

ನನಗೆ ಬಾಲ್ಯದಿಂದಲೂ ನೆನಪಿರುವ ಹಾಗೆ ನಮ್ಮ ತಂದೆಯವರಿಗೂ ಹೋರಾಟಕ್ಕೂ ಅವಿನಾಭಾವ ಸಂಬಂಧ. ‘ಹೋರಾಟ-ಸಂಘಟನೆ’ ಅವರ ಬೆನ್ನಿಗಂಟಿಕೊಂಡೇ ಜನ್ಮವೆತ್ತಿದೆಯೆನೋ ಎನ್ನುವಷ್ಟರ ಮಟ್ಟಿಗೆ ಈ ನಂಟು ಬೆಸೆದುಕೊಂಡಿದೆ. ಪರಿಶ್ರಮದಿಂದ ಮೇಲೆ ಬಂದ ದಣಿವರಿಯದ ನಾಯಕನೊಬ್ಬನನ್ನು ಈ ರಾಜ್ಯ ಕಂಡಿದ್ದರೆ ಅದು ಬಿ.ಎಸ್.ಯಡಿಯೂರಪ್ಪನವರು ಮಾತ್ರ ಎಂಬ ಮಾತುಗಳು ಕೇಳಿಬಂದಾಗ ಇದು ಉತ್ಪ್ರೇಕ್ಷೆಯೆಂದು ನಮ್ಮ ಕುಟುಂಬದ ಯಾವ ಸದಸ್ಯರಿಗೂ ಅನಿಸುವುದಿಲ್ಲ. ಏಕೆಂದರೆ ಅಂದಿನಿಂದ ಇಂದಿನವರೆಗೂ ನಾವು ಅವರಲ್ಲಿ ಶಾಸಕ, ಸಂಸದ, ವಿರೋಧಪಕ್ಷದ ನಾಯಕ, ಪಕ್ಷಾಧ್ಯಕ್ಷ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ... ಇಂಥ ಪದವಿಗಳಿಗಿಂತ ಹೆಚ್ಚಾಗಿ ಒಬ್ಬ ಹೋರಾಟಗಾರನನ್ನೇ ಕಾಣುತ್ತಿದ್ದೇವೆ. ಈ ಮಾತು ಏಕೆ ಹೇಳಬೇಕಾಯಿತೆಂದರೆ ಅವರು ನಡೆದು ಬಂದ ಹಾದಿ ಕಲ್ಲುಮುಳ್ಳಿನದು, ಕೌಟುಂಬಿಕ ಹಿತವನ್ನೂ ಲೆಕ್ಕಿಸದೆ ಜನರ ಸೌಖ್ಯಕ್ಕಾಗಿ ಸದಾ ಚಿಂತಿಸುತ್ತಾ ಅದಕ್ಕಾಗಿ ಹೋರಾಡುವ ಗುಣ ಈ ವಯಸ್ಸಿನಲ್ಲೂ ಅವರೊಂದಿಗೆ ಜೊತೆಗಾರನಾಗಿ ಹೆಜ್ಜೆ ಹಾಕುತ್ತಲೇ ಇದೆ. ಅಧಿಕಾರವಿರಲಿ, ಇಲ್ಲದಿರಲಿ ಹೋರಾಟ ಅವರನ್ನು ಬಿಟ್ಟುಕೊಡುವುದಿಲ್ಲ.
ಜನಸೇವೆಯ ಅದಮ್ಯ ಹಂಬಲ: ಅವರ ಹಿಂದಿನ ಮುಖ್ಯಮಂತ್ರಿತ್ವದ ಅವಧಿಯಲ್ಲಿ ಕೈಗೊಂಡ ಜನಪರ, ರೈತಪರ, ಮಹಿಳಾಪರವಾದ ಅನೇಕ ಯೋಜನೆಗಳು ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಮೈಲಿಗಲ್ಲುಗಳಾಗಿ ಉಳಿಯಲಿವೆ. ‘ಸಾಧಿಸಿದ್ದು ಹಲವಾರು, ಸಾಧಿಸಲು ಉಳಿದಿದ್ದು ನೂರಾರು’ ಎಂಬ ಕೊರಗು ಅವರನ್ನು ಬಾಧಿಸುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ಅವರಲ್ಲಿ ತುಡಿಯುತ್ತಿತ್ತು.
