ಇದಪ್ಪಾ ಅದೃಷ್ಟ ಅಂದ್ರೆ... ರಾತ್ರೋರಾತ್ರಿ ಕೋಟ್ಯಧಿಪತಿಯಾದ ವಾಚ್​ಮನ್! ಇದು 2 ಕೋಟಿಯ ಕತೆ... Watchman

Watchman
Published on

Watchman : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ದುಬೈನಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್​ ಮೂಲದ ವಾಚ್‌ಮನ್ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಆ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ಇವರಿಗೆ 60 ವರ್ಷ ವಯಸ್ಸು. ಕಳೆದ ಮೂರು ದಶಕಗಳಿಂದ ದುಬೈನ ಅಬುಧಾಬಿಯಲ್ಲಿ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಿಗ್​ ಟಿಕೆಟ್​ ಹೆಸರಿನ ಲಾಟರಿ ಟಿಕೆಟ್​ಗಳನ್ನು ಖರೀದಿಸುವ ಅಭ್ಯಾಸ ಅವರಿಗಿದೆ. ಎಂದಿನಂತೆ ಗೆಳೆಯರ ಜೊತೆ ಸೇರಿ ಬಿಗ್​ ಟಿಕೆಟ್ ಖರೀದಿಸಿದ್ದರು.

ಈ ಬಾರಿ ಅನಿರೀಕ್ಷಿತವಾಗಿ ಖರೀದಿಸಿದ ಲಾಟರಿ ಟಿಕೆಟ್​ಗೆ ಬಹುಮಾನ ಒಲಿದುಬಂದಿದ್ದು, ರಾಚಮಲ್ಲಯ್ಯನವರ ಆನಂದಕ್ಕೆ ಮಿತಿಯೇ ಇರದಂತಾಗಿದೆ. ಇತ್ತೀಚೆಗೆ ಘೋಷಿಸಲಾದ ಬಿಗ್ ಟಿಕೆಟ್ ಮಿಲಿಯನೇರ್ ಎಲೆಕ್ಟ್ರಾನಿಕ್ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ಅಂದಾಜು ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಈ ರೀತಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದೇನೆ. ಕೊನೆಗೂ ಅದೃಷ್ಟ ಒಲಿದು ಬಂದಿದೆ ಎಂದು ರಾಚಮಲ್ಲಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಹುಮಾನದ ಮೊತ್ತವನ್ನು ಟಿಕೆಟ್ ಖರೀದಿಗೆ ಸಹಕರಿಸಿದ ಗೆಳೆಯರೊಂದಿಗೆ ಹಂಚಿಕೊಂಡು, ಉಳಿದ ಹಣವನ್ನು ಕುಟುಂಬಕ್ಕೆ ಬಳಸುವುದಾಗಿ ರಾಚಮಲ್ಲಯ್ಯ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net