ಜಲಮೂಲ ಪರೀಕ್ಷೆಗೆ ಮಹಿಳಾ ಬಲ, ಸ್ವಸಹಾಯ ಸಂಘದವರಿಗೆ ಆದ್ಯತೆ

Koppal FTK Water Test
ಕೊಪ್ಪಳದಲ್ಲಿ ಎಫ್‌ಟಿಕೆ ಬಳಸಿ ನೀರು ಬಳಕೆ ತರಬೇತಿ ನೀಡುತ್ತಿರುವುದು.
Published on

ವಿ.ಕೆ.ರವೀಂದ್ರ ಕೊಪ್ಪಳ

ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಜರುಗಿದ ಅವಘಡಗಳಿಂದ ಎಚ್ಚೆತ್ತ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಲಭ್ಯ ಕುಡಿವ ನೀರಿನ ಮೂಲಗಳನ್ನು ಪರೀಕ್ಷೆಗೊಳಪಡಿಸಿದೆ. ಪ್ರತಿ ತಿಂಗಳು ಕುಡಿವ ನೀರು ಪರೀಕ್ಷೆಗೆ ಮಹಿಳಾ ಸ್ವಸಹಾಯ ಸಂಘದವರಿಗೆ ತರಬೇತಿ ನೀಡಲು ಯೋಜಿಸಿದೆ.

ದಿನ ಕಳೆದಂತೆ ಕುಡಿವ ನೀರು ಮೂಲಗಳು ವಿಷವಾಗುತ್ತಿದ್ದು, ಸಾರ್ವಜನಿಕರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ. ಜಿಲ್ಲೆಯಲ್ಲಿ 700 ಜನವಸತಿ ಗ್ರಾಮಗಳಿದ್ದು, ಬೋರ್‌ವೆಲ್, ಕೆರೆ, ನದಿ ಮೂಲಗಳ ಮೂಲಕ ಕುಡಿವ ನೀರು ಪೂರೈಸಲಾಗುತ್ತಿದೆ.

16 ಬಹುಗ್ರಾಮ ಕುಡಿವ ನೀರು ಯೋಜನೆಗಳಿದ್ದು, ಚಾಲ್ತಿಯಲ್ಲಿರುವ 11ರ ಮೂಲಕ ಪ್ರಮುಖ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಗೆ ನೀರು ಒದಗಿಸಲಾಗುತ್ತಿದೆ. ಆದರೆ, ಇತ್ತೀಚೆಗೆ ಕನಕಗಿರಿ ತಾಲೂಕಿನ ಬಸರಿಹಾಳ, ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯ ಒಂಬತ್ತು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಸಿಕೊಂಡಿದೆ. 200ಕ್ಕೂ ಹೆಚ್ಚು ಜನರ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ.

ರಾಜ್ಯ ಸರ್ಕಾರ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿದ್ದು, ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಹೀಗಾಗಿ ಕುಡಿವ ನೀರಿನ ಮೂಲಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಪರೀಕ್ಷಿಸಿ ನೀರು ಪೂರೈಸಲಾಗುತ್ತಿದೆ. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನೀರು ಪರೀಕ್ಷೆ ನಡೆಸುತ್ತಾರೆ.

ಸಾಮಾನ್ಯ ಪರೀಕ್ಷೆ ಹಾಗೂ ಪ್ರಯೋಗಾಲಯ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆ. ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ ಪ್ರಯೋಗಾಲಯಗಳಿವೆ. ಆದರೆ, ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಬಹುವಾಗಿ ಕಾಡುತ್ತಿದೆ. ಹೀಗಾಗಿ ಗ್ರಾಪಂ ಮಟ್ಟದಲ್ಲಿ ಪರೀಕ್ಷಾ ತರಬೇತಿ ನೀಡಲಾಗುತ್ತಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ನೀರು ಪೂರೈಸುವ ಮುನ್ನ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗುತ್ತಿದೆ.

ನದಿ, ಕೆರೆ, ಬಾವಿ, ಬೋರ್‌ವೆಲ್ ಸೇರಿ ಜಿಲ್ಲೆಯಲ್ಲಿ 3 ಸಾವಿರ ಮೂಲಗಳಿಂದ ಕುಡಿವ ನೀರು ಪೂರೈಸಲಾಗುತ್ತಿದೆ. ಅವುಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 200ಕ್ಕೂ ಹೆಚ್ಚು ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲವೆಂದು ವರದಿ ಬಂದಿದೆ. ಅಂಥ ಬೋರ್‌ವೆಲ್‌ಗಳನ್ನು ಮುಚ್ಚಿಸಲಾಗುತ್ತಿದೆ. 500 ಬೋರ್‌ವೆಲ್‌ಗಳು ತೀರಾ ಆಳವಾಗಿವೆ. ಹೀಗಾಗಿ ಗಡಸು ನೀರು, ಫ್ಲೋರೈಯ್ಡೋ, ಅರ್ಸೆನಿಕ್, ಬ್ಯಾಕ್ಟೀರಿಯಾ ಸಂಬಂಧಿ ಕಾರಣದಿಂದ ಕುಡಿಯಲು ಯೋಗ್ಯವಾಗಿಲ್ಲ.

ಈಗಾಗಲೇ 19 ಗ್ರಾಮಗಳಲ್ಲಿ 32 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹೆಚ್ಚುವರಿಯಾಗಿ ಏಳು ಗ್ರಾಮಗಳಲ್ಲಿ ಭವಿಷ್ಯ ದೃಷ್ಟಿಯಿಂದ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆರು ಗ್ರಾಮಗಳಲ್ಲಿ ಕಲುಷಿತ ನೀರಿನ ಮೂಲಗಳಿದ್ದು, ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.

