

ರಾಮನಗರ : ನರೇಗಾ ಯೋಜನೆಯ ಸಮರ್ಪಕ ಬಳಕೆಗೆ ಮುಂದಾಗಿರುವ ರಾಮನಗರ ಜಿಲ್ಲಾ ಪಂಚಾಯಿತಿ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಬರುವ ಪುರಾತನ ಕಲ್ಯಾಣಿಗಳನ್ನು ಜಿರ್ಣೋದ್ಧಾರ ಮಾಡಲು ಯೋಜನೆ ರೂಪಿಸಿದೆ.
ಹಿಂದೆ ಗ್ರಾಮೀಣ ಭಾಗದ ನೀರಿನ ಸೆಲೆಯಾಗಿದ್ದ ಕಲ್ಯಾಣಿಗಳು ನಂತರದ ದಿನಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಕಣ್ಮರೆಯಾಗಿವೆ. ಇದೀಗ ಪುನಃಶ್ಚೇತನಗೊಳಿಸಬಹುದಾದ ಕಲ್ಯಾಣಿಗಳನ್ನು ಗುರುತಿಸಿ, ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ಕಲ್ಯಾಣಿಗಳನ್ನು ಪುನಃಶ್ಚೇತನಗೊಳಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ರಾಮನಗರ ಜಿಲ್ಲೆ, ಮಾಗಡಿ ತಾಲೂಕು ಕಸಬಾ ಹೋಬಳಿ ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದೂರಾಯನಹಳ್ಳಿ ಕಂದಾಯ ಗ್ರಾಮ ವ್ಯಾಪ್ತಿಯ ಮಜರೆ ಗ್ರಾಮದ ಮಸಿಯಮ್ಮ ದೇವಸ್ಥಾನದ ಹತ್ತಿರದ ಇರುವ ಸುಮಾರ 60 ವರ್ಷ ಹಳೆಯದಾದ ಸಾಂಪ್ರದಾಯಿಕ ಜಲಮೂಲ, ಜೋಪು ನೀರು ಹರಿದು ಬಂದು ಶೇಖರಣೆ ಆಗುತ್ತಿದ್ದ ಸಣ್ಣ ಗುಂಡಿಯನ್ನು ವಿಸ್ತರಿಸಿ ಕಲ್ಯಾಣಿಯನ್ನಾಗಿ ಪರಿವರ್ತಿಸಲಾಗಿದೆ. ನಂತರದ ದಿನಗಳಲ್ಲಿ ಇದೇ ಕಲ್ಯಾಣಿ ನೀರನ್ನು ದೇವಸ್ಥಾನದ ಪೂಜೆಗೆ ಮತ್ತು ಕುಡಿಯಲು ಸಹ ಗ್ರಾಮಸ್ಥರು ಬಳಸುತ್ತಿದ್ದುದನ್ನು ಗ್ರಾಮದ ಹಿರಿಯರು ಸ್ಮರಿಸಿದರು. ಕಾಲ ಕ್ರಮೇಣ ಬಳಕೆ ಕಡಿಮೆಯಾಗಿ, ನಿರ್ವಹಣೆಯಿಲ್ಲದೆ ಕಲ್ಯಾಣಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು.
ಗ್ರಾಮ ಪಂಚಾಯಿತಿ ಮತ್ತು ಕರ್ನಾಟಕ ರಾಜ್ಯ ದೂರ ಸಂವೇದಿ ಕೇಂದ್ರದ ಸಹಯೋಗದೊಂದಿಗೆ ಸಾಂಪ್ರದಾಯಿಕ ಜಲಮೂಲವನ್ನು ಮತ್ತೆ ಗುರುತಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 3 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಈ ಜಲಮೂಲ ಸುಮಾರು 1.44 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದ್ದು. ಇದರಿಂದ ಸುತ್ತಮುತ್ತಲ 7ರಿಂದ 8 ರೈತರ ಖಾಸಗಿ ಜಮೀನಿನಲ್ಲಿ ಬೋರ್‌ವೇಲ್‌ಗಳಿಗೆ ಅನುಕೂಲವಾಗಿದೆ. ಇದು ಮಾದರಿ ಕಾರ್ಯವಾಗಿದ್ದು ಜನತೆ ಕಲ್ಯಾಣಿಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಜಿಪಂ ಮನವಿ ಮಾಡಿದೆ.
ಮನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಲವಾರು ಕಲ್ಯಾಣಿಗಳನ್ನು ದುರಸ್ತಿಗೊಳಿಸಿ ಮರುಪೂರಣಗೊಳಿಸಿ ಜನರಿಗೆ ಉಪಯುಕ್ತ ವಾಗುವ ರೀತಿ ಮಾಡಲಾಗಿದೆ. ಅಂತರ್ಜಲಮಟ್ಟ ಹೆಚ್ಚಿಸಲು ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ನೀರನ್ನು ಮರುಪೂರಣಗೊಳಿಸುವ ಅಗತ್ಯತೆ ಇದೆ. ಸಾರ್ವಜನಿಕರು ಈ ಕೆಲಸದಲ್ಲಿ ಜಿಪಂ ಜತೆ ಕೈಜೋಡಿಸಬೇಕಿದೆ.
ಮಾಹಿತಿ ನೀಡಿ : ಸಾರ್ವಜನಿಕರು ಸುತ್ತಮುತ್ತಲಿನ ಪ್ರದೇಶದಲ್ಲಿ ನಿರುಪಯುಕ್ತ, ಬಳಕೆಗೆ ಯೋಗ್ಯವಾಗಿಲ್ಲದ ಕಲ್ಯಾಣಿಗಳ ಬಗ್ಗೆ ಜಿಪಂ ದೂರವಾಣಿ ಸಂಖ್ಯೆ 080- 29576716 ಈ ಸಂಖ್ಯೆ ಮಾಹಿತಿ ನೀಡಿದರೆ ಅಂತಹ ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ. ನರೇಗಾ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಬರುವ ಹಾಗೂ ಪುನಃಶ್ಚೇತನ ಗೊಳಿಸಬಹುದಾದ ಚನ್ನಪಟ್ಟಣ ತಾಲೂಕಿನ 25, ಕನಕಪುರ ತಾಲೂಕಿನ 11, ಮಾಗಡಿ ತಾಲೂಕಿನ 49 ಹಾಗೂ ರಾಮನಗರ ತಾಲೂಕಿನ 27 ಸೇರಿ ಒಟ್ಟು 112 ಕಲ್ಯಾಣಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 63 ಕಲ್ಯಾಣಿಗಳ ಕಾಮಗಾರಿ ಕೈಗೊಂಡು, 46 ಕಲ್ಯಾಣಿಗಳನ್ನು ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಕಲ್ಯಾಣಿಗಳು ಗ್ರಾಮೀಣ ಭಾಗದಲ್ಲಿ ನೀರಿನ ಮೂಲಗಳಾಗಿದ್ದು, ಇವುಗಳನ್ನು ಪುನಃಶ್ಚೇತನಗೊಳಿಸಬೇಕಿದೆ. ಜನತೆ ತಮ್ಮೂರಿನ ಕಲ್ಯಾಣಿಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇಕ್ರಂ ಸಿಇಒ, ರಾಮನಗರ ಜಿಪಂ