

ಕೆಲವೊಮ್ಮೆ ಬಿಜಿನೆಸ್ ಪಾರ್ಟಿಯಲ್ಲಿ ಊಟಕ್ಕೆ ಕುಳಿತಿರುವಾಗ ಚಮಚ, ಫೋರ್ಕ್ ಮತ್ತು ಚಾಕುಗಳನ್ನು ಹೇಗೆ ಬಳಸಬೇಕು ಅನ್ನೋದು ಗೊತ್ತಾಗದೆ ಮುಜುಗರ ಅನ್ನಿಸಬಹುದು. ಚಾಕುವನ್ನು ಬಲಗೈನಲ್ಲಿ, ಫೋರ್ಕನ್ನು ಎಡಗೈನಲ್ಲಿ, ಹಿಡಿದು, ಚಾಕುವಿನಿಂದ ಆಹಾರವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ನಂತರ ಫೋರ್ಕಿನಲ್ಲಿ ಚುಚ್ಚಿ ತಿನ್ನುವುದು ಪಾಶ್ಚಾತ್ಯರ ಅಭ್ಯಾಸ. ಆದರೆ ಭಾರತೀಯರು ಯಾವಾಗಲೂ ಬಲಗೈಯಲ್ಲೇ ತಿನ್ನೋದು. ಆದ್ದರಿಂದ ನೀವು ಚಾಕುವನ್ನು ಮೊದಲು ಬಲಗೈನಲ್ಲಿ ಉಪಯೋಗಿಸಿ ನಂತರ ಬಲಗೈಗೆ ಫೋರ್ಕನ್ನು ವರ್ಗಾಯಿಸಿ ತಿಂದ್ರೆ ತಪ್ಪೇನಿಲ್ಲ. ಆದರೆ ನಿಮ್ಮ ಕೈಗಳ ಚಲನವಲನಗಳಲ್ಲಿ ಒಂದು ಸೊಬಗು ಇರ್ಬೇಕು. ತಿನ್ನುವಾಗ ತುಟಿ ಮುಚ್ಚಿಕೊಂಡು ಶಬ್ದ ಮಾಡದೇ ತಿನ್ನಬೇಕು. ಪಾನೀಯಗಳನ್ನು ಸ್ಟ್ರಾನಲ್ಲಿ ಕುಡಿಯುವಾಗ ಕೊನೆಯಲ್ಲಿ ‘ಸುರ್ಸುರ್’ ಎಂಬ ಶಬ್ದಬಾರದಂತೆ ನೋಡಿಕೊಳ್ಳಬೇಕು.
ಇನ್ನು ಇಂಥದೇ ಕೆಲವು ಸಾಮಾನ್ಯ ಸಾಮಾಜಿಕ ನಡಾವಳಿ ವಿಷಯಗಳು ಯಾವುವೆಂದರೆ ಸಭೆ, ಸಮಾರಂಭಗಳಲ್ಲಿ ಒಬ್ಬರನ್ನೊಬ್ಬರಿಗೆ ಪರಿಚಯ ಮಾಡಿಸಿದಾಗ ಎದುರಿನವರ ಕೈಯನ್ನು ಪೈಲ್ವಾನರಂತೆ ಜೋರಾಗಿ ಒತ್ತುವುದಾಗಲಿ, ಇಲ್ಲವೇ ಜೀವವೇ ಇಲ್ಲದಂತೆ ಕುಲುಕುವುದಾಗಲಿ ಮಾಡಬಾರದು. ಭದ್ರವಾಗಿ ಹಿಡಿದು ಕುಲುಕಿದಾಗ ನಿಮಗೆ ಇರುವ ಆತ್ಮವಿಶ್ವಾಸವನ್ನು ಅದು ತೋರಿಸುತ್ತದೆ. ಔಚಿತ್ಯಪೂರ್ಣ ನಡವಳಿಕೆಯೇನೆಂಬುದು ಅಭ್ಯಾಸಬಲದಿಂದ ಮಾತ್ರ ಗೊತ್ತಾಗೋದು. ಅಂದಹಾಗೆ ನಿಮ್ಮ ಕಿಸೆಯಲ್ಲಿ ಯಾವಾಗಲೂ ಒಂದು ಶುದ್ಧವಾದ ಕರವಸ್ತ್ರವನ್ನು ಇಟ್ಟುಕೊಂಡಿರಿ. ಇದು ನೆಗಡಿ ಆದಾಗಲೋ, ಮಾಸ್ಕ್ ಇಲ್ಲದಾಗಲೋ, ಸಣ್ಣಪುಟ್ಟ ಗಾಯವಾದಾಗಲೋ ಉಪಯೋಗಕ್ಕೆ ಬರುತ್ತದೆ. ಆದರೆ ದುಡ್ಡು ಇಟ್ಟುಕೊಂಡಿರೋ ಜೇಬಲ್ಲಿ ಕರವಸ್ತ್ರವನ್ನು ಇಟ್ಟುಕೊಳ್ಳಬೇಡಿ. ಅಕಸ್ಮಾತ್ ಕರವಸ್ತ್ರ ತೆಗೆಯುವಾಗ ಅದರೊಡನೆ ದುಡ್ಡೂ ಹೊರಬಂದು ಕಳೆದುಹೋಗುವ ಸಾಧ್ಯತೆ ಇದೆ. ನಾನು ಬಾಲ್ಯದಲ್ಲಿ ಒಮ್ಮೆ ಮಾತ್ರ ಹೀಗೇ ನೂರು ರೂಪಾಯಿ ಕಳೆದುಕೊಂಡಿದ್ದೇನೆ!
ಈಗ ಮತ್ತೊಂದು ವಿಷಯಕ್ಕೆ ಬರೋಣ. ನೀವು ಕೋಟ್ಯಧೀಶರಾಗುವ ಹಾದಿಯಲ್ಲಿ ದೊಡ್ಡ ದೊಡ್ಡ, ಪ್ರತಿಷ್ಠಿತ ಕ್ಲಬ್ಬುಗಳನ್ನು ಸೇರುವಿರಿ. ಅಲ್ಲಿ ಅಕಸ್ಮಾತ್ ನಿಮಗೆ ಭಾಷಣ ಮಾಡಲು ಆಹ್ವಾನ ಬಂತೆಂದುಕೊಳ್ಳೋಣ. ನಿಮಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದೆಂದರೆ ಕೈಕಾಲು ನಡುಕ. ಅಂಥ ಸಂದರ್ಭದಲ್ಲಿ ಏನು ಮಾಡ್ಬೇಕು- ಒಂದು, ಆರಾಮ ಸ್ಥಿತಿಯಲ್ಲಿ ನಿಂತು ಪ್ರೇಕ್ಷಕರಿದ್ದಾರೆಂದು ಭಾವಿಸಿಕೊಂಡು ನಿಮ್ಮ ಭಾಷಣವನ್ನು ಮಾಡಿ. ಅಲ್ಲಿ ಪ್ರೇಕ್ಷಕರು ಇಲ್ಲದೇ ಇರೋದ್ರಿಂದ ನಿಮಗೇನೂ ನಡುಕ ಉಂಟಾಗೋಲ್ಲ. ಹೀಗೆ ಹಲವು ಬಾರಿ ಮಾಡಿದ ನಂತರ ನಿಮಗೆ ನಿಮ್ಮ ಭಾಷಣ ಮೊದಲೇ ಎಲ್ಲ ಬಾಯಿಪಾಠ ಆಗಿರುವುದರಿಂದ ನೀವು ನಿಜಕ್ಕೂ ಭಾಷಣ ಮಾಡಲು ಹೊರಟಾಗ ಕೈಕಾಲು ನಡುಕ ಉಂಟಾಗೋಲ್ಲ.
