

ಜಗತ್ತಿನಲ್ಲಿ ಕೋಟ್ಯಾನುಕೋಟಿ ಜೀವರಾಶಿಗಳಿವೆ. ಅದರಲ್ಲಿ ಮನುಷ್ಯನಾಗಿ ಹುಟ್ಟುವುದು ನಿಜಕ್ಕೂ ಪುಣ್ಯವೇ ಆಗಿದೆ. ಏಕೆಂದರೆ ಮನುಷ್ಯನಿಗೆ ಮಾತ್ರ ದೇವರು ಬುದ್ಧಿ, ವಿವೇಕ, ಜ್ಞಾನ, ಕರುಣೆ, ಮಾನವೀಯತೆ, ವಿವೇಚನಾ ಶಕ್ತಿ ಮತ್ತು ಮೌಲ್ಯಗಳನ್ನು ಅರಿಯುವ ಸಾಮರ್ಥ್ಯ ಕೊಟ್ಟಿದ್ದಾನೆ. ಆದರೆ ಮನುಷ್ಯನಾಗಿ ಹುಟ್ಟಿದರೆ ಮಾತ್ರ ಸಾಕಾಗದು. ಮನುಷ್ಯತ್ವವನ್ನು ಅಳವಡಿಸಿಕೊಂಡು ಮೌಲ್ಯಯುತ ಬದುಕನ್ನು ನಡೆಸಿದಾಗ ಮಾತ್ರ ಸುಂದರ ನೆಮ್ಮದಿಯ ಬದುಕು ಪ್ರಾಪ್ತಿಯಾಗುವುದು. ಅದುವೇ ನಿಜವಾದ ಸಂತೃಪ್ತ ಜೀವನ.
ಜೀವನದಲ್ಲಿ ವಿದ್ಯೆ, ಆಸ್ತಿ, ಅಧಿಕಾರ ಎಲ್ಲವೂ ಅವಶ್ಯಕ. ಆದರೆ ಮೌಲ್ಯಗಳು ಇವೆಲ್ಲವುಗಳಿಗಿಂತ ಮಿಗಿಲಾದುದು ಎಂಬುದನ್ನು ಮರೆಯಬಾರದು. ಮೌಲ್ಯಗಳು ಅಂತರಂಗದ ಶಕ್ತಿ. ನಿಷ್ಠೆ, ಪ್ರಾಮಾಣಿಕತೆ, ಸಹಾನುಭೂತಿ, ಕರುಣೆ, ಕೃತಜ್ಞತೆ ಹೀಗೆ ಅನೇಕ ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮನುಷ್ಯ ಮನುಷ್ಯನಾಗಿಯೇ ಇರಲು ಸಾಧ್ಯ. ಇಲ್ಲವಾದರೆ ಮನುಷ್ಯತ್ವ ಕಳೆದುಕೊಂಡು ಮೃಗದಂತಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ವಿಚಾರಗಳಲ್ಲಿ ಮನುಷ್ಯತ್ವ ಮರೆತು ವರ್ತಿಸುವ ಘಟನೆಗಳು ನಡೆಯುತ್ತಲೇ ಇರುವುದನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ವೃದ್ಧರನ್ನು ನಿರ್ಲಕ್ಷಿಸುವುದು, ಹೇಯ ಕೃತ್ಯಗಳನ್ನು ಎಸಗುವುದು, ಮಕ್ಕಳು ಮಹಿಳೆಯರೆನ್ನದೆ ಎಲ್ಲರೊಡನೆ ಕ್ರೂರವಾಗಿ ವರ್ತಿಸುವುದು, ಅತ್ಯಾಚಾರ, ಹಿಂಸೆ, ಕೊಲೆ ಪ್ರಕರಣಗಳನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಬಹುಶಃ ಇವುಗಳಿಗೆ ಮುಖ್ಯ ಕಾರಣ ಕುಸಿಯುತ್ತಿರುವ ಜೀವನ ಮೌಲ್ಯಗಳು.
ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗಲೆಲ್ಲ ಮಕ್ಕಳು, ಯುವಜನತೆ, ಹಿರಿಯರಿಗೆ, ಅಧ್ಯಾಪಕರಿಗೆ, ವೃದ್ಧರು ಬಂದಾಗ ತಾವು ಕುಳಿತಿದ್ದ ಸೀಟಿನಿಂದ ಎದ್ದು ಅವರನ್ನು ಕುಳ್ಳಿರಿಸುತ್ತಿದ್ದರು. ಈಗ ಅಂತಹ ಸನ್ನಿವೇಶಗಳು ಬಹಳಷ್ಟು ಕಡಿಮೆಯೇ. ಈಗೆಲ್ಲ ಒಮ್ಮೆ ಸೀಟಿನಲ್ಲಿ ಕುಳಿತರೆ ಜಪ್ಪಯ್ಯ ಅಂದರೂ ಏಳುವುದಿಲ್ಲ. ಕಂಡಕ್ಟರ್ ಏನಾದರೂ ‘ಪಾಪ ಅವರಿಗೆ ವಯಸ್ಸಾಗಿದೆ, ಸೀಟು ಬಿಟ್ಟು ಕೊಡಿ’ ಎಂದು ವಿನಂತಿಸಿದರೂ, ಸೀಟಲ್ಲಿ ಕೂತವರು ‘ಏನ್ರೀ ನಾವು ಟಿಕೆಟ್ ಮಾಡಿಸಿಲ್ವಾ, ಸುಮ್ನೆ ಬಂದಿದ್ದೀವಾ!’ ಎಂದು ದಬಾಯಿಸುತ್ತಾರೆ. ಮತ್ತೆ ವಿನಂತಿಸಿದರೆ ಒಲ್ಲದ ಮನಸ್ಸಿನಿಂದ ಗೊಣಗುತ್ತಾ ಸೀಟು ಬಿಟ್ಟುಕೊಡುತ್ತಾರೆ. ಹಿರಿಯರಿಗೆ ಗೌರವ ನೀಡುತ್ತಿದ್ದ ಆ ಕಾಲಕ್ಕೂ ಈ ಕಾಲಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಈ ಮೂಲಕ ತಿಳಿಯಬಹುದು.
ಕೆಲವು ವರ್ಷಗಳ ಹಿಂದೆ ಶಾಲೆಗಳಲ್ಲಿ ಕಾಪಿ ಪುಸ್ತಕದ ಜೊತೆಗೆ, ಅಂದು ತಾನು ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಒಂದು ವಾಕ್ಯವನ್ನು ಪುಸ್ತಕದಲ್ಲಿ ಬರೆಯುವ ಪರಿಪಾಠವಿತ್ತು. ‘ಇಂದು ನಾನು ಅಜ್ಜಿಗೆ ರಸ್ತೆ ದಾಟಲು ನೆರವಾದೆ, ರಸ್ತೆಯಲ್ಲಿದ್ದ ಕಸವನ್ನು ಕಸದ ಬುಟ್ಟಿಗೆ ಹಾಕಿದೆ, ತಾಯಿಗೆ ತರಕಾರಿ ಹೆಚ್ಚುವಲ್ಲಿ ಸಹಕರಿಸಿದೆ...’ ಹೀಗೆ ಏನಾದರೊಂದು ಒಳ್ಳೆಯ ಕೆಲಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪುಸ್ತಕದಲ್ಲಿ ಬರೆದು ಶಿಕ್ಷಕರಲ್ಲಿ ಒಪ್ಪಿಸುತ್ತಿದ್ದರು. ಶಿಕ್ಷಕರು ಮಕ್ಕಳು ಮಾಡಿದ ಒಳ್ಳೆಯ ಕೆಲಸವನ್ನು ತರಗತಿಯಲ್ಲಿ ಹೇಳಿ ಬೆನ್ನು ತಟ್ಟಿ ಪ್ರಶಂಸಿಸುತ್ತಿದ್ದರು. ಇದರಿಂದ ಮಕ್ಕಳಿಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಹುರುಪು ಬರುತ್ತಿತ್ತು. ಈ ಚಟುವಟಿಕೆಯು ಮಕ್ಕಳಿಗೆ ಗೊತ್ತಿಲ್ಲದ ರೀತಿಯಲ್ಲಿ ಮೌಲ್ಯವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತಿತ್ತು.
