

ನವದೆಹಲಿ: ಪ್ಯಾಂಗಾಂಗ್ ತ್ಸೊ ಸರೋವರ ಸೇರಿ ಲಡಾಖ್ನ ಪೂವಭಾಗದಲ್ಲಿ ನಾಲ್ಕು ಕಡೆಗಳಲ್ಲಿ ಬೀಡುಬಿಟ್ಟಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರು ತಮ್ಮ ಟೆಂಟ್ ಸಮೇತ ಗಂಟುಮೂಟೆ ಕಟ್ಟಿಕೊಂಡು ಹಿಂದಕ್ಕೆ ತೆರಳುತ್ತಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ತೆರವು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರವಷ್ಟೇ ನಾವು ಅಲ್ಲಿಂದ ಹಿಂದೆ ಸರಿಯುತ್ತೇವೆ ಎಂದು ಭಾರತೀಯ ಸೇನಾಪಡೆ ಸ್ಪಷ್ಟಪಡಿಸಿದೆ.
ಅವರು ಟೆಂಟ್ಗಳನ್ನು ಕೀಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಅವರು ನಿಜವಾಗಿಯೂ ಹಿಂದೆಗೆಯುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಭಾರತೀಯ ಸೇನಾಪಡೆ ಹೇಳಿದೆ.
ಕಳೆದ ಎರಡು ತಿಂಗಳಿಂದಲೂ ಚೀನಿಯರು ಅಲ್ಲಿಷ್ಟು, ಇಲ್ಲಿಷ್ಟು ಯೋಧರನ್ನು ಹಿಂದಕ್ಕೆ ಕರೆಯಿಸಿಕೊಂಡು, ಸೇನೆಯನ್ನು ಹಿಂತೆಗೆಯುತ್ತಿರುವುದಾಗಿ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಹಾಗೆ ಮಾಡುತ್ತಿಲ್ಲ. ಆದ್ದರಿಂದ, ಪರಿಶೀಲಿಸಿ, ಅವರು ನಿಜವಾಗಿಯೂ ಹಿಂದಕ್ಕೆ ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಇಲ್ಲಿಂದ ಹಿಂದೆಸರಿಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಜೂ.15ರಂದು ಕೂಡ ಹಿಂದಕ್ಕೆ ಹೋದಂತೆ ಮಾಡಿ, ಹೆಚ್ಚುವರಿ ಯೋಧರನ್ನು ಚೀನಿಯರು ಕರೆಯಿಸಿಕೊಂಡಿದ್ದರು. ಅವರು ಟೆಂಟ್ ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಯೋಧರು ಮುಂದಾದಾಗ, ಅವರ ಮೇಲೆ ಮುಳ್ಳುತಂತಿ ಸುತ್ತಿದ್ದ ಬಡಿಗೆ ಮತ್ತು ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿದ್ದರು. ಈ ಗಲಾಟೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.