ಈ ರಾಶಿಯವರು ಶಿಸ್ತು-ಸಂಯಮ ಕಾಪಾಡಿಕೊಂಡರೆ ಎಂಥ ಲಾಭವನ್ನಾದರೂ ಪಡೆಯಬಹುದು: ವಾರಭವಿಷ್ಯ

Vara-Bhavishya-2
Published on
ಮೇಷ

ಕಾರ್ತಿಕ ಮಾಸದ ಮೂರನೇ ದಿನ ತಲುಪಿದ್ದೇವೆ. ಮೇಷಾ ಧಿಪತಿಯು ತುಲಾ ರಾಶಿಯಲ್ಲಿದ್ದು, ದ್ವಿತೀಯದಲ್ಲಿ ರಾಹು ಸ್ಥಿತನಾಗಿದ್ದಾನೆ. 9ಕ್ಕೆ ಗುರು ಹಾಗೂ ಶನಿ ವಕ್ರತ್ವ ಬಿಟ್ಟು ಮುಂದೆ ಹೋಗುವುದರಿಂದ ವಿಷಯ ವಿಚಾರಗಳು ನಿಮ್ಮಂತೆ ನಡೆಯು ತ್ತದೆ. ಗುರು-ಶನಿ ದಶಮದಲ್ಲಿರುವುದರಿಂದ ಯಾವುದೇ ದುರ್ಘಟನೆ ನಡೆಯುವುದಿಲ್ಲ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

ವೃಷಭ

ವೃಷಭ ರಾಶಿಯಲ್ಲಿ ರಾಹುವಿದ್ದು, ರಾಶ್ಯಾಧಿಪತಿ ಶುಕ್ರನು ಧನುಸ್ಸಿ ನಲ್ಲಿ ಬಂದು ಕುಳಿತಿರುವುದು, 9ರ ಗುರು ರಕ್ಷಣೆ ನೀಡುತ್ತಾನೆ. ಲಗ್ನದಲ್ಲಿ ರಾಹುವು, ಸಪ್ತಮ ಕೇತು ಕೆಲವೊಂದು ನಿರ್ಣಾಯಕ ವಿಚಾರಗಳಲ್ಲಿ ಗೊಂದಲವನ್ನು ಉಂಟುಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಲು ನಿಮ್ಮ ಕುಲಪುರೋಹಿತರಿಂದ ಚಂಡಿಕಾ ಪಾರಾಯಣ ಮಾಡಿಸಿ.

ಮಿಥುನ

ಮಿಥುನ ರಾಶಿ ಅಧಿಪತಿ ಬುಧನು ಪಂಚಮದಲ್ಲಿದ್ದು, ದ್ವಾದಶದಲ್ಲಿ ರಾಹುವು 8ರಲ್ಲಿ ಗುರು-ಶನಿ ಅಷ್ಟೇನು ಒಳ್ಳೆಯ ಕಾಲ ಸೂಚಿಸುವುದಿಲ್ಲ. ನಿಮ್ಮಂತೆ ವಿಚಾರಗಳು ಮುಂದೆ ಹೋಗುವುದು ಕಷ್ಟ. ವೃಥಾ ನಿಷ್ಠುರಮಾಡಿ ಅನ್ಯರಿಗೆ ನೋವುಂಟು ಮಾಡದಿರಿ. ಅಷ್ಟಮ ಗುರುವಿಗೆ ಮಾರ್ತಾಂಡ ಮೈಲಾರ ಲಿಂಗೇಶ್ವರನನ್ನು ಪ್ರಾರ್ಥಿಸಿ.

ಕಟಕ

ಕರ್ಕಾಟಕಾಧಿಪತಿ ಚಂದ್ರನು ಪಂಚಮದಲ್ಲಿ ಜೇಷ್ಠ ನಕ್ಷತ್ರದಲ್ಲಿ ಪ್ರವೇಶಿಸಿ, ಕೇತು ಸಂಪರ್ಕದಲ್ಲಿರುತ್ತಾನೆ. ಸಪ್ತಮ ಗುರು ಶುಭ ನೀಡಿದರೂ, ಶನಿಯು ವಿಘ್ನಗಳನ್ನು ತಂದಿಡುತ್ತಾನೆ. ಗಣಪತಿಯನ್ನು ಪೂಜಿಸಿ. ಈ ವಾರ ಎಳ್ಳೆಣ್ಣೆಯಲ್ಲಿ ದೀಪ ಬೆಳಗಿಸಿ. ಸಾಧ್ಯವಾದಲ್ಲಿ ಕಾರ್ತಿಕ ದೀಪ ದಾನ ಮಾಡಿ. ಒಳ್ಳೆಯ ಕಾಲ ಬರುವುದು. ಧೈರ್ಯದಿಂದಿರಿ.