2018ರ ವಿಧಾನಸಭಾ ಚುನಾವಣೆಯ ಫಲಿತಾಂಶ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಸ್ತಿತ್ವದ ಪರವಾಗಿ ಇತ್ತಾದರೂ ಅಂಕಿ-ಸಂಖ್ಯೆಗಳ ಲೆಕ್ಕಾಚಾರದಲ್ಲಿ ಜನಾಶಯಕ್ಕೆ ವಿರುದ್ಧವಾದ ‘ಅಪವಿತ್ರ ಮೈತ್ರಿ ಸರ್ಕಾರ’ ಅಸ್ತಿತ್ವಕ್ಕೆ ಬರಲಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ದೂರವುಳಿಯುವಂತಾಯಿತು. ನೈತಿಕತೆ ಇಲ್ಲದ, ತತ್ವರಹಿತ, ಆಂತರಿಕ ಕೆಸರೆರಚಾಟದ ಸರ್ಕಾರ ತನ್ನ ಭಾರಕ್ಕೆ ತಾನೇ ಕುಸಿದ ಪರಿಣಾಮ ಜನಾಭಿಪ್ರಾಯಕ್ಕೆ ಪೂರಕವಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಕಳೆದ ವರ್ಷ ಇದೇ ಸಮಯಕ್ಕೆ ಅಧಿಕಾರಕ್ಕೆ ಬರುವಂತಾಯಿತು. ಸರ್ಕಾರ ಇದೀಗ ಒಂದು ವರ್ಷ ಪೂರೈಸಿದೆ.
ಸಂಕಷ್ಟಗಳ ಸರಣಿ: ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ದಿನದಿಂದಲೂ ಅನಿರೀಕ್ಷಿತ ಸಂಕಷ್ಟಗಳು ಎದುರಾಗುತ್ತಲೇ ಇವೆ. ಅಂಥ ಸಂಕಷ್ಟಗಳನ್ನು ಅವರು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ ಎದುರಾದ ನೆರೆಹಾವಳಿಯನ್ನು ಏಕಾಂಗಿಯಾಗಿ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣ ವಾಯಿತು. ಇದನ್ನು ಯಶಸ್ವಿಯಾಗಿ ನಿಭಾಯಿಸಿ ನಿಟ್ಟುಸಿರು ಬಿಡುವ ಹೊತ್ತಿಗೆ ಉಪಚುನಾವಣೆಗಳು ಎದುರಾದವು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಹಾಗೂ ಬಲಿಷ್ಠ ದೇಶ ನಿರ್ವಣದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಮತದಾರ ಬಂಧುಗಳ ಆಶೀರ್ವಾದ ಬಯಸಿ, ತವರು ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆದು ಕೊಡಲೇಬೇಕೆಂಬ ಛಲ ಹೊತ್ತು ನಡೆಸಿದ ಹೋರಾಟದ ಫಲವಾಗಿ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿ, ಕೆ.ಆರ್.ಪೇಟೆಯಲ್ಲಿ ಗೆಲುವಿನ ದಾಖಲೆ ಬರೆಯುವಂತಾಯಿತು. ಇದರ ಬೆನ್ನಲ್ಲೇ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಮುನ್ನಡೆಯಬೇಕು ಎನ್ನುವಷ್ಟರಲ್ಲಿ ‘ಕರೊನಾ ವೈರಸ್’ ಆರ್ಭಟಕ್ಕೆ ರಾಜ್ಯ ಸಿಲುಕುವಂತಾಯಿತು. ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರಧಾನಿಗಳು ಮೆಚ್ಚುವಂತೆ ಹಾಗೂ ರಾಷ್ಟ್ರದ ಗಮನ ಸೆಳೆಯುವ ರೀತಿಯಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಇಟ್ಟಿದೆ. ಇಂಥ ಸಂಕಷ್ಟದ ನಡುವೆಯೂ ಅಭಿವೃದ್ಧಿ ಕಾರ್ಯಕ್ರಮಗಳು, ಜನಪರ ಯೋಜನೆಗಳನ್ನು ಸರ್ಕಾರ ಕೈಬಿಟ್ಟಿಲ್ಲ.
ಆತ್ಮವಿಶ್ವಾಸ ತುಂಬುವ ಕ್ರಮಗಳು: ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು, ಕಸುಬು ಆಧಾರಿತ ಹಾಗೂ ಸಣ್ಣ ವ್ಯಾಪಾರವನ್ನು ನಂಬಿ ಬದುಕು ಮಾಡುವ ಜನರ ದೈನಂದಿನ ಜೀವನಕ್ಕೆ ನೆರವಾಗಲು ಹತ್ತಿರತ್ತಿರ 2000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೊಷಣೆ, ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಡಿಯೂರಪ್ಪನವರು ತೋರಿರುವ ಬದ್ಧತೆ, ಈ ರಾಜ್ಯದ ಜನತೆ ಎಂತಹ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಭರವಸೆ ಮೂಡಿಸಿದೆ.
