ನಮಗೆ ನವರಂಗಿದು, ಚಕ್ರವರ್ತಿದು ಎಲ್ಲರದ್ದೂ ಗೊತ್ತಿದೆ! ಡಿ.ಕೆ.ಶಿವಕುಮಾರ್ ಸಿಡಿಮಿಡಿ

dk shivakumar
dk shivakumar statement over bjp
Published on

ಬೆಂಗಳೂರು: ಗುತ್ತಿಗೆದಾರರು ನೋವಿನಲ್ಲಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಅವರು ಮೊದಲು ಉತ್ತರ ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಿ ಎಂದು ಹೇಳಿದ್ದ ಗುತ್ತಿಗೆದಾರ ಹೇಮಂತ್ ಮತ್ತಿತರರು ತಮ್ಮ ಹೇಳಿಕೆ ವಾಪಸ್ ಪಡೆದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಮ್ಮ ಅಜ್ಜಯ್ಯನ ಸಹವಾಸ ಏನು ಎಂದು ಅವರಿಗೆಲ್ಲಾ ಗೊತ್ತಿಲ್ಲ. ನಾನೀಗ ತಕ್ಷಣಕ್ಕೆ ಉತ್ತರ ನೀಡಲು ಹೋಗುವುದಿಲ್ಲ. ನಮಗೆ ನವರಂಗಿದು, ಚಕ್ರವರ್ತಿದು ಎಲ್ಲರದ್ದೂ ಗೊತ್ತಿದೆ. ಎಲ್ಲವನ್ನು ಒಮ್ಮೆಗೆ ಬಿಟ್ಟರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಇದಕ್ಕೆಲ್ಲ ಆನಂತರ ಉತ್ತರಿಸುವೆ ಎಂದರು.

ಶಾರ್ಕ್ ಮೀನಿನಂತಹ ಒಂದಷ್ಟು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲವಾದರೂ ಬಿಲ್ ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ. ನಮಗೆ ಜನರ ಹಣದ ಮೇಲೆ ಜವಾಬ್ದಾರಿ ಇದೆ. ಸತ್ಯಶೋಧನೆಯ ವರದಿ ಬರಲಿ. ಆಗ ಪ್ರಾಮಾಣಿಕ ಗುತ್ತಿಗೆದಾರರಿಗೆ ಹಣ ನೀಡುತ್ತೇವೆ ಎಂದು ಹೇಳಿದರು.

ಎಲ್ಲಾ ಅಕ್ರಮಗಳ ನಾಯಕ ಅಶ್ವತ್ಥನಾರಾಯಣ. ಇವರು ದೊಡ್ಡ ಇತಿಹಾಸವನ್ನೇ ಹೊಂದಿದ್ದಾರೆ. ನಮ್ಮ ಗ್ಯಾರಂಟಿ ಸರ್ಕಾರದ ಜನಪ್ರಿಯತೆ ಸಹಿಸದೆ ಮೊದಲ ದಿನದಂದಲೂ ಆಧಾರರಹಿತ ಆರೋಪ ಮಾಡುತ್ತಲೇ ಇದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗದವರು ಸುಳ್ಳು ಆರೋಪಗಳ ಮೊರೆ ಹೋಗಿದ್ದಾರೆ ಎಂದು ಚಾಟಿ ಬೀಸಿದರು.

ಗುತ್ತಿಗೆದಾರರು ನಿಮ್ಮನ್ನು ಬಂದು ಭೇಟಿ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, ನಮ್ಮನ್ನು ಬಂದು ಯಾರು ಬೇಕಾದರೂ ಭೇಟಿಯಾಗಲಿ. ಈಗಾಗಲೇ ಮುನಿರತ್ನ ಭೇಟಿಯಾಗಿದ್ದರು. ಚಿಕ್ಕಪೇಟೆ ಶಾಸಕರು ಬಂದು ಭೇಟಿಯಾಗಿದ್ದರು. ಯಾರು ಬಂದು ಭೇಟಿ ಆಗುವುದ್ದಕ್ಕೂ ಅಭ್ಯಂತರವಿಲ್ಲ ಎಂದು ತಿಳಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರ ಯಾವುದೇ ಕಮಿಷನ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ರಾಜ್ಯಪಾಲರಿಗೆ ಪತ್ರ ಬರೆದಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ನನ್ನನ್ನು ಭೇಟಿಯಾಗಿದ್ದರು. ನಾವು ಬಿಜೆಪಿಯವರ ಮಾತು ಕೇಳಿ ಈ ಕೆಲಸ ಮಾಡಿದೆವು, ನಮ್ಮದು ಯಾವುದೇ ಆರೋಪಗಳಿಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಡಿಸಿಎಂ ಟ್ಯಾಕ್ಸೃ್ ಇದೆ ಎನ್ನುವ ಅಶ್ವತ್ಥ ನಾರಾಯಣ ಅವರ ಆರೋಪಕ್ಕೆ ಉತ್ತರಿಸಿ, ನಾನು ಎಷ್ಟು ಟ್ಯಾಕ್ಸೃ್ ಕಟ್ಟುತ್ತೇನೆ ಎನ್ನುವುದನ್ನು ತಿಳಿಸುತ್ತೇನೆ. ಆಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು ಸಿದ್ದನಿದ್ದೇನೆ. ಮೊದಲು ಅವರು ಬಿಜೆಪಿಯನ್ನು ಶುದ್ಧಿ ಮಾಡಲಿ. ರಾಮನಗರ ಶುದ್ಧ ಮಾಡುತ್ತೇನೆ ಎಂದು ಬಂದರು. ಆದರೆ ಬಿಜೆಪಿ ಕಚೇರಿ ತೆರೆಯಲು ಅವರ ಕೈಲಿ ಆಗಲಿಲ್ಲ. ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಎಲ್ಲಾ ಆಗಿದ್ದರೂ ಒಂದೇ ಒಂದು ನಗರ ಪಾಲಿಕೆ ಗೆಲ್ಲುವ ತಾಕತ್ತು ಅವರ ಬಳಿ ಇಲ್ಲ. ನಾನಲ್ಲ ನಮ್ಮ ರಾಮನಗರದ ಜನ ಸರಿಯಾದ ಉತ್ತರ ಕೊಟ್ಟು ಕಳಿಸಿದ್ದಾರೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net