

ಉಡುಪಿ: ಬಿಜೆಪಿ ಅಭ್ಯರ್ಥಿಗಳಾದ ವಿ.ಸೋಮಣ್ಣಗೂ ತೊಂದರೆ ಕೊಡುವುದಿಲ್ಲ, ಆರ್.ಅಶೋಕ್ಗೂ ಅಡ್ಡ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೂ ಅದನ್ನು ಪಾಲಿಸುವಂತೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಇಂದು ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯ ತಿಳಿಸಿದರು. ನಾನು ಟೆಂಪಲ್ ರನ್ ಮಾಡುತ್ತಿಲ್ಲ, ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ದೇವರ ಬಗ್ಗೆ ನನಗೆ ನಂಬಿಕೆ ಇದೆ. ಪ್ರಚಾರಕ್ಕಾಗಿ ಹೋದ ಕ್ಷೇತ್ರಗಳ ಎಲ್ಲ ದೇವಸ್ಥಾನಗಳಿಗೂ ಭೇಟಿ ನೀಡಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಅವರು ತಮ್ಮ ದೇವಸ್ಥಾನಗಳ ಭೇಟಿ ಕುರಿತು ಹೇಳಿಕೊಂಡಿದ್ದಾರೆ.
ಕನಕಪುರದಲ್ಲಿ ಆರ್.ಅಶೋಕ ಕೆಲ ನಿಮಿಷಗಳ ಪ್ರಚಾರ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಕನಕಪುರದ ಬಿಜೆಪಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಕನಕಪುರದಲ್ಲಿ ಎಷ್ಟು ಬೇಕಾದರೂ ಪ್ರಚಾರ ಮಾಡಲಿ, ಅವರಿಗೆ ದೊಡ್ಡ ಅವಕಾಶ ಇದೆ. ಯಾರ ಮನವನ್ನು ಬೇಕಾದರೂ ಒಲಿಸಲಿ, ಮತದಾರರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ, ಅಶೋಕ್ಗೆ ಯಾವುದೇ ಅಡಚಣೆ ಮಾಡುವುದಿಲ್ಲ, ನಾವು ಅಡ್ಡ ಬರುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಯಾರೂ ಮಾತನಾಡಬಾರದು, ಗೌರವದಿಂದ ನಡೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ವಿ.ಸೋಮಣ್ಣ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತಯಾಚನೆ ಮಾಡುವ ಹಕ್ಕು ಇದೆ. ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಹೋಗಬಾರದು, ಯಾರು ಎಲ್ಲಿ ಬೇಕಾದರೂ ಪ್ರಚಾರ ಮಾಡಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.