ಕರ್ನಾಟಕದ ಜನತೆ ಯಾವ ಕ್ಷೇತ್ರದಲ್ಲೂ ಹಿಂದುಳಿಯಬಾರದು. ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ಕಟ್ಟಲು ಕರ್ನಾಟಕದ ಕೊಡುಗೆ ಮಹತ್ವದ್ದಾಗಿರಬೇಕೆಂಬುದು ಯಡಿಯೂರಪ್ಪನವರ ಉದ್ದೇಶ ಹಾಗೂ ಗುರಿಯಾಗಿದೆ. ಈ ಕಾರಣಕ್ಕಾಗಿ, ರೈತರನ್ನು ಶೋಷಿಸುತ್ತಿದ್ದ, ಕೃಷಿ ಕ್ಷೇತ್ರಕ್ಕೆ ಅಡಿಯಿಡಬೇಕೆಂದು ಹಂಬಲಿಸುತ್ತಿದ್ದವರನ್ನು ಕಾಡುತ್ತಿದ್ದ ‘ಕೃಷಿ ಭೂಮಿ ಖರೀದಿ’ ನೀತಿ-ನಿಯಮಗಳನ್ನು ಸಡಿಲಿಸುವ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅದರಂತೆಯೇ ಕಾಯಕ ಸಮುದಾಯಗಳು, ಶ್ರಮಿಕ ವರ್ಗಗಳು ನೆಮ್ಮದಿಯ ಬದುಕು ರೂಪಿಸಿಕೊಳ್ಳುವಂತಾದರೆ ಮಾತ್ರ, ರಾಜ್ಯದ ಏಳಿಗೆ ಎಂದು ನಂಬಿರುವ ಅವರು ಅಣ್ಣ ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ತತ್ವದ ಪ್ರಬಲ ಪ್ರತಿಪಾದಕರಾಗಿ ಕಲ್ಯಾಣ ಕರ್ನಾಟಕದ ಕನಸು ನನಸಾಗಿಸುವ ಗುರಿ ಹೊಂದಿದ್ದಾರೆ. ಕರ್ನಾಟಕದ ಉದ್ಯಮಗಳಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೇ ಶೇಕಡ 70ರಷ್ಟು ಆದ್ಯತೆ ನೀಡಬೇಕೆಂಬ ನೀತಿ ರೂಪಿಸಲು ಸರ್ಕಾರ ಮೊನ್ನೆಯಷ್ಟೇ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. 20 ಲಕ್ಷ ಉದ್ಯೋಗ ಸೃಷ್ಟಿ ಹಾಗೂ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗಾಗಿ ವ್ಯವಸ್ಥಿತ ಗುರಿ ಹೊಂದಲಾಗಿದೆ. ಕಾರ್ವಿುಕ ಕಾಯ್ದೆಗೆ ಸುಧಾರಿತ ತಿದ್ದುಪಡಿ ತರಲಾಗುತ್ತಿದೆ.
