

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ‘ನಲ್ಲಿ’ ಮೂಲಕ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಗೆ ಆರಂಭದಲ್ಲಿಯೇ ಸಂಕಷ್ಟ ಎದುರಾಗಿದೆ. ಸರ್ಕಾರದ ಅನುದಾನ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ (ವೆಚ್ಚದ ಶೇ.10) ರಾಜ್ಯದ 6,357 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂರು ಹಂತಗಳಲ್ಲಿ ಯೋಜನೆ ಆರಂಭಗೊಂಡಿದೆ. ಆದರೆ ನೀರಿನ ಅಭಾವ, ಅನುದಾನದ ಕೊರತೆ, ಇಂಜಿನಿಯರ್, ಗುತ್ತಿಗೆದಾರರ ನಿರ್ಲಕ್ಷ್ಯಂದಾಗಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ನಲ್ಲಿಗಳಿಗೆ ಪ್ರಾಯೋಗಿಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ನೀರೇ ಇಲ್ಲದಂತಾಗಿದೆ... ಎರಡನೇ ಹಂತದ ಕಾಮಗಾರಿಗಳು ಅಲ್ಲಲ್ಲಿ ಸ್ಥಗಿತಗೊಂಡಿದ್ದರೆ, ಕೆಲವೆಡೆ ಮೂರನೇ ಹಂತದ ಕಾಮಗಾರಿಗಳು ಟೆಂಡರ್ ಹಂತದಲ್ಲೇ ಇವೆ. ಈಗಾಗಲೇ ಸರ್ಕಾರವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗ್ರಾಮಗಳಲ್ಲಿ ನಿರ್ವಿು ಸಿರುವ ಓವರ್ಹೆಡ್ ಟ್ಯಾಂಕ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದೀಗ ಆ ಟ್ಯಾಂಕ್ಗಳಿಂದ ಜೆಜೆಎಂ ಪೈಪ್ಲೈನ್ ಮೂಲಕ ಮನೆ ಮನೆಗೂ ನಲ್ಲಿ ಸಂಪರ್ಕ ಒದಗಿಸಿ ನೀರು ಸರಬರಾಜು ಮಾಡುವುದು ಯೋಜನೆಯ ಉದ್ದೇಶ.
ಆದರೆ, ನೀರಿನ ಅಭಾವ, ಪೈಪ್ಲೈನ್, ಪಂಪ್ಸೆಟ್ಗಳ ದುರಸ್ತಿಯಿಂದಾಗಿ ಕೆಲವೆಡೆ ವಾರಕ್ಕೊಮ್ಮೆ ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೆಜೆಎಂ ಪೈಪ್ಲೈನ್ ಮೂಲಕ ಈ ನಲ್ಲಿಗಳಲ್ಲಿ ದಿನದ 24 ಗಂಟೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಒಂದೊಂದು ಮನೆಗೆ 2 ಅಥವಾ 3 ನಲ್ಲಿಗಳ ಸಂಪರ್ಕ ನೀಡಿರುವುದು, ನಲ್ಲಿ ಮೀಟರ್ ಬಂದ್ ಮಾಡಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ.
ಮೀಟರ್ಗಳು ಹಾಳು!: ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿರುವ ಜೆಜೆಎಂ ಯೋಜನಾ ವೆಚ್ಚದ ಆಧಾರದಲ್ಲಿ ಪ್ರತಿ ಮನೆಯಿಂದ ಅಂದಾಜು 1,200 ರಿಂದ 3,000 ರೂ. ವರೆಗೆ ಸಮುದಾಯ ವಂತಿಕೆ ಸಂಗ್ರಹಿಸಲಾಗುತ್ತಿದೆ. ಆದರೆ ಬಡವರು, ಕೂಲಿ ಕಾರ್ವಿುಕರು, ರೈತರು ಅಧಿಕ ಸಂಖ್ಯೆಯಲ್ಲಿರುವುದರಿಂದ ವಂತಿಕೆ ಮೊತ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಅಕ್ರಮ ನಲ್ಲಿ ಸಂಪರ್ಕಗಳಿಗೆ ಕಡಿವಾಣ ಹಾಕಲು ಮತ್ತು ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ನಲ್ಲಿಗಳಿಗೆ ಅಳವಡಿಸಿರುವ ಮೀಟರ್ಗಳನ್ನೇ ಜನ ಕಿತ್ತೊಗೆಯುತ್ತಿದ್ದಾರೆ.
97.91 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಗುರಿ: ಸರ್ಕಾರವು 2023-24ರೊಳಗೆ ರಾಜ್ಯ ಗ್ರಾಮೀಣ ಪ್ರದೇಶದ ಎಲ್ಲ 97.91 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡುವ ಗುರಿ ಹಾಕಿಕೊಂಡಿದೆ. 2021-22ನೇ ಸಾಲಿನಲ್ಲಿ 25.17 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಇದೆ. ಈವರೆಗೆ 17.60 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಿದೆ. ಒಂದು ವರ್ಷದ ಅವಧಿಯಲ್ಲಿ ಅಂದಾಜು 50 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಾಗಿದೆ ಎಂದು ಜೆಜೆಎಂ ಗುತ್ತಿಗೆದಾರರು, ಇಂಜಿನಿಯರ್ಗಳು ಮಾಹಿತಿ ನೀಡುತ್ತಾರೆ.