

ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವ ಬೆನ್ನಿಗೆ ಅಮೆರಿಕದಲ್ಲಿ ಆಯುಧಗಳ ಖರೀದಿ ಹೆಚ್ಚಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಚುನಾವಣೆ ಅಥವಾ ಫಲಿತಾಂಶದ ದಿನ ಹಿಂಸಾಚಾರಕ್ಕೆ ಇದು ಕಾರಣವಾಗಬಹುದು ಎಂಬ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವಾಲ್ವಾರ್ಟ್ ಮಳಿಗೆಯು ಶಸ್ತ್ರ ಹಾಗೂ ಮದ್ದುಗುಂಡುಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.
ಲಾಕ್ಡೌನ್ ಸಡಿಲಗೊಂಡ ನಂತರ ಶಸ್ತ್ರ ಮತ್ತು ಮದ್ದುಗುಂಡುಗಳ ಮಾರಾಟ ಅಧಿಕವಾಗಿದೆ. 50 ಲಕ್ಷ ಜನರು ಮೊದಲ ಬಾರಿಗೆ ಗನ್, ಬಂದೂಕುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಚಿಲ್ಲರೆ (ರಿಟೇಲರ್ಸ್) ಸರ್ವೆ ಮತ್ತು ಶಸ್ತ್ರ ತಯಾರಿಕೆಯ ಕೈಗಾರಿಕೆಗಳು ಅಂದಾಜಿಸಿವೆ.
ಅಮೆರಿಕದಲ್ಲಿ ಚುನಾವಣೆ ಬಳಿಕ ನಾಗರಿಕ ಕಲಹಗಳು ಉಂಟಾಗಬಹುದು ಎಂದು ಇತ್ತೀಚೆಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಕೂಡ, ‘ಇನ್ನೊಂದು ವಾರದಲ್ಲಿ ಚುನಾವಣಾ ಫಲಿತಾಂಶ ಬರಲಿದೆ. ಆದರೆ, ನಾಗರಿಕ ಘರ್ಷಣೆಯ ಅಪಾಯವೂ ಇದೆ. ಹೀಗಾಗಿ ತಪು್ಪ ಮಾಹಿತಿ, ದ್ವೇಷ ಕೆರಳಿಸುವ ಪೋಸ್ಟ್ಗಳ ವಿರುದ್ಧ ಕಂಪನಿ ಕ್ರಮ ಕೈಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಜನರು ಮತಗಟ್ಟೆಗೆ ಬಂದೂಕು ತೆಗೆದುಕೊಂಡು ಹೋಗಬಹುದಾಗಿದೆ. ಈ ಕುರಿತು ತಕಾರರು ಅರ್ಜಿ ಬಗ್ಗೆ ಆದೇಶ ನೀಡಿರುವ ಮಿಚಿಗನ್ನ ಕೋರ್ಟ್, ಶಸ್ತ್ರ ಒಯ್ಯುವುದು ತಪ್ಪಲ್ಲ ಎಂದು ಕಾನೂನಿನ ಮುದ್ರೆಯನ್ನೂ ಒತ್ತಿದೆ. ಇದನ್ನು ಬೆಂಬಲಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಟ್ವೀಟ್ ಮಾಡಿದ್ದಾರೆ.
ಜನಸಂಖ್ಯೆಗಿಂತ ಗನ್ ಸಂಖ್ಯೆ ಹೆಚ್ಚು!: ಅಮೆರಿಕದ ಜನಸಂಖ್ಯೆಗಿಂತ ಗನ್ಗಳ ಸಂಖ್ಯೆ ಹೆಚ್ಚಿವೆ ಎನ್ನಲಾಗಿದೆ. ಬಂದೂಕು ಮಾಲೀಕತ್ವದ ಸಂಖ್ಯೆಯಲ್ಲಿ ಇದು ವಿಶ್ವದಲ್ಲೇ ಅಧಿಕವಾಗಿದೆ. ಅಂದಾಜಿನ ಪ್ರಕಾರ, ಪ್ರತಿ 100 ಮಂದಿಯ ಬಳಿ 120.5 ಗನ್ಗಳು ಇವೆ.
ಒಂಬತ್ತು ಗುಂಪುಗಳು ಸಕ್ರಿಯ: ಪೆನ್ಸೆಲ್ವೇನಿಯಾ, ಜಾರ್ಜಿಯಾ, ಮಿಚಿಗನ್, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಸಂಘರ್ಷಮಯ ಸನ್ನಿವೇಶ ಇದೆ ಎಂದು ‘ಶಸ್ತ್ರ ಸಂಘರ್ಷ ಪ್ರದೇಶ ಮತ್ತು ಇವೆಂಟ್ ಡೇಟಾ ಯೋಜನೆ (ಎಸಿಎಲ್ಇಡಿ) ಹಾಗೂ ಬಂಡುಕೋರ ಚಟುವಟಿಕೆ ಮೇಲಿನ ನಿಗಾ ಸಂಸ್ಥೆಗಳು ಎಚ್ಚರಿಸಿವೆ. ಈ ಪ್ರದೇಶದಲ್ಲಿ ಸಮಾಜಘಾತುಕ ಚಟುವಟಿಕೆಗಳು ಚುನಾವಣಾ ವೇಳೆ ಹೆಚ್ಚಾಗಬಹುದು ಎಂದು ವರದಿ ನೀಡಿವೆ. ಪರ್ಯಾಯ ಪೊಲೀಸ್ ಅಥವಾ ಸಾರ್ವಜನಿಕರ ರಕ್ಷಣೆ ಹೆಸರಿನಲ್ಲಿ ಒಂಬತ್ತು ಗುಂಪುಗಳು ಸಕ್ರಿಯವಾಗಿವೆ. ಪ್ರೌಡ್ ಬಾಯ್ಸ್ನ ಪೇಟ್ರಿಯಾಟ್ ಪ್ರೇಯರ್ಸ್, ವೋಥ್ ಕೀಪರ್ಸ್, ಲೈಟ್ ಫೂಟ್ ಮಿಲ್ಟಿಯಾ, ಸಿವಿಲ್ ಡಿಫೆನ್ಸ್ ಫೋರ್ಸ್, ಅಮೆರಿಕನ್ ಕಂಟಿಂಜನ್ಸಿ, ಬೂಗಲೂ ಬೋಯಿಸ್ ಸಂಘಟನೆಗಳು ಹೆಚ್ಚು ಸಕ್ರಿಯವಾಗಿವೆ. ಇವುಗಳಲ್ಲಿ ಕೆಲವು ಅಧ್ಯಕ್ಷ ಟ್ರಂಪ್ಗೆ ಬಹಿರಂಗವಾಗಿ ಬೆಂಬಲ ಸೂಚಿಸಿವೆ. ಹೀಗಾಗಿ ಚುನಾವಣಾ ದಿನ ಅಥವಾ ನಂತರದಲ್ಲಿ ಈ ಗುಂಪುಗಳು ಸಂಘರ್ಷ ನಡೆಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಫಲಿತಾಂಶ ಬಂದರೆ ಅವರನ್ನು ಬೆಂಬಲಿಸುವ ಬಲಪಂಥೀಯ ಹೋರಾಟಗಾರರು ಹಿಂಸಾಚಾರ ನಡೆಸುವ ಸಾಧ್ಯತೆ ಇದೆ ಎಂದು ಟ್ರಂಪ್ ಆಡಳಿತವೇ ಸುಳಿವು ನೀಡಿದೆ.