

ಕೆ.ಆರ್.ನಗರ: ಹುಣಸೂರು ನಗರಸಭೆಯ ನೀರು ಸರಬರಾಜು ಪಂಪ್‌ಹೌಸ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಲ್‌ಮನ್ ಮೃತಪಟ್ಟಿದ್ದಾರೆ.
ಪಟ್ಟಣದ ಆದಿಶಕ್ತಿ ಬಡಾವಣೆಯ ಪಿ.ಕೆ.ಕಾಲನಿ ನಿವಾಸಿ ಎಸ್.ಬಿ.ವಿಜಯಕುಮಾರ್(36) ಮೃತರು. ಸಾವಿಗೆ ಅನುಮಾನ ವ್ಯಕ್ತಪಡಿಸಿ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿರುವ ಹುಣಸೂರು ನಗರಸಭೆಯ ಪಂಪ್‌ಹೌಸ್‌ನಲ್ಲಿ ಹಲವು ವರ್ಷಗಳಿಂದ ವಾಲ್‌ಮ್‌ನ್ ಆಗಿ ಕೆಲಸ ಮಾಡುತ್ತಿದ್ದ ವಿಜಯಕುಮಾರ್ ಗುರುವಾರ ರಾತ್ರಿ ಪಾಳಿ ಕೆಲಸವಿದ್ದ ಕಾರಣ 7 ಗಂಟೆ ಸುಮಾರಿನಲ್ಲಿ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಅಲ್ಲಿನ ಕೆಲಸಗಾರರು ಪತ್ನಿಗೆ ಫೋನ್ ಕರೆ ಮಾಡಿ ನಿಮ್ಮ ಪತಿ ಪಂಪ್‌ಹೌಸ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕೂಡಲೇ ಪತ್ನಿ ಕುಟುಂಬದವರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಮೃತದೇಹ ಕಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ನೂರಾರು ಸಂಬಂಧಿಕರು, ದಲಿತ ಮುಖಂಡರು, ಪುರಸಭಾ ಸದಸ್ಯರು ದೌಡಾಯಿಸಿದರು. ಸಾವು ಅನುಮಾನಾಸ್ಪದವಾಗಿದ್ದು, ಕುಟುಂಬಕ್ಕೆ ಸರ್ಕಾರ ಮತ್ತು ನಗರಸಭೆ ಸೂಕ್ತ ನೆರವು ನೀಡುವುದರ ಜತೆಗೆ, ಪತ್ನಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಹುಣಸೂರು ನಗರಸಭೆ ಆಯುಕ್ತೆ ಮಾನಸಾ, ಇಂಜಿನಿಯರ್ ಲೋಕೇಶ್, ಯೂನಿಕ್ ಸರ್ವೀಸ್ ಸಂಸ್ಥೆಯ ಮುಖ್ಯಾಧಿಕಾರಿ ಮಲ್ಲೇಶ್ ಇನ್ನಿತರರು ಭೇಟಿ ನೀಡಿದರು. ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ನೀಡಲಾಯಿತು. ಈ ವೇಳೆ ಪುರಸಭೆ ಸದಸ್ಯರಾದ ಶಂಕರ್, ಶಿವುನಾಯಕ್, ಶಂಕರ್‌ಸ್ವಾಮಿ, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಮಾಜಿ ಸದಸ್ಯರಾದ ರಂಗಸ್ವಾಮಿ, ವಿನಯ್ ಹಾಜರಿದ್ದರು.