ಶಾಲಾ, ಕಾಲೇಜುಗಳು ಪಠ್ಯ, ವೃತ್ತಿ ಆಧಾರಿತ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗಬಾರದು. ಶಿಕ್ಷಣದ ಜೊತೆಗೆ ಮಾನವೀಯ ಜೀವನ ಮೌಲ್ಯಗಳನ್ನು ತಿಳಿಹೇಳಿ ಉತ್ತಮ ಬದುಕನ್ನು ರೂಪಿಸುವ ಅಡಿಗಲ್ಲಾಗಬೇಕು. ಈ ಅಡಿಗಲ್ಲೇ ಮುಂದೆ ಬದುಕನ್ನು ಅರ್ಥಪೂರ್ಣವಾಗಿಸುವುದು ಅಥವಾ ಸಾರ್ಥಕಗೊಳಿಸುವುದು.
ನಮ್ಮ ದೈನಂದಿನ ಬದುಕು ಉಡುಗೆ- ತೊಡುಗೆ, ಊಟ, ಕೆಲಸ, ವಿಶ್ರಾಂತಿ ಇಷ್ಟಕ್ಕೇ ಸೀಮಿತವಲ್ಲ. ಇವೆಲ್ಲವೂ ಬದುಕಿನ ಅಗತ್ಯಗಳೂ ಹೌದು. ಹೊಟ್ಟೆ ತುಂಬಿಸಲು ಕೆಲಸ ಮಾಡಬೇಕು, ದೇಹ ಮುಚ್ಚಲು ಬಟ್ಟೆ ಬೇಕು, ಆರೋಗ್ಯ ಕಾಪಾಡಲು ವಿಶ್ರಾಂತಿ ಅಗತ್ಯ. ಆದರೆ, ಬದುಕಿನ ಉದ್ದೇಶವನ್ನು ಇವುಗಳಿಗೆ ಮಾತ್ರ ಸೀಮಿತಗೊಳಿಸಿದರೆ ಅದರಲ್ಲಿ ಜೀವನದ ಅರ್ಥ ಇರುವುದಿಲ್ಲ.
ಎಲ್ಲ ಜೀವಿಗಳೂ ಬದುಕುತ್ತವೆ. ಆಹಾರ, ಆಶ್ರಯ, ವಿಶ್ರಾಂತಿ ಇವೆಲ್ಲ ಸಹಜ. ಹಕ್ಕಿಗಳು ಗೂಡು ಕಟ್ಟುತ್ತವೆ, ಪ್ರಾಣಿಗಳು ಆಹಾರ ಹುಡುಕುತ್ತವೆ, ಕಾಡುಮೃಗಗಳು ವಿಶ್ರಾಂತಿ ಪಡೆಯುತ್ತವೆ. ಅವು ಬದುಕನ್ನು ಅಷ್ಟರಲ್ಲಿ ನಿಲ್ಲಿಸುತ್ತವೆ. ಆದರೆ ಮನುಷ್ಯ ಮಾತ್ರವೇ ಬುದ್ಧಿ, ಜ್ಞಾನ, ಕರುಣೆ, ವಿಚಾರಶಕ್ತಿ, ಕಲೆ, ಸಂಸ್ಕೃತಿ ಇವೆಲ್ಲವನ್ನು ಅಭಿವ್ಯಕ್ತಿಗೊಳಿಸಬಲ್ಲ. ಅದಕ್ಕಾಗಿ ಮನುಷ್ಯ ಇತರೆಲ್ಲ ಪ್ರಾಣಿ, ಪಕ್ಷಿಗಳಿಗಿಂತ ವಿಭಿನ್ನ, ವಿಶಿಷ್ಟ. ಯಾವಾಗ ಮನುಷ್ಯ ತನ್ನ ಬದುಕನ್ನು ಕೇವಲ ಹೊಟ್ಟೆಬಟ್ಟೆಗಾಗಿ ಸೀಮಿತಗೊಳಿಸುತ್ತಾನೋ ಆಗ ಅವನಿಗೂ ಪ್ರಾಣಿಗಳಿಗೂ ಏನೂ ವ್ಯತ್ಯಾಸ ಇರುವುದಿಲ್ಲ.