ಕೃಷಿ, ಕೈಗಾರಿಕೆಗೆ ಉತ್ತೇಜನ: ಕರ್ನಾಟಕದಲ್ಲಿ ಅಡ್ಡಿ ಅಡಚಣೆಗಳಿಲ್ಲದೇ ಉದ್ಯಮಗಳು ತಲೆಯೆತ್ತಬೇಕೆಂಬ ನಿಟ್ಟಿನಲ್ಲಿ ಉತ್ಪನ್ನ ಕ್ಷೇತ್ರಕ್ಕೆ ನವಚೈತನ್ಯ ತುಂಬಲು ಉತ್ತೇಜನಕಾರಿ ಕ್ರಮ ಕೈಗೊಂಡಿದ್ದಾರೆ. ರೈತನ ಬೆಳೆ ಹಾಗೂ ಭೂಮಿ ಎರಡಕ್ಕೂ ತಕ್ಕ ಬೆಲೆ ಸಿಗಬೇಕು. ನಮ್ಮ ನೆಲದಲ್ಲಿ ವಿಸ್ತರಿಸಬಹುದಾದ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳಿಗೆ ಉತ್ತಮ ಭೂಮಿಕೆ ಸಿದ್ಧಪಡಿಸಿ, ನಮ್ಮ ಯುವಜನರನ್ನು ಸ್ವಾವಲಂಬಿಗಳನ್ನಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆಗಳು ಸಿದ್ಧವಾಗುತ್ತಿವೆ. ಇದರ ಜೊತೆಜೊತೆಗೇ ಈ ನೆಲದ ಮೂಲ ಉತ್ಪನ್ನಗಳು, ಗ್ರಾಮೀಣ ಕೈಗಾರಿಕೆಗಳು, ಗೃಹ ಕೈಗಾರಿಕೆಗಳು, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಸಮರೋಪಾದಿಯಲ್ಲಿ ಪ್ರೋತ್ಸಾಹಿಸುವ ಮತ್ತಷ್ಟು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯುವ ಎಲ್ಲಾ ಅರ್ಹತೆ ಹೊಂದಿದ್ದು, ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಿ ವಾಣಿಜ್ಯ ಹಾಗೂ ಔದ್ಯೋಗಿಕ ಅವಕಾಶಗಳನ್ನು ಯಥೇಚ್ಛವಾಗಿ ಸೃಷ್ಟಿಸುವ ಪ್ರಯತ್ನ ಗಂಭೀರವಾಗಿ ಸಾಗಿದೆ.
ಕರ್ನಾಟಕ ಸಬಲವಾಗಬೇಕು, ಸಮೃದ್ಧಿಯ ತವರೂರಾಗಬೇಕು. ನಮ್ಮ ನಾಡಿನಲ್ಲಿ ಅರಣ್ಯ ಸಂಪತ್ತು, ಸಸ್ಯಸಂಪತ್ತು, ಧಾನ್ಯ ಸಂಪತ್ತು, ಖನಿಜ ಸಂಪತ್ತು, ಜಲಸಂಪತ್ತು ಹೇರಳವಾಗಿದೆ. ಆದರೆ ಇದರ ಯೋಜಿತ ಸದ್ಬಳಕೆಯಲ್ಲಿ ನಾವು ಹಿಂದುಳಿದಿದ್ದೇವೆ. ಇವುಗಳ ವ್ಯವಸ್ಥಿತ ಸಂರಕ್ಷಣೆ ಹಾಗೂ ಬೆಳವಣಿಗೆಯಿಂದ ಪ್ರಧಾನಿ ಮೋದಿಯವರ ಸಂಕಲ್ಪದ ಬಲಿಷ್ಠ ರಾಷ್ಟ್ರ ನಿರ್ವಣಕ್ಕೆ ಮಹತ್ವದ ಕೊಡುಗೆ ನೀಡಬಹುದೆಂಬುದು ಯಡಿಯೂರಪ್ಪನವರ ಕಾಳಜಿಯಾಗಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ‘ಕೃಷಿ ಬಜೆಟ್’ ಮಂಡಿಸಿದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ರೈತರ ಬದುಕು ಹಸನಾಗುವುದರಿಂದ ಮಾತ್ರ ಈ ನಾಡು ಅಭಿವೃದ್ಧಿಯ ಹೊದಿಕೆ ಹೊದೆಯಲು ಸಾಧ್ಯ ಎಂದು ಅಚಲವಾಗಿ ನಂಬಿರುವ ನೈಜ ರೈತನಾಯಕ ಅವರು. ಅವರ ತುಡಿತ, ಕನಸು, ಹಂಬಲ ಈಡೇರುವ ಅವಕಾಶ ಮಂದಿನ ದಿನಗಳಲ್ಲಿ ಲಭಿಸಲಿ; ತಮ್ಮ ಆಶೋತ್ತರಗಳು ಪರಿಪೂರ್ಣವಾಗಿ ಈಡೇರಲಿ ಎಂಬುದು ಜನರ ಹಾರೈಕೆೆ. ಈ ನಿಟ್ಟಿನಲ್ಲಿ ಅವರ ಸಂಪುಟ ಸಹೋದ್ಯೋಗಿಗಳೆಲ್ಲರ ಪರಿಶ್ರಮ ಹಾಗೂ ಕಾರ್ಯವೈಖರಿ ಸಾರ್ಥಕವೆನಿಸುವ ನಿಟ್ಟಿನಲ್ಲಿ ಸಾಗಿದೆ. ದಕ್ಷ ಆಡಳಿತ ಹಾಗೂ ಪ್ರಗತಿಪರ ಬೆಳವಣಿಗೆಗೆ ಉಪಮುಖ್ಯಮಂತ್ರಿಗಳು ಹಾಗೂ ಇತರ ಮಂತ್ರಿಗಳೆಲ್ಲರೂ ಹೆಗಲಿಗೆ ಹೆಗಲುಕೊಟ್ಟು ಒಟ್ಟಾಗಿ ದುಡಿಯುತ್ತಿದ್ದಾರೆ. ಪ್ರತಿಯೊಂದು ಇಲಾಖೆಗಳು ತಮ್ಮದೇ ಆದ ನೂತನ ಯೋಜನೆಗಳನ್ನು ರೂಪಿಸಿ ಜನರು ಹಾಗೂ ನಾಡಿನ ಅಭ್ಯುದಯಕ್ಕಾಗಿ ಕಾರ್ಯೂೕನ್ಮುಖವಾಗಿವೆ. ಕರೊನಾ ಸಂಕಷ್ಟದಲ್ಲಿ ವೈದ್ಯಕೀಯ, ಆರೋಗ್ಯ, ಗೃಹ, ಶಿಕ್ಷಣ ಹಾಗೂ ಸಾರಿಗೆ ಇಲಾಖೆಗಳು ಕ್ರಿಯಾಶೀಲತೆಯ ವಿಶಿಷ್ಟತೆಯನ್ನು ಮೆರೆದಿವೆ. ಲಕ್ಷಾಂತರ ಪೋಷಕರು, ವಿದ್ಯಾರ್ಥಿಗಳಿಗೆ ಬಂದೆರಗಿದ್ದ ಬೆಟ್ಟದಂತಹ ಆತಂಕಗಳನ್ನು ಮಂಜಿನಂತೆ ಕರಗಿಸಿ ಪಿಯುಸಿ, ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದು ಸರ್ಕಾರದ ಸಾಧನೆಯೇ ಸರಿ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಕಲ್ಪಿಸುವ ಸಿ.ಇ.ಟಿ ಪರೀಕ್ಷೆಗಳನ್ನು ಈ ತಿಂಗಳ ಕೊನೆಯಲ್ಲಿ ನಡೆಸಲು ಸರ್ಕಾರ ಸಜ್ಜಾಗಿರುವುದು ಮುಖ್ಯಮಂತ್ರಿಗಳ ಶಿಕ್ಷಣದ ಬದ್ಧತೆಗೆ ಸಾಕ್ಷಿಯಾಗಿದೆ.
ಸಮೃದ್ಧಿಯ ನಿರೀಕ್ಷೆ: ಮುಖ್ಯಮಂತ್ರಿಗಳ ಕನಸು, ಜನತೆಯ ಅಭಿಲಾಷೆ ಈಡೇರಬೇಕಾದರೆ, ಸದ್ಯದ ಸಂಕಷ್ಟದ ದಿನಗಳು ದೂರಾಗಲಿ ಎಂದು ನಾವು ಭಗವಂತನಲ್ಲಿ ಪ್ರಾರ್ಥಿಸಬೇಕಿದೆ. ನಮ್ಮ ಎಚ್ಚರದ ಹೆಜ್ಜೆಗಳು, ದೈನಂದಿನ ಬದುಕಿನ ಕೆಲ ಬದಲಾವಣೆಗಳು ಈ ಕರೊನಾ ಹಾವಳಿಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಈ ನಡುವೆ ಕೋವಿಡ್-19 ಕೊನೆಗಾಣಿಸುವ ಲಸಿಕೆ ಪ್ರಯೋಗಗಳು ಯಶಸ್ಸಿನ ಹಾದಿಯಲ್ಲಿರುವ ಸುದ್ದಿ ನಮ್ಮ ಆತ್ಮವಿಶ್ವಾಸ ಕುಗ್ಗದಂತೆ ಮಾಡಿವೆ. ಬರುವ ದಿನಗಳು ಉತ್ತಮ ಆಡಳಿತ, ಅಭಿವೃದ್ಧಿ, ಶಾಂತಿ, ಸೌಹಾರ್ದದ ಕರ್ನಾಟಕ ನಿರ್ವಣಕ್ಕೆ ಹಾದಿ ನಿರ್ವಿುಸಿಕೊಡುತ್ತವೆ ಎಂಬ ನಿರೀಕ್ಷೆ ಇಟ್ಟುಕೊಳ್ಳೋಣ.
(ಲೇಖಕರು ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ)