ನಾವು ಭೂಕಬಳಿಸುವವರಲ್ಲ... ವಂಚಕ ಚೀನಾದ ಹೇಳಿಕೆ

china
Published on

ನವದೆಹಲಿ: ನಾವು ಬೇರೆಯವರ ಭೂಮಿಯನ್ನು ಕಬಳಿಸುವವರಲ್ಲ. ನಮಗೆ ರಾಜ್ಯ ವಿಸ್ತರಣೆಯ ಅವಶ್ಯಕತೆಯೂ ಇಲ್ಲ... ಅದಕ್ಕಾಗಿ ಹುನ್ನಾರ ನಡೆಸುವವರಂತೂ ಮೊದಲೇ ಅಲ್ಲ ಎಂದು ಚೀನಾ ಹೇಳಿದೆ.

ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಡಿ ವಿಸ್ತರಣೆಯವರ ಕಾಲ ಮುಗಿದಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಪರ್ವದ ಕಾಲವಾಗಿದೆ. ಭೂಕಬಳಿಸುವವರು ಅಂಥ ಕುಕೃತ್ಯಗಳನ್ನು ಕೈಬಿಟ್ಟು ಸುಮ್ಮನಿರಬೇಕು. ಇಲ್ಲವೇ ನಾಶವಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಮಾಡಿರುವ ಭೂಕಬಳಿಕೆಯ ಆರೋಪಗಳೆಲ್ಲವೂ ಸುಳ್ಳು. ನಾವು ಅಂಥ ಮನೋಭಾವದವರೇ ಅಲ್ಲ ಎಂದು ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್​ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಚೀನಾ 14 ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ 12 ರಾಷ್ಟ್ರಗಳ ಜತೆ ಮಾತುಕತೆಯ ಮೂಲಕ ಶಾಂತಿಯುತವಾಗಿ ಗಡಿಯನ್ನು ನಿಖರವಾಗಿ ಗುರುತಿಸಿಕೊಂಡಿದೆ. ಸ್ನೇಹ ಮತ್ತು ಸೌಹಾರ್ದಯುತವಾಗಿ ಆ ರಾಷ್ಟ್ರಗಳೊಂದಿಗೆ ಒಡನಾಡುತ್ತಿದೆ. ಹೀಗಿರುವಾಗ ಚೀನಾವನ್ನು ಗಡಿವಿಸ್ತರಣೆಯ ಹಪಾಹಪಿ ಹೊಂದಿರುವ ರಾಷ್ಟ್ರದ ಎಂದು ದೂಷಿಸುವುದು ಸರಿಯಲ್ಲ. ಇಂಥ ವೃಥಾ ಆರೋಪಗಳನ್ನು ಮಾಡುವುದರಿಂದ, ವಿವಾದ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗಡಿವಿಸ್ತರಣೆಯ ಯುಗ ಮುಗಿದು ಹೋಗಿದೆ. ಭಾರತದ ಶತ್ರುಗಳಿಗೆ ನಿಮ್ಮೆಲ್ಲ ಶಕ್ತ, ಸಾಮರ್ಥ್ಯ, ಶೌರ್ಯದ ಪರಿಚಯವಾಗಿದೆ ಎಂದು ಹೇಳಿ, ಚೀನಾದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net