ಅಧ್ಯಾತ್ಮ, ಕಲೆ, ನಾವೀನ್ಯ ಬೆಳೆಸಿಕೊಳ್ಳದ ಮನುಷ್ಯನ ಬದುಕು ಯಾಂತ್ರಿಕವಾಗುತ್ತದೆ. ಜೊತೆಗೆ ಇಂದಿನ ತಂತ್ರಜ್ಞಾನ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವನಲ್ಲಿ ದಿನೇದಿನೆ ಶಾಂತಿ ಮತ್ತು ಮಾನವೀಯ ಗುಣಗಳು ಕುಗ್ಗುತ್ತಿರುವುದರಿಂದ ಮಾನವ ಯಂತ್ರಮಾನವನಂತೆಯೇ ಆದರೂ ಆಶ್ಚರ್ಯವೇನಿಲ್ಲ.
ಅತ್ಯಾಧುನಿಕ ಯಂತ್ರ, ಉಪಕರಣಗಳು, ಕೃತಕ ಬುದ್ಧಿಮತ್ತೆ (ಎಐ), ವಿಜ್ಞಾನ-ತಂತ್ರಜ್ಞಾನ ಇವು ಮಾನವನ ಕಾರ್ಯವನ್ನು ಸುಲಭ ಮಾಡುತ್ತಿವೆ. ಆದರೆ ಇವು ಮಾನವತ್ವದ ಅಳಿವಿಗೆ ಕಾರಣವಾಗಬಾರದು. ಈ ಬಗ್ಗೆ ನಾವು ಜಾಗರೂಕರಾಗಬೇಕಾದ ಅಗತ್ಯವಿದೆ. ಅದಕ್ಕಾಗಿ ಮಕ್ಕಳು ಹಾಗೂ ಯುವ ಜನಾಂಗಕ್ಕೆ ಜೀವನ, ನೈತಿಕ ಮೌಲ್ಯಗಳ ಅರಿವು ಮೂಡಿಸುವ ಹಾಗೂ ಮೌಲ್ಯಗಳನ್ನು ಅವರವರ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಜವಾಬ್ದಾರಿ ಈ ಸಮಾಜದ ಮೇಲಿದೆ.
ಒಮ್ಮೆ ಒಂದು ಹಳ್ಳಿಯಲ್ಲಿ ಶ್ರೀಮಂತ ವ್ಯಾಪಾರಿ ವಾಸಿಸುತ್ತಿದ್ದ. ಅವನ ಬಳಿ ಅಪಾರ ಸಂಪತ್ತು, ಮನೆ, ಜಮೀನು ಎಲ್ಲವೂ ಇತ್ತು. ಆದರೆ ಅವನಲ್ಲಿ ಸ್ವಾರ್ಥವೇ ತುಂಬಿಕೊಂಡಿದ್ದರಿಂದ ಬಡವರಿಗೆ ಸಹಾಯ ಮಾಡುವ ಮನಸ್ಸೇ ಇರಲಿಲ್ಲ. ಹಳ್ಳಿಯ ಜನರು ಅವನನ್ನು ಹಣವಂತನಾದರೂ ಹೃದಯವಿಲ್ಲದವನು ಎಂದು ನಿಂದಿಸುತ್ತಿದ್ದರು.
