ಭಯೋತ್ಪಾದನೆಯಲ್ಲೇ ಮುಳುಗಿರುವವರು ನಮಗೆ ಬುದ್ದಿ ಹೇಳೋ ಅವಶ್ಯಕತೆ ಇಲ್ಲ: ಪಾಕ್​ಗೆ ಭಾರತ ತಿರುಗೇಟು!United Nations

PARVATANENI HARISH
Published on

United Nations: ಪಾಕಿಸ್ತಾನವು ಇನ್ನೂ ಭಯೋತ್ಪಾದನೆ ಹಾಗೂ ಮತಾಂಧತೆಯಲ್ಲಿ ಮುಳುಗಿ ಹೋಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕ್​ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಮಾತನಾಡಿದ ಯುಎನ್​ನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್​, ಒಂದು ಕಡೆ ಭಾರತವಿದೆ. ಅದು ಪ್ರಬುದ್ಧ ಪ್ರಜಾಪ್ರಭುತ್ವ, ಬೆಳೆಯುತ್ತಿರುವ ಆರ್ಥಿಕತೆ, ಬಹುತ್ವ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜವನ್ನು ಹೊಂದಿದೆ. ಇನ್ನೊಂದು ಕಡೆ ಪಾಕಿಸ್ತಾನವಿದೆ. ಅದು ಮತಾಂಧತೆ ಮತ್ತು ಭಯೋತ್ಪಾದನೆಯಲ್ಲಿ ಮುಳುಗಿದ್ದು ಮತ್ತು IMF ನಿಂದ ಸರಣಿ ಸಾಲಗಳನ್ನು ಪಡೆಯುತ್ತಿದೆ ಎಂದು ಖಡಕ್​ ತಿರುಗೇಟು ಕೊಟ್ಟರು.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್​ ದರ್​ ಭಾರತದ ಕುರಿತು ತಪ್ಪು ಮಾಹಿತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಈ ತಿರುಗೇಟು ನೀಡಿದೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನವು ಬಹುಪಕ್ಷೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಉಲ್ಲೇಖಿಸಿದ ಹರೀಶ್, ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲದ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಾಗ ಪಾಕಿಸ್ತಾನವು ಧರ್ಮೋಪದೇಶಗಳನ್ನು ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ಮತ್ತು ಜವಾಬ್ದಾರಿಯುತ ಜಾಗತಿಕ ದೇಶವಾಗಿ ಭಾರತವು ಶಾಂತಿಯುತ, ನ್ಯಾಯಯುತ ಮತ್ತು ಸಮಾನ ಜಗತ್ತನ್ನು ನಿರ್ಮಿಸಲು ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ನಿಯಮಗಳು, ಸಂವಾದ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಜಾಗತಿಕ ಕ್ರಮವನ್ನು ಬಲಪಡಿಸಲು ಭಾರತವು ವಿಶ್ವಸಂಸ್ಥೆಯ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಂಡಿದೆ ಎಂದು ಪರ್ವತನೇನಿ ತಿಳಿಸಿದರು.

ಪಾಕಿಸ್ತಾನವನ್ನು ಉಲೇಖಿಸುತ್ತಾ ಪರ್ವತನೇನಿ ಅವರು ಏಪ್ರಿಲ್​ 22ರಂದು ಪಹಲ್ಗಾಮ್​ ದಾಳಿಯಲ್ಲಿ 26 ಅಮಾಯಕ ನಾಗರಿಕರನ್ನು ಪಾಕ್​ ಮೂಲದ ಭಯೋತ್ಪಾದರು ಗುಂಡಿಕ್ಕಿ ಕೊಂದ ಘಟನೆಯನ್ನು ಮಂಡಳಿಗೆ ನೆನಪಿಸಿದರು. ಪಾಕಿಸ್ತಾನ ಹಾಗೂ POKಯಲ್ಲಿನ ಉಗ್ರರ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತವು ಕೈಗೊಂಡ ಆಪರೇಷನ್​ ಸಿಂಧೂರವು ಉಗ್ರರಿಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net