ಆದರೆ ಈ ವಿಧಾನಕ್ಕೆ ಎಷ್ಟೇ ಆದರೂ ನಿರಂತರ ಅಭ್ಯಾಸ ಬೇಕಾಗುತ್ತೆ; ಇಂಥ ಸಂದರ್ಭಕ್ಕೆಂದೇ ವಿಕ್ಟರ್ ಫ್ರಾಂಕೆಲ್ ಎಂಬ ಆಸ್ಟ್ರಿಯದ ಮನೋವಿಜ್ಞಾನಿಯೊಬ್ಬ ‘ವೈರುಧ್ಯದ ಉದ್ದೇಶ?’ ಎಂಬ ವಿಧಾನವೊಂದನ್ನು ರೂಪಿಸಿದ್ದಾನೆ. ಇದರಲ್ಲಿ ನೀವು ಏನು ಹೆದರಿಕೆಯಿಟ್ಟುಕೊಂಡಿದ್ದೀರೋ ಅದನ್ನು ಉದ್ದೇಶಪೂರ್ವಕವಾಗಿ ತಂದುಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ, ಭಾಷಣ ಮಾಡುವಾಗ ಕೈಕಾಲು ನಡುಗುವವರು ಉದ್ದೇಶಪೂರ್ವಕ ಸಾರ್ವಜನಿಕರೆದುರು ಕೈಕಾಲು ನಡುಗಿಸಿಕೊಳ್ಳಲು ಪ್ರಯತ್ನಿಸಿದರೆ ನಡುಕ ನಿಂತೇ ಹೋಗುತ್ತೆ. ಇದಕ್ಕೂ ಕೋಟ್ಯಧೀಶನಾಗುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಜೇನುಹುಳುವಿನಂತೆ ನಿಮ್ಮ ತಲೆ ತಿಂತಿರೋದು ನನಗೆ ಗೊತ್ತು. ಆದರೆ ನನ್ನ ಉದ್ದೇಶ ನಿಮ್ಮನ್ನು ಬರೀ ಕೋಟ್ಯಧೀಶರನ್ನಾಗಿ ಮಾಡೋದಷ್ಟೇ ಅಲ್ಲ, ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡೋದು ಕೂಡ ಆಗಿದೆ!
ದುಶ್ಚಟಗಳಿಂದ ದೂರವಿರಿ: ಯಾವುದಾದರೂ ದುಶ್ಚಟಕ್ಕೆ ದಾಸರಾಗಿದ್ದರೆ ಅದು ನಿಮ್ಮನ್ನು ವ್ಯವಹಾರಿಕವಾಗಿ ಮುನ್ನಡೆಯಲು ಅಡ್ಡಿಯಾಗುತ್ತದೆ. ದುರಭ್ಯಾಸಗಳಿಂದ ಕೆಲಸ ಮಾಡಲು ಉತ್ತೇಜನ ಸಿಗುತ್ತದೆ ಎಂದು ಬಹಳ ಜನರು ತಪು್ಪ ಅಭಿಪ್ರಾಯವನ್ನು ಹೊಂದಿರುತ್ತಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಆಗಿರುತ್ತದೆ. ಮೊದಮೊದಲು ಸಿಗುವ ಕಿಕ್ ಅಭ್ಯಾಸದ ನಂತರ ಸಿಗುವುದೇ ಇಲ್ಲ. ಧೂಮಪಾನಿಗಳಾಗಿದ್ದಲ್ಲಿ ಅಷ್ಟೇ ಕಿಕ್ ಸಿಗಲು ಸಿಗರೇಟ್ ಪ್ರಮಾಣ ಹೆಚ್ಚಿಸುತ್ತಲೇ ಹೋಗಬೇಕಾಗುತ್ತದೆ. ಹೀಗಾಗಿ ಅದರ ಗುಂಗಿನಲ್ಲೇ ಮುಳುಗಿ ದಿನನಿತ್ಯದ ವ್ಯವಹಾರಗಳು ಸರಾಗವಾಗಿ ಸಾಗುವುದಿಲ್ಲ. ಕೆಲಸದ ನಡುವೆಯೋ ಮೀಟಿಂಗ್ಗಳ ನಡುವೆಯೋ ಸಿಗರೇಟ್ ಸೇದಬೇಕು ಎನಿಸಿದರೆ ಅದನ್ನು ಹತ್ತಿಕ್ಕಲು ಸಾಧ್ಯವಾಗದೇ ಎದ್ದು ಹೊರಹೊರಟರೆ ಸುತ್ತಲಿನವರು ನೀವು ಅವರ ಮಾತನ್ನು ನಿರ್ಲಕ್ಷಿಸುತ್ತಿದ್ದೀರೆಂದು ಭಾವಿಸಬಹುದು.
