

ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಬುಧವಾರದಿಂದ ಆರಂಭವಾಗಿರೋ ಡಿಫೆನ್ಸ್ ಎಕ್ಸಪೋ 2020ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್ ಫೈರಿಂಗ್ ಶ್ರೇಣಿಯಲ್ಲಿ ತಮ್ಮ ಶೂಟಿಂಗ್ ಕೌಶಲವನ್ನು ಪರೀಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಅಸಾಲ್ಟ್ ರೈಫಲ್ ಹಿಡಿದು ಗುರಿಯೆಡೆಗೆ ಫೈರಿಂಗ್ ನಡೆಸಿರುವ ಪ್ರಧಾನಿ ಮೋದಿ ಅವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ, ರಕ್ಷಣಾ ಸಚಿವ ರಜನಾಥ್ ಸಿಂಗ್ ಅವರು ಗನ್ ಹಿಡಿದ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಕೂಡ ಸದ್ದು ಮಾಡುತ್ತಿದೆ.
ಐದು ದಿನಗಳ ಡಿಫೆನ್ಸ್ ಎಕ್ಸ್ಪೋಗೆ ಇಂದು ಚಾಲನೆ ನೀಡಿದ ಪ್ರಧಾನಿ ಮೋದಿ, ಮುಂದಿನ ಐದು ವರ್ಷಗಳಲ್ಲಿ ಭಾರತವು 5 ಬಿಲಿಯನ್ ಡಾಲರ್ ಡಿಫೆನ್ಸ್ ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದರು.
ಭಾರತಕ್ಕಾಗಿ ಮತ್ತು ವಿಶ್ವಕ್ಕಾಗಿ, ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ಎಂಬುದು ನಮ್ಮ ಮಂತ್ರವಾಗಿದೆ. 2014ರಲ್ಲಿ ಭಾರತದಿಂದ 2 ಸಾವಿರ ಕೋಟಿ ಡಿಫೆನ್ಸ್ ರಫ್ತಾಗಿದೆ. ಕಳೆದ ಎರಡು ವರ್ಷಗಳಿಂದ ಅದು 17 ಸಾವಿರ ಕೋಟಿಗೆ ಏರಿಕೆಯಾಗಿದೆ. ಮುಂದಿನ 5 ವರ್ಷಗಳಲ್ಲಿ 5 ಬಿಲಿಯನ್ ಡಾಲರ್ ತಲುಪಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತದಲ್ಲಿನ ಡಿಫೆನ್ಸ್ ತಯಾರಿಕೆಯಲ್ಲಿ ಅನಿಮಿಯತ ಸಾಧ್ಯತೆಗಳು ಇವೆ. ಪ್ರತಿಭೆಗಳು ಮತ್ತು ತಂತ್ರಜ್ಞಾನವೂ ಇದೆ. ಸಂಶೋಧನೆ ಮತ್ತು ಮೂಲಸೌಕರ್ಯವೂ ಇದೆ. ಅನುಕೂಲಕರ ನೀತಿಗಳು ಮತ್ತು ವಿದೇಶಿ ಬಂಡವಾಳದ ರಕ್ಷಣೆಯು ನಮ್ಮಲ್ಲಿದೆ ಎಂದು ಹೇಳಿದರು.
11ನೇ ಆವೃತ್ತಿಯ ಬಹುದೊಡ್ಡ ಡಿಫೆನ್ಸ್ ಎಕ್ಸ್ಪೋ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ "ಡಿಫೆನ್ಸ್ ತಯಾರಿಕ ಹಬ್ ಆಗಿ ಉದಯಿಸುತ್ತಿರುವ ಭಾರತ" ಎಂಬ ಥೀಮ್ನೊಂದಿಗೆ ಆರಂಭವಾಗಿದೆ. ಸುಮಾರು 40 ದೇಶಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. (ಏಜೆನ್ಸೀಸ್)