

ವಯನಾಡಿನಲ್ಲಿ ಮುಂಡಕ್ಕಯ್ಯಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಐವರು ಮಕ್ಕಳು ಸೇರಿ ಈವರೆಗೂ 47 ಮಂದಿ ಮೃತಪಟ್ಟಿದ್ದಾರೆ. ಗುಡ್ಡ ಕುಸಿತದಿಂದ ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತದೇಹಗಳನ್ನು ಹೊರತೆಗೆದಿರುವ ರಕ್ಷಣಾ ತಂಡ, ಇನ್ನೂ ಹಲವರು ಮಣ್ಣಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿದೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮುಂದೆ ಏನು ಮಾಡಬೇಕೆಂಬುದು ತಿಳಿಯದೆ ಕಂಗಾಲಾಗಿದ್ದಾರೆ. ಭೂಕುಸಿತದಿಂದ ಅಟ್ಟಮಾಲ ಮತ್ತು ಮುಂಡಕ್ಕಯ್ಯಿಲ್ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಉಳಿದ ಭಾಗಗಳ ಸಂಪರ್ಕ ಕಡಿತಗೊಂಡಿವೆ. ಪಾಲಕ್ಕಾಡ್‌ನಲ್ಲಿ ಗುಡ್ಡಗಾಡು ಪ್ರದೇಶದ ಮೂರು ಸ್ಥಳಗಳಲ್ಲಿ ಮಂಗಳಂ ಅಣೆಕಟ್ಟು ಕುಸಿದಿದೆ.