ಇನ್ನು ಕೆಲವು ಸಲ ಮಧ್ಯರಾತ್ರಿಗಳಲ್ಲಿ ಮುಖ್ಯವಾದ ಕೆಲಸ ಮಾಡುವಾಗ ಸಿಗರೇಟಿನ ಸೆಳೆತ ಉಂಟಾಗಬಹುದು. ಅಕಸ್ಮಾತ್ ಮನೆಯಲ್ಲಿ ಸಿಗದಿದ್ದಾಗ ಇರುವ ಕೆಲಸವನ್ನೆಲ್ಲ ಬಿಟ್ಟು ಸಿಗರೇಟನ್ನು ಹುಡುಕಿಕೊಂಡು ಹೊರಡಬೇಕಾಗಬಹುದು. ಒಮ್ಮೆ ನಾನು ರಾತ್ರಿಯೆಲ್ಲ ಬೀದಿ ಬೀದಿಗಳನ್ನು ಸಿಗರೇಟಿಗಾಗಿ ಅಲೆದಿದ್ದು ಉಂಟು. ಇದು ಒಂದು ರೀತಿಯ ಡ್ಯಾಮೇಜ್ ಮಾಡಿದರೆ ಮದ್ಯವ್ಯಸನ ಇದಕ್ಕಿಂತಲೂ ಮಾರಕ.
ವ್ಯವಹಾರಗಳಲ್ಲಿ ಸಮಯಪಾಲನೆ ಹಾಗೂ ಆಡಿದ ಮಾತು ಬಹಳ ಮುಖ್ಯ. ದುಶ್ಚಟದ ಅಮಲಿನಲ್ಲಿ ಇದ್ದರೆ ಯಾರಿಗೋ ರಾತ್ರಿ ಫೋನ್ನಲ್ಲಿ ಮಾತು ಕೊಟ್ಟು ಅದನ್ನು ಮರುದಿನ ಮರೆತು ಬಹಳವೇ ನಷ್ಟ ಅನುಭವಿಸಬೇಕಾಗಬಹುದು. ‘ಮದ್ಯಪಾನ/ಧೂಮಪಾನ ಆರೋಗ್ಯಕ್ಕೆ ಮಾರಕ’ ಎಂದು ಅವುಗಳ ಮೇಲೆ ಮುದ್ರಿಸಿರುತ್ತಾರೆ, ನಾವು ಯಾರೂ ಅದನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ. ನಾನು ಹೇಳುವುದೇನೆಂದರೆ ಇವು ಆರೋಗ್ಯಕ್ಕಷ್ಟೇ ಮಾರಕ ಅಲ್ಲ ವ್ಯವಹಾರಿಕವಾಗಿ, ಮಾನಸಿಕವಾಗಿ, ಸಾಂಸಾರಿಕವಾಗಿ ಸಹ ಮಾರಕವಾದವುಗಳು. ನಮ್ಮ ಸ್ವಸಾಮರ್ಥ್ಯ ಹೆಚ್ಚಿಸಿಕೊಂಡು ಹಂತಹಂತವಾಗಿ ಮೇಲೇರಬೇಕೆಂಬ ಆಶಯ ಹೊಂದಿದವರಾಗಿದ್ದರೆ ಈ ದುಶ್ಚಟಗಳಿಂದ ದೂರ ಇರುವುದೇ ಸೂಕ್ತ. ಚಟಗಳಿಂದ ಹೊರ ಬರಬೇಕೆಂದು ಬಯಸಿದ್ದರೆ ಅದಷ್ಟು ಸುಲಭ ಸಾಧ್ಯವಲ್ಲ. ಮನಸ್ಸು ಚಟಗಳನ್ನು ಒಮ್ಮೆಲೇ ನಿಲ್ಲಿಸಿಬಿಡಲು ಒಪು್ಪವುದಿಲ್ಲ. ಇವತ್ತು ಒಂದಿನ ಪೂರ್ತಿ ಅನುಭವಿಸಿ ನಾಳೆಯಿಂದ ಬಿಟ್ಟು ಬಿಡೋಣ ಎಂದು ವಾಯಿದೆ ಹಾಕುತ್ತಿರುತ್ತದೆ. ‘ಸಿಗರೇಟು ಚಟ ಬಿಡೋದು ತುಂಬ ಸುಲಭ. ನಾನು ಎಷ್ಟೋಸಲ ಬಿಟ್ಟಿದ್ದೀನಿ?’ ಅನ್ನುವವರನ್ನು ನೀವು ನೋಡಿರುತ್ತೀರಿ.