ಸಿಂಹ

ಆರರಲ್ಲಿ ಗುರುಶನಿ ಇದ್ದು, ಶನಿಯು ಸ್ವಂತ ಮನೆಯಲ್ಲಿ ಇರುವುದರಿಂದ ವಿಘ್ನಗಳು ಬರುವುದಿಲ್ಲ. ಗುರು ಸಪ್ತಮಕ್ಕೆ ಬಂದ ನಂತರ ಕಾರ್ಯ ಜಯವಾಗುತ್ತದೆ. ಮಾತಾ-ಪಿತರನ್ನು ಪೂಜಿಸಿ. ಸಿಂಹಾಧಿಪತಿ ಸೂರ್ಯನನ್ನು ನಾನಾ ವಿಧದಿಂದ ಅರ್ಚಿಸಿ-ಪೂಜಿಸಿ, ನಿತ್ಯವೂ ಆದಿತ್ಯ ಹೃದಯ ಪಾರಾಯಣ ಮಾಡಿ. ಸುಖ-ಸಂತೋಷ ಸಿಗಲಿದೆ.

ಕನ್ಯಾ

ಇನ್ನು 15 ದಿನ ಗುರುವು ಪಂಚಮದಲ್ಲಿ ಶನಿಯೂ ಪಂಚಮದಲ್ಲಿದ್ದು ವಿಷಯ ವೇಗವಾಗಿ ಹೋಗಲು ಸಾಧ್ಯವಿಲ್ಲ. ಶನಿಯು ‘ನಾನು ನಿನ್ನನ್ನು ಬಿಡೆನು’ ಎಂಬಂತೆ ಕಟ್ಟಿ ಹಾಕುತ್ತಾನೆ. ಅವನಿಗೆ ಪ್ರಾರ್ಥನೆ ಸಲ್ಲಿಸಿ. ಶನೀಶ್ವರ ಸ್ತೋತ್ರ ಪಠಿಸಿ. ಸ್ವಲ್ಪ ಮಟ್ಟಿಗೆ ಕೆಲಸ-ಕಾರ್ಯ ಸಾಧ್ಯವಾಗುತ್ತದೆ. ನಿರಂತರ ದೈವ ಪ್ರಾರ್ಥನೆ ಇರಲಿ.

ತುಲಾ

ರವಿ-ಕುಜರು ತುಲಾ ರಾಶಿಯಲ್ಲಿದ್ದು, ಬುಧನು ನವೆಂಬರ್ 2ರಿಂದ ಅಲ್ಲಿಗೇ ಬಂದು ಸೇರಿದ್ದಾನೆ. ರವಿ- ಬುಧ ಸಂಪರ್ಕ ಒಳ್ಳೆಯದನ್ನೇ ಮಾಡುತ್ತದೆ. ಕುಜನಿಗೆ ಕೇತು ದ್ವಿತೀಯದಲ್ಲಿ ಇರುವುದರಿಂದ ರಕ್ತ ಸಂಬಂಧ ದೋಷ ಅಥವಾ ಚರ್ಮಕ್ಕೆ ಹಾನಿಯುಂಟುಮಾಡಬಹುದು. ಗುರುಚರಿತ್ರೆಯ 17ನೇ ಅಧ್ಯಾಯ ಪಾರಾಯಣ ಮಾಡಿ. ಪಂಚಮಕ್ಕೆ ಗುರು ಬಂದು ಎಲ್ಲವನ್ನು ಸರಿಪಡಿಸುತ್ತಾನೆ.

ವೃಶ್ಚಿಕ

ರಾಶ್ಯಾಧಿಪತಿ ಕುಜನು ದ್ವಾದಶದಲ್ಲಿ ರವಿಯೊಂದಿಗಿದ್ದು ದ್ವಿತೀಯದಲ್ಲಿ ಗುರು-ಶುಕ್ರನು ಗುರುವಿನ ಮನೆಯಲ್ಲಿ ಸ್ಥಿತನಾಗಿದ್ದಾನೆ. ಶನಿ 3ನೇ ಮನೆಯಲ್ಲಿ ಇರುವುದರಿಂದ ಬರಬೇಕಾದ ಧನ-ಸುಖ-ಸಂಪತ್ತು ನಿಮ್ಮನ್ನು ಅರಸಿ ಬರಲಿದೆ. ಕೊಟ್ಟ ಮಾತಿನಂತೆ ನಡೆದು ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ. ಲಕ್ಷಿ್ಮೕನರಸಿಂಹನನ್ನು ಪೂಜಿಸಿ. ನಿಮಗೆ ತೃಪ್ತಿಯಾಗುವಷ್ಟು ಧನ ಸಂಪತ್ತು ಬರುತ್ತದೆ.

