ನೀರು ಪೋಲಾಗದಂತೆ ತಡೆಯುವ ಮಾದರಿ ರಚನೆ

jnnc
ವಿದ್ಯಾರ್ಥಿಯು ಪ್ರಾತ್ಯಕ್ಷಿಕೆ ಕುರಿತು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ಎಸ್.ಎನ್.ನಾಗರಾಜ, ಡಾ. ವೈ.ವಿಜಯಕುಮಾರ್, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಪಿ.ಮಂಜುನಾಥ ಅವರಿಗೆ ವಿವರಣೆ ನೀಡಿದರು.
Published on

ಶಿವಮೊಗ್ಗ: ಬಹುತೇಕ ಮನೆಗಳ ಟ್ಯಾಂಕ್‌ನಲ್ಲಿ ನೀರು ತುಂಬಿ ಪೋಲಾಗುವುದು ಎಲ್ಲರೂ ಬಲ್ಲ ಸಂಗತಿ. ಹೀಗೆ ಟ್ಯಾಂಕ್‌ನಿಂದ ನೀರು ಹೊರಹೋಗದಂತೆ ಟ್ಯಾಂಕ್ ತುಂಬಿದ ತಕ್ಷಣ ನೀರಿನ ಹರಿವು ನಿಲ್ಲುವಂತಹ ಸ್ಮಾರ್ಟ್ ಯೋಜನೆಯೊಂದನ್ನು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದಾರೆ.

ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ಯೋಜನೆಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ನಾವೀನ್ಯ ಯೋಚನೆಗಳನ್ನು ಅನಾವರಣಗೊಳಿಸಿದರು.

ಆಟೋಮೇಟೆಡ್ ವಾಟರ್ ಮ್ಯಾನೇಜ್‌ಮೆಂಟ್ ಶೀರ್ಷಿಕೆಯಡಿ ಯೋಜನೆಯೊಂದನ್ನು ವಿದ್ಯಾರ್ಥಿಗಳಾದ ಆರ್.ಚಿರಾಗ, ಪಾರ್ಥ ಸಾರಥಿ, ಕೀರ್ತಿ, ಲಾವಣ್ಯ ರೂಪಿಸಿದ್ದು, ಸಹ ಪ್ರಾಧ್ಯಾಪಕಿ ಡಾ. ಎಸ್.ಶೀಲಾ ಮಾರ್ಗದರ್ಶನ ನೀಡಿದ್ದರು. ಅಲ್ಟ್ರಾಸಾನಿಕ್ ಸೆನ್ಸಾರ್, ಆರ್ಡಿನೊ, ಸರ್ವೋ ಮೋಟಾರ್ ಬಳಸಿ ಟ್ಯಾಂಕ್‌ಗೆ ಬೀಳುವ ನೀರಿನ ಹರಿವನ್ನು ನಿಯಂತ್ರಿಸುವ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿಗಳು ರೂಪಿಸಿದ ಡೀಪ್ ಲರ್ನಿಂಗ್ ಮತ್ತು ನ್ಯೂರಲ್ ನೆಟ್‌ವರ್ಕ್ ಮೂಲಕ ರಸ್ತೆಯಲ್ಲಿ ಸುರಕ್ಷಿತವಾಗಿ ಸ್ವಯಂ ವಾಹನ ಚಾಲನೆ ಮಾಡಬಲ್ಲ ಸೆಲ್ಫ್ ಡ್ರೈವಿಂಗ್ ಬೋಟ್ ಸಿಸ್ಟಂ, ಯುದ್ಧಭೂಮಿ ಹಾಗೂ ಗಡಿಗಳಲ್ಲಿ ಶತ್ರು ರಾಷ್ಟ್ರದಿಂದ ಬರುವ ಮಿಸೈಲ್, ಡ್ರೋನ್ ಮೇಲೆ ನಿಗಾವಹಿಸುವ ಹಾಗೂ ಓಪನ್ ಸಿವಿ ಮೂಲಕ ಲೇಸರ್ ಗನ್ ಬಳಸಿ ಅವುಗಳನ್ನು ಹೊಡೆದುರುಳಿಸುವ ಪ್ರಾತ್ಯಕ್ಷಿಕೆ ವಿಶೇಷವಾಗಿತ್ತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಾವು ರೂಪಿಸುವ ಯೋಜನೆಗಳು ಸಮಾಜಮುಖಿಯಾಗಿ ಉಪಯೋಗವಾದಾಗ ಮಾತ್ರ ನಿಜವಾದ ಸಾರ್ಥಕ್ಯ ಸಾಧ್ಯ. ವಿದ್ಯಾರ್ಥಿಗಳಲ್ಲಿ ಅಧ್ಯಯನದ ಜತೆಗೆ ಆವಿಷ್ಕಾರಿ ಮನೋಭಾವವೂ ಇರಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ರವಿಕುಮಾರ್, ಡಾ. ಶೀಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net