ಅದೇ ಹಳ್ಳಿಯಲ್ಲಿ ಇನ್ನೊಬ್ಬ ರೈತನಿದ್ದ. ಅವನು ಬಡವನಾದರೂ, ಹೃದಯವಂತಿಕೆಯಲ್ಲಿ ಶ್ರೀಮಂತ. ಅಪಾರ ಕರುಣೆ, ದಯೆ ಹೊಂದಿದ್ದ. ಯಾರೇ ಕಷ್ಟದಲ್ಲಿದ್ದರೂ, ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಕೆಲವೊಮ್ಮೆ ತನ್ನ ಊಟವನ್ನೇ ಹಂಚಿಕೊಳ್ಳುತ್ತಿದ್ದ. ಒಂದು ವರ್ಷ ಭಾರೀ ಬರಗಾಲ ಎದುರಾಯಿತು. ಬೆಳೆಗಳು ನಾಶವಾದವು. ಶ್ರೀಮಂತ ವ್ಯಾಪಾರಿ ತನ್ನ ಮನೆಯ ಬಾಗಿಲು ಮುಚ್ಚಿಕೊಂಡು ಕುಳಿತ. ಆದರೆ ಬಡ ರೈತ ತನ್ನ ಬಳಿ ಇದ್ದ ಕೊನೆಯ ಅಕ್ಕಿ ಧಾನ್ಯವನ್ನೂ ಹಂಚಿಕೊಂಡ. ಹಳ್ಳಿಯ ಜನರೆಲ್ಲ ಆತನನ್ನು ಹೊಗಳಿದರು. ಅದನ್ನು ನೋಡಿದ ವ್ಯಾಪಾರಿಗೆ ಅರಿವಾಯಿತು- ಸಂಪತ್ತಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಮನುಷ್ಯತ್ವ, ಕರುಣೆ ಮತ್ತು ಹಂಚಿಕೊಳ್ಳುವ ಮನಸ್ಸಿನಿಂದ ಮಾತ್ರ ಸಮಾಜದಲ್ಲಿ ಮಾನ್ಯತೆ ಸಿಗುತ್ತದೆ ಎಂದು.
ಮನುಷ್ಯನು ತನ್ನ ಬದುಕನ್ನು ಕೇವಲ ಸ್ವಾರ್ಥಕ್ಕಾಗಿ ಅಲ್ಲ, ಸಮಾಜದ ಹಿತಕ್ಕಾಗಿ, ಮಾನವೀಯ ಮೌಲ್ಯಗಳಿಗಾಗಿ, ಮುಂದಿನ ಪೀಳಿಗೆಗೆ ಒಳ್ಳೆಯ ಗುರುತು ಬಿಟ್ಟುಹೋಗುವ ರೀತಿಯಲ್ಲಿ ಬದುಕಬೇಕು. ನಾವು ಮಾತ್ರ ಸುಖಿಯಾಗಿ ಬದುಕುವುದು ಗುರಿಯಲ್ಲ. ನಮ್ಮ ನೆರೆಯವರು, ಹಳ್ಳಿಯವರು, ಸಮಾಜ ಅಭಿವೃದ್ಧಿಯಾಗಬೇಕು. ಧರ್ಮ, ಜಾತಿ, ವರ್ಣ, ಭಾಷೆ ಇವುಗಳ ಅಂತರ ಬಿಟ್ಟು, ಎಲ್ಲರನ್ನೂ ಮನುಷ್ಯರೆಂದು ನೋಡುವ ಮನಸ್ಸು ಬೆಳೆಸಿಕೊಳ್ಳಬೇಕು.
ಸ್ವಾಮಿ ವಿವೇಕಾನಂದರು ತಮ್ಮ ಬಾಲ್ಯದಲ್ಲಿ ನೈತಿಕ ಮೌಲ್ಯಗಳ ಕಥೆ ಕೇಳಿ ಬೆಳೆದವರು. ಮಾತ್ರವಲ್ಲದೆ ಅದನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡರು. ಅದರಿಂದಾಗಿ ಅವರು ಜಗತ್ತಿನ ಶ್ರೇಷ್ಠ ಸಂತರೆನಿಸಿಕೊಂಡು ಸಹಸ್ರಾರು ಯುವಜನತೆಗೆ ದಾರಿದೀಪವಾದರು. ದೀನರು, ದುರ್ಬಲರು, ಬಡವರು ಇವರೆಲ್ಲ ದೇವರ ರೂಪ ಎಂದು ಉಪದೇಶಿಸಿದರು. ಬಡವರು ಅವರೆದುರು ಭಿಕ್ಷೆ ಯಾಚಿಸಿದಾಗ ತಮ್ಮ ಊಟವನ್ನೇ ಕೊಟ್ಟುಬಿಡುತ್ತಿದ್ದರು. ಜೀವನದ ನಿಜವಾದ ಧರ್ಮ ಸೇವೆಯಲ್ಲಿದೆ ಎಂಬ ನೈತಿಕ ಮೌಲ್ಯವನ್ನು ತಮ್ಮ ಜೀವನದ ಮೂಲಕವೇ ತೋರಿಸಿದರು. ನೈತಿಕ ಮೌಲ್ಯಗಳಿಲ್ಲದೆ ಬದುಕು ಕತ್ತಲೆಯ ದಾರಿಯಂತೆ; ಜೀವನ ಮೌಲ್ಯಗಳಿಲ್ಲದೆ ಬದುಕು ಅಸ್ಥಿರ ಗಾಳಿಪಟದಂತೆ.
ನಮ್ಮ ದೇಶದ ಅತಿ ದೊಡ್ಡ ಕೈಗಾರಿಕಾ ಸಾಮ್ರಾಜ್ಯದ ನಾಯಕರಾಗಿದ್ದ, ರತನ್ ಟಾಟಾ ಅವರ ಹೆಸರು ಕೇವಲ ವ್ಯವಹಾರ ಜಗತ್ತಿಗಷ್ಟೇ ಸೀಮಿತವಾಗಿಲ್ಲ. ಅವರ ಜೀವನ ಮಾನವೀಯತೆ, ಕರುಣೆ, ಸಮಾಜಸೇವೆ ಮತ್ತು ಮೌಲ್ಯಯುತ ಶಿಸ್ತುಬದ್ಧ ಬದುಕಿಗೆ ಮಾದರಿಯಾಗಿದೆ. ‘ವ್ಯಾಪಾರ ಕೇವಲ ಲಾಭಕ್ಕಾಗಿ ಅಲ್ಲ, ಜನರ ಹಿತಕ್ಕಾಗಿ ಇರಬೇಕು’ ಎಂದು ನಂಬಿದವರು ರತನ್ ಟಾಟಾ. ಟಾಟಾ ಟ್ರಸ್ಟ್ಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆಸ್ಪತ್ರೆಗಳಿಗೆ ಆಧುನಿಕ ತಂತ್ರಜ್ಞಾನ, ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಮಹಿಳಾ ಸಬಲೀಕರಣ ಇತ್ಯಾದಿ ಕಾರ್ಯಗಳನ್ನು ಮಾಡಿದ್ದಾರೆ. ಅಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ವಿವಿಧ ಕಾರ್ಯಕ್ರಮ, ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಕ್ಷೇತ್ರದ ಸೇವಾ ವ್ಯಾಪ್ತಿ ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮ್ಮ ಆಶಯವಾಗಿದ್ದು ಅದಕ್ಕಾಗಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ.
