಡುವವರಿಗೆ ಆದ್ಯತೆ. ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು. ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net