

ಬೆಂಗಳೂರು: ಕೇಂದ್ರ ಬಜೆಟ್ ವಿಷಯದಲ್ಲಿ ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕಾಂಗ್ರೆಸ್‌ಗೆ ಮಾತಲ್ಲೇ ತಿವಿದಿದ್ದರು. ಇದೀಗ ಕಾಂಗ್ರೆಸ್ ನಾಯಕರ ಸರದಿ. ಮುಖ್ಯಮಂತ್ರಿ ಆದಿಯಾಗಿ ಕೈ ನಾಯಕರು ಪ್ರತಿದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್. ಡಿ.ಕೆ ಸುರೇಶ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಅವರು ಕರ್ನಾಟಕಕ್ಕೆ ನೀಡಬೇಕಾದ ಗೌರವವನ್ನು ಮರೆತಿದ್ದಾರೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ನೀಡಿಲ್ಲ. ಆದರೂ ಇಲ್ಲಿಗೆ ಬಂದು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇವರ ಬಜೆಟ್ ಏನಿದ್ದರೂ ಉತ್ತರ ಭಾರತದ ಅಭಿವೃದ್ಧಿಗೆ ಅಷ್ಟೇ. ರಾಜ್ಯಕ್ಕೆ ಬಂದು ರಾಜಕೀಯ ಆರೋಪ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರವು ರಾಜ್ಯವನ್ನು ತುಳಿಯುವ, ಆರ್ಥಿಕತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದೆ. ಉತ್ತರ ಭಾರತ, ಗುಜರಾತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ದಕ್ಷಿಣ ಭಾರತಕ್ಕೆ ಅದರಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನು ಯೋಜನೆ ಕೊಟ್ಟಿದ್ದಾರೆ? ಓಟ್ ಕೇಳಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ? ನಾವೇನು ಭಿಕ್ಷೆ ಕೇಳುತ್ತಿಲ್ಲ, ನಾವೇನು ಕೇಂದ್ರ ಸರ್ಕಾರದ ಜತೆ ಸಂಘರ್ಷ ಮಾಡುತ್ತಿಲ್ಲ. ನಮ್ಮ ಹಕ್ಕನ್ನ ಮಾತ್ರ ಕೇಳುತ್ತಿದ್ದೇವೆ ಎಂದು ಹೇಳಿದರು.
ರಾಜ್ಯಕ್ಕೆ ಆರ್ಥಿಕ ನೆರವು ನೀಡಬೇಕಾದ್ದು ಕೇಂದ್ರದ ಕರ್ತವ್ಯ ಎಂದ ಅವರು, ನೀರಾವರಿ, ಉದ್ಯೋಗ ಸೃಷ್ಟಿ, ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವುದೂ ಕೂಡ ಬಜೆಟ್‌ನಲ್ಲಿ ಪ್ರಸ್ತಾಪ ಆಗಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕುರಿಸುತ್ತಿದ್ದಾರೆ ಎಂದು ಆಪಾದಿಸಿದರು.
ರಾಜ್ಯ ಸರ್ಕಾರ ತಮಟೆ ಹೊಡೆಯುವುದರಲ್ಲಿ ನಿರತವಾಗಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಯಾರು ತಮಟೆ ಹೊಡೆಯುತ್ತಿದ್ದಾರೆ. ತಮಟೆ ಹೊಡೆಯುತ್ತಿರುವುದು ಅವರೇ. ಮೊದಲು ಅವರು ತಮ್ಮ ಆರೋಗ್ಯವನ್ನ ನೋಡಿಕೊಳ್ಳಲಿ. ಒತ್ತಡ ಜಾಸ್ತಿ ಇಟ್ಟುಕೊಳ್ಳುವುದು ಬೇಡ. ಅವರ ಸೇವೆ ದೇಶ, ರಾಜ್ಯಕ್ಕೆ ಬೇಕಿದೆ ಎಂದರು.
ನಾವು ಯಾರಿಗೂ ಸರ್ವನಾಶ ಬಯಸುವುದಿಲ್ಲ. ಅವರ ಕುಟುಂಬ ಅದನ್ನೇ ಮಾಡಿಕೊಂಡು ಬಂದಿದೆ. ಅವರಿಗೆ ಡಿ.ಕೆ ಶಿವಕುಮಾರ್‌ರನ್ನು ಸರ್ವನಾಶ ಮಾಡುವುದೇ ಗುರಿ. ಮೊದಲು ಅವರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲಿ. ಅವರು ಏನೇ ಕೆಟ್ಟದನ್ನು ಬಯಸಿದರೂ ನಾವು ಬಯಸೋದಿಲ್ಲ. ಬೇರೆಯವರು ಸರ್ವನಾಶ ಆಗಲಿ ಅನ್ನೋ ವಂಶ ನಮ್ಮದಲ್ಲ ಎಂದು ಹೇಳಿದರು.