ಸಂಪತ್ತನ್ನು ಸಂಪಾದಿಸುವುದಕ್ಕಿಂತ ಅದನ್ನು ಸಮಾಜದ ಹಿತಕ್ಕಾಗಿ ಬಳಸುವುದು ಶ್ರೇಷ್ಠ. ಅಂತಹ ಮಾನವೀಯ ಗುಣಗಳು ಇಂದಿಗೂ ನಮಗೆಲ್ಲ ಸ್ಪೂರ್ತಿದಾಯಕವಾದುದು. ಮಾನವನ ಜೀವನದಲ್ಲಿ ಹಣ, ಆಸ್ತಿ, ಭೌತಿಕ ಸಂಪತ್ತು ಅವಶ್ಯಕವಾದರೂ, ಅವು ಶಾಶ್ವತ ಸುಖವನ್ನು ನೀಡುವುದಿಲ್ಲ. ಬದುಕಿಗೆ ಮೌಲ್ಯಗಳು ನಿಜವಾದ ಶ್ರೇಷ್ಠತೆ ನೀಡುತ್ತವೆ.
ಆಸ್ತಿ-ಪಾಸ್ತಿ, ಹಣ-ಅಂತಸ್ತು ಎಲ್ಲವೂ ಕಾಲ ಸರಿದಂತೆ ಕಳೆದುಹೋಗಬಹುದು. ಆದರೆ ಒಳ್ಳೆಯ ಮೌಲ್ಯಗಳು ಕಾಲಾಂತರಕ್ಕೂ ವ್ಯಕ್ತಿಯನ್ನು ಉಳಿಸುತ್ತವೆ, ಗೌರವಕ್ಕೆ ಪಾತ್ರರನ್ನಾಗಿಸುತ್ತವೆ. ಧನ ಸಂಪತ್ತು ಕ್ಷಣಿಕ ತೃಪ್ತಿಯನ್ನು ನೀಡಬಹುದಷ್ಟೆ. ಆದರೆ ಪ್ರಾಮಾಣಿಕ ಬದುಕು, ಸಹಾಯ ಹಸ್ತ, ಕರುಣೆ ತೋರುವುದು ಇತ್ಯಾದಿ ಮನಸ್ಸಿಗೆ ಆನಂದ, ನೆಮ್ಮದಿ ನೀಡುತ್ತದೆ. ಸಂಪತ್ತಿನಿಂದ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ; ಮೌಲ್ಯಾಧಾರಿತ ಬದುಕು ಸದೃಢ ಸಮಾಜವನ್ನು ರೂಪಿಸುತ್ತದೆ. ಮಕ್ಕಳು ನಾವು ಬಿಟ್ಟು ಹೋಗುವ ಆಸ್ತಿ ಮಾತ್ರವಲ್ಲ, ಮೌಲ್ಯಗಳನ್ನೂ ಸ್ವೀಕರಿಸುತ್ತಾರೆ. ಒಳ್ಳೆಯ ಮೌಲ್ಯಗಳನ್ನು ಬಿಟ್ಟು ಹೋದರೆ ಅದು ಅವರಿಗೆ ಶಾಶ್ವತ ಸಂಪತ್ತಾಗುತ್ತದೆ.
ಸಂಪತ್ತು ಬದುಕಿಗೆ ಆಭರಣ, ಆದರೆ ಮೌಲ್ಯಗಳು ಬದುಕಿಗೆ ಆಧಾರ. ನೈತಿಕ ಮೌಲ್ಯಗಳು ಮಾನವನಿಗೆ ದಿಕ್ಕು ತೋರಿಸುವ ದೀಪದಂತೆ; ಜೀವನ ಮೌಲ್ಯಗಳು ನಡೆಯುವ ದಾರಿಗೆ ಶಕ್ತಿ ತುಂಬುವ ನೆಲದಂತೆ. ಇವೆರಡೂ ಒಂದಿಲ್ಲದೆ ಮತ್ತೊಂದು ಅಪೂರ್ಣ. ನೈತಿಕ ಮೌಲ್ಯ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಾನವ ಬದುಕು ಸಾರ್ಥಕವಾಗುತ್ತದೆ, ಸಮಾಜ ಸುಸ್ಥಿರವಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಜಗತ್ತು ಲಭ್ಯವಾಗುತ್ತದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)