ಧನು

ಲಗ್ನದಲ್ಲಿ ಶುಕ್ರನಿದ್ದು, ದ್ವಿತೀಯದಲ್ಲಿ ಶನಿ ಸಂಯೋಗದಲ್ಲಿ ಗುರುವಿದ್ದಾನೆ. ಗುರುಕಟಾಕ್ಷವು ಚೆನ್ನಾಗಿದ್ದು, ಯಾರೊಂದಿಗೂ ವೈಮನಸ್ಯ-ದ್ವೇಷ ಬೇಡ. ನಿಮಗೆ ದೈವ ಸಹಾಯವಿದೆ. ಸಮಯ ಸಾಧಿಸಿ ಕೆಲಸ ಮಾಡುವುದು. ಅನಂತವಾಗಿ ಕೊಡುವ ಅನಂತಪದ್ಮನಾಭನನ್ನು ಪೂಜಿಸಿ ಜೀವನವನ್ನು ಸರಿದೂಗಿಸಿಕೊಂಡು ಮುಂದೆ ಸಾಗಿರಿ. ಧೈರ್ಯವಿರಲಿ, ದೈವಕೃಪೆಯೂ ಇರಲಿ.

ಮಕರ

ಸ್ವಕ್ಷೇತ್ರದಲ್ಲಿ ಶನಿ, ಗುರುವು ನ.20ರಿಂದ ದ್ವಿತೀಯಕ್ಕೆ ಬರುತ್ತಾರೆ. ಕಾಲವು ಸ್ವಲ್ಪ ಮಟ್ಟಿಗೆ ಉತ್ತಮವಾಗಿ ಕಂಡರೂ ದೈವಬಲ-ಗುರು-ನಕ್ಷತ್ರಬಲ ಮನುಷ್ಯನ ಜೀವನಕ್ಕೆ ಅವಶ್ಯಕ. ಪ್ರತ್ಯಕ್ಷದೇವರಾದ ಮಾತಾ-ಪಿತರನ್ನು ವಂದಿಸಿ ಮುಂದೆ ಸಾಗಿ, ಕಾಲಭೈರವನನ್ನು ಪೂಜಿಸಿ. 5 ಸೋಮವಾರ ದೇವರಿಗೆ ಕಡಲೇಬೇಳೆ-ಬೆಲ್ಲ ದಾನ ಮಾಡಿ. ಸುಖ ಹೊಂದುತ್ತೀರಿ.

ಕುಂಭ

ಕುಂಭ ರಾಶಿಯವರಿಗೆ 12ರ ಗುರು-ಶನಿ ಶಿಕ್ಷಣ ಕೊಟ್ಟು ಪಾಠವನ್ನೂ ಕಲಿಸುತ್ತಾರೆ. ನಮ್ಮ ಲೋಪದೋಷವನ್ನು ಸರಿಪಡಿಸಿಕೊಂಡು ಎಚ್ಚರವಾಗಿ ಸಾಗಬೇಕು. ಕಷ್ಟಪಟ್ಟು ಏನನ್ನೂ ಸಾಧಿಸಬಹುದು ಎಂಬ ತಿಳುವಳಿಕೆ ನೀಡುವವನು ಶನಿಯೇ ಆದ್ದರಿಂದ ತಪ್ಪದೇ ಆಂಜನೇಯ ಸ್ತುತಿ, ಸುಂದರಕಾಂಡ ಪಾರಾಯಣ ಮಾಡಿ.

ಮೀನ

ಮೀನರಾಶ್ಯಾಧಿಪತಿ ಏಕಾದಶದಲ್ಲಿದ್ದಾನೆ. ಇನ್ನು ಎರಡು ವಾರಗಳ ಕಾಲ ಗುರುಬಲ ಪೂರ್ಣವಾಗಿದ್ದು, ನೀವು ಶಿಸ್ತು, ಸಂಯಮ ಕಾಪಾಡಿಕೊಂಡರೆ ಎಂಥ ಲಾಭವನ್ನಾದರೂ ಪಡೆಯಬಹುದು. ಬರುವ 5 ಕಾರ್ತೀಕ ಸೋಮವಾರ ಒಪ್ಪತ್ತು ಊಟ ಮಾಡಿ. ಈಶ್ವರ ದೇವಸ್ಥಾನಕ್ಕೆ ಹೆಸರುಬೇಳೆ-ಸಕ್ಕರೆ ಜೇನುತುಪ್ಪ ಸಮರ್ಪಣೆ ಮಾಡಿ. ಶುಭಕಾರ್ಯವು ವೇಗವಾಗಿ ಸಾಗುತ್ತದೆ. ಶಿವಸಹಸ್ರನಾಮ ಪಾರಾಯಣ ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net