ಏನಿದು ನೀರು ಪರೀಕ್ಷೆ ?

ಪ್ರತಿ ತಿಂಗಳು ಕುಡಿವ ನೀರಿನಲ್ಲಿನ ಖನಿಜಗಳು, ಫ್ಲೋರೈಯ್ಡೋ, ಗಡಸುತನ, ಕ್ಲೋರೈಯ್ಡೋ, ನೈಟ್ರೇಟ್, ಬ್ಯಾಕ್ಟೀರಿಯಾ ಪ್ರಮಾಣ ಎಷ್ಟಿದೆ ಎಂದು ಪರೀಕ್ಷಿಸಬೇಕು. ನೀರಿನಲ್ಲಿ ಗಡಸುತನ 200ರಿಂದ 600, ಕಬ್ಬಿಣಾಂಶ 0.3 ಎಂಜಿ, ಫ್ಲೋರೈಯ್ಡೋ 1.5ಎಂಜಿ ಪ್ರಮಾಣದಷ್ಟಿದ್ದಲ್ಲಿ ಸೇವಿಸಬಹುದು.

ಇದಕ್ಕಿಂತ ಹೆಚ್ಚಿದ್ದಲ್ಲಿ ಆ ನೀರು ಸೇವನೆಗೆ ಯೋಗ್ಯವಲ್ಲ. ಇವುಗಳನ್ನು ಎಫ್‌ಟಿಕೆ (ಫೀಲ್ಟ್ ಟೆಸ್ಟಿಂಗ್ ಕಿಟ್) ಮೂಲಕ ಪರೀಕ್ಷಿಸಬಹುದು. ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾನದಂಡಗಳು ಹಾಗೂ ವಿವಿಧ ಖನಿಜಗಳ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟು ಇದ್ದಲ್ಲಿ ಪೂರೈಸಬಹುದು. ಅನುಮಾನಗಳಿದ್ದಲ್ಲಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆಯಬಹುದು. ನಿಗದಿತ ಪ್ರಮಾಣಕ್ಕಿಂತ ನೀರು ಕಲುಷಿತವಾಗಿದ್ದಲ್ಲಿ ಆ ನೀರಿನ ಮೂಲ ಬಂದ್ ಮಾಡಬೇಕು.

ಮಹಿಳೆಯರ ಹೆಗಲಿಗೆ ಜವಾಬ್ದಾರಿ

ಸದ್ಯ ಫೀಲ್ಡ್ ಟೆಸ್ಟಿಂಗ್ ಕಿಟ್‌ಗಳನ್ನು ಬಳಸಿ ಆರೋಗ್ಯ ಹಾಗೂ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಇದನ್ನು ಗ್ರಾಪಂ ಪಿಡಿಒ ಹಾಗೂ ನೀರುಗಂಟಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅಂಗವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಎಫ್‌ಟಿಕೆ ಬಳಸಿ ಪರೀಕ್ಷೆ ಮಾಡುವ ಬಗ್ಗೆ ತರಬೇತಿ ನೀಡಲು ಜಿಪಂ ಯೋಜಿಸಿದೆ.

ಪ್ರತಿ ತಿಂಗಳು ಪರೀಕ್ಷೆ ನಡೆಸಬೇಕಿದ್ದು ಆಯಾ ಗ್ರಾಪಂಗಳಿಗೆ ಎಫ್‌ಟಿಕೆ ಪೈರೈಸಲಾಗಿದೆ. ಮಹಿಳೆಯರಿಗೂ ತರಬೇತಿ ಆರಂಭಿಸಲಾಗಿದೆ. ಈಗಾಗಲೇ 70 ಗ್ರಾಪಂಗಳಲ್ಲಿ ತರಬೇತಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 153 ಗ್ರಾಪಂಗಳಿದ್ದು, ಹಂತ-ಹಂತವಾಗಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ.

ಜಿಲ್ಲೆಯಲ್ಲಿನ ಗ್ರಾಮೀಣ ಭಾಗದ ಎಲ್ಲ ಕುಡಿವ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕುಡಿಯಲು ಯೋಗ್ಯವಿಲ್ಲದ ಮೂಲಗಳನ್ನು ಬಂದ್ ಮಾಡಲಾಗಿದೆ. ಗ್ರಾಪಂ ಸಿಬ್ಬಂದಿಗೆ ಪ್ರತಿ ತಿಂಗಳು ಪರೀಕ್ಷೆ ಬಳಿಕ ನೀರು ಪೂರೈಸಲು ಸೂಚಿಸಿದ್ದೇವೆ. ಸ್ವ ಸಹಾಯ ಸಂಘದ ಮಹಿಳೆಯರಿಗೂ ಫೀಲ್ಡ್ ಟೆಸ್ಟಿಂಗ್ ಕಿಟ್ ಬಳಸಿ ನೀರು ಪರೀಕ್ಷಿಸುವ ತರಬೇತಿ ನೀಡಲಾಗುತ್ತಿದೆ. ಇದರಿಂದ ಅವರು ಪರೀಕ್ಷೆ ನಡೆಸಬಹುದಾಗಿದ್ದು, ಶುದ್ಧ ಕುಡಿವ ನೀರು ಪೂರೈಸಲು ಅನುಕೂಲವಾಗಲಿದೆ. ಈಗಾಗಲೇ ತರಬೇತಿ ಆರಂಭಿಸಲಾಗಿದೆ.| ರಾಹಲ್ ರತ್ನಂ ಪಾಂಡೆಯ, ಜಿಪಂ ಸಿಇಒ ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net