

ಮಡಿಕೇರಿ: "ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಕಿವುಡಾಗಿದೆ. ನಾಳೆ ನಡೆಯುವ ಕೇಂದ್ರ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ರಾಜ್ಯ ಇರಿಸಿಲ್ಲ" ಎಂದು ಸಿಎಂ ಸಿದ್ದರಾಮಯ್ಯಕಿಡಿಕಾರಿದ್ದಾರೆ.
ಇಂದು ಕೊಡಗಿನ ಭಾಗಮಂಡಲದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಸಿಎಂ, "ಕಾವೇರಿ ನದಿ ಸ್ವಚ್ಛತೆ ಬಗ್ಗೆ ರಚಿಸಲಾದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. 2017ರಲ್ಲಿ ಭಾಗಮಂಡಲದಲ್ಲಿ ಮೇಲು ಸೇತುವೆ ಕಾಮಗಾರಿ ಆರಂಭವಾಗಿತ್ತು. ನಮ್ಮ ಸರ್ಕಾರದಿಂದ ಕೊಡಗಿನಲ್ಲಿ ಮಹತ್ವದ ಯೋಜನೆ ಇದಾಗಿದೆ. ಈ ಬಗ್ಗೆ ಸಮಿತಿ ರಚಿಸಿ ವರದಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದರು.
"ವನ್ಯಜೀವಿ ಮಾನವ ಸಂಘರ್ಷ ರಾಜ್ಯವ್ಯಾಪಿ ಸಾಮಾನ್ಯ ಸಮಸ್ಯೆ ಆಗಿದೆ. ನಾಡಿನಲ್ಲಿ ಆನೆ, ಚಿರತೆ ಸಂಚಾರ ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಆಹಾರ, ನೀರು ಅರಸಿ ನಾಡಿಗೆ ಬರುತ್ತಿವೆ. ಸಂಘರ್ಷ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆಯ ಮಾತುಗಳನ್ನಾಡಿದರು.
"ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ತೆರಿಗೆ ಪಾಲನ್ನೇ ಇನ್ನೂ ನೀಡದೆ ಕೇಂದ್ರ ಸರ್ಕಾರ ವಂಚಿಸಿದೆ. ನಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಕಿವುಡಾಗಿದೆ. ನಾಳೆ ನಡೆಯುವ ಕೇಂದ್ರ ಬಜೆಟ್ 2025ರ ಬಗ್ಗೆ ಹೆಚ್ಚಿನ ನಿರೀಕ್ಷೆ ರಾಜ್ಯ ಇರಿಸಿಲ್ಲ" ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.