ಒಂದೇ ಒಂದು ವಾರದ ಮಟ್ಟಿಗೆ ಈ ಅಭ್ಯಾಸವನ್ನು ಬಿಟ್ಟುಬಿಡುತ್ತೇನೆಂದು ನಿರ್ಧರಿಸಿಕೊಳ್ಳಿ. ಮುಂದಿನ ಒಂದು ವಾರದಲ್ಲಿ ನಿಮ್ಮಲ್ಲಿನ ದೈಹಿಕ, ಮಾನಸಿಕ ಚಡಪಡಿಕೆಗಳು ತಹಬಂದಿಗೆ ಬರುತ್ತವೆ. ಒಂದು ವಾರದ ನಂತರ ಮತ್ತೊಂದು ವಾರ, ಇನ್ನೊಂದು ವಾರ ಹೀಗೇ ವಿಸ್ತರಿಸುತ್ತ ಬನ್ನಿ. ವಾರ ಕಳೆದಂತೆ ಚಟದ ಚಿಹ್ನೆಗಳು ಕಮ್ಮಿಯಾಗುತ್ತ ಬಂದು ನಂತರ ಅದು ನಿಮ್ಮನ್ನು ಬಾಧಿಸುವುದಿಲ್ಲ. ನಂತರ ಇನ್ನು ಜನ್ಮದಲ್ಲಿ ಮುಟ್ಟುವುದಿಲ್ಲ ಎಂದು ಕಟ್ಟುನಿಟ್ಟಾಗಿ ನಿರ್ಧರಿಸಿಬಿಡಿ. ಒಮ್ಮೆ ದೃಢಮನಸ್ಸಿನಿಂದ ನಿರ್ಧಾರ ತೆಗೆದುಕೊಂಡರೆ ಮತ್ತೆಂದೂ ಯಾವುದೇ ಚಟಕ್ಕೆ ಒಳಪಡುವುದಿಲ್ಲ. ನಾನು ಹೀಗೆಯೇ ನನ್ನ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಯಿತು. ಇದನ್ನು ನೀವೂ ಪ್ರಯತ್ನಿಸಿ ಸಫಲರಾಗಿ.
ಜೋಕು: ಸಿಗರೇಟು ಸೇದುತ್ತ ನಿಂತಿದ್ದವನಿಗೆ ಒಬ್ಬ ಕೇಳಿದ ‘ಎಷ್ಟು ವರ್ಷದಿಂದ ದಿನಕ್ಕೆ ಎಷ್ಟು ಸಿಗರೇಟು ಸೇದುತ್ತಿದ್ದೀರಾ?’ ಆತ, ‘50 ವರ್ಷದಿಂದ ದಿನಕ್ಕೆ 20 ಸಿಗರೇಟು’. ಈತ, ‘ಒಂದು ಸಿಗರೇಟಿಗೆ 10 ರೂ.ನಂತೆ 20 ಸಿಗರೇಟಿಗೆ ದಿನಕ್ಕೆ 200 ರೂಪಾಯಿ ಆಯ್ತು. ವರ್ಷಕ್ಕೆ -ಠಿ; 73,000, 50 ವರ್ಷಕ್ಕೆ
-ಠಿ; 36,50,000 ಆಯ್ತು, ಅದಕ್ಕೆ ಬಡ್ಡಿಯೆಲ್ಲ ಸೇರಿಸಿದರೆ ಎದುರುಗಡೆ ಕಾಣೋ ಬಿಲ್ಡಿಂಗ್ ನಿಮ್ಮದೇ ಆಗಿರ್ತಿತ್ತು’. ಅದಕ್ಕೆ ಆತ ಕೇಳಿದ, ‘ನೀವು ಸಿಗರೇಟ್ ಸೇದಲ್ಲಾ ಅಲ್ವಾ? ಆ ಬಿಲ್ಡಿಂಗ್ ನಿಮ್ದಾ?’ ಈತ, ‘ಇಲ್ಲ’ ಎಂದ. ಆಗ ಸಿಗರೇಟು ಸೇದುತ್ತಿದ್ದವ, ‘ಆ ಬಿಲ್ಡಿಂಗ್ ನಂದೇ’ ಎಂದಾಗ ಈತ ಪೆಚ್ಚಾದ.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)